ವಿಡಿಯೋ ಸ್ಟೋರಿ | ಜಲಾಶಯದಿಂದ ಹರಿದರೂ ಕೃಷಿಭೂಮಿಗೆ ತಲುಪುತ್ತಿಲ್ಲ ನೀರು!

ಮಲೆನಾಡು ಭಾಗದಲ್ಲಿ ಅಬ್ಬರಿಸಿ ಜನಜೀವನ ಅಸ್ತವ್ಯಸ್ಥಗೊಳಿಸಿದ ಮುಂಗಾರು, ಹೈದರಾಬಾದ್-ಕರ್ನಾಟಕ, ಉತ್ತರ ಕರ್ನಾಟಕ ಭಾಗದಲ್ಲಿ ಕೈಕೊಟ್ಟಿತ್ತು. ನಿರೀಕ್ಷೆಯಷ್ಟು ಮಳೆಯಾಗದೆ ಇದ್ದರೂ ಜಲಾಶಯಗಳು ಭರ್ತಿಯಾಗಿವೆ. ಆದರೆ, ಕಾಲುವೆಗಳು ಕಟ್ಟಿಕೊಂಡು ರೈತರ ಜಮೀನಿಗೆ ನೀರು ಹರಿದಿಲ್ಲ

ಮುಂಗಾರು ಮಳೆ ರಾಜ್ಯಾದ್ಯಂತ ಉತ್ತಮವಾಗಿ ಸುರಿಯಲಿದೆ ಎನ್ನುವ ನಿರೀಕ್ಷೆಯಲ್ಲಿ ರೈತರು ತಮ್ಮ ಹೊಲ ಹಸನು ಮಾಡಿಕೊಂಡು ಬಿತ್ತನೆಗೆ ಸಜ್ಜು ಮಾಡಿಕೊಂಡಿದ್ದರು. ಆದರೆ, ಮಲೆನಾಡು ಭಾಗದಲ್ಲಿ ಅಬ್ಬರಿಸಿ ಜನಜೀವನ ಅಸ್ತವ್ಯಸ್ಥಗೊಳಿಸಿದ ಮುಂಗಾರು, ಹೈದರಾಬಾದ್-ಕರ್ನಾಟಕ, ಉತ್ತರ ಕರ್ನಾಟಕ ಭಾಗದಲ್ಲಿ ಕೈಕೊಟ್ಟಿದೆ. ಕೆಲವೊಂದು ಪ್ರದೇಶದಲ್ಲಿ ಮಳೆ ಸುರಿದಿದ್ದರೆ, ಬಹುತೇಕ ಕಡೆ ವಾಡಿಕೆ ಮಳೆಗಿಂತ ಕಡಿಮೆ ಮಳೆಯಾಗಿ ರೈತ ಸಮುದಾಯ ತತ್ತರಿಸಿದೆ. ಆದರೆ, ನಿರೀಕ್ಷೆಯಷ್ಟು ಮಳೆಯಾಗದೆ ಇದ್ದರೂ, ಜಲಾಶಯಗಳು ಭರ್ತಿಯಾಗಿ ಕಾಲುವೆಗಳಲ್ಲಿ ನೀರು ಹರಿದು ನೀರಾವರಿ ರೈತರ ಮುಖದಲ್ಲಿ ಸಂತಸ ಮನೆ ಮಾಡಿದೆ. ಆದರೆ ಬೆನ್ನಲ್ಲೇ, ಕಾಲುವೆಗಳು ರೈತರಿಗೆ ನೀರು ಸಿಗದಂತೆ ಮಾಡಿವೆ!

ಕಾಲುವೆಗಳಲ್ಲಿ ಹೂಳು, ಜಾಲಗಿಡಗಳು ಹಾಗೂ ಗಿಡ-ಗಂಟೆಗಳ ಬೆಳೆದು, ಅಲ್ಲಲ್ಲಿ ಕಾಲುವೆಗಳು ಬಿರುಕು ಬಿಟ್ಟಿವೆ. ಇದರ ಪರಿಣಾಮ ಕಾಲುವೆಗಳಿಗೆ ನೀರು ಹರಿದರೂ ಸಂಪೂರ್ಣವಾಗಿ ರೈತರ ಜಮೀನುಗಳಿಗೆ ನೀರು ಹರಿದಿಲ್ಲ. ರೈತರ ಕೆಳಭಾಗ ಹಾಗೂ ಕೆಲವು ಕಡೆ ಜಮೀನುಗಳಿಗೆ ನೀರು ದೊರೆಯುತ್ತಿಲ್ಲ. ಜಿಲ್ಲೆಯ ಎರಡು ನದಿಗಳು ತುಂಬಿ ಹರಿಯುತ್ತಿದ್ದರು ಸಹ ಜಿಲ್ಲೆಯ ರೈತರಿಗೆ ನೀರು ಒದಗಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿರುವ ಕಾರಣ ರೈತರು ಸಿಟ್ಟಾಗಿದ್ದಾರೆ.

ಸರ್ಕಾರ ಪ್ರತಿವರ್ಷ ಕಾಲುವೆ ನಿರ್ವಹಣೆಗಾಗಿ ಕೋಟ್ಯಂತರ ರುಪಾಯಿ ಅನುದಾನ ಬಿಡುಗಡೆ ಮಾಡುತ್ತದೆ. ಹೀಗಾಗಿ, ನೀರಾವರಿ ಇಲಾಖೆಯಿಂದ ಟೆಂಡರ್ ಕರೆದು ಕಾಲುವೆಗಳನ್ನು ರಿಪೇರಿ, ಹೂಳು, ಜಗಲ್ ಕಟ್ಟಿಂಗ್ ಮಾಡಿಸುತ್ತಾರೆ. ಆದರೆ, ಸರಿಯಾಗಿ ಕಾಮಗಾರಿ, ಹೂಳು, ಜಂಗಲ್ ಕಟಿಂಗ್ ಮಾಡದೆ ಇರುವ ಪರಿಣಾಮ ರೈತರಿಗೆ ನಿಗದಿ ಪ್ರಮಾಣದಲ್ಲಿ ನೀರು ದೊರೆಯುತ್ತಿಲ್ಲ. ಒಟ್ಟಿನಲ್ಲಿ ರಾಯಚೂರು ಜಿಲ್ಲೆಯ ಜೀವನಾದಿಯಾಗಿರುವ ಕೃಷ್ಣ ಹಾಗೂ ತುಂಗಭದ್ರಾ ನದಿ ಭರ್ತಿಯಾಗಿ ಕಂಗೊಳಿಸುತ್ತಿರುವ ಸಂತೋಷ ಒಂದೆಡೆ ಇದ್ದರೂ, ಜಲಾಶಯ ಒಳಪಡುವ ಕಾಲುವೆಗಳಿಗೆ ಅವಶ್ಯಕತೆಗೆ ಅನುಗುಣವಾಗಿ ಸರ್ಕಾರ ನೀರು ಒದಗಿಸುತ್ತಿಲ್ಲ ಎನ್ನುವ ಬೇಸರವೂ ರೈತರಲ್ಲಿದೆ.

ರಾಯಚೂರು ಜಿಲ್ಲೆಯಲ್ಲಿ ಎರಡು ನದಿಗಳು ತುಂಬಿ ಹರಿಯುತ್ತಿವೆ. ಆದರೆ, ರೈತರ ಜಮೀನುಗಳಿಗೆ ನೀರು ದೊರೆಯುತ್ತಿಲ್ಲ. ಕಳೆದ ಎರಡು ವರ್ಷಗಳಿಂದ ಭೀಕರ ಬರಗಾಲ ಆವರಿಸಿ ರೈತ ಸಮುದಾಯ ಕಂಗಾಲು ಆಗಿತ್ತು. ಈ ಬಾರಿ ಜಲಾಶಯದಲ್ಲಿ ನೀರು ತುಂಬಿದರೂ ರೈತರಿಗೆ ದೊರೆಯದೆ ಇರುವುದು ದೌರ್ಭಾಗ್ಯ.
ಲಕ್ಷ್ಮಣಗೌಡ ಕಡ್ಗಂದೊಡ್ಡಿ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆ, ರಾಯಚೂರು
ಇದನ್ನೂ ಓದಿ : ವಿಡಿಯೋ ಸ್ಟೋರಿ | ಆಲಮಟ್ಟಿ ಜಲಾಶಯ ಪಕ್ಕದಲ್ಲೇ ಇದ್ದರೂ ನೀರಿಗೆ ಪರದಾಟ!

ರಾಜ್ಯದಲ್ಲಿ ಬಹುತೇಕ ಜಲಾಶಯಗಳು ನಿಗದಿತ ಸಮಯಕ್ಕೆ ಮೊದಲೇ ಭರ್ತಿಯಾಗಿ ಕಳೆಗಟ್ಟಿವೆ. ಮಹಾರಾಷ್ಟ್ರದಿಂದ ಅಪಾರ ಪ್ರಮಾಣದ ನೀರು ಆಲಮಟ್ಟಿ ಜಲಾಯಶಕ್ಕೆ ಹರಿದುಬಂದು, ನಾರಾಯಣಪುರ ಜಲಾಶಯ ಭರ್ತಿಯಾಗಿ, ಹೆಚ್ಚುವರಿ ನೀರನ್ನು ಆಂಧ್ರಪ್ರದೇಶಕ್ಕೆ ನದಿ ಮೂಲಕ ಬಿಡಲಾಗಿದೆ. ಮಲೆನಾಡು ಭಾಗದಲ್ಲಿ ಭಾರಿ ಸುರಿದ ಪರಿಣಾಮ ತುಂಗಭದ್ರಾ ಜಲಾಶಯ ಭರ್ತಿಯಾಗಿ, ಸಾವಿರಾರು ಕ್ಯೂಸೆಕ್ಸ್ ನೀರು ಆಂಧ್ರ ಪಾಲಾಗಿದೆ.

ರಾಯಚೂರು ಜಿಲ್ಲೆಯಲ್ಲಿ ಕೃಷ್ಣ-ತುಂಗಭದ್ರಾ ನದಿಗಳು ಭರ್ತಿಯಾಗಿ, ರೈತರಿಗೆ ಎರಡು ಬೆಳೆಗಳಿಗೆ ನೀರು ಸಿಗುವ ನಿರೀಕ್ಷೆಯಿಂದ ನೀರಾವರಿ ರೈತರು ಮುಖದಲ್ಲಿ ಮಂದಹಾಸ ಮನೆ ಮಾಡಿದೆ. ತುಂಗಭದ್ರಾ ಎಡದಂಡೆ ಕಾಲುವೆ (ಟಿಎಲ್‌ಬಿಸಿ) ಹಾಗೂ ನಾರಾಯಣಪುರ ಬಲದಂಡೆ ಕಾಲುವೆ (ಎನ್ ಆರ್ ಬಿಸಿ) ಯೋಜನೆಯಿಂದ ಕಾಲುವೆಗಳಿಗೆ ನೀರು ಹರಿಸಲು ಎರಡು ಜಲಾಶಯಗಳ ನೀರಾವರಿ ವ್ಯಾಪ್ತಿಯಲ್ಲಿ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಹಾಗೂ ರೈತಸಂಘದ ಮುಖಂಡರನ್ನು ಕರೆದು ಕಾಲುವೆಗಳಿಗೆ ನೀರು ಹರಿಸಲು ತೀರ್ಮಾನ ಕೈಗೊಳ್ಳಲಾಗಿತ್ತು.

ವಿಡಿಯೋ ಸ್ಟೋರಿ | ಜಮೀನು ವಿವಾದದಿಂದ ಶಾಲೆಗೆ ತೆರಳುವ ದಾರಿ ಬಂದ್‌!
ವಿಡಿಯೋ ಸ್ಟೋರಿ | ಮಳೆ ಬಾರದಿದ್ದರೂ ಪ್ರವಾಹ, ನಡುಗಡ್ಡೆಯಂತಾದ ಸಿಂಗಟಾಲೂರು
ವಿಡಿಯೋ ಸ್ಟೋರಿ | ಗಂಗಾಪುರ ಪೇಟೆಯಲ್ಲಿ ನಡೆಯುತ್ತೆ ಸಗಣಿ ಎರಚಾಟದ ಹಬ್ಬ
Editor’s Pick More