ಉ.ಕರ್ನಾಟಕದ ನೇಕಾರರನ್ನು ಬೆಂಬಲಿಸಲು ಕೋರಿ ಎಚ್‌ಡಿಕೆಗೆ ಸತ್ಯಾಗ್ರಹಿಗಳ ಪತ್ರ

ರಾಷ್ಟ್ರೀಯ ಕೈಮಗ್ಗ ದಿನವಾದ ಇಂದು (ಆಗಸ್ಟ್ ೭) ಉತ್ತರ ಕರ್ನಾಟಕದ ನೇಕಾರರಿಗೆ ಬೆಂಬಲ ನೀಡಿ ಗ್ರಾಮ ಸೇವಾ ಸಂಘ ಕೈಮಗ್ಗ ಸತ್ಯಾಗ್ರಹ ಆರಂಬಿಸಿದೆ. ಈ ಬಗ್ಗೆ ವಿವರ ನೀಡಿ ಗ್ರಾಮ ಸೇವಾ ಸಂಘ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ಬರೆದ ಪತ್ರ ಯಥಾವತ್ತಾಗಿ ಇಲ್ಲಿದೆ

ಮಾನ್ಯ ಕುಮಾರಸ್ವಾಮಿಗಳೇ,

ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕ ಪ್ರದೇಶಗಳನ್ನು ಅಭಿವೃದ್ಧಿಪಡಿಸುವ ಕುರಿತು ವ್ಯಾಪಕ ಚರ್ಚೆ ನಡೆದಿರುವುದೂ, ತಾವೂ ಆ ಬಗ್ಗೆ ಸಕ್ರಿಯವಾಗಿ ಪ್ರತಿಕ್ರಿಯಿಸಿರುವುದೂ ಸರಿಯಷ್ಟೆ, ಉತ್ತರ ಕರ್ನಾಟಕದ ಅಭಿವೃದ್ಧಿಯ ಮಂತ್ರದಂಡವು ಹತ್ತಿ ಕೈಮಗ್ಗದ ಉದ್ದಿಮೆಯಾಗಿದೆ ಎಂದು ಗ್ರಾಮಸೇವಾಸಂಘವು ಬಲವಾಗಿ ಪ್ರತಿಪಾದಿಸುತ್ತದೆ. ಈ ಬಗ್ಗೆ ರಾಜ್ಯದ ಗಮನ ಸೆಳೆಯಲೆಂದು, ಇದೇ ೦೭.೦೮.೨೦೧೮, ರಾಷ್ಟ್ರೀಯ ಕೈಮಗ್ಗ ದಿನದಂದು ಆರಂಭವಾಗಿ, ಕೈಮಗ್ಗ ಸತ್ಯಾಗ್ರಹ ನಡೆದಿರುವುದು ತಮಗೆ ತಿಳಿದೇ ಇದೆ.

ಇದನ್ನೂ ಓದಿ : ನೇಕಾರಿಕೆ ನಂಬಿ, ಸ್ವಾಭಿಮಾನದ ಬದುಕು ನಡೆಸುತ್ತಿರುವ ಸಂಗಪ್ಪ ಮುಂಟೆ 
  • ಹತ್ತಿ ಬೆಳೆಗಾರಿಕೆಯಲ್ಲಿ ರಾಜ್ಯವು ರಾಷ್ಟ್ರದಲ್ಲಿ ಎರಡನೆಯ ಸ್ಥಾನದಲ್ಲಿದೆ. ರಾಜ್ಯದಲ್ಲಿ ಬೆಳೆಯುವ ಹತ್ತಿಯ ಬಹುಪಾಲು ಉತ್ತರ ಕರ್ನಾಟಕದ ಏಳೆಂಟು ಜಿಲ್ಲೆಗಳಲ್ಲಿ ಕೇಂದ್ರೀಕೃತವಾಗಿದೆ. ಹತ್ತಿಯನ್ನು ಪರಿಷ್ಕರಿಸುವ ಹಾಗೂ ನೂಲಾಗಿ ಪರಿವರ್ತಿಸುವ ಕಾರ್ಖಾನೆಗಳು ಈಗಾಗಲೇ ಉತ್ತರ ಕರ್ನಾಟಕದ ಭಾಗಗಳಲ್ಲಿ ಶತಮಾನದಷ್ಟು ಹಳೆಯ ಉದ್ದಿಮೆಗಳಾಗಿವೆ.
  • ವಿಶ್ವ ಮಾರುಕಟ್ಟೆ ಹಾಗೂ ದೇಶೀ ಮಾರುಕಟ್ಟೆಗಳಲ್ಲಿ ಹತ್ತಿಕೈಮಗ್ಗದ ಬಟ್ಟೆ ಹಾಗೂ ಉಡುಪುಗಳಿಗೆ ದಿನೇದಿನೇ ಬೇಡಿಕೆ ಹೆಚ್ಚುತ್ತಿದೆ. ತಮಗೆ ಪ್ರಾಯಶಃ ತಿಳಿದಿರದ ಒಂದು ಸಂಗತಿ ಎಂದರೆ, ಈ ಬೇಡಿಕೆಯನ್ನು ವಿಶ್ವದ ಬೇರಾವ ದೇಶಗಳೂ ಪೂರೈಸಲಾರವು, ಭಾರತ ಮಾತ್ರವೇ ಪೂರೈಸಬಲ್ಲದು. ಭಾರತದೊಳಗೂ, ಉತ್ತರ ಕರ್ನಾಟಕವು ಹತ್ತಿ ಕೈಮಗ್ಗದಲ್ಲಿ ಮುಂಚೂಣಿ ಕ್ಷೇತ್ರವಾಗಿದೆ. ಈಗಲೂ ನಮ್ಮ ಒಂದು ದೇಶದಲ್ಲಿರುವ ಚಾಲ್ತಿಮಗ್ಗಗಳ ಸಂಖ್ಯೆಯು ವಿಶ್ವದ ಒಟ್ಟು ಚಾಲ್ತಿಮಗ್ಗಗಳಿಗಿಂತ ಮಿಗಿಲಾಗಿದೆ.
  • ಕೈಮಗ್ಗ ಉದ್ದಿಮೆಯನ್ನು ಅಮುಲ್‌ ಉದ್ದಿಮೆಯ ಮಾದರಿಯಲ್ಲಿ ಉತ್ತರ ಕರ್ನಾಟಕದಲ್ಲಿ ಯಶಸ್ವಿಯಾಗಿ ಅಭಿವೃದ್ಧಿಪಡಿಸಬಹುದೆಂದು ತಜ್ಞರು ಅಭಿಪ್ರಾಯಪಡುತ್ತಾರೆ. ಈಗಾಗಲೇ ಕೈಮಗ್ಗ ಉದ್ದಿಮೆ ಇಲ್ಲಿದೆ. ಹೊಸದಾಗಿ, ಕಚ್ಚಾ ಮಾಲಿನ ಅಭಿವೃದ್ಧಿ, ಮೂಲಸೌಲಭ್ಯ ಅಭಿವೃದ್ಧಿ, ತಂತ್ರಜ್ಞಾನ ಅಭಿವೃದ್ಧಿ, ತರಬೇತಿ, ತಂತ್ರಜ್ಞಾನ ಆಮದು, ಇತ್ಯಾದಿ ಯಾವುದೇ ಬಾಬಿಗೆ ಒಂದು ಚಿಕ್ಕಾಸನ್ನೂ ವ್ಯಯಿಸಬೇಕಾದ ಪ್ರಮೇಯವಿಲ್ಲ.
  • ಕೇವಲ ಒಂದೆರಡು ಸಾವಿರ ಕೋಟಿ ರೂಪಾಯಿಗಳನ್ನು, ಮುಂದಿನ ಐದು ವರ್ಷಗಳಲ್ಲಿ, ಮಾರುಕಟ್ಟೆ ಕ್ರೋಢೀಕರಣ ಹಾಗೂ ಅಮುಲ್ ಮಾದರಿಯ ವಿಕೇಂದ್ರೀಕೃತ ವ್ಯವಸ್ಥೆ ಸ್ಥಾಪಿಸುವ ಸಲುವಾಗಿ ವ್ಯಯಿಸಿದ್ದೇ ಆದರೆ, ಸರಿಸುಮಾರು ಒಂದೂವರೆ ಲಕ್ಷ ಗ್ರಾಮೀಣ ಸಂಸಾರಗಳು ನೇರವಾಗಿ ಹಾಗೂ ಲಕ್ಷಾಂತರ ಸಂಸಾರಗಳು ಪೂರಕವಾಗಿ ಬದುಕಿಕೊಳ್ಳುತ್ತವೆ. ಇತ್ತ ನೇಕಾರರು, ಅತ್ತ ಹತ್ತಿ ಬೆಳೆಗಾರ ರೈತರು ಯೋಜನೆಯಿಂದಾಗಿ ಸಂತೃಪ್ತರಾಗಲಿದ್ದಾರೆ. ಗಾಂಧೀಜಿಯವರ ಜನುಮದ ನೂರಾಐವತ್ತನೆಯ ವರ್ಷ ಆರಂಭವಾಗಲಿದೆ. ಕೈಮಗ್ಗ ಅಭಿವೃದ್ಧಿಯ ಮೂಲಕ ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕ ಭಾಗಗಳನ್ನು ಅಭಿವೃದ್ಧಿಪಡಿಸುವ ಈ ಮಹಾನ್ ಸತ್ಯಾಗ್ರಹದಲ್ಲಿ ತಮ್ಮ ಸರಕಾರವೂ ಭಾಗವಹಿಸುತ್ತದೆ ಎಂದು ನಾವು ಆಶಿಸುತ್ತೇವೆ.

ಕಾರ್ಯದರ್ಶಿ, ಗ್ರಾಮಸೇವಾಸಂಘ

#102, ಶೇಷ ನಿವಾಸ್, ಒಂದನೆ ಬ್ಲಾಕ್ , ಒಂದನೆ ಮೈನ್

ತ್ಯಾಗರಾಜನಗರ, ಬೆಂಗಳೂರು-560028

ಮೋ: 9980043911

Mail Id: gramsevasanghindia@gmail.com

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More