ವಿಡಿಯೋ ಸ್ಟೋರಿ | ರೈತರಿಗೆ ದಾರಿ ತೋರಿದ ಪ್ರಾಯೋಗಿಕ ಕೃಷಿಕ ಬಸವರಾಜ ನಾವಿ 

ಇಂಜಿನಿಯರ್ ಪದವಿ ಮುಗಿಸಿದರೂ ಕಾರ್ಪೋರೇಟ್ ಸಂಸ್ಥೆಗಳಿಗೆ ಅರ್ಜಿ ಗುಜರಾಯಿಸದೆ ತನ್ನೂರಿನಲ್ಲಿ ಆಧುನಿಕ ಕೃಷಿಯನ್ನು ಅಳವಡಿಸಿಕೊಂಡಿದ್ದಾರೆ ಬಸವರಾಜ ನಾವಿ. ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಸುಗನಹಳ್ಳಿ ಗ್ರಾಮದ ರೈತ ಬಸವರಾಜ ಈಗ ಊರಿಗೇ ಮಾದರಿ ರೈತ

ಇಂಜಿನಿಯರ್ ಪದವಿ ಮುಗಿಸಿದರೂ ಕಾರ್ಪೋರೇಟ್ ಸಂಸ್ಥೆಗಳಿಗೆ ಅರ್ಜಿ ಗುಜರಾಯಿಸದೆ ತನ್ನೂರಿನಲ್ಲಿ ಜಮೀನು ಅಭಿವೃದ್ಧಿಪಡಿಸಲು ಪಣತೊಟ್ಟು ಯಶಸ್ವಿಯಾದವರು ರೈತ ಬಸವರಾಜ ನಾವಿ. ಆಧುನಿಕ ಕೃಷಿಯನ್ನು ಅಳವಡಿಸಿಕೊಂಡಿರುವ ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಸುಗನಹಳ್ಳಿ ಗ್ರಾಮದ ರೈತ ಬಸವರಾಜ ಈಗ ಊರಿಗೇ ಮಾದರಿ ರೈತ.

ಇಂಜನಿಯರಿಂಗ್ ಪದವಿ ಮುಗಿಸಿದ ಬಸವರಾಜ ನಾವಿ ಅವರಿಗೆ ಸಾಕಷ್ಟು ಕಾರ್ಪೋರೇಟ್ ಸಂಸ್ಥೆಗಳಲ್ಲಿ ದೊಡ್ಡ ಸಂಬಳದ ಉದ್ಯೋಗ ಮಾಡಲು ಸಾಕಷ್ಟು ಅವಕಾಶಗಳು ಇದ್ದವು. ಮೂರ್ನಾಲ್ಕು ವರ್ಷ ಬೆಳಗಾವಿಯಲ್ಲಿ ಖಾಸಗಿ ಕಂಪನಿಯಲ್ಲಿ ಇಂಜಿನಿಯರ್ ಆಗಿ ಕೆಲಸವನ್ನೂ ಮಾಡಿದ್ದರು. ಆದರೆ ಇಂಜಿನಿಯರ್ ಆಗಿ ದುಡಿಯುವುದು ಯಾಕೋ ಮನಸ್ಸಿಗೆ ಖುಷಿ ಕೊಡಲಿಲ್ಲ. ಹೀಗಾಗಿ ಮತ್ತೆ ಗ್ರಾಮಕ್ಕೆ ವಾಪಾಸಾಗಲು ನಿರ್ಧರಿಸಿದರು. ಅವರ ಈ ನಿರ್ಧಾರದಿಂದ ಸ್ವಂತ ಜಮೀನಿನಲ್ಲಿ ಬಂಗಾರದ ಬೆಳೆಯನ್ನು ಬೆಳೆಸಿದ್ದು ಮಾತ್ರವಲ್ಲದೆ, ಊರಿನ ಅದೆಷ್ಟೋ ರೈತರಿಗೆ ದಾರಿ ತೋರಿಸಿದ್ದಾರೆ. ಕೃಷಿಯಲ್ಲಿ ಲಾಭ ಗಳಿಸಲು ಸಾಧ್ಯವಿಲ್ಲ ಎಂದು ಚಿಂತಿಸುವ ರೈತರಿಗೆ ಮಾರ್ಗದರ್ಶನ ನೀಡಿ ಕೃಷಿ ಉಳಿವಿಗಾಗಿ ಹೋರಾಟ ನಡೆಸಿದ್ದಾರೆ ಬಸವರಾಜ.

ಗ್ರಾಮಕ್ಕೆ ಮರಳಿದ ಮೇಲೆ ಮೊದಲು ಪ್ರಾಯೋಗಿಕವಾಗಿ ಕೃಷಿ ಮಾಡಿದ ಬಸವರಾಜ ತಮ್ಮ ಯಶಸ್ಸನ್ನು ಉಳಿದ ರೈತರಿಗೂ ತೋರಿಸಿದರು. ತಮ್ಮ ಏಳು ಎಕರೆಯಲ್ಲಿ ಸಿರಿಧಾನ್ಯ, ಬಗೆಬಗೆಯ ಹಣ್ಣು, ತರಕಾರಿ ಸೇರಿ 20ಕ್ಕೂ ಹೆಚ್ಚು ಬೆಳೆಗಳನ್ನು ಸಾವಯವ ಕೃಷಿ ಮೂಲಕ ಬೆಳೆಯುತ್ತಿದ್ದಾರೆ. ಕೇವಲ ಕೃಷಿಯನ್ನಷ್ಟೆ ನೆಚ್ಚದ ನಾವಿ, ಉಪಕೃಷಿಯನ್ನು ಅಳವಡಿಸಿಕೊಂಡಿದ್ದಾರೆ. ಎರೆಹುಳು ಗೊಬ್ಬರ, ಜೀವಾಮೃತ, ಪಂಚಗವ್ಯ, ಸಸ್ಯಜನ್ಯ ಕೀಟ ನಾಶಕ, ಎರೆಜಲ, ನಿಮಾಸ್ತ್ರ, ಅಗ್ನಿಸ್ತ್ರ, ಬೇವಿನ ಎಣ್ಣೆ, ಬೇವಿನ ಹಿಂಡಿ, ಘನ ಜೀವಾಮೃತ, ತಿಪ್ಪೆಗೊಬ್ಬರ ಮೌಲ್ಯವರ್ಧನೆ, ಜೀವಚೈತನ್ಯ ಕಾಂಪೋಸ್ಟ್, ಅಜೋಲಾಗಳನ್ನು ತಯಾರು ಮಾಡುತ್ತಾರೆ. ಜೊತೆಗೆ ಹೈನುಗಾರಿಕೆಯನ್ನು ಮಾಡುತ್ತಿದ್ದಾರೆ. ಹೀಗಾಗಿ ಒಂದಲ್ಲ ಒಂದು ಕೃಷಿಯಿಂದ ನಿತ್ಯ, ನಿರಂತರ ಆದಾಯ ತಮ್ಮ ಕೈಸೇರುವ ಯೋಜನೆ ಹಾಕಿಕೊಂಡಿದ್ದಾರೆ.

ಇಡೀ ಊರು ಹಾಗೂ ತಾಲೂಕಿನ ತುಂಬೆಲ್ಲಾ ಓಡಾಡಿ ಕೃಷಿಯಲ್ಲಿ ತಮ್ಮ ಆವಿಷ್ಕಾರಗಳ ಬಗ್ಗೆ ರೈತರಿಗೆ ತಿಳಿಸುತ್ತ ಬಹಳಷ್ಟು ಮಂದಿಗೆ ಮಾರ್ಗದರ್ಶನ ನೀಡಿದ್ದಾರೆ. ತಮ್ಮ ಏಳು ಎಕರೆ ಜಮೀನಿನಲ್ಲಿ ಅತ್ಯದ್ಭುತ ಸಾಧನೆ ಮಾಡುವ ಮೂಲಕ 12 ವರ್ಷಗಳಿಂದ ಸಾವಯುವ ಕೃಷಿಯಲ್ಲಿ ಸೈ ಎನಿಸಿಕೊಂಡಿದ್ದಾರೆ. ಈ ಭಾಗದಲ್ಲಿ ಬಸವರಾಜ ನಾವಿ ಅವರಿಗೆ ರೈತರು ಅಭಿಮಾನದಿಂದ ಕೃಷಿ ಪಂಡಿತ ಎಂದು ಕರೆಯುತ್ತಾರೆ. ಇವರ ಕೃಷಿ ಅನುಭವ ರಾಜ್ಯಕ್ಕಷ್ಟೇ ಸೀಮಿತವಾಗಿಲ್ಲ. ಹೊರರಾಜ್ಯಗಳಿಗೂ ಹೋಗಿ ಯಾವುದೇ ಫಲಾಪೇಕ್ಷೆ ನಿರೀಕ್ಷಿಸದೇ ಕೃಷಿ ತರಬೇತಿ ನೀಡುತ್ತಿದ್ದಾರೆ.

ಇದನ್ನೂ ಓದಿ : ರಕ್ತಚಂದನ, ಶ್ರೀಗಂಧ ಉಸಾಬರಿ ಬೇಡ ಎನ್ನುವವರಿಗೆ ಖಡಕ್ ಉತ್ತರ ಕೊಟ್ಟ ಗದಗ ರೈತ

ನಾವಿ ಅವರ ಕೃಷಿ ಬದುಕಿನ ಸುತ್ತ ನಷ್ಟ ಎನ್ನುವ ಪದದ ಸುಳಿವೇ ಇಲ್ಲ. ನಾವಿ ಅವರ ಈ ಕೃಷಿಗೆ ಸಾರ್ವಜನಿಕ ವಲಯದಲ್ಲಿಯೂ ಮೆಚ್ಚುಗೆ ವ್ಯಕ್ತವಾಗಿದೆ.ಇವರ ಈ ನಿಸ್ವಾರ್ಥ ಸೇವೆಗೆ ಕೇವಲ ರಾಜ್ಯವಷ್ಟೆ ಅಲ್ಲದೇ ಹೊರರಾಜ್ಯದಿಂದಲೂ ಅನೇಕ ಪ್ರಶಸ್ತಿಗಳು ಹುಡುಕಿಕೊಂಡು ಬಂದಿವೆ. ತಾವಷ್ಟೆ ಆದಾಯ ಗಳಿಸಿ ಶ್ರೀಮಂತರಾಗಬೇಕು ಎನ್ನುವವರ ಸಾಲಲ್ಲಿ ಬಸುರಾಜ ಕೊಂಚ ಭಿನ್ನ. ತಮ್ಮಂತೆ ಇತರೆ ರೈತರು ಆದಾಯ ಗಳಿಸಬೇಕು ಎನ್ನುವುದು ಇವರ ಆಲೋಚನೆ. ಬಸವರಾಜರಿಂದ ಹೆಚ್ಚೆಚ್ಚು ಜನ ಪ್ರೇರಣೆ ಹೊಂದಿ ನಮ್ಮ ಕೃಷಿಯನ್ನು ಉಳಿಸಿದರೆ ಅವರ ಶ್ರಮ ನಿಜಕ್ಕೂ ಸಾರ್ಥಕ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More