ವಿಡಿಯೋ ಸ್ಟೋರಿ | ಹೊಂಬಳದ ರಹಿಮಾನ್‌ಗೆ ಮಂಗಗಳೆಂದರೆ ಬಲುಪ್ರೀತಿ

ಗದಗ ತಾಲೂಕಿನ ಹೊಂಬಳದ ರಹಿಮಾನ್‌ ಸಾಬ್, ನಿತ್ಯದ ದುಡಿಮೆಯ ಕಾಲುಭಾಗವನ್ನು ಮಂಗಗಳ ಆಹಾರಕ್ಕೆ ಖರ್ಚು ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಪ್ರತಿದಿನ ಮಂಗಗಳಿಗೆ ಆಹಾರ ನೀಡಿದ ಮೇಲೆಯೇ ರಹಿಮಾನ್ ಅವರ ಉಪಹಾರ ಹಾಗೂ ನಿತ್ಯದ ಕಾಯಕ ಆರಂಭ

ಗದಗ ತಾಲೂಕಿನ ಹೊಂಬಳ ಗ್ರಾಮದ ರಹಿಮಾನ್‌ ಸಾಬ್ ಜಾತಿ, ಧರ್ಮದ ಜೊತೆಗೆ ಪ್ರಾಣಿಗಳು ಮತ್ತು ಮನುಷ್ಯರ ನಡುವಿನ ಎಲ್ಲೆ ಮೀರಿ ನಿಂತಿದ್ದಾರೆ. ನಿತ್ಯ ಅವುಗಳಿಗೆ ಆಹಾರ ನೀಡುವ ಮೂಲಕ ಪ್ರಾಣಿಪ್ರೀತಿ ಸಾರಿದ್ದಾರೆ. ತನ್ನ ನಿತ್ಯದ ದುಡಿಮೆಯ ಕಾಲುಭಾಗ ಮಂಗಗಳ ಆಹಾರಕ್ಕೆ ಖರ್ಚು ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಎಂಟು ವರ್ಷದಿಂದ ಈ ಕಾಯಕ ಮಾಡುತ್ತಿರುವ ರಹಿಮಾನ್ ಸಾಬ್, ತೀರಾ ಕಡುಬಡವರು. ಆರಂಭದಲ್ಲಿ ಮನೆಯಲ್ಲಿ ಮಾಡಿದ ರೊಟ್ಟಿ ಅಥವಾ ತರಕಾರಿ ಜೊತೆಗೆ ನಿತ್ಯದ ದುಡಿಮೆಯ 200 ರುಪಾಯಿಯಲ್ಲಿ 100 ರುಪಾಯಿ ಮಂಗಗಳಿಗೆ ಖರ್ಚು ಮಾಡುತ್ತಿದ್ದರು. ಈ ವಾನರ ಸೇವೆಯಿಂದ ರಹಿಮಾನ್ ಸಾಬ್‌ಗೆ ಒಳಿತಾಗಿದೆಯಂತೆ. ಈ ಎಂಟು ವರ್ಷದಲ್ಲಿ ವರ್ಷದಿಂದ ವರ್ಷಕ್ಕೆ ಆರ್ಥಿಕವಾಗಿ ಸದೃಢರಾಗುತ್ತಲೇ ಬಂದಿದ್ದಾರಂತೆ. ಈ ಕಾರಣದಿಂದಾಗಿ ಮಂಗಗಳ ಸೇವೆ ರಹಿಮಾನ್ ಪಾಲಿಗೆ ದೇವರ ಸೇವೆಯ ಸಮಾನ.

ತನ್ನ ಬಡತನದ ನೋವನ್ನು ನುಂಗಿಕೊಂಡು ಪ್ರಾಣಿಪ್ರೀತಿ ತೋರುವ ಈ ಹೃದಯವಂತ, ಬಸ್ ನಿಲ್ದಾಣದ ಬಳಿ ಪುಟ್ಟದೊಂದು ಅಂಗಡಿ ಇಟ್ಟುಕೊಂಡಿದ್ದಾರೆ. ಸದ್ಯ ರಹಿಮಾನ್, ದಿನಕ್ಕೆ ಅಂದಾಜು 300 ರುಪಾಯಿವರೆಗೆ ಹಣ್ಣು, ಬಿಸ್ಕೆಟ್, ತರಕಾರಿ ಹೀಗೆ ಬಗೆಬಗೆಯ ಆಹಾರವನ್ನು ನಿತ್ಯ ಬೆಳೆಗ್ಗೆ ಎದ್ದ ಕೂಡಲೇ ಮಂಗಗಳಿಗೆ ಹಂಚಿಕೆ ಮಾಡುತ್ತಾರೆ. ಪ್ರತಿದಿನ ಮಂಗಗಳಿಗೆ ಆಹಾರ ನೀಡಿದ ಮೇಲೆಯೇ ರಹಿಮಾನ್ ಅವರ ಉಪಹಾರ ಹಾಗೂ ನಿತ್ಯದ ಕಾಯಕ ಆರಂಭವಾಗುತ್ತದೆ.

ಪಟ್ಟಣಕ್ಕೆ ಹೋಗಿಬರುವ ಬಹುತೇಕ ಮಂದಿ ಮಕ್ಕಳಿಗೆ ತಿನಿಸು ತರುವಂತೆ ರಹಿಮಾನ್ ಸಾಬ್ ಮಕ್ಕಳ ಜೊತೆಗೆ ಮಂಗಗಳಿಗೂ ತಿನಿಸು ತರುವುದು ವಿಶೇಷ. ಬೆಳಗ್ಗೆ ಎದ್ದಕೂಡಲೇ ಊರಿನ ಬಸ್ ನಿಲ್ದಾಣ ಹಾಗೂ ದೇವಸ್ಥಾನದ ಬಳಿ ರಹಿಮಾನ್ ಸಾಬ್‌ಗಾಗಿ ಕಪಿ ಸೇನೆಯೇ ಕಾಯುತ್ತಿರುತ್ತದೆ. ರಹಿಮಾನ್ ಬಂದರೆ ಸಾಕು, ನೂರಾರು ಮಂಗಗಳು ಅವರನ್ನು ಮುತ್ತಿಕೊಳ್ಳುತ್ತವೆ. ಈತನ ಮೈಮೇಲೆಲ್ಲ ಏರಿ ಸಂಭ್ರಮಿಸುತ್ತವೆ. ತಮ್ಮ ಹಸಿವು ನೀಗಿಸೋ ಈ ಹೃದಯ ಶ್ರೀಮಂತನಿಗೆ ಪ್ರೀತಿಯ ಕೃತಜ್ಞತೆ ತೋರುತ್ತವೆ. ರಸ್ತೆಯಲ್ಲಿ ರಹಿಮಾನ್ ಸಾಬ್ ಸಾಗುತ್ತಿದ್ದರೆ, ಆತನನ್ನು ಹಿಂಬಾಲಿಸುವ ವಾನರ ಸೇನೆಯ ನಡಿಗೆ ಗಾಂಭೀರ್ಯದ ಪರೇಡ್ ಆಗಿರುತ್ತದೆ.

ಇದನ್ನೂ ಓದಿ : ವಿಡಿಯೋ ಸ್ಟೋರಿ | ಗದಗ ಜಿಲ್ಲೆಯಲ್ಲಿ ದಾಳಿಂಬೆ ಬೆಳೆಗೆ ಕೊಳೆರೋಗ ಕಾಟ
ಕಾಡಿನಲ್ಲಿ ಆಹಾರವಿಲ್ಲದ ಕಾರಣ ಆಹಾರ ಅರಸಿ ನಾಡಿಗೆ ಬಂದ ಮಂಗಗಳಿಗೆ ನಾವೂ ಆಹಾರ ನೀಡಿ ಪೋಷಿಸದಿದ್ದರೆ ಮೂಕಪ್ರಾಣಿಗಳ ಸ್ಥಿತಿ ಹೇಗೆ? ನಾವು ಆಂಜನೇಯ, ಹನುಮಂತ, ಭಜರಂಗಿ ಎನ್ನುವ ಹೆಸರಿಂದ ದೇವರ ಪೂಜೆ ಮಾಡುತ್ತೇವೆ. ಆದರೆ ಕಣ್ಣೆದುರಿಗಿರುವ ಈ ನಿಜ ದೇವರ ಸೇವೆ ಮಾಡಬೇಕಲ್ಲವೇ?
ರಹಿಮಾನ್ ಸಾಬ್

ರಹಿಮಾನ್ ಅವರ ಈ ಕಾಳಜಿ ಹಾಗೂ ಸೇವೆ ಹಲವರ ಹೆಮ್ಮೆ ಹಾಗೂ ಲೇವಡಿಗೂ ಕಾರಣವಾಗಿದೆ. ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ರಹಿಮಾನ್, ತನ್ನ ಪಾಡಿಗೆ ತಾನಿದ್ದಾರೆ. ಈ ಕಾರ್ಯದಿಂದ ಪ್ರಭಾವಿತರಾದ ಕೆಲವರು ಕಪಿಸೇನೆಯ ಮೇಲೆ ಕನಿಕರ ತೋರುತ್ತಿದ್ದಾರೆ. ತಮ್ಮ ಮನೆ ಸುತ್ತ ಬಂದ ಮಂಗಗಳಿಗೆ ಮನೆಯಲ್ಲಿದ್ದ ಆಹಾರ ನೀಡುತ್ತಿದ್ದಾರೆ. ಈ ವ್ಯಕ್ತಿಯ ಪಾಲಿಗೆ ಮಂಗಗಳೇ ನಿಜದೇವರು. ಕಪಿಗಳಲ್ಲಿ ದೈವತ್ವ ಕಂಡು ಅವುಗಳನ್ನು ಸಲಹುವ ಈತನ ಸೇವಾಗುಣ ಇತರರಿಗೂ ಮಾದರಿ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More