ವಿಡಿಯೋ ಸ್ಟೋರಿ | ಗಂಗಾಪುರ ಪೇಟೆಯಲ್ಲಿ ನಡೆಯುತ್ತೆ ಸಗಣಿ ಎರಚಾಟದ ಹಬ್ಬ

ನಾಗರಪಂಚಮಿ ಹಬ್ಬದ ಅಂಗವಾಗಿ ಹುತ್ತಕ್ಕೆ ಹಾಲೆರೆಯುವುದು. ನಾಗದೇವತೆಗಳಿಗೆ ವಿಶೇಷ ಪೂಜೆ ಸಲ್ಲಿಸುವುದು ಸೇರಿದಂತೆ ಅನೇಕ ಬಗೆಯ ಆಚರಣೆ ನೋಡಿದ್ದೇವೆ. ಆದರೆ, ಇದಕ್ಕೆಲ್ಲಕ್ಕಿಂತ ಮೀರಿ ಸಗಣಿ ಎರಚುವ ಮೂಲಕ ಗದಗ ಜಿಲ್ಲೆಯ ಗಂಗಾಪುರ ಪೇಟೆಯಲ್ಲಿ ವಿಶಿಷ್ಟ ಆಚರಣೆ

ಓಕಳಿ ಆಟದಲ್ಲಿ ಬಣ್ಣ ಅಥವಾ ಕೆಸರೆರೆಚಾಟವನ್ನು ನೋಡಿರುತ್ತೀರಿ. ನಾಗರ ಪಂಚಮಿ ಹಬ್ಬದ ಅಂಗವಾಗಿ ಹುತ್ತಕ್ಕೆ ಹಾಲೆರೆಯುವುದು, ನಾಗದೇವತೆಗಳಿಗೆ ವಿಶೇಷ ಪೂಜೆ ಸಲ್ಲಿಸುವುದು ಸೇರಿದಂತೆ ಅನೇಕ ಬಗೆಯ ಆಚರಣೆಗಳನ್ನೂ ನೋಡಿರುತ್ತೀರಿ. ಆದರೆ, ಇದಕ್ಕೆಲ್ಲಕ್ಕಿಂತ ಮೀರಿ ಸಗಣಿ ಎರಚಾಟದ ಮೂಲಕ ಗಮನ ಸೆಳೆದಿದ್ದಾರೆ ಗದಗ ಜಿಲ್ಲೆಯ ಗಂಗಾಪುರ ಪೇಟೆ ಮಂದಿ.

ಹಬ್ಬದ ಪೂರ್ವದಲ್ಲಿ ತಿಂಗಳ ಮುಂಚೆಯೇ ಯುವಕರು ತಂಡತಂಡವಾಗಿ ಮನೆಗೆ ತೆರಳಿ ಕೊಟ್ಟಿಗೆಗಳಿಂದ ಸಗಣಿ ಸಂಗ್ರಹಿಸಿಕೊಂಡು ಬರುತ್ತಾರೆ. ನಂತರ ನಾಗರ ಪಂಚಮಿಯ ಹುತ್ತ ಮುರಿಯುವ ದಿನ ಎರಡು ತಂಡ ರಚಿಸಿಕೊಂಡು ದೈವದರವರ ತೋಟದಲ್ಲಿನ ಬದನೆಕಾಯಿ, ಸೌತೆಕಾಯಿ, ಈರುಳ್ಳಿ, ಟೊಮಾಟೋ ಸೇರಿದಂತೆ ವಿವಿಧ ತರಕಾರಿ ಮಾಲೆಯನ್ನು ಕೊರಳಲ್ಲಿ ಧರಿಸಿ ಹನುಮಂತದೇವರು ಮತ್ತು ದುರ್ಗಾದೇವಿ ಗುಡಿಯಲ್ಲಿ ಪೂಜೆ ನೆರವೇರಿಸುತ್ತಾರೆ. ನಂತರ ಈ ಸಗಣಿ ಎರಚಾಟ ಶುರುವಾಗುತ್ತದೆ. ಸಂಗ್ರಹಿಸಿದ ಸಗಣಿ ಮುಗಿಯುವವರೆಗೂ ಎರಚಾಡಿ ಸಂಭ್ರಮಿಸುತ್ತಾರೆ.

ನಾಗರ ಪಂಚಮಿಯಲ್ಲಿ ಸಗಣಿ ಎರಚಾಟವನ್ನು ತಲೆತಲಾಂತರದಿಂದ ಆಚರಿಸಲಾಗುತ್ತಿದೆ. ಪಂಚಮಿಯ ಮೂರನೇ ದಿನದ ಕೆರೆಕಟ್ಟಂಬಲಿಯಂದು ಈ ವಿಶಿಷ್ಟ ಆಟದಲ್ಲಿ ಯುವಕರು ಉತ್ಸಾಹದಿಂದ ಪಾಲ್ಗೊಳ್ಳುವುದುಂಟು. ಸಗಣಿಯಾಟ ನೋಡಿದವರಿಗೆ ಹೋಳಿ ಹುಣ್ಣಿಮೆ ನೆನಪು ತರುವುದಂತೂ ನಿಶ್ಚಿತ.

ಈ ಮೋಜಿನ ಆಟ ಈ ಓಣಿಯಲ್ಲಿ 150ಕ್ಕೂ ಹೆಚ್ಚು ವರ್ಷಗಳಿಂದ ನಡೆದುಕೊಂಡು ಬಂದಿದೆ. ಪ್ರತಿವರ್ಷ ತಪ್ಪದೆ ಆಚರಣೆ ಮಾಡಲಾಗುತ್ತಿದೆ. ಕೇವಲ ಯುವಕರು, ಮಕ್ಕಳು ಮಾತ್ರವಲ್ಲದೆ ಹಿರಿಯರು ಸಹ ಆಟದಲ್ಲಿ ತೊಡಗಿ ಸಗಣಿಯಾಟಕ್ಕೆ ರಂಗು ತರುತ್ತಾರೆ.

ಇದನ್ನೂ ಓದಿ : ಗದಗ ಜಿಲ್ಲೆಯ ನರಗುಂದದ ಈ ಮಂದಿಗೆ ಪ್ರತಿ ವೀಕೆಂಡ್ ಕೂಡ ಪರಿಸರ ದಿನ

ಈ ಆಟಕ್ಕೆ ಹಲವರು ಹಲವಾರು ಅರ್ಥ ಹೇಳುತ್ತಾರೆ. ರೈತನ ಪಾಲಿಗೆ ಸಗಣಿಗೆ ಬಂಗಾರ. ಹಾಗಾಗಿ ಅದನ್ನು ಪಾವಿತ್ರ್ಯತೆಯಿಂದ ಕಾಣಬೇಕು ಎಂಬುದು ಹಲವರ ಅಭಿಪ್ರಾಯ. ಸಗಣಿ ಎರಚಾಟದಿಂದ ಕೆಲವು ಚರ್ಮರೋಗಗಳು ವಾಸಿಯಾಗುತ್ತವೆ ಎಂಬ ನಂಬಿಕೆ ಕೂಡ ಇದೆ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More