ಕೊಡಗು ಜಲಪ್ರಳಯ | ಪ್ರವಾಹಕ್ಕೆ ಅಡ್ಡಲಾಗಿ ಮರ ಉರುಳಿಸಿ ಸಾವು ಗೆದ್ದು ಬಂದರು!

ಕೊಡಗಿನಲ್ಲಿ ಜಲ ಪ್ರಳಯವನ್ನು ಸೃಷ್ಟಿಸಿದ ಮಹಾಮಳೆಯಿಂದ ಮುಕ್ಕೋಡ್ಲು, ಮಕ್ಕಂದೂರು, ಕಾಲೂರು ಗ್ರಾಮಗಳು ಅಪಾರ ಹಾನಿಗೆ ಒಳಗಾಗಿದ್ದು, ಈ ಗ್ರಾಮಗಳಲ್ಲಿ ಕಳೆದ ಮೂರು ದಿನಗಳಿಂದ ಸಿಲುಕಿಕೊಂಡಿದ್ದ ಗ್ರಾಮಸ್ಥರು ಜಲದಿಗ್ಬಂಧನದಿಂದ ಬಿಡಿಸಿಕೊಂಡು ಬಂದ ಸಾಹಸವೇ ರೋಮಾಂಚಕ

ಕೊಡಗಿನಲ್ಲಿ ಜಲ ಪ್ರಳಯವನ್ನು ಸೃಷ್ಟಿಸಿದ ಮಹಾಮಳೆಯಿಂದ ಮುಕ್ಕೋಡ್ಲು, ಮಕ್ಕಂದೂರು, ಕಾಲೂರು ಗ್ರಾಮಗಳು ಅಪಾರ ಹಾನಿಗೆ ಒಳಗಾಗಿದ್ದು, ಈ ಗ್ರಾಮಗಳಲ್ಲಿ ಕಳೆದ ಮೂರು ದಿನಗಳಿಂದ ಸಿಲುಕಿಕೊಂಡಿದ್ದ ಗ್ರಾಮಸ್ಥರು ಜಲದಿಗ್ಬಂಧನದಿಂದ ಬಿಡಿಸಿಕೊಂಡು ಬಂದ ಸಾಹಸ ರೋಮಾಂಚಕ. ಜೀವ ಉಳಿಸಿಕೊಳ್ಳುವುದಕ್ಕಾಗಿ ಗ್ರಾಮದ ಬೆಟ್ಟ, ಗುಡ್ಡಗಳಲ್ಲಿ ಪರಿಚಯದವರ ಮನೆಗಳಲ್ಲಿ ಆಶ್ರಯ ಪಡೆದರೂ ಕ್ಷಣಕ್ಷಣಕ್ಕೂ ಜೀವ ಭಯ ಕಾಡುತ್ತಿತ್ತು.

ಕಳೆದೆರಡು ದಿನಗಳಿಂದ ಜಿಲ್ಲಾಡಳಿತ ಹಾಗೂ ರಕ್ಷಣಾ ಕಾರ್ಯಾಚರಣೆ ತಂಡಗಳು ನೂರಾರು ಮಂದಿಯನ್ನು ರಕ್ಷಿಸಿವೆ. ಆದರೆ, ಸ್ಮಶಾನದಂತಿದ್ದ ಗ್ರಾಮಗಳಿಂದ ಗ್ರಾಮಸ್ಥರು ಪಾರಾಗಿ ಬಂದ ರೀತಿ ಸಾಹಸಮಯ. ತಮ್ಮ ಮನೆಯಲ್ಲಿ ೧೦೦ಕ್ಕೂ ಅಧಿಕ ಗ್ರಾಮಸ್ಥರೊಂದಿಗೆ ಸಿಲುಕಿಕೊಂಡಿದ್ದ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ರವಿ ಕುಶಾಲಪ್ಪ ಅವರ ಪ್ರಕಾರ, ರಕ್ಷಣಾ ತಂಡಗಳು ತಲುಪುವ ಮೊದಲೇ ಗ್ರಾಮದ ಜನರು ಸ್ವತಃ ರಕ್ಷಣೆಗೆ ಪರಸ್ಪರರಿಗೆ ನೆರವಾಗಿದ್ದಾರೆ. “ನಮ್ಮನ್ನು ರಕ್ಷಿಸಲು ಯಾವುದೇ ತಂಡಗಳು ಬರಲಿಲ್ಲ. ಜೀವ ಉಳಿಸಿಕೊಳ್ಳಲು ನಾವು ಗ್ರಾಮಸ್ಥರೇ ದುಸ್ಸಾಹಸದಿಂದ ಕಾಡುಮೇಡುಗಳನ್ನು ದಾಟಿ ಡಾಂಬರು ರಸ್ತೆಗೆ ಬಂದು ತಲುಪಿದ್ದೇವೆ. ರಸ್ತೆಗೆ ಬಂದ ನಂತರವಷ್ಟೇ ಅಧಿಕಾರಿಗಳು ಹಾಗೂ ಕಾರ್ಯಾಚರಣೆ ತಂಡ ನಮ್ಮನ್ನು ಭೇಟಿಯಾಗಿವೆ,” ಎನ್ನುತ್ತಾರೆ ರವಿ ಕುಶಾಲಪ್ಪ.

ಆಗಸ್ಟ್ ೧೫ರಿಂದ ಮಹಾಮಳೆ ಗ್ರಾಮವನ್ನು ಆವರಿಸುತ್ತಲೇ ಬಂತು. ಇದು ಪ್ರತಿ ವರ್ಷ ಸುರಿಯುವ ಮಾಮೂಲಿ ಮಳೆಯೆಂದು ಗ್ರಾಮಸ್ಥರು ಸುಮ್ಮನಾಗಿದ್ದರು. ಆದರೆ, ಗಂಟೆಗಂಟೆಗೂ ಮಳೆ ಪ್ರಮಾಣ ಹೆಚ್ಚುತ್ತಲೇ ಹೋಯಿತು. ಆಗಸ್ಟ್ ೧೬ ಹಾಗೂ ೧೭ರಂದು ಮಳೆ ತೀವ್ರತೆಯನ್ನು ಪಡೆದುಕೊಂಡು ಗ್ರಾಮಕ್ಕೆ ಗ್ರಾಮವೇ ಜಲಾವೃತಗೊಳ್ಳಲು ಆರಂಭವಾಯಿತು. ಅಪಾಯ ಅರಿತ ಸುಮಾರು ೭೪ ಮಂದಿ ತಂತಿಪಾಲದ ದೊಡ್ಡ ಗುಡ್ಡದ ಮೇಲೆ ಹತ್ತಿ ಕುಳಿತರು. ಜಿಲ್ಲಾಡಳಿತದಿಂದ ಕಾರ್ಯಾಚರಣೆ ಪಡೆ ಹೆಲಿಕಾಪ್ಟರ್ ಮೂಲಕ ಬರಲಿದೆ ಎಂದು ಗ್ರಾಮಸ್ಥರು ವಿಶ್ವಾಸದಲ್ಲಿ ಇರುವಾಗಲೇ ನೀರಿನ ಪ್ರಮಾಣ ಹೆಚ್ಚಾಗುತ್ತ ಹೋಯಿತು. ಕೊನೆಗೆ ಕಾಯುವುದರಲ್ಲಿ ಅರ್ಥವಿಲ್ಲ ಎನ್ನುವುದನ್ನು ಗ್ರಾಮಸ್ಥರು ಅರಿತುಕೊಂಡರು. ರವಿ ಕುಶಾಲಪ್ಪ ಅವರು ಸ್ವಲ್ಪ ಕಾಲ ಗ್ರಾಮಸ್ಥರಿಗೆ ತಮ್ಮ ಮನೆಯಲ್ಲಿಯೇ ಆಶ್ರಯ ಕೊಟ್ಟಿದ್ದಾರೆ. ಆದರೆ, ಪ್ರವಾಹ ಏರುತ್ತಲೇ ಮೇಘತ್ತಾಳು ಭಾಗದಲ್ಲಿ ಬೃಹತ್ ಗುಡ್ಡ ಕುಸಿದು ೧೦ ಎಕರೆಯಷ್ಟು ಪ್ರದೇಶವನ್ನು ಆವರಿಸಿತು. ತಂತಿಪಾಲ ಗ್ರಾಮ ಸಂಪೂರ್ಣ ಜಲಾವೃತಗೊಂಡು ವಾಹನಗಳು ನೀರಿನಲ್ಲಿ ತೇಲತೊಡಗಿದವು. ಆಗಲೇ ರವಿ ಕುಶಾಲಪ್ಪ ಅವರು ಎಲ್ಲರನ್ನು ಕರೆದುಕೊಂಡು ಮುಕ್ಕೋಡ್ಲುವಿನ ತಮ್ಮ ಮನೆಗೆ ತೆರಳಿ ಆಶ್ರಯ ನೀಡಿದರು. ಅಲ್ಲಿಯೇ ಎಲ್ಲರಿಗೆ ಊಟದ ವ್ಯವಸ್ಥೆ ಮಾಡಿದರು. ಆದರೆ, ಮಳೆ ನಿಲ್ಲದೆ, ಗ್ರಾಮ ಕೆಸರುನೀರಿನಿಂದ ದ್ವೀಪದಂತಾದಾಗ ಜಿಲ್ಲಾಡಳಿತವನ್ನು ಕಾಯುವುದು ಬೇಡವೆಂದು ಗ್ರಾಮಸ್ಥರು ನಿರ್ಧರಿಸಿದರು. “ಬದುಕಿದರೆ ಊರು ಸೇರುತ್ತೇವೆ, ಇಲ್ಲದಿದ್ದರೆ ಎಲ್ಲರೂ ಸಾಯೋಣ ಎಂದು ಧೈರ್ಯ ಮಾಡಿ ಗ್ರಾಮವನ್ನು ಬಿಡಲು ನಿರ್ಧಾರ ಕೈಗೊಂಡು ಪ್ರಯಾಣ ಬೆಳೆಸಿದೆವು,” ಎನ್ನುತ್ತಾರೆ ರವಿ ಕುಶಾಲಪ್ಪ.

“ಹಗ್ಗ ಹಾಗೂ ಮರ ಕತ್ತರಿಸುವ ಯಂತ್ರದೊಂದಿಗೆ ಉಟ್ಟ ಬಟ್ಟೆಯಲ್ಲೇ ಎಲ್ಲರೂ ಹೊರಟೆವು. ಪ್ರವಾಹದಲ್ಲಿ ಸಂಪರ್ಕ ಸೇತುವೆ ಮುಳುಗಿದ್ದರಿಂದ ಹಗ್ಗದ ಮೂಲಕ ಸೇತುವೆಯನ್ನು ದಾಟಿ ೩ ಕಿಮೀ ದೂರ ನಡೆದೆವು. ಆ ಮಾರ್ಗದಲ್ಲಿ ದೊಡ್ಡ ಪ್ರವಾಹ ಇದ್ದುದರಿಂದ ಮರವೊಂದನ್ನು ಬೀಳಿಸಿ, ಕಾಯಿಲೆಯಿಂದ ಬಳಲುತ್ತಿದ್ದವರನ್ನು ಹೆಗಲಿನ ಮೇಲೆ ಹೊತ್ತುಕೊಂಡು ಆ ಬದಿಗೆ ದಾಟಿದೆವು. ನಂತರ ಕೋಟೆ ಬೆಟ್ಟವನ್ನು ಏರಲು ಆರಂಭಿಸಿದೆವು. ಕೋಟೆ ಬೆಟ್ಟಕ್ಕೆ ಬಡಿಯುತ್ತಿದ್ದ ಗಾಳಿಯ ದಾಳಿಯನ್ನು ಸಹಿಸಿಕೊಂಡು ನೂರಕ್ಕೂ ಅಧಿಕ ಮಂದಿ ಬೆಟ್ಟವೇರಿ ಎರಡು ಹೊಳೆಗಳನ್ನು ದಾಟಿ, ಹೇಗೋ ಮಾದಾಪುರ-ಸೋಮವಾರಪೇಟೆಯ ಇಗ್ಗೋಡ್ಲು ಗ್ರಾಮದ ಡಾಂಬರಿನ ರಸ್ತೆಗೆ ಬಂದು ತಲುಪಿದೆವು. ಅಲ್ಲಿ ತಲುಪುತ್ತಿದ್ದಂತೆಯೇ ನಮ್ಮನ್ನು ಸ್ವಾಗತಿಸಲು ನಿಂತಿರುವಂತೆ ಕಾರ್ಯಾಚರಣೆ ತಂಡಗಳು ಗೋಚರಿಸಿದವು,” ಎಂದು ರವಿ ಕುಶಾಲಪ್ಪ ತಮ್ಮ ಅನುಭವ ಹಂಚಿಕೊಂಡರು.

“ಆಸ್ತಿ ಹೋದರೂ ಪರವಾಗಿಲ್ಲ, ಗ್ರಾಮಸ್ಥರ ಜೀವವನ್ನು ಉಳಿಸಬೇಕೆಂದು ಹರಸಾಹಸಪಟ್ಟೆವು. ಯಾವುದೇ ಜೀವ ಹಾನಿಯಾಗದಿರುವುದು ಸಮಾಧಾನ ತಂದಿದೆ. ಪುಟ್ಟ ಮಗುವೊಂದು ಅಸುನೀಗಿರುವುದು ಬೇಸರವಾಗಿದೆ,” ಎನ್ನುತ್ತಾರೆ ರವಿ ಕುಶಾಲಪ್ಪ. “ನನ್ನ ಮನೆಯ ಅಂಗಳದಲ್ಲಿ ೧೪ ವಾಹನಗಳು ನಿಂತಿದ್ದು, ಇವುಗಳ ಸ್ಥಿತಿಗತಿ ನನ್ನ ಮನೆಯ ಸ್ಥಿತಿಗತಿ ಹೇಗಿದೆ ಎನ್ನುವುದೇ ತಿಳಿದಿಲ್ಲ,” ಎಂದು ನೋವನ್ನು ತೋಡಿಕೊಂಡರು.

ಮಕ್ಕಂದೂರು, ಮುಕ್ಕೋಡ್ಲು, ಶಾಂತಳ್ಳಿ ಗ್ರಾಮಗಳು ಸಂಪೂರ್ಣವಾಗಿ ನಾಶವಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಪರಿಹಾರ ಒದಗಿಸಬೇಕೆಂದು ಅವರು ಆಗ್ರಹಿಸಿದರು. ಇಂದು ಜಿಲ್ಲಾಧಿಕಾರಿಗಳ ಬಳಿ ಬಂದಿದ್ದ ರವಿ ಕುಶಾಲಪ್ಪ, “ಜಿಲ್ಲಾಡಳಿತವು ಸಂಕಷ್ಟದಲ್ಲಿ ಸಿಲುಕಿದ್ದ ಗ್ರಾಮಸ್ಥರನ್ನು ರಕ್ಷಣೆ ಮಾಡುವಲ್ಲಿ ಎಡವಿದೆ,” ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇಲ್ಲಿವರೆಗೆ ರಸ್ತೆ ಮೇಲೆ ಬಿದ್ದಿರುವ ಬರೆಯ ಮಣ್ಣನ್ನು ತೆರವುಗೊಳಿಸಿಲ್ಲವೆಂದು ಕಿಡಿಕಾರಿದರು. ಇದೀಗ ೩ ಜೆಸಿಬಿಗಳು ಮುಕ್ಕೋಡ್ಲು ಗ್ರಾಮ ವ್ಯಾಪ್ತಿಯ ರಸ್ತೆಗಳಲ್ಲಿ ಬಿದ್ದಿರುವ ಮಣ್ಣನ್ನು ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿವೆ.

ಇದನ್ನೂ ಓದಿ : ವಿಡಿಯೋ ಸ್ಟೋರಿ | ಮಳೆ ಆರ್ಭಟಕ್ಕೆ ಕಂಗಾಲಾದ ಕೊಡಗು, ದ್ವೀಪಗಳಾದ ತಗ್ಗು ಪ್ರದೇಶ

ಇದು ಮಡಿಕೇರಿಯಲ್ಲಿ ಆಶ್ರಯ ಪಡೆದಿರುವ ನೊಂದವರ ಕಥೆ. ಆದರೆ, ವೀರಾಜಪೇಟೆ ಮತ್ತು ಸೋಮವಾರಪೇಟೆ ಕೇಂದ್ರಗಳಲ್ಲಿ ಆಶ್ರಯ ಪಡೆದಿರುವವರ ಕತೆ ಇದಕ್ಕಿಂತ ಭಿನ್ನವೇನಲ್ಲ. ವೀರಾಜಪೇಟೆಯಲ್ಲಿ ಆಶ್ರಯ ಪಡೆದಿರುವ ಲಲಿತಮ್ಮನವರಿಗೆ (೬೮) ಮೂವರು ಗಂಡುಮಕ್ಕಳು, ಗಂಡನನ್ನು ಕಳೆದುಕೊಂಡಿದ್ದರು. ಮಕ್ಕಳೆಲ್ಲ ಹೊರಜಿಲ್ಲೆಗಳಲ್ಲಿ ಕೆಲಸದಲ್ಲಿದ್ದು, ಸುಖವಾಗಿದ್ದಾರೆ. ಗಂಡ ಕಟ್ಟಿದ ಮನೆ ವೀರಾಜಪೇಟೆಯ ನೆಹರೂ ನಗರದಲ್ಲಿದೆ. ಸುರಿವ ಮಳೆಗೆ ಮನೆಯ ಹೊಸ್ತಿಲೊಳಗೇ ನೀರು ನುಗ್ಗಿದೆ. ಕಡೆಗಾಲದ ಆಸರೆಯಾಗಿ ಉಳಿದಿದ್ದ ಮನೆಯ ಗೋಡೆಗಳು ಆಗಸ್ಟ್ ೧೭ನೇ ತಾರೀಖಿನಂದು ರಾತ್ರಿಯೇ ಬಿರುಕು ಬಿಟ್ಟಿವೆ. ಅಕ್ಕಪಕ್ಕದ ಮನೆಯವರು ಇವರಿಗೆ ಎಚ್ಚರಿಕೆ ನೀಡಿದ್ದಾರೆ. ಆ ಅಪರಾತ್ರಿಯಲ್ಲಿ ಪ್ರಾಣ ಉಳಿಸಿಕೊಳ್ಳಲು ಉಟ್ಟ ಬಟ್ಟೆಯಲ್ಲೇ ಎರಡು ಕಿಲೋಮೀಟರ್ ನಡೆದು, ಸಮೀಪದ ಸಮುದಾಯ ಭವನದಲ್ಲಿ ಆಶ್ರಯ ಪಡೆದಿದ್ದಾರೆ. ಮಾರನೇ ದಿನ ಸರ್ಕಾರಿ ಅಧಿಕಾರಿಗಳು ಅವರನ್ನು ವೀರಾಜಪೇಟೆಯ ಪರಿಹಾರ ಕೇಂದ್ರಕ್ಕೆ ದಾಖಲಿಸಿದರು. ಅವರಿಗೆ ಹೃದಯ ಸಂಬಂಧಿ ಖಾಯಿಲೆ ಇದ್ದು, ವೀರಾಜಪೇಟೆಯ ಕೇಂದ್ರದಲ್ಲಿ ವೈದ್ಯಕೀಯ ಸೇವೆಯನ್ನೂ ಅಧಿಕಾರಿಗಳು ಕೊಡಿಸಿದ್ದಾರೆ. “ಇದ್ದ ಒಂದು ಮನೆಯೊಳಗೆ ಸಂಪೂರ್ಣ ನೀರು ತುಂಬಿಕೊಂಡಿದ್ದು, ಚೂರುಪಾರು ಚರಾಸ್ಥಿ ನೀರು ಪಾಲಾಗಿದೆ,” ಎಂದು ನೋವು ತೋಡಿಕೊಂಡರು.

ಇನ್ನು, ಇದೇ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಸರಳಾ, ಅವರ ಮಕ್ಕಳಾದ ನಿಶಾ ಮತ್ತು ವಿಸ್ಮಿತಾ ಅವರದ್ದೂ ಗೋಳಿನ ಕತೆಯೇ. ಕಾಫಿತೋಟದಲ್ಲಿ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿರುವ ಸರಳಾ ಅವರದ್ದು ಕಷ್ಟದ ಬದುಕು. ಇಬ್ಬರು ಮಕ್ಕಳು; ಒಬ್ಬಳು ೧೦ನೇ ತರಗತಿ, ಮತ್ತೊಬ್ಬಳು ದ್ವಿತೀಯ ಪಿಯುಸಿ. ಆಗಸ್ಟ್ ೧೬ರಂದು ಮುಂಜಾಗರೂಕತಾ ಕ್ರಮವಾಗಿ ಮನೆ ಖಾಲಿ ಮಾಡಿ ವೀರಾಜಪೇಟೆಯ ಸುಂಕದಕಟ್ಟೆಯ ಸಮುದಾಯ ಭವನದ ಪರಿಹಾರ ಕೇಂದ್ರವನ್ನು ಸೇರಿಕೊಂಡಿದ್ದಾರೆ. ಮಾರನೇ ದಿನ ಬೆಳಗ್ಗೆ ಮನೆಯ ಗೋಡೆ ಕುಸಿದಿದ್ದು ಸಂಪೂರ್ಣ ನೀರು ತುಂಬಿಕೊಂಡಿದೆ. ಇಬ್ಬರೂ ಮಕ್ಕಳು, ಪುಸ್ತಕವೆಲ್ಲ ಹಾಳಾಗಿದ್ದು, ಶಾಲೆಗೆ ಹೋಗೋದು ಹೇಗೆಂಬ ಚಿಂತೆಯಲ್ಲಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು ೪೧ ಪರಿಹಾರ ಕೇಂದ್ರಗಳಿದ್ದು, ಎಲ್ಲ ಕೇಂದ್ರಗಳಲ್ಲಿಯೂ ತಿಂಗಳಿಗೆ ಆಗುವಷ್ಟು ಆಹಾರ ಸಾಮಗ್ರಿಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಈ ಪರಿಹಾರ ಕೇಂದ್ರಗಳಲ್ಲಿ ಇರುವವರಿಗೆ ನೆಮ್ಮದಿಯೇ ಇಲ್ಲವಾಗಿದೆ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More