ವಿಡಿಯೋ ಸ್ಟೋರಿ | ಮಳೆ ಬಾರದಿದ್ದರೂ ಪ್ರವಾಹ, ನಡುಗಡ್ಡೆಯಂತಾದ ಸಿಂಗಟಾಲೂರು

ಮಲೆನಾಡಿನಲ್ಲಿ ವಿಪರೀತ ಮಳೆ ಸುರಿಯುತ್ತಿದ್ದು, ತುಂಗಭದ್ರಾ ನದಿ ತುಂಬಿ ಹರಿಯುತ್ತಿದೆ. ಸದ್ಯ ಈ ಭಾಗದಲ್ಲಿ ಮಳೆಯೇ ಆಗದಿದ್ದರೂ ನದಿ ತುಂಬಿ ಹರಿಯುತ್ತಿರುವ ಪರಿಣಾಮವಾಗಿ, ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಳೆ ಶಿಂಗಟಾಲೂರು ನಡುಗಡ್ಡೆಯಂತಾಗಿದ್ದು, ಗ್ರಾಮಸ್ಥರು ಕಂಗಾಲಾಗಿದ್ದಾರೆ

ಇಲ್ಲಿ ಬೆಳೆಗೆ ಆಗುವಷ್ಟೂ ಮಳೆ ಬಂದಿಲ್ಲ, ಆದರೂ ನದಿ ತುಂಬಿ ಹರಿಯುತ್ತಿದೆ! ಪರಿಣಾಮವಾಗಿ ಇಡೀ ಗ್ರಾಮ ಮುಳುಗಡೆಯಾಗಿದೆ. ನಡುಗಡ್ಡೆಯಲ್ಲಿ ಸಿಲುಕಿದ ಜನರು ರಕ್ಷಿಸುವಂತೆ ಮೊರೆಯಿಡುತ್ತಿದ್ದಾರೆ. ಇದು ಗದಗ ಜಿಲ್ಲೆಯ ಸಿಂಗಟಾಲೂರು ಜನರ ಮುಳುಗಡೆಯ ದುರಂತ ಕತೆ.

ಇಂಥ ಪರಿಸ್ಥಿತಿ ತಲೆದೋರಿರುವುದು ಇದೇ ಮೊದಲಲ್ಲ. ಹಿಂದೆ ಹೀಗಾದಾಗ ಇದಕ್ಕೆ ಪರಿಹಾರ ಕಂಡುಹಿಡಿಯುವಂತೆ ಜನಪ್ರತಿನಿಧಿಗಳನ್ನು ಹಲವು ದಶಕಗಳಿಂದ ಆಗ್ರಹಿಸುತ್ತಲೇ ಬಂದಿದ್ದಾರೆ. ಆದರೆ ಈ ಮೊರೆ ಮಾತ್ರ ಯಾರಿಗೂ ಕೇಳುತ್ತಿಲ್ಲ. ಹೀಗಾಗಿ, ಈ ವರ್ಷವೂ ಮತ್ತೆ ಅದೇ ಪರಿಸ್ಥಿತಿ ಮರುಕಳಿಸಿದೆ.

ತುಂಗಭದ್ರಾ ನದಿ ಉಕ್ಕಿದರೆ ಸಾಕು, ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಳೆ ಶಿಂಗಟಾಲೂರ ಗ್ರಾಮಸ್ಥರು ಬಿಕ್ಕುವಂತಾಗುವುದು ಸಾಮಾನ್ಯ. ಈ ಬಾರಿ, ಮಲೆನಾಡಿನಲ್ಲಿ ವಿಪರೀತ ಮಳೆ ಸುರಿಯುತ್ತಿರುವುದರಿಂದ ತುಂಗಭದ್ರಾ ಉಕ್ಕಿ ಹರಿಯುತ್ತಿದೆ. ಪರಿಣಾಮವಾಗಿ, ಈ ಊರು ಸಂಕಷ್ಟಕ್ಕೆ ಸಿಲುಕಿದೆ.

ಇದನ್ನೂ ಓದಿ : ವಿಡಿಯೋ ಸ್ಟೋರಿ | ಗದಗ ಜಿಲ್ಲೆಯಲ್ಲಿ ದಾಳಿಂಬೆ ಬೆಳೆಗೆ ಕೊಳೆರೋಗ ಕಾಟ

ಈ ಗ್ರಾಮದಲ್ಲಿ ಸುಮಾರು 17 ಕುಟುಂಬಗಳು ನಡುಗಡ್ಡೆಯಲ್ಲಿ ಸಿಲುಕಿವೆ. ಸುತ್ತ ನದಿ ನೀರು ಆವರಿಸಿರುವುದರಿಂದ 17 ಕುಟುಂಬದ ಸುಮಾರು 40ಕ್ಕೂ ಹೆಚ್ಚು ಜನರು ಕಂಗಾಲಾಗಿದ್ದಾರೆ. ಈ ಗ್ರಾಮಸ್ಥರಿಗೆ ಇದು ಸುಮಾರು 26 ವರ್ಷಗಳ ಸಮಸ್ಯೆ. 1992 ಹಾಗೂ 1997ರಲ್ಲಿ ಕೂಡ ಇದೇ ರೀತಿ ಭಾರಿ ಪ್ರವಾಹ ಬಂದೊದಗಿತ್ತು. ಆಗ ಮುಂಡರಗಿ ತಾಲೂಕಿನ ಸಿಂಗಟಾಲೂರ, ಗುಮ್ಮಗೋಳ, ಬಿದರಹಳ್ಳಿ, ವಿಠಲಾಪೂರ, ಸೇರಿದಂತೆ ನದಿ ಪಾತ್ರದ ಹತ್ತಾರು ಹಳ್ಳಿಗಳು ಮುಳಗಡೆಯಾಗಿದ್ದವು. ಈ ಗ್ರಾಮದ ಜನರನ್ನು ನಿರಾಶ್ರಿತರೆಂದು ಗುರುತಿಸಿ, ಸ್ಥಳಾಂತರ ಮಾಡಲು ಸರ್ಕಾರ ಚಿಂತನೆ ನಡೆಸಿತ್ತು.

ಸ್ಥಗಿತಗೊಂಡ ಸ್ಥಳಾಂತರ ಕಾರ್ಯ

ಸಿಂಗಟಾಲೂರ ಗ್ರಾಮದಲ್ಲಿ 170ಕ್ಕೂ ಅಧಿಕ ಕುಟುಂಬಗಳು ವಾಸ ಮಾಡುತ್ತಿದ್ದವು. 1999ರ ವೇಳೆ ಸರ್ಕಾರದಿಂದ ನೂರು ಮನೆಗಳನ್ನು ಮಂಜೂರು ಮಾಡಿ ಸ್ಥಳಾಂತರಿಸಲಾಯಿತು. ಆದರೆ, ಇನ್ನೂ 70ಕ್ಕೂ ಅಧಿಕ ಕುಟುಂಬಗಳು ಅಲ್ಲಿಯೇ ಉಳಿಯಬೇಕಾಯಿತು. ಅದರಲ್ಲಿ ಕೆಲವರು ಪ್ರವಾಹಕ್ಕೆ ಹೆದರಿ ಬೇರೆ ಕಡೆ ವಲಸೆ ಹೋಗಿ ಗುಡಿಸಲುಗಳಲ್ಲಿ ವಾಸ ಮಾಡುತ್ತಿದ್ದಾರೆ. ಇದೀಗ ಸುಮಾರು 17 ಕುಟುಂಬಗಳು ತಮ್ಮದೆಂಬ ಜಾಗವೂ ಇಲ್ಲದೆ, ಜಮೀನೂ ಇಲ್ಲದೆ, ಮನೆಯೂ ಇಲ್ಲದೆ ಇಲ್ಲಿಯೇ ಇದ್ದು, ಆಗಾಗ ಇಂತಹ ಸಂಕಷ್ಟಕ್ಕೆ ಸಿಲುಕುತ್ತಿವೆ. ಜನಪ್ರತಿನಿಧಿಗಳು ಮನೆ ನಿರ್ಮಿಸಿಕೊಡುವ ಪೊಳ್ಳು ಭರವಸೆಯನ್ನು ಮಾತ್ರ ಎಗ್ಗಿಲ್ಲದೆ ಕೊಡುತ್ತಲೇ ಬಂದಿದ್ದಾರೆ.

ಸದ್ಯ ಅನ್ನ, ನೀರು, ಆಹಾರ, ಜನಸಂಪರ್ಕವಿಲ್ಲದೆ ಇಲ್ಲಿನ ಜನರು ನರಳಾಡುತ್ತಿದ್ದಾರೆ. ಮಕ್ಕಳು, ವೃದ್ಧರು, ಜಾನುವಾರುಗಳ ಪರಿಸ್ಥಿತಿ ಅಂತೂ ಹೇಳತೀರದಾಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಈಗಲಾದರೂ ಎಚ್ಚೆತ್ತುಕೊಂಡು, ಪ್ರವಾಹ ಬಂದರೆ ಪರಿತಪಿಸುವ ಈ ಬಡವರ ಬವಣೆ ನೀಗಿಸುವಂಥ ಶಾಶ್ವತ ಪರಿಹಾರ ಒದಗಿಸಬೇಕಿದೆ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More