ವಿಡಿಯೋ ಸ್ಟೋರಿ | ಸಾವಿರಾರು ಬ್ಯಾಂಡ್ ಸೆಟ್ಟುಗಳು ಒಟ್ಟಿಗೆ ಬಡಿದ ಸದ್ದು ಈಗಲೂ ಕಿವಿಯಲ್ಲಿ ಅನುರಣಿಸುತ್ತಿದೆ

ಜೋಡಪಾಲ, ಮಣ್ಣಂಗೇರಿ, ದೇವರಕೊಲ್ಲಿಯ 300ಕ್ಕೂ ಹೆಚ್ಚು ಮಂದಿ ದಕ್ಷಿಣ ಕನ್ನಡ ಜಿಲ್ಲೆಯ ಅರಂತೋಡು ಮಳೆ ಸಂತ್ರಸ್ತರ ಕೇಂದ್ರದಲ್ಲಿ ಕಳೆದ ಐದು ದಿನಗಳಿಂದ ಆಶ್ರಯ ಪಡೆದಿದ್ದಾರೆ. ಮಳೆ ನಿಂತರೂ, ಭೂಕುಸಿತ ಕಡಿಮೆಯಾದರೂ ಅವರೊಳಗಿನ ಭಯ ಹೋಗಿಲ್ಲ

ಆಗಸ್ಟ್ 17ರ ಬೆಳಗಿನ ಎಂಟು ಗಂಟೆ. ನೂರಾರು ಕಿಮೀ ವೇಗದಲ್ಲಿ ಕೆಸರು ಮಿಶ್ರಿತ ನೀರು, ಬಂಡೆ, ಮರಗಳು ಭಾರಿ ಸದ್ದು ಮಾಡುತ್ತ ಇದ್ದಕ್ಕಿದ್ದಂತೆ ಉರುಳಿದವು. ಮತ್ತೆ ಏನೂ ಆಗಿಲ್ಲ ಎಂಬಂತೆ ನಿಶ್ಯಬ್ದ. ಅರೆಗಳಿಗೆಯಲ್ಲಿ ಕಿವಿಗಡಚಿಕ್ಕುವಂತೆ ಮತ್ತೆ ಅಂತಹುದೇ ಸದ್ದು, ಕೆಸರು ಮಿಶ್ರಿತ ನೀರು, ಧರೆಗುರುಳುತ್ತಿದ್ದ ಬಂಡೆ ಮರಗಳು…

ಇದು ಮಡಿಕೇರಿ- ದಕ್ಷಿಣ ಕನ್ನಡ ಗಡಿಭಾಗದಲ್ಲಿರುವ; ಮಂಗಳೂರಿನಿಂದ ಸುಮಾರು 100 ಕಿ.ಮೀ ದೂರದಲ್ಲಿರುವ ಅರಂತೋಡು ಮಳೆ ಸಂತ್ರಸ್ತ ಕೇಂದ್ರದಲ್ಲಿ ನೆಲೆ ಕಂಡುಕೊಂಡಿರುವ ಬಹುತೇಕರ ಮಾತು. ಜೋಡಪಾಲ, ಮಣ್ಣಂಗೇರಿ, ದೇವರಕೊಲ್ಲಿಯ 300ಕ್ಕೂ ಹೆಚ್ಚು ಮಂದಿ ಕಳೆದ ಐದು ದಿನಗಳಿಂದ ಆಶ್ರಯ ಪಡೆದಿದ್ದಾರೆ. ಮಳೆ ನಿಂತರೂ, ಭೂಕುಸಿತ ಕಡಿಮೆಯಾದರೂ ಅವರೊಳಗಿನ ಭಯ ಹೋಗಿಲ್ಲ. ಊರು ಮನೆ ಬಿಟ್ಟು ಬಂದ ಅನೇಕರಿಗೆ ಬದುಕು ಕಟ್ಟಿಕೊಳ್ಳುವುದು ಹೇಗೆ ಎಂಬ ಚಿಂತೆ. ಜೋಡಪಾಲ, ಮಣ್ಣಂಗೇರಿಯ ಬಹುತೇಕ ಮನೆಗಳು ನಾಶವಾಗಿವೆ. ಆ ಗ್ರಾಮಗಳಿಗಿಂತಲೂ ಕೆಳಭಾಗದಲ್ಲಿದ್ದ ದೇವರಕೊಲ್ಲಿಯ ಜನರಿಗೆ ಹೆಚ್ಚು ಅಪಾಯವಾಗದಿದ್ದರೂ ಅವರು ಭೀತಿಯಿಂದ ಊರು ಬಿಟ್ಟು ಬಂದಿದ್ದಾರೆ.

“ಸಾವಿರಾರು ವಾಲಗ ಬ್ಯಾಂಡ್ ಸೆಟ್ಟುಗಳು ಒಟ್ಟಿಗೆ ಬಡಿದಂತೆ ಸದ್ದಾಯಿತು. ಇನ್ನೇನು ಸರಿಯಾಯಿತು ಎಂದುಕೊಳ್ಳುವ ಹೊತ್ತಿಗೆ ಮತ್ತೆ ಇಂಥದ್ದೇ ಸದ್ದು. ಜೀವ ಕೈಯಲ್ಲಿ ಹಿಡಿದು ಓಡಿದೆವು. ನಾವು ಮನೆಯಿಂದ ಹೊರಗೆ ಬರುತ್ತಿದ್ದಂತೆ ಮನೆ ಮೇಲೆ ಬಂಡೆ ಅಪ್ಪಳಿಸಿದ ಸದ್ದು. ಹಿಂದೆ ತಿರುಗಿ ಕೂಡ ನೋಡಲಿಲ್ಲ. ಓಡಿದೆವು ಓಡಿದೆವು. ಆಮೇಲೆ ಯಾರೋ ಪುಣ್ಯಾತ್ಮರು ಇಲ್ಲಿಗೆ ಕರೆದುಕೊಂಡು ಬಂದರು,” ಎನ್ನುತ್ತಾರೆ ಜೋಡುಪಾಲ ಬಳಿಯ ತೋಟದ ಮನೆಯೊಂದರಲ್ಲಿ ವಾಸವಿದ್ದ ವೆಂಕಪ್ಪ.

ಅರಂತೋಡು ಮಳೆ ಸಂತ್ರಸ್ತರ ಕೇಂದ್ರದಿಂದ ಸುಮಾರು 20 ಕಿ.ಮೀ ದೂರದಲ್ಲಿದೆ ಭಾರಿ ಹಾನಿಗೀಡಾಗಿರುವ ಜೋಡುಪಾಲ ಗ್ರಾಮ. ಮಡಿಕೇರಿ-ದಕ್ಷಿಣ ಕನ್ನಡದ ಗಡಿಭಾಗವಾಗಿರುವ ಸಂಪಾಜೆಯಿಂದ ಹತ್ತು ಕಿ.ಮೀ. ತಮ್ಮ ಜಿಲ್ಲಾಕೇಂದ್ರ ಮಡಿಕೇರಿಗೆ ಇವರು ತಲುಪುವಂತೆಯೇ ಇಲ್ಲ. ಸುಮಾರು ನಾಲ್ಕು ಕಡೆ ರಸ್ತೆ ತುಂಡಾಗಿ ಅಡ್ಡಲಾಗಿ ಹೊಳೆ ಹರಿಯುತ್ತಿದೆ. ಭಾರಿ ಗಾತ್ರದ ಬಂಡೆಗಳು ಕುಸಿದು ಬಿದ್ದಿವೆ. ಅಲ್ಲಿ ಮಡಿಕೇರಿ ಮಂಗಳೂರನ್ನು ಸಂಪರ್ಕಿಸುವ ರಸ್ತೆಯಿತ್ತು ಎಂಬುದೇ ಪತ್ತೆಯಾಗದಷ್ಟು ಪ್ರಕೃತಿ ರುದ್ರ ತಾಂಡವವಾಡಿದೆ. ಜೋಡುಪಾಲದಲ್ಲಿ ಬಸಪ್ಪ ಮತ್ತು ಅವರ ಪುತ್ರಿ ಮೋನಿಶಾ ಮೃತಪಟ್ಟಿದ್ದಾರೆ. ಅದೇ ಕುಟುಂಬದ ಮತ್ತಿಬ್ಬರು ಸದಸ್ಯರು ನಾಪತ್ತೆಯಾಗಿದ್ದಾರೆ. ಮಣ್ಣಂಗೇರಿಯಿಂದ ನಾಪತ್ತೆಯಾಗಿದ್ದ ಮೋನಪ್ಪ ಮತ್ತು ಕಾರ್ಯಪ್ಪ ಎನ್ನುವವರನ್ನು ರಕ್ಷಿಸಲಾಗಿದೆ.

ಸಂತ್ರಸ್ತರಿದ್ದ ಸ್ಥಳಕ್ಕೆ ತೆರಳಿದ್ದ ನಾಗರಿಕ ರಕ್ಷಣಾ ತಂಡ ಎಸ್ ಕೆ ಎಸ್ ಎಸ್ ಎಫ್ ವಿಕಾಯ ತಂಡದ ಮುಖ್ಯಸ್ಥ ತಾಜುದ್ದೀನ್ ಟರ್ಲಿ “ಇನ್ನು ಕೊಡಗು ಜಿಲ್ಲೆ ಮೊದಲಿನಂತಾಗಲು ಹಲವು ವರ್ಷಗಳೇ ಬೇಕಾದೀತು. ರಸ್ತೆಯನ್ನು ಮತ್ತೆ ನಿರ್ಮಿಸಲು ಸಾಧ್ಯವೇ ಎಂಬಷ್ಟು ಹಾಳಾಗಿದೆ. ಇಂತಹ ಪ್ರಳಯಾಂತಕ ಸನ್ನಿವೇಶವನ್ನು ಯಾರೂ ಕಂಡಿರಲಿಲ್ಲ” ಎನ್ನುತ್ತಾರೆ.

“ನಾವು ಮೊದಲ ಬಾರಿಗೆ ಸ್ಥಳಕ್ಕೆ ಹೋದಾಗ ಕೇವಲ ನಾಲ್ಕು ಕುಡುಗೋಲು, ಹಗ್ಗ ಮತ್ತಿತರ ರಕ್ಷಣಾ ಸಾಮಗ್ರಿ ಹಿಡಿದು ಕಾಡು ಕಡಿಯುತ್ತ ಸಂತ್ರಸ್ತರಿದ್ದಲ್ಲಿಗೆ ತಲುಪಿದೆವು. ನಾವು ಎಷ್ಟು ಹೊತ್ತಾದರೂ ಮರಳಿ ಬಾರದಿದ್ದಾಗ ನಮ್ಮನ್ನೇ ಹುಡುಕಿಕೊಂಡು ಊರಿನವರು ಬಂದರು. ಅಷ್ಟರಲ್ಲಿ ನೂರು ಮಂದಿಯನ್ನು ಹಗ್ಗದ ಸಹಾಯದಿಂದ ರಕ್ಷಿಸಿದ್ದೆವು. ಬಸಪ್ಪನವರ ಮೃತದೇಹ ಮೊದಲು ಸಿಕ್ಕಿತು. ಸಂತ್ರಸ್ತರು ಮತ್ತಷ್ಟು ಭಯಭೀತರಾಗುತ್ತಾರೆ ಎಂದು ಮೃತದೇಹವನ್ನು ದೂರಕ್ಕೆ ಕೊಂಡೊಯ್ದು ಈ ಬದಿಗೆ ಸಂತ್ರಸ್ತರನ್ನು ಕರೆತರುವಷ್ಟರಲ್ಲಿ ಸಾಕುಬೇಕಾಗಿ ಹೋಗಿತ್ತು” ಎಂದು ತಮ್ಮ ಮೊದಲ ದಿನದ ಅನುಭವ ಹಂಚಿಕೊಂಡರು.

ಅರಂತೋಡಿನಲ್ಲಿರುವ ಟಿ ಎಂ ಶಾಹೀದ್ ಅವರ ತೆಕ್ಕಿಲ್ ಸಮುದಾಯ ಭವನವೇ ಈಗ ನಿರಾಶ್ರಿತರ ಕೇಂದ್ರವಾಗಿ ಮಾರ್ಪಟ್ಟಿದೆ. ವೃದ್ಧರು, ಹೆಣ್ಣುಮಕ್ಕಳು ಭವನದಲ್ಲಿ ತುಂಬಿ ತುಳುಕುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಸಂಘಟನೆಗಳು ತಂದುಕೊಟ್ಟಿರುವ ಅಗತ್ಯ ಸಾಮಗ್ರಿಗಳು, ಔಷಧಗಳು ಸದ್ಯ ಇವರನ್ನು ಕಾಯುತ್ತಿವೆ. ಅಡುಗೆಯನ್ನು ಸಂತ್ರಸ್ತರ ಒಂದು ಗುಂಪು ತಯಾರಿಸಿ ಉಳಿದವರಿಗೆ ಉಣಬಡಿಸುತ್ತಿದೆ.

ಗ್ರಾಮದ ಯುವ ಮುಖಂಡ ಅಬ್ದುಲ್ ಖಾದರ್, “ಮಡಿಕೇರಿಯ ಭೂಭಾಗ ಕೇವಲ ಕೃಷಿಗೆ ಮಾತ್ರ ಒಗ್ಗುವಂತಹುದು. ಆದರೆ ನಗರೀಕರಣ, ಕೈಗಾರೀಕರಣ, ಹೋಂ ಸ್ಟೇಗಳ ನಿರ್ಮಾಣ ಸಣ್ಣಪುಟ್ಟ ಒಡ್ಡುಗಳಿಂದ ಹಿಡಿದು ಭಾರಿ ಅಣೆಕಟ್ಟುಗಳ ನಿರ್ಮಾಣವಾದ ಪರಿಣಾಮ ಇಂತಹ ಸ್ಥಿತಿ ಬಂದಿದೆ. ಬರೀ ಗುಡ್ಡ ಜರಿಯುವುದು ಕೊಡಗಿನ ಜನರಿಗೆ ಸಾಮಾನ್ಯ ಸಂಗತಿ. ಆದರೆ ಅಂತರ್ಜಲ ಉಕ್ಕಿದೆ. ಪರಿಸರ ಅಸಮತೋಲನವೇ ಇದಕ್ಕೆ ಕಾರಣ ಎಂದು ನಮ್ಮ ಹಿರಿಯರು ಮಾತನಾಡಿಕೊಳ್ಳುತ್ತಾರೆ” ಎಂದು ಆತಂಕ ವ್ಯಕ್ತಪಡಿಸಿದರು.

ನಿರಾಶ್ರಿತ ಕೇಂದ್ರಕ್ಕೆ ‘ದಿ ಸ್ಟೇಟ್’ ಭೇಟಿ ನೀಡಿದಾಗ ವಿಜ್ಞಾನಿಗಳು ಕೊಡಗಿನ ಪ್ರದೇಶಕ್ಕೆ ಭೇಟಿ ನೀಡುತ್ತಾರೆ ಎಂಬ ಮಾತು ಹರಿದಾಡುತ್ತಿತ್ತು. ಸೆಕೆಂಡ್ ಮಣ್ಣಂಗೇರಿ ಎಂಬ ಸ್ಥಳದ ಕೆರೆಮನೆ ಚಿನ್ನಪ್ಪ, “ಒಂದು ಕಿಲೋ ಮೀಟರ್ ರಸ್ತೆಯೇ ಇಲ್ಲದಂತಾಗಿದೆ. ವಿಜ್ಞಾನಿಗಳು ಬಂದು ಏನು ಪ್ರಯೋಜನ? ಅವರು ವರದಿ ಕೊಟ್ಟು ಹೋಗುತ್ತಾರೆ. ಸರ್ಕಾರ ಅದನ್ನು ಜಾರಿಗೊಳಿಸುವುದಿಲ್ಲ. ಜಾರಿಗೊಳಿಸಿದರೂ ಜನ ಮತ್ತೆ ತಕರಾರು ಎತ್ತುತ್ತಾರೆ. ಮತ್ತೆ ಮಳೆ ಬರುತ್ತದೆ. ಶಾಶ್ವತವಾದಂತಹ ಕೆಲಸ ಆಗಬೇಕು,” ಎಂದು ಪರೋಕ್ಷವಾಗಿ ಗಾಡ್ಗಿಳ್, ಕಸ್ತೂರಿ ರಂಗನ್ ವರದಿಗಳ ವಿಚಾರ ಎತ್ತಿದರು.

“ಹಾಗೇ ವರದಿ ಜಾರಿ ಮಾಡಿದರೆ ನೀವುಗಳು ಮನೆ ತೊರೆಯಬೇಕಾಗುತ್ತದೆ. ಅದಕ್ಕೆ ಸಿದ್ಧವಿದ್ದೀರಾ?” ಎಂಬ ಪ್ರಶ್ನೆಗೆ “ಹಾಗೂ ಉಳಿಯುವುದಿಲ್ಲ, ಹೀಗೂ ಉಳಿಯುವುದಿಲ್ಲ. ಏನಾಗುತ್ತದೋ ದೇವರೇ ಬಲ್ಲ” ಎಂದು ಉತ್ತರಿಸಿದರು.

ಇದನ್ನೂ ಓದಿ : ಕೊಡಗು ಜಲಪ್ರಳಯ | ಈ ಅವಿಭಕ್ತ ಕುಟುಂಬಕ್ಕೆ ಈಗ ನೆಂಟರ ಮನೆಯೇ ಗತಿ

ಅರಂತೋಡು ಮಾತ್ರವಲ್ಲದೆ ಸಂಪಾಜೆ ಹಾಗೂ ಕಲ್ಗುಂಡಿಯ ಸರ್ಕಾರಿ ಶಾಲೆಗಳಲ್ಲಿ ಇನ್ನೆರಡು ಸಂತ್ರಸ್ತರ ಕೇಂದ್ರಗಳನ್ನು ತೆರೆಯಲಾಗಿದೆ. ಆ ಎರಡೂ ಕೇಂದ್ರಗಳಲ್ಲಿ ಸುಮಾರು 300 ಮಂದಿ ಆಶ್ರಯ ಪಡೆದಿದ್ದಾರೆ. ಸುಳ್ಯದ ಕುರುಂಜಿ ವೆಂಕಟ್ರಮಣಗೌಡ ಮೆಡಿಕಲ್ ಕಾಲೇಜಿನಲ್ಲಿ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಅಂದಾಜು ಇಪ್ಪತ್ತು ಮಂದಿ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More