ಕೊಡಗು ಪ್ರವಾಹ| ಅತಂತ್ರ, ಅನಿಶ್ಚಿತತೆ ನಡುವೆ ಮಂದಹಾಸ ಮೂಡಿಸಿದ ಬಕ್ರೀದ್

ಉಟ್ಟಬಟ್ಟೆಯಲ್ಲಿ ಮನೆ ಬಿಟ್ಟವರಿಗೆ ಸ್ಥಳೀಯರು ಬಟ್ಟೆಗಳನ್ನು ಒದಗಿಸಿದರು. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಪುತ್ತೂರು, ಮಂಗಳೂರು, ಬೆಳ್ತಂಗಡಿ ಮುಂತಾದ ಕಡೆಗಳಿಂದ ಬಂದ ಹೊಸಬಟ್ಟೆಗಳು ನಿರಾಶ್ರಿತರಲ್ಲಿ ಹಬ್ಬದ ಸಡಗರವನ್ನು ಹೆಚ್ಚಿಸಿದವು. ಮಕ್ಕಳು ಕೇಂದ್ರದಲ್ಲಿ ನಿರಾಶ್ರಿತರೇ ತಯಾರಿಸಿದ್ದ ಹಬ್ಬದೂಟ ಸವಿದರು

ಮಡಿಕೇರಿ- ದಕ್ಷಿಣ ಕನ್ನಡದ ಗಡಿಭಾಗಕ್ಕೆ ಅನತಿ ದೂರದಲ್ಲಿರುವ ಅರಂತೋಡು ಮಳೆ ಸಂತ್ರಸ್ತರ ಕೇಂದ್ರದಲ್ಲಿ ಬುಧವಾರ ಅಧಿಕಾರಿಗಳು ನಿರಾಶ್ರಿತರ ಹೆಸರು ಬರೆದುಕೊಳ್ಳುವಲ್ಲಿ ಮಗ್ನರಾಗಿದ್ದರು. ದಾದಿಯರು ನಿರಾಶ್ರಿತ ರೋಗಿಗಳ ಆರೋಗ್ಯದತ್ತ ಗಮನ ಹರಿಸಿದ್ದರು. ಹೊರಗೆ ಪೊಲೀಸರ ದಂಡು ಕಾವಲು ಕಾಯುತ್ತಿತ್ತು. ಕೇಂದ್ರದ ತುಂಬ ಸೊಳ್ಳೆಬತ್ತಿ, ಬಿಸ್ಕತ್ತಿನ ಪೊಟ್ಟಣಗಳು, ಔಷಧಗಳ ರಾಶಿ. ಇದರ ಮಧ್ಯೆ ನಿರಾಶ್ರಿತರ ನೋವನ್ನು ಕೊಂಚ ಮರೆಸಿದ್ದು ಬಕ್ರೀದ್ ಹಬ್ಬ.

“ನಾವೆಲ್ಲಾ ನಮ್ಮ ಪ್ರತಿವರ್ಷ ಮನೆಗಳಲ್ಲಿ ಬಕ್ರೀದ್ ಆಚರಿಸಿಕೊಳ್ಳುತ್ತಿದ್ದೆವು. ಈ ಬಾರಿ ನಿರಾಶ್ರಿತರ ಕೇಂದ್ರದಲ್ಲಿ ಹಬ್ಬ ಆಚರಿಸುತ್ತಿದ್ದೇವೆ. ಮನೆಯಲ್ಲಿ ಮಾಡುತ್ತಿದ್ದ ಹಬ್ಬಕ್ಕೆ ಇನಿತೂ ಕಡಿಮೆಯಾಗದಂತೆ ಅರಂತೋಡು ಗ್ರಾಮಸ್ಥರು ನಮಗೆ ಹಬ್ಬ ಆಚರಿಸಲು ವ್ಯವಸ್ಥೆ ಮಾಡಿದ್ದರು. ವಿಶೇಷ ಎಂದರೆ ಕೇಂದ್ರದಲ್ಲಿರುವ ಹಿಂದೂಗಳು ಕೂಡ ನಮ್ಮೊಟ್ಟಿಗೆ ಹಬ್ಬ ಆಚರಿಸಿದರು” ಎಂದು ದಿ ಸ್ಟೇಟ್ ಜೊತೆ ಸಂತಸ ಹಂಚಿಕೊಂಡರು ಕೊಡಗು ಜಿಲ್ಲೆಯ ದೇವರಕೊಲ್ಲಿಯಿಂದ ಬಂದು ಅರಂತೋಡಿನಲ್ಲಿ ಆಶ್ರಯ ಪಡೆದಿರುವ ಜುಲೈಕಾ.

ಅರಂತೋಡು ಗ್ರಾಮದ ತೆಕ್ಕಿಲ್ ಸಮುದಾಯ ಭವನದಲ್ಲಿ ಜೋಡುಪಾಲ, ಮಣ್ಣಂಗೇರಿ, ದೇವರಕೊಲ್ಲಿ ಸುತ್ತಮುತ್ತಲಿನ ಊರುಗಳ ಸುಮಾರು 300 ಮಂದಿ ಕಳೆದ ಐದು ದಿನಗಳಿಂದ ಆಶ್ರಯಪಡೆದಿದ್ದಾರೆ. ಆಗಸ್ಟ್ 17ರಂದು ಸುರಿದ ಭಾರಿ ಮಳೆ ಅವರ ಬದುಕಿಗೆ ದಿಗ್ಬಂಧನ ಹೇರಿತು. ಜೋಡುಪಾಲದ ಒಂದೇ ಕುಟುಂಬದ ಇಬ್ಬರು ಅಸುನೀಗಿದರೆ ಇನ್ನಿಬ್ಬರು ನಾಪತ್ತೆಯಾಗಿದ್ದಾರೆ. ಸುತ್ತಮುತ್ತಲಿನ ಗುಡ್ಡಗಳಿಂದ ಜರಿದ ಸುಮಾರು ಹತ್ತು ಲೋಡ್ ಆಗುವಷ್ಟು ಮರಗಳು ಇಲ್ಲಿನ ಹೊಳೆಗಳಲ್ಲಿ ಅಡ್ಡಾದಿಡ್ಡಿಯಾಗಿ ಬಿದ್ದಿವೆ. ನೂರಾರು ಕಿ.ಮೀ ವೇಗದಲ್ಲಿ ಹರಿದ ನೀರು ಮಡಿಕೇರಿ ಮಂಗಳೂರು ಹೆದ್ದಾರಿಯನ್ನು ನಾಲ್ಕು ಕಡೆ ಸೀಳಿ ಹಾಕಿದೆ. ಬೃಹತ್ ಬಂಡೆಗಳು ರಸ್ತೆಯ ಮೇಲೆ ಪವಡಿಸಿವೆ.

ಉಟ್ಟಬಟ್ಟೆಯಲ್ಲಿ ಮನೆ ಬಿಟ್ಟವರಿಗೆ ಹಬ್ಬದ ಬಟ್ಟೆಗಳನ್ನೂ ಸ್ಥಳೀಯರು ಒದಗಿಸಿದರು. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಪುತ್ತೂರು, ಮಂಗಳೂರು, ಬೆಳ್ತಂಗಡಿ ಮುಂತಾದ ಕಡೆಗಳಿಂದ ಬಂದ ಹೊಸಬಟ್ಟೆಗಳು ನಿರಾಶ್ರಿತರಲ್ಲಿ ಹಬ್ಬದ ಸಡಗರವನ್ನು ಹೆಚ್ಚಿಸಿದವು. ಬಟ್ಟೆ ತೊಟ್ಟ ಚಿಣ್ಣರು ಕೇಂದ್ರದಲ್ಲಿ ನಿರಾಶ್ರಿತರೇ ತಯಾರಿಸಿದ್ದ ಚಿಕನ್, ಪಾಯಸ, ಹಣ್ಣುಹಂಪಲು ಸವಿದರು. ಅಂತೂ ಬದುಕು ಮತ್ತೆ ಹಳಿಗೆ ಬಂದಿತು ಎಂದು ಹಿರಿಯರು ಖುಷಿಪಟ್ಟರು.

“ನನಗೆ ಹಬ್ಬ ಇರುವುದೇ ಮರೆತು ಹೋಗಿತ್ತು” ಎಂದು ಮಾತು ಆರಂಭಿಸಿದ ಮಣ್ಣಂಗೇರಿಯ ಇಬ್ರಾಹಿಂ, “ಮನೆಯಲ್ಲಿ ಹಬ್ಬ ಆಚರಿಸಲಿಲ್ಲ ಎಂಬ ಕೊರತೆಯೊಂದನ್ನು ಬಿಟ್ಟರೆ ಇಲ್ಲಿ ಯಾವುದೇ ತೊಂದರೆಯಾಗಲಿಲ್ಲ. ಗ್ರಾಮಸ್ಥರು ಅಣ್ಣತಮ್ಮಂದಿರಂತೆ ನಮ್ಮನ್ನು ನೋಡಿಕೊಂಡಿದ್ದಾರೆ. ಅನೇಕರು ಹತ್ತಿರದ ಮಸೀದಿಗಳಿಗೆ ಹೋಗಿ ಪ್ರಾರ್ಥನೆ ಸಲ್ಲಿಸಿ ಬಂದರು” ಎಂದು ಹೇಳಿದರು.

ಹಬ್ಬದೂಟ ಸವಿಯಲು ಸರತಿಯಲ್ಲಿ ಸಾಲುಗಟ್ಟಿ ಜನ ಸೇರಿದ್ದರು. ಮುಸ್ಲಿಂ ಬಾಂಧವರ ಜೊತೆಗೆ ಹಿಂದೂ ನಿರಾಶ್ರಿತರು ಕೂಡ ಸಿಹಿ ಹಂಚಿಕೊಂಡರು. ಜೋಡುಪಾಲದ ಮಳೆ ಸಂತ್ರಸ್ತ ಬಿ ರಾಮಕೃಷ್ಣ, “ನಾನೇ ಸ್ವತಃ ನಿಂತು ಅಡುಗೆಗೆ ಸಹಾಯ ಮಾಡಿದೆ. ನೀರುಕೊಟ್ಟೆ. ಮಳೆ ನಮ್ಮನ್ನು ಕಂಗೆಡಿಸಿದರೂ ಆ ನೋವುಗಳನ್ನು ಮರೆತು ನಾವು ಖುಷಿ ಅನುಭವಿಸಿದೆವು” ಎಂದು ಹೇಳಿದರು.

ಇದನ್ನೂ ಓದಿ : ಕೊಡಗು ಜಲಪ್ರಳಯ | ಈ ಅವಿಭಕ್ತ ಕುಟುಂಬಕ್ಕೆ ಈಗ ನೆಂಟರ ಮನೆಯೇ ಗತಿ

ಕಡಿಮೆ ಹಾನಿಗೊಳಗಾಗಿರುವ ದೇವರಕೊಲ್ಲಿ ಗ್ರಾಮದ ಜನರನ್ನು ಮರಳಿ ಅವರ ಮನೆಗೆ ತಲುಪಿಸಲು ಸ್ಥಳೀಯ ಆಡಳಿತ ಚಿಂತಿಸುತ್ತಿದೆ. ಮಣ್ಣಂಗೇರಿ ಮತ್ತು ಜೋಡುಪಾಲದ ಹಳ್ಳಿಗರನ್ನು ಇನ್ನಷ್ಟು ದಿನ ಇಲ್ಲಿಯೇ ಉಳಿಸಿಕೊಂಡು ನಂತರ ಅವರಿಗೆ ವಸತಿ ವ್ಯವಸ್ಥೆ ಮಾಡಿಕೊಡಲು ನಿರ್ಧರಿಸಲಾಗಿದೆ. ಈ ಮಧ್ಯೆ ಊರಿಗೆ ಮರಳುವವರಿಗೆ ತೊಂದರೆಯಾಗದಿರಲಿ ಎಂದು ಹೆಚ್ಚುವರಿಯಾಗಿ ದಾನಿಗಳಿಂದ ಸಂಗ್ರಹವಾಗುತ್ತಿರುವ ಸಾಮಗ್ರಿಗಳನ್ನು ಅವರಿಗೆ ನೀಡಲು ಯುವಕರು ಮುಂದಾಗಿದ್ದಾರೆ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More