ದಾಬೋಲ್ಕರ್ ಹಂತಕನನ್ನು ಬಂಧಿಸಿದ ಸಿಬಿಐ; ಇನ್ನಾದರೂ ಸಿಗುವರೇ ಸೂತ್ರಧಾರರು?

ವಿಚಾರವಾದಿ ದಾಬೋಲ್ಕರ್ ಹತ್ಯೆಯಾಗಿ 5 ವರ್ಷ ಕಳೆದ ಬಳಿಕ ಸಿಬಿಐ ಹಂತಕನೊಬ್ಬನನ್ನು ಬಂಧಿಸಿದೆ. ಸಿಬಿಐ ಕೆಲಸ ಶ್ಲಾಘನೆಗೆ ಒಳಗಾಗುತ್ತಿದೆ. ಆದರೆ ಒಂದು ವೇಳೆ ಕ್ಷಿಪ್ರವಾಗಿ ಆರೋಪಿಗಳನ್ನು ಬಂಧಿಸಿದ್ದರೆ ಇನ್ನಷ್ಟು ಹತ್ಯೆಗಳನ್ನು ತಪ್ಪಿಸಬಹುದಿತ್ತಲ್ಲ ಎಂಬ ಅಭಿಪ್ರಾಯ ದಟ್ಟವಾಗಿದೆ

ವಿಚಾರವಾದಿ ಮಹಾರಾಷ್ಟ್ರ ಅಂಧಶ್ರದ್ಧೆ ನಿರ್ಮೂಲನೆ ಸಮಿತಿಯ ಅಧ್ಯಕ್ಷ ನರೇಂದ್ರ ದಾಬೋಲ್ಕರ್ ಹತ್ಯೆಯಾದ ಆಗಸ್ಟ್ 20. ಅದು ರಾಷ್ಟ್ರೀಯ ವೈಜ್ಞಾನಿಕ ಮನೋಭಾವ ದಿನವೂ ಹೌದು. ಆ ನಿಮಿತ್ತ ಮಂಗಳೂರಿನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಖ್ಯಾತ ವಿಚಾರವಾದಿ ಪ್ರೊ ನರೇಂದ್ರ ನಾಯಕ್, ದಾಬೋಲ್ಕರ್ ಅವರನ್ನು ಸ್ಮರಿಸುತ್ತ ಎರಡು ಮಾತುಗಳನ್ನು ಹೇಳಿದರು. “ಈ ಹತ್ಯೆಗೆ ಐದು ವರ್ಷ ತುಂಬಲು ಎರಡು ದಿನ ಇರುವಂತೆ (ಅವರು ಹತ್ಯೆಗೀಡಾಗಿದ್ದು 2013ರಲ್ಲಿ) ಸಿಬಿಐ ಹತ್ಯೆಯಲ್ಲಿ ಭಾಗಿಯಾದ ಆರೋಪ ಹೊತ್ತ ಸಚಿನ್ ಪ್ರಕಾಶ್ ರಾವ್ ಅಂದುರೆ ಎಂಬಾತನನ್ನು ಬಂಧಿಸಿದೆ. ಇದು ದಾಬೋಲ್ಕರ್ ಅವರಿಗೆ ಸಲ್ಲಿಸಿದ ಶ್ರದ್ಧಾಂಜಲಿ,” ಎಂದರು.

ದಾಬೋಲ್ಕರ್, ಗೋವಿಂದ ಪನ್ಸಾರೆ, ಎಂ ಎಂ ಕಲಬುರ್ಗಿ, ಗೌರಿ ಲಂಕೇಶ್ ಹೀಗೆ ಸಾಲು ಸಾಲು ವಿಚಾರವಾದಿಗಳು, ಸಾಹಿತಿಗಳು, ಪತ್ರಕರ್ತರ ಹತ್ಯೆಯಾದಾಗಲೂ ತನಿಖೆ ಚುರುಕು ಪಡೆದಿರಲಿಲ್ಲ. “ಮಹಾರಾಷ್ಟ್ರ ಪೊಲೀಸರಿಗೆ ಹೋಲಿಸಿದರೆ ಕರ್ನಾಟಕ ಪೊಲೀಸರು ಎಷ್ಟೋ ಉತ್ತಮ. ಗೌರಿ ಹತ್ಯೆಗೆ ಒಂದು ವರ್ಷ ತುಂಬಲು (ಸೆ. 5, 2017) ಇನ್ನೂ ಕೆಲವು ದಿನಗಳು ಬಾಕಿ ಇವೆ. ಸಾಕಷ್ಟು ಆರೋಪಿಗಳನ್ನು ಬಂಧಿಸಲಾಗಿದೆ. ಭಿನ್ನ ವಿಚಾರಧಾರೆ ಹೊಂದಿರುವವರನ್ನು ಮಣಿಸುವ ಶಕ್ತಿಗಳ ಹೆಡೆಮುರಿಕಟ್ಟಲಾಗಿದೆ. ಆದರೆ ಮಹಾರಾಷ್ಟ್ರದ ಕತೆ ಭಿನ್ನ. “ಅಲ್ಲಿನ ಪೊಲೀಸರು ಚುರುಕಾಗಿ ಕೆಲಸ ಮಾಡದಿರುವುದಕ್ಕೆ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರವೂ ಕಾರಣ” ಎಂಬ ಅಭಿಪ್ರಾಯ ಮೊಳೆತಿತ್ತು.

ಕಾಕತಾಳೀಯವೋ ಎಂಬಂತೆ ಆತ ದಾಬೋಲ್ಕರ್ ಹತ್ಯೆಗೆ ಐದು ವರ್ಷ ತುಂಬುವ ಎರಡು ದಿನ ಮೊದಲು ಅಂದುರೆ ಸೆರೆ ಸಿಕ್ಕಿದ್ದಾನೆ. ಮಹಾರಾಷ್ಟ್ರದ ಭಯೋತ್ಪಾದನೆ ವಿರೋಧಿ ದಳ ಪ್ರತ್ಯೇಕ ಪ್ರಕರಣವೊಂದರಲ್ಲಿ ಬಂಧಿಸಿದ್ದ ಮೂವರು ನೀಡಿದ ಸುಳಿವಿನ ಆಧಾರದ ಮೇಲೆ ಆತನನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ಈ ಮೂವರಲ್ಲಿ ಒಬ್ಬ ಆರೋಪಿ ತಾನೂ ಹಾಗೂ ಅಂದುರೆ ಸೇರಿ ದಾಬೋಲ್ಕರ್ ಹತ್ಯೆಗೆ ಸಂಚು ರೂಪಿಸಿದ್ದಾಗಿ ಬಾಯಿಬಿಟ್ಟಿದ್ದಾನೆ. ಬಳಿಕ ಥಾಣೆ ಪೊಲೀಸರು ಸಿಬಿಐಗೆ ವಿಚಾರ ಮುಟ್ಟಿಸಿದರು. ಸಿಬಿಐ ನಂತರ ಪುಣೆಯಲ್ಲಿ ಅಂದುರೆಯನ್ನು ಬಂಧಿಸಿತು.

ಇದನ್ನೂ ಓದಿ : ವಿಚಾರವಾದಿಗಳ ಹತ್ಯೆ ಹಿಂದಿನ ಅಸಲಿ ಮುಖಗಳು ಸದ್ಯದಲ್ಲೇ ಬಯಲಾಗುವ ವಿಶ್ವಾಸ ತಂದ ತನಿಖೆ

ಅದೇನೇ ಇರಲಿ, ಕೆಲ ಹಿಂದೂ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದ ವೈಭವ್ ರಾವತ್, ಸುಧನ್ವಾ ಗೊಂಡಾಲೆಕರ್ ಮತ್ತು ಶರದ್ ಕಸಲ್ಕರ್ ಎಂಬುವವರನ್ನು ಹತ್ತು ದಿನಗಳ ಹಿಂದೆ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ ಬಂಧಿಸಿತ್ತು. ಈ ವೇಳೆ ಅವರ ಬಳಿ ಹಲವು ಶಸ್ತ್ರಾಸ್ತ್ರಗಳು, ಸ್ಫೋಟಕ ವಸ್ತುಗಳು ಇರುವುದು ಪತ್ತೆಯಾಗಿತ್ತು. ಇತ್ತ ಗೌರಿ ಹತ್ಯೆಯಲ್ಲಿ ಭಾಗಿಯಾದ ಅಮೂಲ್ ಕಾಳೆಗೆ ಸುಧನ್ವಾ ಪಿಸ್ತೂಲು ಒದಗಿಸಿದ್ದ ಎಂಬ ಮಾಹಿತಿ ಬಹಿರಂಗವಾಗಿತ್ತು. ಕಲಬುರ್ಗಿ ಹತ್ಯೆಯಲ್ಲೂ ಇದೇ ಮಾದರಿ ಪಿಸ್ತೂಲು ಬಳಕೆಯಾಗಿತ್ತು. ಸುಧನ್ವಾನಿಂದ ಒಟ್ಟು 11 ಪಿಸ್ತೂಲುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ. ವರದಿ ಬಂದ ಬಳಿಕ ಇನ್ನಷ್ಟು ವಿಷಯಗಳು ಖಚಿತರೂಪ ಪಡೆಯಲಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಿಬಿಐ ಕೆಲಸ ಒಂದೆಡೆ ಶ್ಲಾಘನೆಗೆ ಒಳಗಾಗುತ್ತಿದೆ. ಮತ್ತೊಂದೆಡೆ ಐದು ವರ್ಷಗಳಷ್ಟು ಸುದೀರ್ಘ ಸಮಯವನ್ನು ತೆಗೆದುಕೊಂಡದ್ದಕ್ಕೆ ಟೀಕೆಗಳಿಗೂ ಗುರಿಯಾಗುತ್ತಿದೆ. ಒಂದುವೇಳೆ ಕ್ಷಿಪ್ರವಾಗಿ ಆರೋಪಿಗಳನ್ನು ಬಂಧಿಸಿದ್ದರೆ ಇನ್ನಷ್ಟು ಹತ್ಯೆಗಳನ್ನು ತಪ್ಪಿಸಬಹುದಿತ್ತಲ್ಲ ಎಂಬ ಅಭಿಪ್ರಾಯ ಕೇಳಿಬರುತ್ತಿದೆ. ಇದರ ನಡುವೆ ಈ ಹತ್ಯೆಗಳ ಹಿಂದಿರುವ ಸೂತ್ರಧಾರರು ಯಾರು ಎಂಬುದು ಇನ್ನೂ ಬಹಿರಂಗವಾಗಿಲ್ಲ. ಕೇವಲ ಕಾಲಾಳುಗಳನ್ನು ಹಿಡಿದರೆ ಸಾಲದು. ಮುಖ್ಯ ಪಾತ್ರಧಾರಿಯ ಮುಖವಾಡವೂ ಕಳಚಿ ಬೀಳಬೇಕು ಎಂಬ ಮಾತುಗಳಿವೆ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More