ವಿಡಿಯೋ ಸ್ಟೋರಿ | ಜಮೀನು ವಿವಾದದಿಂದ ಶಾಲೆಗೆ ತೆರಳುವ ದಾರಿ ಬಂದ್‌!

ಮೂರು ದಿನಗಳಿಂದ ದಾರಿಯೇ ಇಲ್ಲದ ಕಾರಣದಿಂದ ಗ್ರಾಮದ ಓಣಿಯೊಂದರ ಮಂದಿ ಮನೆ ಬಿಟ್ಟು ಹೊರಬರದಂತಾಗಿದ್ದಾರೆ. ಶಾಲೆಗೆ ಹೋಗಬೇಕಾದ ವಿದ್ಯಾರ್ಥಿಗಳು ಮನೆಯಲ್ಲಿಯೇ ಕುಳಿತಿದ್ದಾರೆ. ಇದು ಗದಗ ಜಿಲ್ಲೆಯ ಬೆಳದಡಿ ಗ್ರಾಮದ ನಿವಾಸಿಗಳ ಸಮಸ್ಯೆ 

ಗದಗ ತಾಲೂಕಿನ ಬೆಳದಡಿ ಊರು ನಿತ್ಯವೂ ಬಳಸುವ ದಾರಿ ಜಮೀನು ವಿವಾದವೊಂದರಿಂದಾಗಿ ಮುಚ್ಚಿರುವುದು ಗ್ರಾಮಸ್ಥರ ಚಿಂತೆಗೆ ಕಾರಣವಾಗಿದೆ. ಮೂರು ದಿನಗಳಿಂದ ದಾರಿಯೇ ಇಲ್ಲದ ಕಾರಣದಿಂದ ಗ್ರಾಮದ ಓಣಿಯೊಂದರ ಮಂದಿ ಮನೆ ಬಿಟ್ಟು ಹೊರಬರದಂತಾಗಿದ್ದಾರೆ. ಶಾಲೆಗೆ ಹೋಗಬೇಕಾದ ವಿದ್ಯಾರ್ಥಿಗಳು ಮನೆಯಲ್ಲಿಯೇ ಕುಳಿತಿದ್ದಾರೆ.

ಅಂದಾಜು 60 ಕುಟುಂಬಗಳು ಬೆಳದಡಿ ಗ್ರಾಮದ ಈ ಓಣಿಯಲ್ಲಿ ನೆಲೆಸಿವೆ. ಈ ಓಣಿ ಪ್ರವೇಶಿಸುವ ದಾರಿಗೆ ಬೇಲಿ ಹಾಕಿ ಬಂದ್ ಮಾಡಲಾಗಿದೆ. ದಾರಿಗೆ ಬೇಲಿ ಹಾಕಿರುವ ಕಾರಣದಿಂದ ನಿವಾಸಿಗಳು ನೂರು ಮೀಟರ್ ನಡೆಯುವ ಹಾದಿಯ ಬದಲಾಗಿ, ಹೊಲಗಳಲ್ಲಿ 1.5 ಕಿಲೋಮೀಟರ್ವರೆಗೆ ಸುತ್ತುವರೆದು ತಮ್ಮ ಗಮ್ಯ ತಲುಪಬೇಕಾದ ಪರಿಸ್ಥಿತಿ ಇದೆ. ದಾರಿ ಮುಚ್ಚಿರುವುದರಿಂದ ಪ್ರೌಢ ಶಾಲೆಗೆ ಹೋಗುವ 120ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೂ ತೊಂದರೆಯಾಗಿದೆ.

“ಕಳೆದ 16 ವರ್ಷದಿಂದ ನಾವು ಇದೇ ದಾರಿಯನ್ನೆ ಬಳಸಿಕೊಂಡಿದ್ದೇವೆ. ಇಷ್ಟು ವರ್ಷ ಇಲ್ಲದ ಸಮಸ್ಯೆ ಈಗೇಕೆ ಉದ್ಭವವಾಯಿತು? ಸರ್ಕಾರ ನಮಗೆ ವಸತಿ ಸೌಲಭ್ಯವಾಗಿ ಆಶ್ರಯ ಮನೆಗಳನ್ನು ನೀಡಿದೆ. ಈಗ ಗ್ರಾಮ ಪಂಚಾಯತಿ ಈ ಮನೆಗಳಿಗೆ ರಸ್ತೆ ಸೌಲಭ್ಯವನ್ನು ಕಲ್ಪಿಸಲು ಗಮನಹರಿಸಬೇಕು” ಎನ್ನುವುದು ಸ್ಥಳೀಯರ ಆಗ್ರಹ.

ಮೂರು ದಿನದ ಹೊತ್ತಾತ್ರಿ ನಾವು ಶಾಲಿಗೆ ಹೋಗಾಕ್ ಆಗುತ್ತಿಲ್ಲ. ದಾರಿಗೆ ಬೇಲಿ ಹಾಕಿದ್ದಕ್ಕ ನಮಗೆ ಶಾಲಿಗೆ ಹೋಗೊ ದಾರಿ ಬಂದ್ ಆಗೈತಿ. ಹೆಂಗಾರ ಮಾಡಿ ನಮಗೆ ದಾರಿ ಮಾಡಿ ಕೊಡ್ರಿ. 
ನವೀನ್, ವಿದ್ಯಾರ್ಥಿ

ಬೆಳದಡಿ ಗ್ರಾಮದ ಈ ಸಮಸ್ಯೆಗೆ ಕಾರಣ ಜಮೀನು ವಿವಾದ. ಹನಮಪ್ಪ ಪೂಜಾರ್ ಅವರಿಗೆ ಸೇರಿದ ಒಂದು ಎಕರೆ ಜಮೀನು ಇಲ್ಲಿದೆ. ಈ ಜಮೀನಿನಲ್ಲಿಯೇ ಹನಮಪ್ಪ ಮನೆ ಕೂಡ ನಿರ್ಮಿಸಿಕೊಂಡಿದ್ದಾರೆ. ಆದರೆ ಈಗ ನನ್ನ ಜಮೀನಿನಲ್ಲಿ ನಾನು ದಾರಿಗೆ ಜಾಗ ಕೊಡುವುದಿಲ್ಲ ಎನ್ನುವ ಹಠ ಹನಮಪ್ಪನವರದ್ದು. ಆದರೆ 16 ವರ್ಷ ಸುಮ್ಮನಿದ್ದು ಈಗೇಕೆ ಈ ತಕರಾರು ಎನ್ನುವುದು ಗ್ರಾಮಸ್ಥರ ಪ್ರಶ್ನೆ.

ವಿವಾದವೀಗ ಕೋರ್ಟ್ ಮೆಟ್ಟಿಲು ಕೂಡ ಏರಿದೆ. ರಸ್ತೆ ಬಗ್ಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಈ ಕಾರಣದಿಂದ ಹನಮಪ್ಪ ತನ್ನ ಜಮೀನಿನ ವ್ಯಾಪ್ತಿಯಲ್ಲಿ ಬರುವ ರಸ್ತೆಗೆ ಬೇಲಿ ಹಾಕಿ ಬಂದ್ ಮಾಡಿದ್ದಾರೆ. ಆದರೆ ಗ್ರಾಮ ಪಂಚಾಯತಿ ಅಧಿಕಾರಿಗಳು ಮಾತ್ರ ಈ ಬಗ್ಗೆ ಮೇಲಧಿಕಾರಿಗಳೊಂದಿಗೆ ಮಾತನಾಡುವ ಭರವಸೆಯನ್ನಷ್ಟೇ ಕೊಟ್ಟಿದ್ದಾರೆ. ಹೀಗಾಗಿ ಸಮಸ್ಯೆ ಪರಿಹಾರವಾಗುವ ಖಾತರಿ ಗ್ರಾಮಸ್ಥರಿಗೆ ಸಿಕ್ಕಿಲ್ಲ.

ಸರ್ಕಾರ ನಮಗ್ ಆಶ್ರಯ ಮನಿ ಕೊಟೈತಿ. ಇಷ್ಟು ವರ್ಷ ಇದ್ದ ದಾರಿ ಈಗ ಬಂದ್ ಆಗೈತಿ. ಈಗ ನಮಗೆ ಪಂಚಾಯತಿ ಅವರು ಸಮಸ್ಯೆಗೆ ಪರಿಹಾರ ಕೊಡಬೇಕ್ರಿ. ನಮ್ಮ ಮನೆಗೆ ಓಡ್ಯಾಡಾಕಾ ದಾರಿ ಎಲ್ಲಿ ಐತಿ ಅನ್ನೋದು ಪಂಚಾಯತಿ ಅವರು ತೋರಿಸಲಿ. ನಮಗ್ ದಾರಿ ಮಾಡಿಕೊಡಬೇಕು. 
ಸರಸ್ವತಿ, ಗ್ರಾಮಸ್ಥೆ

ಆದರೆ ಗ್ರಾಮದಲ್ಲಿ ಕ್ಷುಲ್ಲಕ ಎಂದು ಜನರು ಅಂದುಕೊಂಡಿರುವ ರಸ್ತೆ ಸಮಸ್ಯೆ ಮಕ್ಕಳ ಶಿಕ್ಷಣಕ್ಕೆ ಅಡ್ಡಗಾಲಾಗಿದೆ. ಈ ಬಗ್ಗೆ ಎದುರಾಗಿರುವ ಕಾನೂನು ತೊಡಕುಗಳನ್ನು ನಿವಾರಿಸುವ ಮೂಲಕ ವಿವಾದ ಇತ್ಯರ್ಥಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಮುಂದಾಗಬೇಕು ಎನ್ನುವುದು ಸ್ಥಳೀಯರ ಆಗ್ರಹ.

ಇದನ್ನೂ ಓದಿ : ಚುನಾವಣಾ ಸಿಬ್ಬಂದಿ ಆರೋಗ್ಯ ಕಾಳಜಿ ಮೆರೆದು ಮೆಚ್ಚುಗೆ ಪಡೆದ ಗದಗ ಜಿಲ್ಲಾಡಳಿತ
ಇಲ್ಲಿನ ಸಮಸ್ಯೆ ನನ್ನ ಗಮನಕ್ಕೂ ಬಂದಿದೆ. ಪರಿಹಾರವಿಲ್ಲದ ಕಾರಣ ಇಷ್ಟು ವರ್ಷ ಇದ್ದ ದಾರಿ ಬಂದ್ ಮಾಡಿ ಹನಮಪ್ಪ ಅವರು ತಡೆಯಾಜ್ಞೆ ತಂದಿದ್ದಾರೆ. ಈ ಬಗ್ಗೆ ಮೇಲಧಿಕಾರಿಗಳೊಂದಿಗೆ ಮಾತನಾಡಿ ಸಮಸ್ಯೆ ಪರಿಹರಿಸುತ್ತೇನೆ.
ಬಸವರಾಜ್, ಪಿಡಿಓ
ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More