ವಿಡಿಯೋ ಸ್ಟೋರಿ | ಸಂತ್ರಸ್ತರಿಗೆ ನಿತ್ಯ ಅನ್ನ ನೀಡಿ ಹೀರೋ ಆದ ವೇಲಾಯುಧನ್

ಕುಶಾಲನಗರದಲ್ಲಿ ಫರ್ನಿಚರ್ ಅಂಗಡಿ ಇಟ್ಟುಕೊಂಡಿರುವ ವೇಲಾಯುಧನ್ ಕುಟುಂಬವು ಕೊಡಗು ಪ್ರವಾಹ ಸಂತ್ರಸ್ಥರಿಗೆ ಮಾಡುತ್ತಿರುವ ಮಾನವೀಯ ನೆರವಿಗೆ ಜಿಲ್ಲಾದ್ಯಂತ ಮೆಚ್ಚುಗೆ ಕೇಳಿಬಂದಿದೆ. ಇವರ ಕುರಿತ ಮಾಹಿತಿಗಳು ಫೇಸ್ಬುಕ್ ಮತ್ತು ವಾಟ್ಸಾಪ್‌ನಲ್ಲಿ ವೈರಲ್ ಆಗಿದೆ

ಕೊಡಗಿನಲ್ಲಿ ಪ್ರವಾಹ ಮತ್ತು ಗುಡ್ಡ ಕುಸಿತದಿಂದ ಹಲವಾರು ಮನೆಗಳು ನಾಶವಾಗಿ, ಕುಟುಂಬಗಳು ಪುನರ್ವಸತಿ ಕೇಂದ್ರಗಳ ಆಶ್ರಯ ಪಡೆದಿವೆ. ಆದರೆ, ಈ ಮಹಾ ದುರಂತದಲ್ಲೂ ಕೆಲವರು ಮಾನವೀಯ ಸೇವೆ ಮೂಲಕ ಹೀರೋಗಳಾಗುತ್ತಿದ್ದಾರೆ. ರಾಜಕಾರಣಿಗಳ ಸಣ್ಣತನದ ಸುದ್ದಿಗಳು ವೈರಲ್ ಆಗುವಂತೆ ಈ ಹೀರೋಗಳೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಿದ್ಧಿ ಪಡೆಯುತ್ತಿದ್ದಾರೆ. ಅಂತಹ ವ್ಯಕ್ತಿಗಳಲ್ಲಿ ಕುಶಾಲನಗರದಲ್ಲಿ ಫರ್ನಿಚರ್ ಅಂಗಡಿ ಇಟ್ಟುಕೊಂಡಿರುವ ವೇಲಾಯುಧನ್ ಕುಟುಂಬವೂ ಒಂದು. ಕೊಡಗು ಪ್ರವಾಹ ಸಂತ್ರಸ್ಥರಿಗೆ ಅವರು ಮಾಡುತ್ತಿರುವ ಮಾನವೀಯ ನೆರವಿಗೆ ಜಿಲ್ಲಾದ್ಯಂತ ಮೆಚ್ಚುಗೆಯ ಮಹಾಪೂರ ಹರಿದುಬಂದಿದೆ. ಇವರ ಕುರಿತ ಮಾಹಿತಿಗಳು ಫೇಸ್ಬುಕ್ ಮತ್ತು ವಾಟ್ಸಾಪ್‌ನಲ್ಲಿ ವೈರಲ್ ಆಗಿದೆ.

ಕುಶಾಲನಗರದ ಸುತ್ತಮುತ್ತಲೇ ಸುಮಾರು ೫ ಪರಿಹಾರ ಕೇಂದ್ರಗಳಿವೆ. ಈ ಪರಿಹಾರ ಕೇಂದ್ರಗಳಲ್ಲಿ ತಂಗಿರುವ ನೊಂದವರಿಗೆ ಶುಚಿರುಚಿಯಾದ ಬಿಸಿಯೂಟ ಒದಗಿಸುತ್ತಿರುವವರೇ ಈ ಪುಟ್ಟ ವೇಲಾಯುಧನ್ ಕುಟುಂಬ. ಸುಮಾರು ೫೦ ವರ್ಷಗಳ ಹಿಂದೆ ಕೇರಳದ ತ್ರಿಶೂರ್‌ನಿಂದ ಕೊಡಗಿಗೆ ವಲಸೆ ಬಂದಿರುವ ವೇಲಾಯುಧನ್ (೭೬) , ಕುಶಾಲನಗರದಿಂದ ಹಾರಂಗಿಗೆ ತೆರಳುವ ರಸ್ತೆಯಲ್ಲಿರುವ ಫರ್ನಿಚರ್ ಅಂಗಡಿಯ ಮಾಲೀಕರು. ಈ ಮೊದಲು ವೇಲಾಯುಧನ್ ಕಾರ್ಪೆಂಟರ್ ಆಗಿದ್ದರು. ಕೆಲ ವರ್ಷಗಳ ಹಿಂದೆ ಫರ್ನಿಚರ್ ಅಂಗಡಿ ಮಾಡಿಕೊಂಡಿದ್ದಾರೆ. ವೇಲಾಯುಧನ್ ಅವರ ಪತ್ನಿ ಪಾರ್ವತಿ (೬೫) ಹಾಗೂ ಮಗ ರಾಜೀವ (೪೨) ಕೂಡ ಕಿಂಚಿತ್ತೂ ಬೇಜಾರು ಮಾಡಿಕೊಳ್ಳದೆ ತಂದೆಯ ಕಾರ್ಯದಲ್ಲಿ ಕೈಜೋಡಿಸಿದ್ದಾರೆ.

ಆಗಸ್ಟ್ ೧೪ನೇ ತಾರೀಕಿನಿಂದಲೇ ಈ ಕುಟುಂಬ ನೊಂದವರಿಗೆ ಸಹಾಯ ಮಾಡಲು ಮುಂದಾಗಿದೆ. ಕುಶಾಲನಗರದ ಅನೇಕ ಬಡಾವಣೆಗಳಲ್ಲಿ ನೀರು ತುಂಬಿಕೊಂಡ ವಿಷಯ ತಿಳಿಯುತ್ತಲೇ ಅವರಿಗೆ ಆಹಾರ ಸರಬರಾಜು ಮಾಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಸಂತ್ರಸ್ತರ ಸಂಖ್ಯೆ ಜಾಸ್ತಿಯಾಗುತ್ತ ಹೋದಂತೆ ಗ್ರಾಮದ ಯುವಕರು ಸರ್ಕಾರದ ನೆರವನ್ನು ಕೋರಿದ್ದಾರೆ. ಅದರಂತೆ, ಅಧಿಕಾರಿಗಳು ಅಡುಗೆ ಮಾಡಲು ಬೇಕಾದ ಪದಾರ್ಥಗಳನ್ನು ಒದಗಿಸಿದ್ದಾರೆ.

ಇದೀಗ ದಂಪತಿ ಹಾಗೂ ಅವರ ಮಗ ಗ್ರಾಮದ ಇತರ ಯುವಕರೊಂದಿಗೆ ಪ್ರತಿನಿತ್ಯ ೧,೫೦೦ ಮಂದಿಗೆ ಉತ್ತಮ ಊಟ ಸಿದ್ಧಪಡಿಸಿ ವಾಹನಗಳಲ್ಲಿ ಪರಿಹಾರ ಕೇಂದ್ರಗಳಿಗೆ ರವಾನಿಸುತ್ತಿದ್ದಾರೆ. ಈ ಕಾರ್ಯಕ್ಕೆ ಇವರು ಯಾರಿಂದಲೂ ಚಿಕ್ಕಾಸೂ ಪಡೆದಿಲ್ಲ. ಇವರ ಫರ್ನಿಚರ್ ಅಂಗಡಿಯ ಮುಂಭಾಗದಲ್ಲಿ ಮರಗೆಲಸ ಮಾಡುವ ಸ್ಥಳದಲ್ಲೇ ದೊಡ್ಡ ಪಾತ್ರೆಗಳನ್ನು ಇಟ್ಟುಕೊಂಡು ಆಹಾರ ತಯಾರಿಸಿ ಕಳಿಸುತ್ತಿದ್ದಾರೆ.

ಇದನ್ನೂ ಓದಿ : ಕೊಡಗು ಪ್ರವಾಹ | ಸೋಷಿಯಲ್‌ ಮೀಡಿಯಾ ಇಲ್ಲದೆಹೋಗಿದ್ದರೆ ಪರಿಸ್ಥಿತಿ ಊಹಿಸಲಸಾಧ್ಯ

‘ದಿ ಸ್ಟೇಟ್‌’ ಜೊತೆ ಮಾತನಾಡಿದ ವೇಲಾಯುಧನ್, “ನಾನೂ ಹಸಿವಿನಿಂದಲೇ ಬೆಳೆದು ಬಂದವನಾದ್ದರಿಂದ ಹಸಿವು ಎಂದರೇನೆಂದು ಚೆನ್ನಾಗಿ ಗೊತ್ತು. ಯಾವುದೇ ಒಬ್ಬ ಸಂತ್ರಸ್ತರೂ ಹಸಿವಿನಿಂದ ಬಳಲಬಾರದು ಎಂಬುದೇ ನನ್ನ ಆಸೆ. ಹಾಗಾಗಿ ಫರ್ನಿಚರ್ ಕೆಲಸ ನಿಲ್ಲಿಸಿ ನನ್ನ ಕೈಲಾದ ಅಳಿಲು ಸೇವೆ ಮಾಡುತಿದ್ದೇನೆ,” ಎಂದರು. ಕಳೆದ ೮ ದಿನಗಳಿಂದ ಇವರ ಮನೆಯ ಮುಂಭಾಗದಲ್ಲಿ ಒಲೆ ಆರಿಲ್ಲ. ಪ್ರತಿನಿತ್ಯ ೧,೦೦೦ದಿಂದ ೧೫೦೦ ಜನರಿಗೆ ಬಿಸಿಯಾದ ಊಟ ತಯಾರಾಗಿ ಕೂಡು ಹಾರಂಗಿ, ಕೂಡಿಗೆ ಹಾಗೂ ಕುಶಾಲನಗರದ ಪರಿಹಾರ ಕೇಂದ್ರಗಳಿಗೆ ತಲುಪುತ್ತಿದೆ.

ಸಂತ್ರಸ್ಥರಿಗೆ ಈ ರೀತಿ ಸೇವೆ ನೀಡುತ್ತಿರುವ ಇನ್ನೂ ಹಲವರಿದ್ದು, ಅವರು ಎಲೆಮರೆಯ ಕಾಯಿಗಳಂತೆ ಇದ್ದಾರೆ. ಜಿಲ್ಲೆಯ ಪರಿಹಾರ ಕೇಂದ್ರಗಳಲ್ಲಿ ೫,೦೦೦ದಷ್ಟು ಸಂತ್ರಸ್ತರು ಇದ್ದಾರೆ. ಪರಿಹಾರ ಕಾರ್ಯದಲ್ಲಿ ತೊಡಗಿಕೊಂಡಿರುವ ಯುವಕರ ಸಂಖ್ಯೆಯೂ ಸಾವಿರಗಳ ಲೆಕ್ಕದಲ್ಲೇ ಇದೆ. ಪರಿಹಾರ ಕಾರ್ಯದಲ್ಲಿ ಅವರೇ ಪ್ರಾಣಕ್ಕೆ ಅಪಾಯ ತಂದುಕೊಂಡ ಘಟನೆಗಳೂ ನಡೆದಿವೆ. ಈಗ ರಕ್ಷಣಾ ಕಾರ್ಯ ಮುಗಿದಿದ್ದು, ನಾಪತ್ತೆ ಆದವರಿಗಾಗಿ ಹುಡುಕಾಟ ಆರಂಭಿಸಲಾಗಿದೆ. ಜೊತೆಗೇ, ಇಂದಿನಿಂದಲೇ ರಸ್ತೆಗಳ ದುರಸ್ತಿ ಕಾರ್ಯವೂ ಆರಂಭಗೊಂಡಿದೆ. ಮಳೆ ನಿಂತ ನಂತರವೇ ನಷ್ಟದ ನಿಖರ ಅಂದಾಜು ತಿಳಿಯಲಿದೆ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More