ಮಹದಾಯಿ ಹೋರಾಟ ಮುಂದುವರಿಸುವ ನಿರ್ಧಾರ ಕೈಗೊಂಡ ರೈತ ಮುಖಂಡರು

ಮಹದಾಯಿ ತೀರ್ಪು ಹೊರಬಿದ್ದ ಹಿನ್ನೆಲೆಯಲ್ಲಿ ಹೋರಾಟ ಅಂತ್ಯ ಕಾಣಬಹುದೆಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರೆಡೂ ನಿಟ್ಟುಸಿರು ಬಿಟ್ಟಿದ್ದವು. ಆದರೆ, ಗುರುವಾರ ನರಗುಂದದಲ್ಲಿ ನಡೆದ ಸಭೆಯಲ್ಲಿ ಮಹದಾಯಿ ಹೋರಾಟಗಾರರು ಹೋರಾಟ ಮುಂದುವರಿಸುವ ನಿರ್ಧಾರ ಕೈಗೊಂಡಿದ್ದಾರೆ

ಮಹದಾಯಿ ನ್ಯಾಯಾಧೀಕರಣದ ತೀರ್ಪು ಹೊರಬಿದ್ದ ಹಿನ್ನೆಲೆಯಲ್ಲಿ ಮಹದಾಯಿ ಹೋರಾಟ ಅಂತ್ಯ ಕಾಣಬಹುದೆಂದು ಕೇಂದ್ರ ಹಾಗೂ ರಾಜ್ಯ ಸರ್ಕಾರ ನಿಟ್ಟುಸಿರು ಬಿಟ್ಟಿದ್ದವು. ಆದರೆ, ಗುರುವಾರ ನರಗುಂದದಲ್ಲಿ ನಡೆದ ಸಭೆಯಲ್ಲಿ ಮಹದಾಯಿ ಹೋರಾಟಗಾರರು ತಮ್ಮ ಹೋರಾಟ ಮುಂದುವರಿಸುವ ಎಚ್ಚರಿಕೆ ರವಾನಿಸಿದ್ದಾರೆ. ಹೋರಾಟಗಾರರ ಈ ನಿರ್ಧಾರ ರಾಜ್ಯ ಹಾಗೂ‌ ಕೇಂದ್ರ ಸರ್ಕಾರಗಳ ನಿದ್ದೆಗೆಡಿಸಿದೆ.

ಮಹದಾಯಿ ನದಿಯಿಂದ 36 ಟಿಎಂಸಿ ನೀರು ಬೇಕೆಂದು ಹೋರಾಟಗಾರರು ಬೇಡಿಕೆ ಇಟ್ಟಿದ್ದರು. ಆ.14ರಂದು 13.5 ಟಿಎಂಸಿ ನೀರನ್ನು ರಾಜ್ಯಕ್ಕೆ ಹಂಚಿಕೆ ಮಾಡಿ ಮಹದಾಯಿ ನ್ಯಾಯಾಧೀಕರಣ ತೀರ್ಪು ನೀಡಿತ್ತು. ಆದರೆ, ಈ ತೀರ್ಪು ಹೋರಾಟಗಾರರಿಗೆ ಸಮಾಧಾನ ತಂದಿಲ್ಲ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಹೋರಾಟಗಾರರು, “ನಾವು ಇಷ್ಟಕ್ಕೇ ಸುಮ್ಮನೆ ಕೂಡಲ್ಲ. ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಬೇಕು. ಒಂದು ವೇಳೆ ಮೇಲ್ಮನವಿ ಸಲ್ಲಿಸಲು ಸರ್ಕಾರ ನಿರ್ಲಕ್ಷ್ಯ ತೋರಿದರೆ ನಾವೇ ಮೇಲ್ಮನವಿ ಸಲ್ಲಿಸುತ್ತೇವೆ,” ಎಂದು ಗುಡುಗಿದ್ದಾರೆ. ಮಹದಾಯಿ ನೀರು ಮಲಪ್ರಭಾ ನದಿಗೆ ಹರಿಸುವವರೆಗೂ ನರಗುಂದ ಪಟ್ಟಣದ ಹೋರಾಟ ವೇದಿಕೆಯಲ್ಲಿ ನಿರಂತರ ಹೋರಾಟ ನಡೆಯಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇನ್ನು, ಮೊದಲ ಹಂತದ ಹೋರಾಟಕ್ಕೆ ಅಲ್ಪ ಜಯ ಸಿಕ್ಕಿದ್ದಕ್ಕೆ ನರಗುಂದ ಪಟ್ಟಣದಲ್ಲಿ ಸಾವಿರಾರು ರೈತರು ಸಂಭ್ರಮಾಚರಣೆಯಲ್ಲಿ ಸೇರಿದ್ದರು. ಬಾಬಾಸಾಹೇಬ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಬೃಹತ್ ಮೆರವಣಿಗೆ ಮೂಲಕ ವಿಜಯೋತ್ಸವ ಆಚರಿಸಿದರು. ಈ ವೇಳೆ ರೈತನೊಬ್ಬ ನೇಗಿಲು ಹೊತ್ತು ನಡೆದು ಗಮನ ಸೆಳೆದ. ಸುಮಾರು ಎರಡು ಕಿಲೋಮೀಟರ್ ಬೃಹತ್ ಮೆರವಣಿಗೆ ಮೂಲಕ ರೈತರು ಪರಸ್ಪರ ಹಸಿರು ಬಣ್ಣ ಎರಚಿಕೊಂಡು, ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಇದನ್ನೂ ಓದಿ : ಮಹದಾಯಿ ನ್ಯಾಯಾಧಿಕರಣ ತೀರ್ಪು ರಾಜ್ಯದ ಜನತೆಗೆ ನೀಡಿದ ಸಿಹಿ-ಕಹಿಗಳೇನು?

ವೇದಿಕೆಗೆ ಆಗಮಿಸಿದ ಬಳಿಕ  ರೈತರು, ವಿವಿಧ ಸಂಘಟನೆಗಳ ಮುಖಂಡರು, ಪೊಲೀಸರು, ವಕೀಲರು ಸೇರಿದಂತೆ ಹೋರಾಟಕ್ಕೆ ಸಹಕಾರ ನೀಡಿದ ಸಂಘ-ಸಂಸ್ಥೆಗಳ ಪದಾಧಿಕಾರಿಗಳಿಗೆ, ಗಣ್ಯರಿಗೆ ಸನ್ಮಾನಿಸಿದರು. ಬಂಡಾಯದ ನಾಡಲ್ಲಿಂದು ರೈತರ ಈ ಸಂಭ್ರಮ ಮುಗಿಲು ಮುಟ್ಟಿತ್ತು. ಜೊತೆಗೆ ಎರಡನೇ ಹಂತದ ಹೋರಾಟದ ಕಹಳೆ ಮೊಳಗಿಸಿದ ಅನ್ನದಾತರ ನಿರ್ಧಾರ ಮುಂದೆ ಯಾವ ಫಲಿತಾಂಶ ತರಲಿದೆ ಎಂದು ಕಾದುನೋಡಬೇಕಿದೆ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More