ಕೊಡಗು ಜಲಪ್ರಳಯ | ಆಶ್ರಯ ಸಿಕ್ಕರೂ ಬಿಟ್ಟುಬಂದ ಮನೆಯದೇ ಚಿಂತೆ

ಕೊಡಗಿನ ೨ನೇ ಮೊಣ್ಣಂಗೇರಿಯಲ್ಲಿ ಕೂಲಿ ಮಾಡಿ ಜೀವನ ನಡೆಸುತ್ತಿದ್ದ ಪೂಮಾಲೆ ಕುಡಿಯ ಜನಾಂಗದ ಬೊಳ್ತಒಕ್ಕಡ ಹಾಗೂ ಕುಂಟಿಕಾನ ಕುಟುಂಬವು ಪ್ರವಾಹಕ್ಕೆ ಸಿಲುಕಿ ಕುಸಿಯುತ್ತಿದ್ದ ಮನೆ ಬಿಟ್ಟು ಪ್ರಾಣ ರಕ್ಷಿಸಿಕೊಂಡು ಪರಿಹಾರ ಕೇಂದ್ರ ಸೇರಿದೆ. ಆದರೆ, ಭವಿಷ್ಯದ ಚಿಂತೆ ಕಾಡುತ್ತಿದೆ

ಮಡಿಕೇರಿಯ ಮೈತ್ರಿ ಭವನದಲ್ಲಿ ಆಶ್ರಯ ಪಡೆದಿರುವ ಪೂಮಾಲೆ ಕುಡಿಯ ಕುಟುಂಬಸ್ಥರು ಅತೀವ ಮಳೆಯಿಂದ ಮುರಿದುಬೀಳಲಿದ್ದ ಮನೆಯನ್ನು ಬಿಟ್ಟು ಪ್ರಾಣ ರಕ್ಷಿಸಿಕೊಂಡು ಪರಿಹಾರ ಕೇಂದ್ರ ಸೇರಿದ್ದಾರೆ. ಮಡಿಕೇರಿ ತಾಲೂಕಿನ ೨ನೇ ಮೊಣ್ಣಂಗೇರಿಯಲ್ಲಿ ಕೂಲಿ ಮಾಡಿ ಜೀವನ ಸಾಗಿಸುತ್ತಿರುವವರು ಪೂಮಾಲೆ ಕುಡಿಯ ಜನಾಂಗದ ಬೊಳ್ತಒಕ್ಕಡ ಹಾಗೂ ಕುಂಟಿಕಾನ ಕುಟುಂಬ. ತಮ್ಮ ತಾತನ ಕಾಲದಿಂದಲೇ ವಾಸವಾಗಿದ್ದ ಮನೆಯನ್ನು ತೊರೆದು ಈಗ ಸರ್ಕಾರಿ ಆಶ್ರಯಕ್ಕೆ ಬಂದಿದ್ದಾರೆ.

ಕೂಲಿ ಮಾಡಿಯೇ ಎಲ್ಲ ಗಳಿಸಿಕೊಂಡಿದ್ದೆವು. ಆದರೆ, ಇಂದು ಎಲ್ಲ ಕಳೆದುಕೊಂಡು ಉಟ್ಟ ಬಟ್ಟೆಯಲ್ಲೇ ಬಂದಿದ್ದೇವೆ. ಕಳೆದುಕೊಂಡಿರುವ ಜಾಗವನ್ನು ನಮಗೆ ನೀಡಿದರೆ ಸಾಕು. ಕೂಲಿ ಮಾಡಿ ಜೀವನ ಸಾಗಿಸುತ್ತೇವೆ.
ವಿಜಯಲಕ್ಷ್ಮಿ, ೨ನೇ ಮೊಣ್ಣಂಗೇರಿ

ಕಳೆದ ಶುಕ್ರವಾರ ಬೆಳಗ್ಗೆ ಇದ್ದಕ್ಕಿದ್ದ ಹಾಗೆ ಮನೆಯ ಒಳಗಡೆ ಹಿಂದೆಂದೂ ಕಾಣದಂತೆ ಬಿರುಕು ಕಾಣಿಸಿಕೊಂಡಿದೆ. ಎಚ್ಚೆತ್ತುಕೊಂಡ ಬೊಳ್ತಒಕ್ಕಡ ಕೆ ಕೆ ದೇವಯ್ಯ ಅವರು ಆಸ್ತಿಪತ್ರ ಕೈಯಲ್ಲಿ ಹಿಡಿದು ಕುಟುಂಬಸ್ಥರೊಂದಿಗೆ ಜಾಗ ಖಾಲಿ ಮಾಡಿದ್ದಾರೆ. ಆದರೆ, ಪಾರಾಗುವ ದಾರಿ ಸುಲಭವಾಗಿರಲಿಲ್ಲ. ಮಕ್ಕಳು ಸೇರಿದಂತೆ ಕುಟುಂಬದವರು ಸುಮಾರು ೬ ಕಿಮೀ ಕಾಲ್ನಡಿಗೆಯಲ್ಲಿ ಬೆಟ್ಟ ಹತ್ತಿ ಇಳಿದಿದ್ದಾರೆ. ನಂತರ ಗಾಳಿಬೀಡಿನ ಬಂಧುಗಳ ಮನೆಯಲ್ಲಿ ಶುಕ್ರವಾರ ರಾತ್ರಿ ಆಶ್ರಯ ಪಡೆದುಕೊಂಡಿದ್ದಾರೆ. ಶನಿವಾರ ಬೆಳಗ್ಗೆ ಗಾಳಿಬೀಡಿನ ಮಾರ್ಗವಾಗಿ ನಡೆದುಕೊಂಡು ಬರುವ ಸಂದರ್ಭದಲ್ಲಿ ವಾಹನ ಸಹಾಯ ದೊರೆಯಿತು. ಹೀಗಾಗಿ, ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದುಕೊಂಡರು. ಹೀಗೆ, ಮಳೆಯಿಂದ ಪಾರಾದ ತಮ್ಮ ನೋವಿನ ಕತೆಯನ್ನು ಹೇಳಿಕೊಳ್ಳುತ್ತ ಗ್ರಾಮಸ್ಥ ಕೆ ಕೆ ದೇವಯ್ಯ ನಿಟ್ಟುಸಿರುಬಿಡುತ್ತಾರೆ.

“ಗುಡ್ಡ ಕುಸಿದ ಕಾರಣ ನಮ್ಮ ಮನೆ ಮುರಿದುಬೀಳುವ ಸ್ಥಿತಿಗೆ ಬಂತು. ಮನೆಯಲ್ಲಿದ್ದ ಯಾವುದೇ ವಸ್ತುವನ್ನೂ ರಕ್ಷಿಸಿಕೊಳ್ಳಲು ಸಾಧ್ಯವಾಗಿಲ್ಲ. ಮಾಡಿಕೊಂಡಿದ್ದ ಕೆಲವೇ ಆಸ್ತಿಗಳು ನಷ್ಟವಾಗಿವೆ. ಮಕ್ಕಳ ಪಠ್ಯಪುಸ್ತಕಗಳು ಮಣ್ಣುಪಾಲಾಗಿವೆ. ಮನೆ ಕನಿಷ್ಠ ರಿಪೇರಿ ಮಾಡುವ ಮಟ್ಟಕ್ಕೆ ಉಳಿದಿದೆಯೇ ಎಂಬುದೂ ತಿಳಿದಿಲ್ಲ. ಹೋಗಿ ನೋಡೋಣ ಎಂದುಕೊಂಡರೆ, ರಸ್ತೆಗಳು ನೀರಿನಲ್ಲಿ ಸಂಪೂರ್ಣ ಕೊಚ್ಚಿಹೋಗಿವೆ. ಕೂಲಿನಾಲಿ ಮಾಡಿ ಜೀವನ ಸಾಗಿಸುತ್ತಿದ್ದ ನಾವು, ಸ್ವಂತ ಮನೆಯನ್ನು ಬಹಳ ಶ್ರಮ ಪಟ್ಟು ಕಟ್ಟಿಕೊಂಡಿದ್ದೆವು. ಆದರೆ, ಮನೆ ಕುಸಿದ ಕಾರಣದಿಂದ ಮಕ್ಕಳ ವಿದ್ಯಾಭ್ಯಾಸವೂ ಹಾಳಾಗಿದೆ. ಕೆಲ ದಿನಗಳ ಮಟ್ಟಿಗಾದರೂ ಮಕ್ಕಳ ವಿದ್ಯಾಭ್ಯಾಸವನ್ನು ಸರ್ಕಾರವೇ ನೋಡಿಕೊಳ್ಳಬೇಕು,” ಎಂದು ೨ನೇ ಮೊಣ್ಣಂಗೇರಿ ನಿವಾಸಿ ವಿಜಯಲಕ್ಷ್ಮಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಕಾಡುತ್ತಿರುವ ಮಕ್ಕಳ ಭವಿಷ್ಯ

ಕೆ ಕೆ ದೇವಯ್ಯ ಹಾಗೂ ಕೆ ಡಿ ರೇವತಿಯವರ ಮಕ್ಕಳಾದ ಲವಕುಮಾರ್ (೮ನೇ ತರಗತಿ), ಅರುಣ್ (೫ನೇ), ಗಿರೀಶ್ ೩ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಕೆಕೆ ಮಾದಯ್ಯ ಹಾಗೂ ವಿಜಯಲಕ್ಷ್ಮಿಯವರ ಮಕ್ಕಳಾದ ವಿನೀತ್ (೧೦ನೇ), ಮೋಕ್ಷಿತಾ ೫ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇವರ ವಿದ್ಯಾಭವಿಷ್ಯ ಪ್ರಕೃತಿ ವಿಕೋಪಕ್ಕೆ ತುತ್ತಾಗಿದೆ. ಮುಂದಿನ ಭವಿಷ್ಯ ಏನು ಎಂಬ ಚಿಂತೆ ಕುಟುಂಬಸ್ಥರದ್ದು.

ಇಂತಹ ದುರಂತಗಳನ್ನು ಸಿನಿಮಾ ಹಾಗೂ ಟಿವಿಗಳಲ್ಲಿ ನೋಡುತ್ತಿದ್ದೆ. ಆದರೆ, ಜಿಲ್ಲೆಯಲ್ಲಿ ನಡೆದ ಘಟನೆ ಕಣ್ಣಿಗೆ ಕಟ್ಟಿದಂತಿದೆ. ನನ್ನ ಸ್ನೇಹಿತರೆಲ್ಲರೂ ಸೇಫ್‌ ಆಗಿದ್ದಾರೆ. ವಿದ್ಯಾಭ್ಯಾಸ ಕಡಿತಗೊಂಡಿರುವುದು ತುಂಬಾ ಬೇಸರ ತಂದಿದೆ. ನನ್ನ ವಿದ್ಯಾಭ್ಯಾಸಕ್ಕೆ ಸರ್ಕಾರ ಸ್ಪಂದಿಸಬೇಕು.
ವಿನೀತ್, ವಿದ್ಯಾರ್ಥಿ
ಇದನ್ನೂ ಓದಿ : ಕೊಡಗು ಜಲಪ್ರಳಯ | ಈ ಅವಿಭಕ್ತ ಕುಟುಂಬಕ್ಕೆ ಈಗ ನೆಂಟರ ಮನೆಯೇ ಗತಿ

“ಸರ್ಕಾರದಿಂದ ನಮಗೆ ಮನೆ ನಿರ್ಮಾಣ ಮತ್ತು ಮಕ್ಕಳ ವಿದ್ಯಾಭ್ಯಾಸಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಹಾಗೂ ೨ನೇ ಮೊಣ್ಣಂಗೇರಿಯಲ್ಲಿ ಮನೆ ಕಳೆದುಕೊಂಡ ಕುಟುಂಬಗಳಿಗೆ ೧ನೇ ಮೊಣ್ಣಂಗೇರಿ, ಗಾಳಿಬೀಡಿನಲ್ಲಿ ಮನೆ ನಿರ್ಮಾಣ ಮಾಡಿಕೊಡಬೇಕು. ಕಾರಣ, ಗಾಳಿಬೀಡು ಪಂಚಾಯಿತಿಯಲ್ಲಿ ಎಲ್ಲ ಸೌಲಭ್ಯವನ್ನು ಪಡೆದಿರುವ ನಾವು ಮುಂದಿನ ದಿನಗಳಲ್ಲಿ ಮತ್ತೊಂದು, ಮಗದೊಂದು ಸ್ಥಳಗಳಿಗೆ ಜಾಗ ನೀಡಿದರೆ, ಪಂಚಾಯಿತಿಗಳಿಗೆ ತೆರಳಲು ಸಮಸ್ಯೆಯಾಗುತ್ತದೆ. ಆದ್ದರಿಂದ ಪಂಚಾಯಿತಿ ವ್ಯವಹಾರಗಳಿಗಾಗಿ ೧ನೇ ಮೊಣ್ಣಂಗೇರಿಯಲ್ಲಿ ಜಾಗ ನೀಡಿದರೆ ಉತ್ತಮ,” ಎನ್ನುವುದು ಗ್ರಾಮಸ್ಥರ ಆಗ್ರಹ.

“ಕೃಷಿ ಹಾಗೂ ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ನಮ್ಮ ಕುಟುಂಬ ಇಂದು ತುಂಬಾ ಸಂಕಷ್ಟದಲ್ಲಿದೆ. ಸರ್ಕಾರ ಸೂಕ್ತ ಪರಿಹಾರ ನೀಡಬೇಕು. ಪರಿಹಾರ ಕೇಂದ್ರದಲ್ಲಿ ಯಾವುದೇ ಸಮಸ್ಯೆಗಳು ಇಲ್ಲ. ಊಟೋಪಚಾರದಿಂದ ಹಿಡಿದು ಎಲ್ಲ ಸೌಕರ್ಯ ನೀಡಲಾಗುತ್ತಿದೆ,” ಎಂದು ಕೆ ಕೆ ಮಾದಯ್ಯ ಅಭಿಪ್ರಾಯ ಹಂಚಿಕೊಳ್ಳುತ್ತಾರೆ. ಒಟ್ಟಿನಲ್ಲಿ, ಎಲ್ಲವನ್ನೂ ಕಳೆದುಕೊಂಡಿರುವ ಕುಟುಂಬ ಈಗ ಸರ್ಕಾರದ ನೆರವಿನ ನಿರೀಕ್ಷೆಯಲ್ಲಿದೆ.

ಕಿಡಿಗೇಡಿ ಸಂತ್ರಸ್ತರಿಂದ ಗೊಂದಲ

“ಮನೆಮಠ ಕಳೆದುಕೊಂಡು ಇಲ್ಲಿ ಆಶ್ರಯ ಪಡೆಯುತ್ತಿದ್ದೇವೆ. ಆದರೆ, ಕೆಲವರು ಮಧ್ಯರಾತ್ರಿ ಬಂದು ಉಳಿದುಕೊಳ್ಳಲು ಜಾಗವಿಲ್ಲ ಜಾಗ ನೀಡಿ ಎಂದು ಉಳಿದುಕೊಳ್ಳುತ್ತಾರೆ. ಬೆಳಗ್ಗೆ ಹೇಳದೆ, ಕೇಳದೆ ಎದ್ದು ಆಚೆ ಹೋಗಿ, ಇಲ್ಲಿ ನಿರಾಶ್ರಿತರಿಗೆ ಉಳಿದುಕೊಳ್ಳಲು ವ್ಯವಸ್ಥೆ ಇಲ್ಲ ಎಂಬ ವದಂತಿಯನ್ನು ಹರಡುತ್ತಿದ್ದಾರೆ. ವಾಹಿನಿಗಳಲ್ಲಿ ಬಿತ್ತಾರವಾಗುವ ವರದಿಯನ್ನು ಗಮನಿಸಿ ಬಂಧು-ಬಳಗದವರು ಭಯಬೀತರಾಗಿ ದೂರವಾಣಿ ಕರೆ ಮಾಡುತ್ತಿದ್ದಾರೆ. ಸುದ್ದಿಮಾಧ್ಯಮದವರು ವದಂತಿಗಳತ್ತ ಗಮನ ಹರಿಸುವುದನ್ನು ನಿಲ್ಲಿಸಿ, ನೈಜ ನಿರಾಶ್ರಿತರನ್ನು ಮಾತನಾಡಿಸಿ,” ಎಂದು ಕಾಲೂರು ಗ್ರಾಮದ ನಿರಾಶ್ರಿತ ಎನ್ ಟಿ ಕಿರಣ್ ಮನವಿ ಮಾಡಿದ್ದಾರೆ.

ಸ್ನೇಹಿತರು ಕರೆ ಮಾಡಿ ಬೆಟ್ಟ ಕುಸೀತಿದೆ ಎಂದು ಹೇಳಿದರು. ಅನಾರೋಗ್ಯದಿಂದ ಬಳಲುತ್ತಿದ್ದ ನಮ್ಮ ಅಜ್ಜಿಯನ್ನು ಹೊತ್ತು ಕುಟುಂಬಸ್ಥರೊಂದಿಗೆ ಕಾಲ್ನಡಿಗೆಯಲ್ಲಿ ಸಾಗಿಬಂದೆವು. ನಮ್ಮನ್ನು ರಕ್ಷಣೆ ಮಾಡಲು ಬೆಟ್ಟ ಹತ್ತಿ ಬರುವ ಸ್ಥಿತಿಯಲ್ಲಿ ಗ್ರಾಮ ಇರಲಿಲ್ಲ. ಒಂದೇ ಸಮನೆ ಬೆಟ್ಟ ಜರಿದ ಪರಿಣಾಮ, ಯಾರೂ ರಕ್ಷಣೆಗೆ ಬರಲು ಸಾಧ್ಯವಾಗಲಿಲ್ಲ. ಮನೆ ದಾಖಲೆ ಪತ್ರಗಳು ಮನೆಯಲ್ಲಿ ಬಾಕಿಯಾಗಿದ್ದು, ಮನೆ ಇದೆಯೇ ಎಂಬುದೂ ತಿಳಿದಿಲ್ಲ.
ಸರೋಜಿನಿ, ೨ನೇ ಮೊಣ್ಣಂಗೇರಿ
ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More