ಶಿರೂರು ಶ್ರೀ ನಿಗೂಢ ಸಾವು ಪ್ರಕರಣ: ಹಲವು ಪ್ರಶ್ನೆ ಹುಟ್ಟುಹಾಕಿದ ಸಂಬಂಧಿಕರ ಮೌನ

ಶಿರೂರು ಶ್ರೀಗಳ ಪೂರ್ವಾಶ್ರಮದ ಸಹೋದರರಾದ ಲಾತವ್ಯ ಆಚಾರ್ಯರು ಅಥವಾ ಶ್ರೀಗಳ ನಿಕಟವರ್ತಿಗಳು ಯಾಕೆ ಮೌನಕ್ಕೆ ಶರಣಾದರು ಎಂಬ ಪ್ರಶ್ನೆ ಇದೆ. ಇದರ ಹಿಂದೆ ಬೆದರಿಕೆಯಂತಹ ಒತ್ತಡ ತಂತ್ರವಿದೆಯೇ ಅಥವಾ ಆಮಿಷ ಒಡ್ಡಲಾಗಿದೆಯೇ ಎಂಬ ಅನುಮಾನ ಉಡುಪಿ ಜನರನ್ನು ಕಾಡುತ್ತಿದೆ

ಅನಾರೋಗ್ಯವೇ ಶಿರೂರು ಲಕ್ಷ್ಮೀವರ ತೀರ್ಥ ಶ್ರೀಗಳ ಸಾವಿಗೆ ಕಾರಣ ಎಂಬ ಅಂಶ ವಿಧಿವಿಜ್ಞಾನ ಪರೀಕ್ಷೆ ವರದಿಯಲ್ಲಿ ಉಲ್ಲೇಖವಾಗಿದೆ. ವಿಷಕಾರಿ ಅಂಶಗಳು ಪತ್ತೆಯಾಗಿಲ್ಲ ಎಂಬುದಾಗಿ ವೈದ್ಯರು ವರದಿ ನೀಡಿದ್ದಾರೆ ಎಂದು ಬುಧವಾರ ಪೊಲೀಸ್ ಮೂಲಗಳು ಖಚಿತಪಡಿಸಿವೆಯಷ್ಟೇ. ಆದರೆ ಈ ಹೇಳಿಕೆ, ಅನುಮಾನಗಳನ್ನು ಪರಿಹರಿಸುವ ಬದಲಾಗಿ ಇನ್ನಷ್ಟು ಉಲ್ಬಣವಾಗುವಂತೆ ಮಾಡಿದೆ.

“ಶಿರೂರು ಶ್ರೀಗಳು ಸಾವನ್ನಪ್ಪಿದ್ದ ದಿನ (ಜು.19) ವಿಷವಿತ್ತೇ ಎಂಬ ಅಂಶ ಬೆಳಕಿಗೆ ಬರಬೇಕು. ಇಲ್ಲವೇ ಇತ್ತೀಚಿನವರೆಗೆ ವಿಷ ದೇಹದಲ್ಲಿತ್ತೇ ಎಂಬ ವಿಚಾರ ಪತ್ತೆಯಾಗಬೇಕು. ಆದರೆ, ತಜ್ಞರು ತಾವು ಪರೀಕ್ಷೆ ಮಾಡಿದ ದಿನ ವಿಷ ಇಲ್ಲ ಎಂದು ವರದಿ ನೀಡುತ್ತಾರೆ. ಕಡಿಮೆ ಆಯಸ್ಸಿನ ವಿಷ ಉಪಯೋಗಿಸಿದ್ದರೆ ಅದು ದೇಹದಲ್ಲಿತ್ತೇ ಎಂಬುದು ಪತ್ತೆಯಾಗುವುದಿಲ್ಲ. ಕಾರಣ, ಅದು ತನ್ನ ರಾಸಾಯನಿಕ ಗುಣಗಳನ್ನು ಕಳೆದುಕೊಂಡಿರುತ್ತದೆ. ಹೀಗಾಗಿ ವಿಷಕಾರಿ ಅಂಶ ಪತ್ತೆಯಾಗಿಲ್ಲ ಎಂದು ವರದಿ ನೀಡಿದರೆ ಅದರಲ್ಲಿ ಅಚ್ಚರಿಪಡುವಂತಹದ್ದು ಏನೂ ಇಲ್ಲ. ಕ್ಷಿಪ್ರವಾಗಿ ಮರಣೋತ್ತರ ಪರೀಕ್ಷೆ ವರದಿ ಮತ್ತು ವಿಧಿವಿಜ್ಞಾನ ಪರೀಕ್ಷೆ ವರದಿ ಬಂದಿದ್ದರೆ ಆಗ ಫಲಿತಾಂಶ ಬೇರೆಯ ರೀತಿ ಇರುತ್ತಿತ್ತು,” ಎನ್ನುವುದು ಶ್ರೀಗಳ ಪರ ವಕೀಲರಾದ ರವಿಕಿರಣ್ ಮುರ್ಡೇಶ್ವರ ಅವರ ವಾದ. ಕೆಎಂಸಿ ವೈದ್ಯರು ವಿಷಪ್ರಾಶನವಾದ ಸಾಧ್ಯತೆಗಳಿವೆ ಎಂದು ಹೇಳಿಕೆ ನೀಡಿದ್ದರೂ ಆ ನಿಟ್ಟಿನಲ್ಲಿ ಯಾಕೆ ತನಿಖೆ ಮುಂದುವರಿಯಲಿಲ್ಲ ಎಂಬ ಅನುಮಾನಗಳು ಮೂಡಿವೆ.

ಇಷ್ಟಾದರೂ ವರದಿಯೇ ಅಂತಿಮವಲ್ಲ. ಅದು ಪುರಾವೆಯ ಒಂದು ಭಾಗ. ವರದಿ ವಿಳಂಬ ಆಗಿರುವುದನ್ನೇ ನ್ಯಾಯಾಲಯದಲ್ಲಿ ಪ್ರಶ್ನಿಸುವ ಸಾಧ್ಯತೆಗಳಿವೆ. ಆದರೆ, ಇಲ್ಲೊಂದು ತೊಡಕಿದೆ. ಈ ಬಗ್ಗೆ ದೂರು ಕೊಡುವವರಾರು ಎಂಬುದು ಬಹುಮುಖ್ಯ ಪ್ರಶ್ನೆ. ಈ ಹಿಂದೆ, ಶಿರೂರು ಶ್ರೀಗಳ ಸಾವಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ದೊಡ್ಡ ಧ್ವನಿ ಎತ್ತಿದ್ದ ಅವರ ಪೂರ್ವಾಶ್ರಮದ ಸಹೋದರ ಲಾತವ್ಯ ಆಚಾರ್ಯ ಮೌನಕ್ಕೆ ಶರಣಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಅವರು ಸ್ಥಳೀಯ ರಾಜಕಾರಣಿಯೊಬ್ಬರ ಜೊತೆ ಸೇರಿ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಚಾರದಲ್ಲಿ ಮಗ್ನರಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಹೀಗೆ, ಶ್ರೀಗಳ ಸಂಬಂಧಿಕರ ಬೆಂಬಲ ಇಲ್ಲದೆ ಇರುವುದು ಕೂಡ ಪ್ರಕರಣ ದಿಕ್ಕು ತಪ್ಪಲು ಕಾರಣ ಎನ್ನಲಾಗುತ್ತಿದೆ. ಬೇರೆಯವರು ದೂರು ಕೊಡುವುದಕ್ಕಿಂತಲೂ ಅವರನ್ನು ಹತ್ತಿರದಿಂದ ಬಲ್ಲ ಲಾತವ್ಯ ಆಚಾರ್ಯರೇ ದೂರು ನೀಡಿದ್ದರೆ ಪ್ರಕರಣಕ್ಕೆ ಬಲ ಬರುತ್ತಿತ್ತು ಎಂಬ ಮಾತುಗಳಿವೆ.

ಈ ಹಂತದಲ್ಲಿ ಮತ್ತೊಂದು ಪ್ರಶ್ನೆ ಏಳುತ್ತದೆ; ಹಿರಿಯಡ್ಕ ಪೊಲೀಸ್ ಠಾಣೆಗೆ ಲಾತವ್ಯ ಆಚಾರ್ಯರು ಕೊಟ್ಟ ದೂರು ಏನಾಯಿತು ಎಂಬುದು. ಶ್ರೀಗಳ ಪರ ವಕೀಲರು ಹೇಳುವಂತೆ, “ಆಚಾರ್ಯರು ಕೊಟ್ಟ ದೂರು ಉಡುಪಿ ನ್ಯಾಯಾಲಯವನ್ನು ತಲುಪಲೇ ಇಲ್ಲ. ಬದಲಿಗೆ ಉಪವಿಭಾಗದಿಕಾರಿಗಳನ್ನಷ್ಟೇ ಮುಟ್ಟಿತು. ಅವರು ಪೊಲೀಸ್ ಅಧಿಕಾರಿಯಲ್ಲ. ಇಡೀ ದೇಶದ ಗಮನ ಸೆಳೆದ ಶ್ರೀಗಳ ಅನುಮಾನಸ್ಪದ ಸಾವಿನ ಬಗ್ಗೆ ಇದುವರೆಗೆ ಯಾವುದೇ ಎಫ್ ಐ ಆರ್ ದಾಖಲಾಗಿಲ್ಲ ಎಂಬುದು ಅಚ್ಚರಿದಾಯಕ ವಿಚಾರ.”

ಲಾತವ್ಯ ಆಚಾರ್ಯರು ಅಥವಾ ಶ್ರೀಗಳ ನಿಕಟವರ್ತಿಗಳು ಯಾಕೆ ಮೌನಕ್ಕೆ ಶರಣಾದರು ಎಂಬ ಪ್ರಶ್ನೆ ಇದೆ. ಇದರ ಹಿಂದೆ ಒತ್ತಡ ತಂತ್ರವಿದೆಯೇ, ಬೆದರಿಕೆ ಒಡ್ಡಲಾಗಿದೆಯೇ ಅಥವಾ ಆಮಿಷ ಒಡ್ಡಲಾಗಿದೆಯೇ ಎಂಬ ಪ್ರಶ್ನೆಗಳು ಉಳಿದಿವೆ.

ಇದನ್ನೂ ಓದಿ : ಶಿರೂರು ಶ್ರೀ ಸಾವು | ವಿಧಿವಿಜ್ಞಾನ ವರದಿಗೆ ಕಾಯುವುದು ಏಕೆ ಅನಿವಾರ್ಯ ಗೊತ್ತೇ?

ವಿಧಿವಿಜ್ಞಾನ ಪರೀಕ್ಷೆ ಮತ್ತು ಮರಣೋತ್ತರ ಪರೀಕ್ಷೆಗಳು ಶಿರೂರು ಶ್ರೀಗಳ ಸಾವಿಗೆ ಅನಾರೋಗ್ಯ ಕಾರಣ ಎಂದು ಘೋಷಿಸಿದರೂ ಅನೇಕ ಅನುಮಾನಗಳು ಉಳಿಯುತ್ತವೆ:

  1. ಯಕೃತ್ತಿಗೆ ಸಿರೋಸಿಸ್ ಸೋಂಕು ಆದವರು ಸಾಮಾನ್ಯವಾಗಿ ಹಠಾತ್ತಾಗಿ ಸಾಯುವುದಿಲ್ಲ. ರೋಗ ಪತ್ತೆಯಾಗಿ ಅದು ಉಲ್ಬಣಿಸಿ, ಹಾಸಿಗೆ ಹಿಡಿದು ನಂತರ ಸಾವನ್ನಪ್ಪುತ್ತಾರೆ. ವ್ಯಕ್ತಿ ಅನಾರೋಗ್ಯಪೀಡಿತ ಎಂದು ಬರಿಗಣ್ಣಿಗೇ ಗೋಚರಿಸುತ್ತದೆ. ಆದರೆ, ಶಿರೂರು ಶ್ರೀಗಳು ಹಠಾತ್ತಾಗಿ ನಿಧನರಾಗಿದ್ದು ಹೇಗೆ? ಹೃದಯಾಘಾತ ಆಗಿಲ್ಲದಿದ್ದರೂ ಹಠಾತ್ತಾಗಿ ಮರಣ ಹೊಂದಿದ್ದು ಹೇಗೆ?
  2. ಪಟ್ಟದ ದೇವರ ವಿಚಾರದಲ್ಲಿ ವಿವಾದಗಳು ಉತ್ತುಂಗಕ್ಕೆ ತಲುಪಿದ್ದ ಸಂದರ್ಭದಲ್ಲಿ ಅವರು ಸಾವನ್ನಪ್ಪಿದ್ದು ಕೇವಲ ಕಾಕತಾಳೀಯವೇ?
  3. ಸ್ವಾಮೀಜಿಯವರು ಸಾವನ್ನಪ್ಪುತ್ತಿದ್ದಂತೆ ಸಿಸಿಟಿವಿಯ ಡಿವಿಆರ್ ದಾಖಲೆಗಳನ್ನು ನಾಶಪಡಿಸಲು ಯತ್ನಿಸಿದ್ದೇಕೆ? ಸ್ವರ್ಣಾ ನದಿಯಲ್ಲಿ ಅದು ದೊರೆಯಿತು ಎನ್ನಲಾಗಿದ್ದು, ಅದನ್ನು ಪೊಲೀಸರು ಯಾರ ಸಹಾಯದಿಂದ ಪತ್ತೆ ಮಾಡಿದರು? ಅವರ ಬಗ್ಗೆ ಯಾಕೆ ಕೇಸು ದಾಖಲಿಸಿಲ್ಲ?
  4. ಆರೋಪ ಖಚಿತವಾಗಬೇಕು ಎಂದೇನೂ ಇರಬೇಕಿಲ್ಲ; ಕೇವಲ ಅನುಮಾನ ಮೂಡಿದರೂ ಬಂಧಿಸಲು ಕಾನೂನಿನಲ್ಲಿ ಅವಕಾಶಗಳಿವೆ. ಆದರೆ, ಅನುಮಾನ ಮೂಡಿದ್ದ ಮಹಿಳೆಯನ್ನಾಗಲೀ, ಡಿವಿಆರ್ ನದಿಗೆ ಎಸೆದವರನ್ನಾಗಲೀ ಬಂಧಿಸಲಿಲ್ಲ ಏಕೆ?
  5. ಉಡುಪಿ ನ್ಯಾಯಾಲಯಕ್ಕೆ ಸ್ವಾಮೀಜಿ ಸಾವಿನ ಬಗ್ಗೆ ಇಂದಿನವರೆಗೆ ಅಧಿಕೃತ ಮಾಹಿತಿ ಇಲ್ಲ. ಅದಕ್ಕೆ ಕಾರಣರಾಗಿರುವವರು ಯಾರು?
  6. ಸ್ವಾಮೀಜಿಯವರಿಂದ ಭಾರಿ ಮೊತ್ತದ ಹಣ ಪಡೆದಿದ್ದ (20 ಕೋಟಿಗೂ ಹೆಚ್ಚು) ಉದ್ಯಮಿಗಳನ್ನು ತನಿಖೆಗೆ ಒಳಪಡಿಸಲಾಗುವುದು ಎಂದು ಪೊಲೀಸರು ಹೇಳಿದ್ದರು. ಆ ವಿಚಾರ ಏನಾಯಿತು?

ಇನ್ನೊಂದೆರಡು ದಿನಗಳಲ್ಲಿ ಅಂತಿಮ ವರದಿ ಬಂದರೆ, ಅಲ್ಲಿಗೆ ಪ್ರಕರಣ ಮುಕ್ತಾಯ ಆದಂತಾಗಿಬಿಡುತ್ತದೆ ಎಂಬ ಆತಂಕ ಅವರ ಅಭಿಮಾನಿಗಳನ್ನು ಕಾಡುತ್ತಿದೆ. ಶ್ರೀಗಳ ನಿಕಟವರ್ತಿಗಳು ಪ್ರಕರಣವನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯದೆ ಇರುವುದರಿಂದ ಪ್ರಕರಣ ಹಳ್ಳ ಹಿಡಿಯಬಹುದು ಎಂಬ ಆತಂಕಗಳು ವ್ಯಕ್ತವಾಗುತ್ತಿವೆ. ಈ ಕುರಿತು ಲಾತವ್ಯ ಆಚಾರ್ಯ ಅವರ ಪ್ರತಿಕ್ರಿಯೆ ಪಡೆಯಲು ‘ದಿ ಸ್ಟೇಟ್’ ಯತ್ನಿಸಿತಾದರೂ ಅವರು ಸಂಪರ್ಕಕ್ಕೆ ಸಿಗಲಿಲ್ಲ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More