ಮಹಿಳಾ ಅಭ್ಯರ್ಥಿಗಳ ಬದಲಿಗೆ ಅವರ ಗಂಡಂದಿರ ಫೋಟೊ ಪ್ರಕಟಿಸಿದ ಎಸ್‌ಡಿಪಿಐ!

ಮಂಗಳೂರಿನ ಉಳ್ಳಾಲ ನಗರಸಭೆ ಚುನಾವಣೆಗೆ ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವ ಎಸ್‌ಡಿಪಿಐ ತನ್ನ ಕರಪತ್ರದಲ್ಲಿ ಅವರ ಭಾವಚಿತ್ರ ಪ್ರಕಟಿಸದೆ ಗಂಡದಿರ ಭಾವಚಿತ್ರ ಮುದ್ರಿಸಿರುವುದು ವಿವಾದಕ್ಕೆ ಗ್ರಾಸವಾಗಿದೆ. ಮಹಿಳಾ ಸಬಲೀಕರಣ ನಿಟ್ಟಿನಲ್ಲಿನ ಚರ್ಚೆಗೆ ಇದು ಮತ್ತೊಮ್ಮೆ ನಾಂದಿ ಹಾಡಿದೆ

ಮಂಗಳೂರಿಗೆ ಅನತಿ ದೂರದಲ್ಲಿರುವ ಉಳ್ಳಾಲದಲ್ಲಿ ನಗರಸಭೆ ಚುನಾವಣೆಗಳು ನಡೆಯಲಿದ್ದು, ಸೋಷಿಯಲ್ ಡೆಮಾಕ್ರಟಿಕ್ ಸೊಸೈಟಿ ಆಫ್ ಇಂಡಿಯಾ (ಎಸ್ ಡಿ ಪಿ ಐ) 9 ವಾರ್ಡ್‌ಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವ ಕುರಿತು ಕರಪತ್ರ ಹೊರಡಿಸಿದೆ. ಇದರಲ್ಲಿ ವಾರ್ಡ್ ಸಂಖ್ಯೆ 1, 2, 11 ಹಾಗೂ 12ರಲ್ಲಿ ಮಹಿಳಾ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ ಎಂಬ ವಿವರವಿದೆ. ಪುರುಷ ಅಭ್ಯರ್ಥಿಗಳ ಭಾವಚಿತ್ರ ಮುದ್ರಿಸಿರುವ ಎಸ್ ಡಿ ಪಿ ಐ ಮಹಿಳಾ ಅಭ್ಯರ್ಥಿಗಳ ಭಾವಚಿತ್ರದ ಬದಲಿಗೆ ಅವರ ಪತಿಯಂದಿರ ಫೋಟೊ ಮುದ್ರಿಸಿರುವುದು ವಿವಾದಕ್ಕೆ ಕಾರಣವಾಗಿದೆ.

ರುಕಿಯಾ ಇಕ್ಬಾಲ್, ಶಹನಾಜ್ ಅಕ್ರಂ ಹಸನ್, ಕಮರುನ್ನೀಸಾ ನಿಜಾಂ, ಜರೀನಾ ಬಾನು ರವೂಫ್ ಅವರು ಅಭ್ಯರ್ಥಿಗಳಾಗಿದ್ದರೂ ಅವರ ಭಾವಚಿತ್ರ ಪ್ರಕಟವಾಗಿಲ್ಲ. ಸ್ತ್ರೀ ಸಬಲೀಕರಣದ ಬಗ್ಗೆ ಮಾತನಾಡಬೇಕಾದ ಹೊತ್ತಿನಲ್ಲಿ ಹಳೆಯ ಸಂಪ್ರದಾಯಕ್ಕೆ ಅಂಟಿ ಕುಳಿತ ಪಕ್ಷವೊಂದು ಸಮಾಜ ಸುಧಾರಣೆ ಹೇಗೆ ಮಾಡುತ್ತದೆ ಎಂದು ಫೇಸ್ಬುಕ್, ಟ್ವಿಟರ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಪ್ರಶ್ನಿಸಿದ್ದಾರೆ. ಕರಾವಳಿ ಭಾಗದ ಸ್ಥಳೀಯಾಡಳಿತ ಸಂಸ್ಥೆ ಚುನಾವಣೆಗಳ ವಿಚಾರ ಬಂದಾಗ ಎಸ್ ಡಿ ಪಿ ಐ ಪ್ರಭಾವ ತಕ್ಕಮಟ್ಟಿಗೆ ಇದ್ದು, ಕೆಲವು ಕ್ಷೇತ್ರಗಳಲ್ಲಿ ಈ ಹಿಂದೆ ಇದು ನಿರ್ಣಾಯಕ ಪಾತ್ರ ವಹಿಸಿರುವುದೂ ಉಂಟು.

ಕಳೆದ ಮೇನಲ್ಲಿ ಎಸ್ ಎಸ್ ಎಲ್ ಸಿ, ಪಿಯುಸಿ ಫಲಿತಾಂಶ ಬಂದಾಗ ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಶಾಲೆಗಳು ತಮ್ಮ ವಿದ್ಯಾರ್ಥಿಗಳು ಗಳಿಸಿದ ಅಂಕಗಳನ್ನು ಫ್ಲೆಕ್ಸ್‌ಗಳಲ್ಲಿ ಮುದ್ರಿಸಿ ಹೆಮ್ಮೆ ವ್ಯಕ್ತಪಡಿಸಿದ್ದವು. ಆಗಲೂ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರ ಭಾವಚಿತ್ರ ಮುದ್ರಿಸುವ ಬದಲು ಗ್ರಾಫಿಕ್ ಬಳಸಿಕೊಳ್ಳಲಾಗಿತ್ತು. ಅವರ ಹೆಸರುಗಳನ್ನು ಮಾತ್ರ ಭಾವಚಿತ್ರದ ಕೆಳಗೆ ಮುದ್ರಿಸಲಾಗಿತ್ತು. ಈ ಎರಡೂ ಘಟನೆಗಳು ಚರ್ಚೆಗೀಡಾಗಿವೆ.

ಇದನ್ನೂ ಓದಿ : ಕಾಂಗ್ರೆಸ್, ಜೆಡಿಎಸ್‌‌ ಮತಬುಟ್ಟಿಗೆ ಕೈಹಾಕಲಿದೆಯೇ ನೌಹೀರಾ ಶೇಖ್‌ರ ಎಂಇಪಿ?

“ಮುಸ್ಲಿಂ ಮಹಿಳಾ ಸಮುದಾಯ ಪ್ರಗತಿ ಹೊಂದಲು ಶಿಕ್ಷಣ ಮತ್ತು ರಾಜಕೀಯ ಕ್ಷೇತ್ರಗಳೆರಡೂ ಮುಖ್ಯ. ಅರಿವು ನೀಡುವ ಶಿಕ್ಷಣ ಸಂಸ್ಥೆಗಳು ಸಮಾನತೆಯನ್ನು ಪ್ರತಿಪಾದಿಸದೆ ಹೋದರೆ ಶಿಕ್ಷಣ ನೀಡಿ ಏನು ಪ್ರಯೋಜನ?” ಎಂಬ ಪ್ರಶ್ನೆ ಶಾಲಾ ಫಲಿತಾಂಶಗಳು ಪ್ರಕಟವಾದ ಸಂದರ್ಭದಲ್ಲಿ ವ್ಯಕ್ತವಾಗಿತ್ತು. “ಮುಸ್ಲಿಂ ಸಮುದಾಯದಲ್ಲಿ ಅನೇಕ ವಿದ್ಯಾರ್ಥಿನಿಯರು ಕನಿಷ್ಠ ಶಿಕ್ಷಣ ಪಡೆಯುತ್ತಾರೆ. ಆದರೆ, ಅವರು ಉನ್ನತ ಶಿಕ್ಷಣ ಪಡೆಯುವುದು, ಉದ್ಯೋಗದಲ್ಲಿ ತೊಡಗಿಕೊಳ್ಳುವುದು ಇನ್ನೂ ಸಾಧ್ಯವಾಗುತ್ತಿಲ್ಲ,” ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ ಮುಸ್ಲಿಂ ಸಮುದಾಯದ ಕೆಲ ಪ್ರಜ್ಞಾವಂತರು.

ಎಸ್ ಡಿಪಿಐ ಕರಪತ್ರ ಮತ್ತೊಂದು ಚಿಂತನೆಗೂ ಹಾದಿ ಮಾಡಿಕೊಟ್ಟಿದೆ. ಇಸ್ಲಾಂ ಸಮುದಾಯ ಮಾತ್ರವಲ್ಲದೆ ಎಲ್ಲ ಸಮುದಾಯಗಳೂ ಈ ಬಗ್ಗೆ ಚಿಂತಿಸಬೇಕು ಎಂಬ ಮಾತುಗಳು ಕೇಳಿಬರುತ್ತಿವೆ. ಅದು ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರ ಬದಲಿಗೆ ಅವರ ಪತಿಯಂದಿರು ಆಡಳಿತ ನಡೆಸುವ ವಿಚಿತ್ರ ವ್ಯವಸ್ಥೆ. “ಜಗತ್ತು ಸಾಕಷ್ಟು ಮುಂದುವರಿದಿದ್ದರೂ ಅಜ್ಞಾನ ಪ್ರದರ್ಶನ ನಿಂತಿಲ್ಲ. ಪುರುಷ ಪ್ರಧಾನವಾದ ವ್ಯವಸ್ಥೆ ಎಲ್ಲ ಜಾತಿ, ಧರ್ಮಗಳಲ್ಲೂ ಬೇರೂರಿದೆ. ಕೇವಲ ಒಂದು ಪಕ್ಷ, ಶಿಕ್ಷಣ ಸಂಸ್ಥೆಯತ್ತ ಬೊಟ್ಟು ಮಾಡಿದರೆ ಪ್ರಯೋಜನವಿಲ್ಲ. ಜನ ಕೇವಲ ಅಕ್ಷರಸ್ಥರಾದರೆ ಸಾಲದು ವಿದ್ಯಾವಂತರಾಗಬೇಕು,” ಎಂಬುದು ಶಿಕ್ಷಣ ಕ್ಷೇತ್ರದಲ್ಲಿ ಅನೇಕ ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ತಜ್ಞರೊಬ್ಬರ ಅಭಿಪ್ರಾಯ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More