ಶಿರಹಟ್ಟಿ ಪುರಸಭೆಯಲ್ಲಿ ಕುತೂಹಲ ಕೆರಳಿಸಿದ ಸಂಬಂಧಿಕರ ರಾಜಕೀಯ ಕಾದಾಟ

ತಾಯಿ-ಮಗಳು, ಚಿಕ್ಕಪ್ಪ-ಮಗ, ಮಾವ-ಸೊಸೆ ಹೀಗೆ ಸಂಬಂಧಿಕರೇ ಇಲ್ಲಿ ಸ್ಪರ್ಧಿಗಳು. ಹೀಗಾಗಿ ಗದಗ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಶಿರಹಟ್ಟಿ 17 ನೇ ವಾರ್ಡ್‌ ಕುತೂಹಲ ಮೂಡಿಸಿದೆ. ಆದರೆ, ಯಾರನ್ನು ಬೆಂಬಲಿಸಬೇಕು ಎಂದು ಮತದಾರರು ಗೊಂದಲದಲ್ಲಿದ್ದಾರೆ

ರಾಜಕಾರಣಕ್ಕೆ ಬಂಧು, ಬಳಗ ಎನ್ನುವುದಿರುವುದಿಲ್ಲ. ಅಕ್ಕ, ತಂಗಿ, ತಂದೆ, ಮಗ, ಸಹೋದರರು ಎನ್ನುವ ಸಂಬಂಧವೂ ಲೆಕ್ಕಕ್ಕಿರುವುದಿಲ್ಲ. ಗದಗ ಜಿಲ್ಲೆಯ ಶಿರಹಟ್ಟಿ ಪುರಸಭೆಯ 17 ವಾರ್ಡಿನ ಸ್ಪರ್ಧಾ ಕಣ ಇದಕ್ಕೊಂದು ತಾಜಾ ಉದಾಹರಣೆ. ಇಲ್ಲಿ ಬಂಧುಗಳೇ ಪರಸ್ಪರರ ವಿರುದ್ಧ ಸ್ಪರ್ಧಿಸಿದ್ದಾರೆ.

ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಇಲ್ಲಿನ ವಿದ್ಯಾನಗರದ 17ನೇ ವಾರ್ಡ್‌ನಲ್ಲಿ 373 ಪುರುಷರು ಹಾಗೂ 332 ಮಹಿಳೆಯರು ಸೇರಿ ಒಟ್ಟು 705 ಮತದಾರರಿದ್ದಾರೆ. ಸಾಮಾನ್ಯವಾಗಿ ನೌಕರರು ಹಾಗೂ ಪ್ರಜ್ಞಾವಂತರೇ ಹೆಚ್ಚಿರುವ ಈ ಕ್ಷೇತ್ರದ ಮಂದಿ ಈಗ ಗೊಂದಲಕ್ಕೀಡಾಗಿದ್ದಾರೆ. ಈ ವಾರ್ಡಿಗೆ ಸ್ಪರ್ಧಿಸಿದ ಏಳು ಜನರಲ್ಲಿ ಆರು ಅಭ್ಯರ್ಥಿಗಳು ರಕ್ತಸಂಬಂಧಿಗಳು ಎನ್ನುವುದು ಮತದಾರರ ಗೊಂದಲಕ್ಕೆ ಕಾರಣ. ತಾಯಿ-ಮಗಳು, ಚಿಕ್ಕಪ್ಪ-ಮಗ, ಮಾವ-ಸೊಸೆ ಹೀಗೆ ಸಂಬಂಧಿಕರೇ ಸೆಣಸಾಟಕ್ಕಿಳಿದಿದ್ದಾರೆ. ಹೀಗಾಗಿ, ಗದಗ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಶಿರಹಟ್ಟಿ 17ನೇ ವಾರ್ಡ್‌ನ ಚುನಾವಣೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಆರಂಭದಲ್ಲಿ ಮಾವ ಪ್ರಕಾಶ ಸರ್ಜಾಪೂರ್ ಹಾಗೂ ಸೊಸೆ ಪ್ರಭಾವತಿ ಬಿಜೆಪಿ ಆಕಾಂಕ್ಷಿಗಳಾಗಿದ್ದರು. ಆದರೆ, ಶಿರಹಟ್ಟಿ ಕ್ಷೇತ್ರದ ಶಾಸಕ ರಾಮಣ್ಣ ಲಮಾಣಿ, ತಮ್ಮ ಹತ್ತಿರದ ಸಂಬಂಧಿ ಅನ್ನಪೂರ್ಣ ಅವರಿಗೆ ಟಿಕೆಟ್ ನೀಡಿದ್ದಾರೆ. ಆದರೆ, ಅನ್ನಪೂರ್ಣ ಅವರ ಮಗಳು ರಾಜೇಶ್ವರಿ ಜೆಡಿಎಸ್ ಟಿಕೆಟ್ ಪಡೆದು ಕಣ್ಣಕ್ಕಿಳಿದಿದ್ದಾರೆ. ಈ ಮೂಲಕ ತಾಯಿ-ಮಗಳು ಮುಖಾಮುಖಿಯಾದ ಕಣ ಕೂಡ ಇದಾಗಿದೆ. ತಮಗೆ ಟಿಕೆಟ್ ಸಿಗಲಿಲ್ಲ ಎನ್ನುವ ಕಾರಣಕ್ಕೆ ಪ್ರಕಾಶ ಸರ್ಜಾಪೂರ್ ತಮ್ಮೊಂದಿಗೆ ತಮ್ಮ ಸೊಸೆ ಪ್ರಭಾವತಿ ಅವರನ್ನು ಕೂಡ ಪಕ್ಷೇತರರಾಗಿ ಕಣಕ್ಕಿಳಿಸಿದರು.

ಕಾಂಗ್ರೆಸ್‌ನಿಂದ ಹೊನ್ನಪ್ಪ ಸ್ಪರ್ಧಿಸಿದರೆ, ಅವರ ಚಿಕ್ಕಪ್ಪ ಪರಮೇಶ್ ಕೂಡ ಪಕ್ಷೇತರರಾಗಿದ್ದಾರೆ. ಈ ಆರು ಜನರನ್ನು ಹೊರತುಪಡಿಸಿರೆ ಮುತ್ತು ಬಾವಿಮನಿ ಎನ್ನುವವರು ಒಬ್ಬರು ಮಾತ್ರ ಪಕ್ಷೇತರರಾಗಿ ಸ್ಪರ್ಧೆಯಲ್ಲಿದ್ದಾರೆ‌. ಸಂಬಂಧಿಗಳ ಈ ಸ್ಪರ್ಧೆಗೆ ಕೌಟುಂಬಿಕ ಕಲಹ, ಅಸಮಾಧಾನ, ಟಿಕೆಟ್ ಕೈತಪ್ಪಿದ ಅಸಮಾಧಾನ ಕಾರಣ ಎನ್ನಲಾಗುತ್ತಿದೆ. ಜೊತೆಗೆ, ಸಂಬಂಧಿಕರಲ್ಲಿ ಇರುವ ಭಿನ್ನಾಭಿಪ್ರಾಯ ಹಾಗೂ ಸೋಲಿಸಬೇಕು ಎನ್ನುವ ಹಠಮಾರಿ ಧೋರಣೆಗಳೇ ಆರು ಜನ ಸಂಬಂಧಿಕರ ಈ ಸ್ಪರ್ಧೆಗೆ ಕಾರಣ ಎನ್ನಲಾಗುತ್ತಿದೆ.

ಈಗಾಗಲೇ ತೀವ್ರ ಪೈಪೋಟಿಗಿಳಿದು ಎಲ್ಲರೂ ಚುನಾವಣಾ ಅಖಾಡದಲ್ಲಿ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಮತದಾರರನ್ನು ಸೆಳೆಯಲು ತಮ್ಮದೇ ಆದ ಲೆಕ್ಕಾಚಾರದಲ್ಲಿ ಅಭ್ಯರ್ಥಿಗಳು ಹಾಗೂ ಅವರ ಪರ ಬೆಂಬಲಿಗರು ತೊಡಗಿದ್ದಾರೆ‌.

ಇದನ್ನೂ ಓದಿ : ವಿಡಿಯೋ ಸ್ಟೋರಿ | ಗದಗ ಜಿಲ್ಲಾಡಳಿತ ಕಚೇರಿಗೆ ಬರುವ ಜನರಿಗಾಗಿ ಗ್ರಂಥಾಲಯ

ಆದರೆ, ಈ ಆರು ಜನರಲ್ಲಿ ಯಾರನ್ನು ಬೆಂಬಲಿಸಬೇಕು ಎನ್ನುವ ಗೊಂದಲ ಮತದಾರರದ್ದು. ಇನ್ನೊಂದು ಲೆಕ್ಕಾಚಾರದ ಪ್ರಕಾರ, ಈ ಸಂಬಂಧಿಕರ ಕಾದಾಟದಿಂದಾಗಿ ಇನ್ನೊಬ್ಬ ಪಕ್ಷೇತರ ಅಭ್ಯರ್ಥಿ ಮುತ್ತು ಬಾವಿಮನಿಗೆ ಲಾಭವಾದರೂ ಆಶ್ಚರ್ಯಪಡಬೇಕಾಗಿಲ್ಲ. ಆದರೆ, ಸಂಬಂಧಿಗಳೇ ಸ್ಪರ್ಧಿಯಾಗಿರುವುದು ಚುನಾವಣಾ ಕಣಕ್ಕೆ ರಂಗು ಮೂಡಿಸಿದೆ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More