ವಿಡಿಯೋ | ನಿರಾಶ್ರಿತ ಕೇಂದ್ರಕ್ಕೆ ಬಂದುನಿಂತ ಥ್ರೋಬಾಲ್ ಆಟಗಾರ್ತಿ ತಶ್ಮಾ ಬದುಕು

“ಒಂದು ವೇಳೆ ಮನೆಯೊಳಗೇ ಉಳಿದಿದ್ದರೆ ಇಷ್ಟೊತ್ತಿಗೆ ಕೆಸರಿನಲ್ಲೇ ಸಮಾಧಿ ಆಗಿರುತಿದ್ದೆವು,” ಎಂದು ಕಣ್ಣೀರಾಗುತ್ತಾರೆ ಅಂತಾರಾಷ್ಟ್ರೀಯ ಥ್ರೋ ಬಾಲ್ ಆಟಗಾರ್ತಿ ತಶ್ಮಾ ಮುತ್ತಪ್ಪ. ಪ್ರವಾಹದಿಂದಾಗಿ ಇವರ ಪುಟ್ಟ ಕುಟುಂಬವು ಇದ್ದೊಂದು ಮನೆಯನ್ನೂ ಕಳೆದುಕೊಂಡು ಅಕ್ಷರಶಃ ಬೀದಿಗೆ ಬಂದಿದೆ

ಅಂದು ಆಗಸ್ಟ್ 17, 2018. ಒಂದು ವಾರದಿಂದಲೂ ಸುರಿಯುತ್ತಿದ್ದ ಮಳೆ ಅಂದೂ ಬಿಡುವಿಲ್ಲದಂತೆ ಸುರಿಯುತಿತ್ತು. ಮಡಿಕೇರಿ ಸಮೀಪದ ಗಾಳಿಬೀಡು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪುಟ್ಟ ಗ್ರಾಮ ಎರಡನೇ ಮೊಣ್ಣಂಗೇರಿಯ ನಿವಾಸಿಗಳಲ್ಲಿ ತೀವ್ರ ಆತಂಕ ಮನೆ ಮಾಡಿತ್ತು. ಬೆಟ್ಟದ ತಪ್ಪಲಲ್ಲೇ ಇರುವ ಗ್ರಾಮದ 8-10 ಮನೆಗಳ ಗೋಡೆಗಳು ಬಿರುಕು ಬಿಡಲಾರಂಬಿಸಿದ್ದವು.

ಬೆಟ್ಟದ ತಪ್ಪಲಲ್ಲೇ ಇದ್ದ ಪುಟ್ಟ ಗ್ರಾಮವಾದ್ದರಿಂದ ಬೇರೆ ಸ್ಥಳಗಳಲ್ಲಿ ಆಗುತ್ತಿರುವ ಭೂಕುಸಿತ ಇಲ್ಲೂ ಆಗುವ ಸಾಧ್ಯತೆ ಇದ್ದುದೇ ನಿವಾಸಿಗಳ ಆತಂಕಕ್ಕೆ ಕಾರಣ ಆಗಿತ್ತು. ಹಾಗಾಗಿ ಅವರೆಲ್ಲ ಒಬ್ಬೊಬ್ಬರಾಗಿ ಸಮೀಪದ ಚೇರಂಬಾಣೆಯ ಸುರಕ್ಷಿತ ಪ್ರದೇಶಕ್ಕೆ ಸುರಿವ ಮಳೆಯಲ್ಲೇ ನಾಲ್ಕು ಕಿಲೋಮೀಟರ್ ದೂರ ನಡೆದು ಸುರಕ್ಷಿತ ಸ್ಥಳ ಸೇರಿದರು. ಹೀಗೆ ಮನೆ ತೊರೆದ ಪುಟ್ಟ ಕುಟುಂಬವೊಂದರಲ್ಲಿ ಇದ್ದ ಯುವತಿಯೇ ತಶ್ಮಾ ಮುತ್ತಪ್ಪ, ಅಂತಾರಾಷ್ಟ್ರೀಯ ಥ್ರೋಬಾಲ್ ಆಟಗಾರ್ತಿ.

ಆ ದಿನದ ಅನುಭವವನ್ನು ತಶ್ಮಾ ವಿವರಿಸುವುದು ಹೀಗೆ: "ಅಂದು ಉಟ್ಟ ಬಟ್ಟೆಯಲ್ಲೇ ನಾವು ಹೊರಬಂದು ಜೀವ ಉಳಿಸಿಕೊಂಡೆವು, ಒಂದು ವೇಳೆ ಮನೆಯಲ್ಲೇ ಉಳಿದಿದ್ದರೆ ಇಷ್ಟೊತ್ತಿಗೆ ಕೆಸರಿನಲ್ಲೇ ಸಮಾಧಿ ಆಗಿರುತಿದ್ದೆವು.”

ಮಡಿಕೇರಿ ಸಮೀಪದ ಎರಡನೇ ಮೊಣ್ಣಂಗೇರಿ ಗ್ರಾಮದ ನಿವಾಸಿ ಆಗಿರುವ ಮುತ್ತಪ್ಪ ಮತ್ತು ಗಿರಿಜಾ ದಂಪತಿಗಳ ಪುತ್ರಿ ತಶ್ಮಾ (23) ಕೂಡ ಮನೆ ಕಳೆದುಕೊಂಡ ನಿರಾಶ್ರಿತರಲ್ಲಿ ಒಬ್ಬರಾಗಿದ್ದಾರೆ. ಬಡ ಕುಟುಂಬದಲ್ಲಿ ಜನಿಸಿದ ತಶ್ಮಾ ಪ್ರಾಥಮಿಕ ಶಾಲಾ ಹಂತದಿಂದಲೂ ಕ್ರೀಡಾ ಸ್ಪರ್ದೆಗಳಲ್ಲಿ ಮುಂದಿದ್ದು, ಭಾಗವಹಿಸಿದ ಸ್ಪರ್ದೆಗಳಲ್ಲಿ ಪದಕ ಕಟ್ಟಿಟ್ಟ ಬುತ್ತಿ ಆಗಿತ್ತು. ಹೈಸ್ಕೂಲ್‌ನಲ್ಲೇ ಉತ್ತಮ ಥ್ರೋಬಾಲ್ ಕ್ರೀಡಾಪಟು ಆಗಿದ್ದ ತಶ್ಮಾ ಶ್ರೀಲಂಕಾ ಮತ್ತು ಮಲೇಷ್ಯಾದಲ್ಲಿ ನಡೆದ ಮಹಿಳಾ ಥ್ರೋಬಾಲ್ ಸ್ಪರ್ಧೆಯಲ್ಲೂ ಭಾಗಿಯಾಗಿದ್ದರು.

ತಶ್ಮಾ ಇದ್ದ ಭಾರತ ಥ್ರೋಬಾಲ್ ತಂಡ 6 ತಿಂಗಳ ಹಿಂದಷ್ಟೇ ಬೆಂಗಳೂರಿನಲ್ಲಿ ನಡೆದ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಆದರೆ ತಶ್ಮಾಳನ್ನು ಮಾತ್ರ ಸರ್ಕಾರ ಗುರುತಿಸಿರಲಿಲ್ಲ. ಪರಿಣಾಮವಾಗಿ, ಸಾಧನೆ ಹೊರತಾಗಿಯೂ ತಶ್ಮಾ ಒಪ್ಪೊತ್ತಿನ ಊಟಕ್ಕೂ ಕಷ್ಟಪಡುತ್ತಿದ್ದಾರೆ. ಈ ಬಡ ಕುಟುಂಬದ ಇನ್ನೊಂದು ದುರಂತವೆಂದರೆ, ಈಕೆಗಿದ್ದ ಏಕೈಕ ಸಹೋದರ ಎರಡು ತಿಂಗಳ ಹಿಂದಷ್ಟೇ ಆತ್ಮಹತ್ಯೆ ಮಾಡಿಕೊಂಡಿದ್ದ. ಮನೆಯ ಜವಾಬ್ದರಿ ತಶ್ಮಾಳದ್ದೇ ಆಗಿದ್ದ ಇಂತಹ ಸಂದರ್ಭದಲ್ಲೇ ಬಂದೆರಗಿದ್ದು ಆಗಸ್ಟ್ 17ರ ಘೋರ ದುರಂತ.

ಇದನ್ನೂ ಓದಿ : ಕೊಡಗು ಜಲಪ್ರಳಯ | ಸಂತ್ರಸ್ತರಿಗೆ ನೆರವಿನ ಮಹಾಪೂರ; ದುರುಪಯೋಗದ ಆರೋಪ

ತಶ್ಮಾ ತಂದೆ ಮಡಿಕೇರಿಯ ಹೋಂಸ್ಟೇಯೊಂದರಲ್ಲಿ ಕೆಲಸ ಮಾಡುತ್ತಾರೆ. ತಾಯಿ ಕೆಲಸ ಮಾಡುವಷ್ಟು ಗಟ್ಟಿಯಾಗಿಲ್ಲ. ದುಡಿಯುವ ಮಗನನ್ನು ಕಳೆದುಕೊಂಡಿದ್ದ ಈ ಬಡಕುಟುಂಬದ ಮಗಳು ತಶ್ಮಾ ಈಗ ಮಡಿಕೇರಿಯ ಮೆಡಿಕಲ್ ಕಾಲೇಜಿನಲ್ಲಿ ಕಂಪ್ಯೂಟರ್ ಸಹಾಯಕಿಯಾಗಿ ಅಲ್ಪಾವಧಿ ಉದ್ಯೋಗ ಮಾಡುತ್ತಿದ್ದು, ಸೂಕ್ತ ಉದ್ಯೋಗಕ್ಕಾಗಿ ಪರದಾಡುತ್ತಿದ್ದಾರೆ. ತಶ್ಮಾ ಅವರ ಮನೆಯ ಜೊತೆಗೇ, ಅವರು ಇಷ್ಟು ವರ್ಷಗಳತನಕ ಕಷ್ಟಪಟ್ಟು ಸಾಧನೆ ಮಾಡಿ ಪಡೆದುಕೊಂಡಿದ್ದ ಅಮೂಲ್ಯ ಸರ್ಟಿಫಿಕೆಟ್‌ಗಳು, ಪದಕಗಳೆಲ್ಲವೂ ನೆಲಸಮಾಧಿ ಆಗಿರುವುದು ಅವರನ್ನು ಇನ್ನಷ್ಟು ಚಿಂತೆಗೆ ಈಡುಮಾಡಿದೆ.

ಜಿಲ್ಲಾಡಳಿತ ನಿರಾಶ್ರಿತರಿಗೆ ಸೂಕ್ತ ವಸತಿ ಕಲ್ಪಿಸಿಕೊಡಲು ಆಹೋರಾತ್ರಿ ದುಡಿಯುತ್ತಿದೆ. ಒಂದು ಪಕ್ಷ ಈ ಬಡ ಕುಟುಂಬಕ್ಕೆ ಮನೆ ದೊರೆತರೂ ಕಳೆದುಕೊಂಡಿರುವ ಪದಕ ಮತ್ತು ಸರ್ಟಿಫಿಕೆಟ್ ಸಿಗುವುದಿಲ್ಲ ಎಂದು ತಶ್ಮಾ ನೋವಿನಿಂದ ಹೇಳಿದರು. ಈಗಲೇ ನಿರಾಶ್ರಿತರ ನೆರವಿಗೆ ಅನೇಕ ದಾನಿಗಳು ಮುಂದೆ ಬಂದಿದ್ದು, ತನಗೊಂದು ಉದ್ಯೋಗ ಸಿಕ್ಕೀತು ಎಂಬ ನಿರೀಕ್ಷೆಯಲ್ಲಿ ಅವರಿದ್ದಾರೆ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More