ವಿಡಿಯೋ ಸ್ಟೋರಿ | ಮೈಸೂರು ದಸರಾಗೆ ‘ಗಜಪಯಣ’ ಆರಂಭಿಸಿದ ಆನೆಗಳು

ಅರಮನೆ ನಗರಿ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧವಾಗುತ್ತಿದೆ. ನಾಡಹಬ್ಬದ ಪ್ರಧಾನ ಆಕರ್ಷಣೆಯಾದ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಗಜಪಡೆಯ ಮೊದಲ ತಂಡ ನಾಗರಹೊಳೆ ಅರಣ್ಯದ ಅಂಚಿನ ಗ್ರಾಮವಾದ ವೀರನಹೊಸಹಳ್ಳಿಯಿಂದ ಮೈಸೂರಿಗೆ ಇಂದು ಸಂಜೆ ಆಗಮಿಸುತ್ತಿದೆ

ನೆರೆಯ ರಾಜ್ಯ ಕೇರಳ ಮತ್ತು ಪಕ್ಕದ ಕೊಡಗು ಜಿಲ್ಲೆ ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿರುವುದರ ಮಧ್ಯೆಯೇ ಅರಮನೆ ನಗರಿ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧವಾಗುತ್ತಿದೆ. ನಾಡಹಬ್ಬದ ಪ್ರಧಾನ ಆಕರ್ಷಣೆಯಾದ ದಶಮಿಯ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಗಜ ಪಡೆಯ ಮೊದಲ ತಂಡ ನಾಗರಹೊಳೆ ಅರಣ್ಯದ ಅಂಚಿನ ಗ್ರಾಮವಾದ ಹುಣಸೂರು ತಾಲೂಕು ವೀರನಹೊಸಹಳ್ಳಿಯಿಂದ ಭಾನುವಾರ (ಸೆ.೨) ಬೆಳಗ್ಗೆ ಪಯಣ ಆರಂಭಿಸಿತು.

ಜಿಲ್ಲಾ ಉಸ್ತುವಾರಿ ಸಚಿವ ಜಿ ಟಿ ದೇವೇಗೌಡ, ಸಚಿವ ಸಾ ರಾ ಮಹೇಶ್, ಶಾಸಕರಾದ ಎಚ್ ವಿಶ್ವನಾಥ್, ತನ್ವೀರ್ ಸೇಠ್ ಮುಂತಾದವರು 'ಗಜ ಪಯಣ'ಕ್ಕೆ ಚಾಲನೆ ನೀಡಿದರು. ಇಂದು ಸಂಜೆ ವೇಳೆಗೆ ಮೈಸೂರು ಸೇರಲಿರುವ ಗಜಪಡೆಗೆ ಸೆ. 5ರಂದು ಅರಮನೆ ಎದುರು ಸ್ವಾಗತ ನೀಡಲಾಗುತ್ತದೆ. ಆನೆಗಳ ಜೊತೆ ಮಾವುತರು, ಕಾವಾಡಿಗಳು ಮತ್ತು ಅವರ ಕುಟುಂಬ ಅರಮನೆ ಆವರಣದಲ್ಲಿದ್ದು; ಆನೆಗಳಿಗೆ ದೈನಂದಿನ ತಾಲೀಮು, ತಯಾರಿ ನೀಡಲಿದ್ದಾರೆ.

ಪ್ರಾಕೃತಿಕ ವಿಕೋಪದ ಹಿನ್ನೆಲೆಯಲ್ಲಿ ಸರಳ, ಸಾಂಪ್ರದಾಯಿಕ ದಸರಾ ಅಚರಿಸಲು ಸರ್ಕಾರ ತೀರ್ಮಾನಿಸಿದೆ. ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಸುಧಾಮೂರ್ತಿ ಅವರನ್ನು ಉತ್ಸವ ಚಾಲನೆಗೆ ಆಹ್ವಾನಿಸಲು ಮುಖ್ಯಮಂತ್ರಿ ನೇತೃತ್ವದ ದಸರಾ ಉನ್ನತಾಧಿಕಾರ ಸಮಿತಿ ಈಗಾಗಲೇ ನಿರ್ಧರಿಸಿದೆ.

ಇದನ್ನೂ ಓದಿ : ಮಾಗಿ ಚಳಿಯಲ್ಲಿ ಮೈಸೂರಿಗೆ ಹೋದರೆ ಈ ಬಾರಿ ಖಂಡಿತ ನಷ್ಟವಿಲ್ಲ!

ಗಜ ಪಡೆಯ ಮೊದಲ ತಂಡದಲ್ಲಿ ಒಟ್ಟು ಆರು ಆನೆಗಳು ಮೈಸೂರಿಗೆ ಆಗಮಿಸುತ್ತಿವೆ. ಅಂಬಾರಿ ಹೊರುವ ಅರ್ಜುನನ ನೇತೃತ್ವದ ಮೊದಲ‌ ಗಜ ತಂಡದಲ್ಲಿ ಈ ಆನೆಗಳಿವೆ. ಬಳ್ಳೆ ಶಿಬಿರದಲ್ಲಿರುವ 58 ವರ್ಷದ ಆನೆ ಅರ್ಜುನನ ಮಾವುತ ವಿನು, ಸಣ್ಣಪ್ಪ ಕಾವಾಡಿ. ಸುಮಾರು ಎರಡು ದಶಕದಿಂದ ದಸರೆಯಲ್ಲಿ ಪಾಲ್ಗೊಳ್ಳುತ್ತಿರುವ ಅರ್ಜುನ 2012ರಿಂದ ಚಿನ್ನದ ಅಂಬಾರಿ ಹೊರುವ ಹೊಣೆಯನ್ನು ನಿರ್ವಹಿಸುತ್ತಿದೆ. ವರಲಕ್ಷ್ಮಿ(62), ಮತ್ತಿಗೋಡು ಆನೆ ಶಿಬಿರ ವಾಸಿ. ಚೈತ್ರ (47) ಬಂಡೀಪುರದ ಆನೆ. ಗೋಪಿ (36), ವಿಕ್ರಮ (45), ಧನಂಜಯ (35 ) ಆನೆಗಳು ದುಬಾರೆ ಆನೆ ಶಿಬಿರದಿಂದ ಬರುತ್ತಿವೆ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More