ಫೋಟೋ ಸ್ಟೋರಿ | ಕೊಡಗಿನಲ್ಲಿ ನೀರಸ ಕೈಲ್ ಮುಹೂರ್ತ ಹಬ್ಬ ಆಚರಣೆ 

ಕೊಡಗಿನಲ್ಲಿ ಕೈಲ್ ಪೊಳ್ದ್ ಅಥವಾ ಕೈಲ್ ಮುಹೂರ್ತ ಹಬ್ಬ ಆಚರಿಸುವಂಥ ಹೊತ್ತಿದು. ಆದರೆ, ಪ್ರವಾಹದ ಹಿನ್ನೆಲೆಯಲ್ಲಿ ಸಂಭ್ರಮ ನೆಲಕಚ್ಚಿದೆ. ಆದರೂ, ಕೊಡವ ಜನಾಂಗದ ಮೂರು ಮುಖ್ಯ ಹಬ್ಬಗಳಲ್ಲಿ ಒಂದಾದ ಕೈಲ್ ಪೊಳ್ದ್ ಆಚರಣೆಯನ್ನು ಕೊಡವರು ಸಂಪೂರ್ಣವಾಗಿ ಕೈಬಿಟ್ಟಿಲ್ಲ

ಕೊಡವರಿಗೆ ಕೈಲ್ ಪೊಳ್ದ್‌ ಬಹಳ ಪ್ರಮುಖ ಹಬ್ಬ. ಕುಟುಂಬವಿಡೀ ಜೊತೆಯಾಗಿ ಆಚರಿಸುವ ಸಂಭ್ರಮವದು. ಆದರೆ, ಇಡೀ ಜಿಲ್ಲೆ ಪ್ರವಾಹಕ್ಕೆ ತುತ್ತಾಗಿರುವ ಹಿನ್ನೆಲೆಯಲ್ಲಿ ಕೈಲ್ ಪೊಳ್ದ್ ಅಥವಾ ಕೈಲ್ ಮುಹೂರ್ತ ಹಬ್ಬ ನೀರಸವಾಗಿದೆ. ಕೊಡವ ಜನಾಂಗದ ಮೂರು ಮುಖ್ಯ ಹಬ್ಬಗಳಲ್ಲಿ ಕೈಲ್ ಪೊಳ್ದ್ ಕೂಡ ಒಂದು. ಈ ಬಾರಿ ಸೆಪ್ಟೆಂಬರ್ 3ರಂದು ಹಬ್ಬ ಆಚರಿಸಲಾಗುತ್ತಿದ್ದು, ಸೂತಕದ ಛಾಯೆ ಕಂಡುಬಂದಿದೆ.

ಅಕ್ಟೋಬರ್‌ನಲ್ಲಿ ಆಚರಿಸುವ ಕಾವೇರಿ ತುಲಾ ಸಂಕ್ರಮಣ ಮತ್ತು ಡಿಸೆಂಬರ್‌ನಲ್ಲಿ ಆಚರಿಸುವ ಹುತ್ತರಿ ಹಬ್ಬ ಕೊಡವರಿಗೆ ಮಹತ್ವ ಎನಿಸಿರುವ ಇನ್ನೆರಡು ಹಬ್ಬಗಳು. ಈ ಎರಡೂ ಹಬ್ಬಗಳನ್ನು ಕೊಡಗಿನ ಇತರ ನಿವಾಸಿಗಳೂ ಆಚರಿಸುತ್ತಾರಾದರೂ ಕೈಲ್ ಪೊಳ್ದ್ ಮಾತ್ರ ಕೊಡವ ಜನಾಂಗದವರೇ ಆಚರಿಸುವ ಹಬ್ಬ.

ಪ್ರತಿವರ್ಷ ಗದ್ದೆಯಲ್ಲಿ ನಾಟಿ ಕಾರ್ಯ ಮುಗಿಸಿದ ಬಳಿಕ ಕೈಲ್ ಪೊಳ್ದ್ ಹಬ್ಬದ ಆಚರಣೆ ಬಹುತೇಕ ಆಯುಧ ಪೂಜೆ ರೀತಿಯಲ್ಲೇ ಇರುತ್ತದೆ. ಕೊಡವ ಭಾಷೆಯಲ್ಲಿ ಕೈಲ್ ಎಂದರೆ ಆಯುಧ ಎಂದು ಅರ್ಥ; ಪೊಳ್ದ್ ಎಂದರೆ ಪೂಜೆ ಎಂದು ಅರ್ಥ. ಕೈಲ್ ಮುಹೂರ್ತ ಹಬ್ಬವನ್ನು ಕೊಡವ ಸಂಪ್ರದಾಯಗಳೊಂದಿಗೆ ಮನೋರಂಜನಾ ಹಬ್ಬವನ್ನಾಗಿಯೂ ಆಚರಿಸಲಾಗುತ್ತದೆ.

ಕೊಡವರು ಮೂಲತಃ ಕೃಷಿಕರು. ಅಲ್ಲದೆ, ಉತ್ತಮ ಬೇಟೆಗಾರರು. ಪೂರ್ವಕಾಲದಲ್ಲಿ ಕಾಡುಪ್ರಾಣಿಗಳನ್ನು ಬೇಟೆ ಆಡುವುದಕ್ಕಾಗಿ ಕೋವಿ, ಕತ್ತಿ ಇನ್ನಿತರ ಆಯುಧಗಳನ್ನು ಉಪಯೋಗಿಸುತ್ತಿದ್ದರು. ಆದರೆ, ವ್ಯವಸಾಯದ ಸಂದರ್ಭದಲ್ಲಿ (ಅಂದರೆ ಆಷಾಡ ಮಾಸದಲ್ಲಿ ) ಆಯುಧಗಳನ್ನು ಮುಟ್ಟದೆ ತಮ್ಮ ಮನೆದೇವರ ಕೋಣೆಯಲ್ಲಿ (ಕನ್ನಿಕೋಂಬರೆ) ಇಟ್ಟಿರುತ್ತಾರೆ. ಗದ್ದೆ ನಾಟಿ ಆದ ನಂತರ ವ್ಯವಸಾಯಕ್ಕೆ ಬಳಸಿದ ಸಾಮಾಗ್ರಿಗಳಾದ ನೇಗಿಲು, ನೊಗ ಇತ್ಯಾದಿಗಳನ್ನೂ ದೇವರ ಕೋಣೆಯಲ್ಲಿ ಆಯುಧಗಳೊಂದಿಗೆ ಇಟ್ಟು ಪೂಜಿಸಿ ನಂತರ ಹಂದಿ ಮಾಂಸ ಹಾಗೂ ಕಡುಬು ಮಾಡಿ ಹಿರಿಯರಿಗೆ ಎಡೆ ಇಡಲಾಗುತ್ತದೆ. ಇದೇ ಕೈಲ್ ಪೊಳ್ದ್ ಆಚರಣೆಯ ವಿಶೇಷತೆ.

ಕೈಲ್ ಪೊಳ್ದ್ ಆಚರಣೆಯ ನಂತರ ವ್ಯವಸಾಯದ ಸಾಮಗ್ರಿಗಳಿಗೆ ಬಿಡುವು. ಆದರೆ, ಕತ್ತಿ- ಕೋವಿಗಳನ್ನು ಹೊರತೆಗೆದು ಬೇಟೆಗೆ ಹೋಗುವುದು ಸಂಪ್ರದಾಯ. ಅದರಂತೆ, ಈ ದಿನಗಳಲ್ಲಿ ತೆಂಗಿನಕಾಯಿಯನ್ನು ಮರಕ್ಕೆ ಕಟ್ಟಿ ಇಳಿ ಬಿಟ್ಟು ಗುಂಡು ಹೊಡೆಯುವ ಸ್ಪರ್ಧೆ ಏರ್ಪಡಿಸಲಾಗುತ್ತದೆ. ಬಹುತೇಕ ಕೊಡವ ಸಮಾಜಗಳಲ್ಲಿ ಕೊಡವರು ಸಾಮೂಹಿಕವಾಗಿ ಪಾಲ್ಗೊಂಡು ವಿವಿಧ ಕ್ರೀಡಾ ಸ್ಪರ್ಧೆಗಳನ್ನೂ ಏರ್ಪಡಿಸಲಾಗುತ್ತದೆ. ಜೊತೆಗೆ, ಕೊಡವ ಸಾಂಪ್ರದಾಯಿಕ ಕೋಲಾಟ್, ಬೊಳಕಾಟ್, ಉಮ್ಮತ್ತಾಟ್ ನೃತ್ಯವನ್ನೂ ಪುರುಷರೂ ಮಹಿಳೆಯರೂ ಮಾಡುತ್ತಾರೆ. ಇಲ್ಲಿಗೆ ಹಬ್ಬದ ಆಚರಣೆ ಮುಗಿದಂತೆ.

ಆದರೆ, ಈ ಬಾರಿ ಕೊಡವರ ಮೊಗದಲ್ಲಿ ಸಂತಸವಿಲ್ಲ. ಬಹುತೇಕ ಎಲ್ಲರೂ ದುಃಖದಲ್ಲೇ ಇದ್ದಾರೆ. ಇಗ್ಗೋಡ್ಲಿನಲ್ಲಿ ಮನೆ ಹಾಗೂ 8 ಎಕರೆ ತೋಟವನ್ನು ಸಂಪೂರ್ಣ ಕಳೆದುಕೊಂಡ ಜೆ ಪಿ ಕಾವೇರಪ್ಪ ಅವರನ್ನು ಮಾತಾಡಿಸಿದಾಗ, “ವರ್ಷ ವರ್ಷವೂ ಈ ಸಮಯದಲ್ಲಿ ಸಂಭ್ರಮ ಇರುತಿತ್ತು. ಆದರೆ, ಮನೆಯಲ್ಲಿ ಇಟ್ಟಿದ್ದ 8 ಚೀಲ ಕಾಪಿ , 5 ಚೀಲ ಕರಿಮೆಣಸಿನ ಸಮೇತ ಎಲ್ಲವೂ ನಾಶವಾಗಿದೆ. ಮಕ್ಕಳು ಮೈಸೂರು ಹಾಗೂ ಸುಳ್ಯದಲ್ಲಿ ಓದುತ್ತಿದ್ದಾರೆ. ಅವರು ಊರಿಗೆ ಬಂದರೆ ಮನೆಯೇ ಇಲ್ಲ. ಎಂತಹ ಹಬ್ಬ?” ಎಂದು ಕಣ್ಣಾಲಿ ಒದ್ದೆ ಮಾಡಿಕೊಂಡರು.

ಜಿಲ್ಲೆಯಲ್ಲಿ ಅಂದಾಜು 5,000 ಕೋಟಿ ರೂಪಾಯಿಗೂ ಅಧಿಕ ಆಸ್ತಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ನಷ್ಟದ ನಿಖರ ಅಂದಾಜನ್ನು ಇನ್ನೂ ಮಾಡಲಾಗುತ್ತಿದೆ. ಸುಮಾರು 14 ಜೀವಗಳು ಈ ದುರಂತಕ್ಕೆ ಬಲಿಯಾಗಿವೆ. 201 ಮನೆಗಳು ನೆಲಸಮಾಧಿ ಆಗಿವೆ. ಸುಮಾರು 3,000 ಹೆಕ್ಟೇರ್‌ನಷ್ಟು ಕಾಫಿ ತೋಟ , ಗದ್ದೆಗಳು ನಾಶವಾಗಿವೆ. ಸೋಮವಾರಪೇಟೆ ತಾಲೂಕಿನ ಮುಕ್ಕೋಡ್ಲು, ಇಗ್ಗೋಡ್ಲು, ಹಟ್ಟಿ ಹೊಳೆ; ಮಡಿಕೇರಿ ತಾಲ್ಲೂಕಿನ ಹೆಮ್ಮೆತಾಳು, ಮಕ್ಕಂದೂರು, ಜೋಡುಪಾಲ, ತಂತಿಪಾಲ, ಕಾಲೂರು ಇನ್ನಿತರ ಹಳ್ಳಿಗಳು ಸಂಪೂರ್ಣ ನಾಪತ್ತೆ ಆಗಿವೆ. ಸುಮಾರು 2,000 ಮಂದಿ ಸಂತ್ರಸ್ಥರಾಗಿದ್ದಾರೆ.

ಹಬ್ಬದ ನೀರಸ ಆಚರಣೆಯ ಕುರಿತು ಮಾತನಾಡಿದ ಮಡಿಕೇರಿ ಸಮೀಪದ ಚೆಟ್ಟಳ್ಳಿಯ ಕಾಫಿ ಬೆಳೆಗಾರ ಪುತ್ತರೀರ ಕರುಣ್ ಕಾಳಯ್ಯ, “ಈ ಬಾರಿ ಸಂಪ್ರದಾಯಿಕವಾಗಿ ಮನೆ ಮಂದಿಯಷ್ಟೇ ಸೇರಿ ಹಬ್ಬ ಆಚರಿಸಿದ್ದೇವೆ. ಕೊಡವ ಸಮಾಜದಲ್ಲಿ ಸಾಮೂಹಿಕ ಆಚರಣೆ ಮಾಡಲಿಲ್ಲ ಮತ್ತು ಯಾವುದೇ ರೀತಿಯ ಕ್ರೀಡಾಕೂಟ ಮತ್ತು ನೃತ್ಯ ಪ್ರದರ್ಶನ ಏರ್ಪಡಿಸಲಿಲ್ಲ,” ಎಂದರು.

ಇದನ್ನೂ ಓದಿ : ಕೊಡಗು ಜಲಪ್ರಳಯ | ಆಶ್ರಯ ಸಿಕ್ಕರೂ ಬಿಟ್ಟುಬಂದ ಮನೆಯದೇ ಚಿಂತೆ

ಕುಶಾಲನಗರದಲ್ಲಿ ನೆಲೆಸಿರುವ ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಬಾಚರಾಣಿಯಂಡ ಅಪ್ಪಣ್ಣ, "ಈ ಸಮಯದಲ್ಲಿ ಪ್ರತಿವರ್ಷ ಮನೆಯಲ್ಲಿಯೇ 200-300 ವರ್ಷ ಹಳೆಯ ಪರಿಕರ, ಮನೆಬಳಕೆಯ ವಸ್ತುಗಳು ಇತ್ಯಾದಿಗಳನ್ನು ಪ್ರದರ್ಶನ ಮಾಡುತ್ತಿದ್ದೆವು. ಸಾವಿರಾರು ಪ್ರವಾಸಿಗರು ಇದನ್ನು ನೋಡಲು ಬರುತ್ತಿದ್ದರು. ಕಳೆದ 20 ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದ ಈ ಪುರಾತನ ಪರಿಕರಗಳ ಪ್ರದರ್ಶನವನ್ನು ಇದೇ ಮೊದಲ ಬಾರಿಗೆ ನಿಲ್ಲಿಸಿದ್ದೇವೆ,” ಎಂದು ತಿಳಿಸಿದರು.

ಕೊಡಗಿನಲ್ಲಿ ಇನ್ನೂ ರಸ್ತೆ ಸಂಪರ್ಕ ಸಾಧ್ಯವಾಗಿಲ್ಲ. ಕಾಮಗಾರಿಗಳು ನಡೆಯುತ್ತಿವೆ. ಈ ಕಾಮಗಾರಿಗೆ ವಾಹನಗಳ ಓಡಾಟ ಅಡ್ಡಿ ಆಗಬಾರದೆಂದು ಮತ್ತು ಸುರಕ್ಷತೆಯ ದೃಷ್ಟಿಯಿಂದ ಸೆ.9ರವರೆಗೆ ಪ್ರವಾಸಿಗರ ಪ್ರವೇಶ ನಿಷೇಧಿಸಲಾಗಿದೆ. ಹೀಗಾಗಿ, ಜಿಲ್ಲೆಯ ಎಲ್ಲ ಹೋಟೆಲ್, ಹೋಂಸ್ಟೇಗಳು ಖಾಲಿ ಇವೆ. ಕಳೆದ ಮೂರು ದಿನಗಳಿಂದ ಜಿಲ್ಲಾದ್ಯಂತ ಬಿಸಿಲು ಇದ್ದರೂ ಮಡಿಕೇರಿಯ ರಾಜಾ ಸೀಟಿನಲ್ಲಿ ಪ್ರವಾಸಿಗರ ಕಲರವ ಇರಲಿಲ್ಲ. ಹಾಗಾಗಿ ಈ ವರ್ಷ ಕೊಡಗಿನಲ್ಲಿ ಕೈಲ್ ಮುಹೂರ್ತ ಹಬ್ಬದ ಸಡಗರ ಇಲ್ಲವೇ ಇಲ್ಲ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More