ಕೊಡಗು ಪ್ರವಾಹ | ಮಡಿಕೇರಿ ನಗರದಲ್ಲಿ ದುಬಾರಿಯಾಗಿರುವ ಬಾಡಿಗೆ ಮನೆ

ಗುಡ್ಡಕುಸಿತ ಮತ್ತು ಮಳೆಗೆ ಮನೆಗಳನ್ನು ಕಳೆದುಕೊಂಡ ಕೊಡಗಿನ ನಿರಾಶ್ರಿತರು ಆಶ್ರಯ ಕೇಂದ್ರ ಹಾಗೂ ಬಂಧುಗಳ ಮನೆಗಳಲ್ಲಿ ನೆಲೆಸಿ ರೋಸಿ ಹೋಗಿ ಬಾಡಿಗೆ ಮನೆಯನ್ನು ಹುಡುಕುವ ಪ್ರಯತ್ನದಲ್ಲಿಯೂ ಸೋತಿದ್ದಾರೆ. ಮಡಿಕೇರಿ ನಗರದಲ್ಲಿ ಮನೆ ಬಾಡಿಗೆ ದುಬಾರಿಯಾಗಿದೆ

ಮಡಿಕೇರಿ ನಗರದಲ್ಲಿ ಪ್ರಸ್ತುತ ಬಾಡಿಗೆ ಮನೆಯೇ ದೊರಕುತ್ತಿಲ್ಲ. ದೊರಕಿದರೂ ಹೆಚ್ಚಿನ ಬಾಡಿಗೆ ಕೇಳುತ್ತಿದ್ದಾರೆ. ಹೀಗಾಗಿ ನಿರಾಶ್ರಿತರು ಬವಣೆ ಪಡುವಂತಾಗಿದೆ. ಕೆಲಸವಿಲ್ಲದೆ ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವಾಗ ಅಧಿಕ ಬಾಡಿಗೆ ನೀಡಲು ಹಣ ಹಾಗೂ ಮುಂಗಡ ಹಣ ನೀಡಲು ಪರದಾಡುವ ಪರಿಸ್ಥಿತಿ ಇದೆ.

ಚಾಮುಂಡೇಶ್ವರಿನಗರ ಮತ್ತು ಮಂಗಳದೇವಿನಗರಗಳಲ್ಲಿ ವಿಧಿ ಇಲ್ಲದೆ ಬಿರುಕುಬಿಟ್ಟ ಮನೆಯಲ್ಲಿಯೇ ಕೆಲವರು ವಾಸವಾಗಿದ್ದಾರೆ. ಶೇ.೧೦ರಷ್ಟು ಮಂದಿ ಸಂಬಂಧಿಕರ ಮನೆಗೆ ತೆರಳಿ ಆಶ್ರಯ ಪಡೆಯುತ್ತಿದ್ದಾರೆ. ಕೆಲವರು ಕೂಲಿ ಕೆಲಸಗಳು ಇಲ್ಲದೆ ಬಾಡಿಗೆ ಕಟ್ಟಲು ಸಾಧ್ಯವಾಗುವುದಿಲ್ಲ ಎಂದು ಪರಿಹಾರ ಕೇಂದ್ರದಲ್ಲಿಯೇ ತಂಗಿದ್ದಾರೆ.

ಮನೆಗಳನ್ನು ಕಳೆದುಕೊಂಡವರಿಗೆ ಊಟೋಪಾಚಾರ, ಹೊದಿಕೆ ಸೇರಿದಂತೆ ಇತರೆ ಸೌಲಭ್ಯಗಳು ಸಿಗುತ್ತಿವೆ. ಆದರೆ ನಿರಾಶ್ರಿತ ಕೇಂದ್ರದಲ್ಲಿ ನೆಲಸದೆ ಇರುವವರಿಗೆ ಹಣದ ಸೌಲಭ್ಯ ಸಿಗುತ್ತಿಲ್ಲ. ಮಡಿಕೇರಿ ತಾಲೂಕಿನ ಮಕ್ಕಂದೂರು, ಕಾಂಡನಕೊಲ್ಲಿ, ಗಾಳಿಬೀಡಿನ ಸುತ್ತ ಮುತ್ತ ಪ್ರಕೃತಿ ವಿಕೋಪಕ್ಕೆ ತುತ್ತಾದ ಗ್ರಾಮಗಳಲ್ಲಿ ರಸ್ತೆಗಳು ಕೊಚ್ಚಿಹೋದ ಪರಿಣಾಮ ಸಂಪರ್ಕ ರಸ್ತೆ ಇಲ್ಲ. ಕೆಲವರು ಬೆಟ್ಟಗುಡ್ಡ ಹತ್ತಿ ಮನೆಗಳಿಗೆ ತೆರಳಿ ಅಳಿದುಳಿದ ವಸ್ತುಗಳನ್ನು ತರುವ ಪ್ರಯತ್ನ ಮಾಡುತ್ತಿದ್ದಾರೆ.

ಕುಸಿಯುವ ಹಂತದಲ್ಲಿರುವ ಮನೆಯಲ್ಲಿ ವಾಸಮಾಡಲು ಯೋಗ್ಯವಾಗಿಲ್ಲ. ಅಪ್ಪ, ಅಮ್ಮ, ಅಣ್ಣ, ಅತ್ತಿಗೆ, ತಮ್ಮ ಸೇರಿದಂತೆ ಸುಮಾರು ೭ ಮಂದಿ ಸದಸ್ಯರೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದೇವೆ. ಹಣ ಕಾಸಿನ ಸಮಸ್ಯೆಯಿಂದ ಬಾಡಿಗೆ ನೀಡಲು ತೊಂದರೆಯಾಗುತ್ತಿದೆ.
ರೋಷನ್, ನಿರಾಶ್ರಿತರು
ಇದನ್ನೂ ಓದಿ : ಫೋಟೋ ಸ್ಟೋರಿ | ಮನೆಗೆ ಮರಳಿ ಅವಶೇಷ ಶೋಧಿಸುತ್ತಿದ್ದಾರೆ ಸಂತ್ರಸ್ತರು

ಜಿಲ್ಲೆಯಲ್ಲಿ ಉಂಟಾದ ಅತಿವೃಷ್ಟಿಯಿಂದ ರೈತರು, ಕಾರ್ಮಿಕರ ಬದುಕು ಶೋಚನೀಯವಾಗಿದೆ. ರೈತರು ತಾವು ಬೆಳೆದ ಬೆಳೆಯನ್ನು ಕಳೆದುಕೊಂಡಿದ್ದಾರೆ. ಕಾರ್ಮಿಕರು ದಿನನಿತ್ಯದ ಕೂಲಿ ಕೆಲಸಕ್ಕೂ ಪರದಾಡುತ್ತಿದ್ದಾರೆ. ತೋಟದಲ್ಲಿ ಕೆಲಸ ನಿರ್ವಹಿಸುವ ಮಂದಿ ನಿರಂತರ ಮಳೆ ಹಾಗೂ ಭೂ ಕೂಸಿತದಿಂದ ತೋಟಗಳಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. “ಕೆಲಸವಿಲ್ಲದೇ ತಿಂಗಳು ಕಳೆದಿದೆ. ನಗರಸಭೆ ಹಾಗೂ ಜಿಲ್ಲಾಡಳಿತ ನೀಡಿದ ಅಕ್ಕಿಯಲ್ಲಿ ಜೀವನ ನಡೆಸುತ್ತಿದ್ದೇವೆ. ಸಾಲವೂ ಇದೆ. ಕೆಲಸಕ್ಕೆ ದೂರದೂರಿಗೆ ಹೋಗಲು ಸಮಸ್ಯೆ ಇದೆ. ಮುಂದೆಯೂ ಹೀಗಾದರೆ ಪರಿಸ್ಥಿತಿ ನಿಭಾಯಿಸೋದು ಹೇಗೆ” ಎಂದು ಆತಂಕ ವ್ಯಕ್ತಪಡಿಸುತ್ತಾರೆ ಕಾರ್ಮಿಕ ಕೃಷ್ಣ.

ಕುಸಿದ ಬರೆ ಸೃಷ್ಟಿಸಿದ ಅವಾಂತರದಿಂದ ಹಲವು ಮನೆಗಳು ನೆಲಕಚ್ಚಿವೆ. ಇನ್ನೂ ಹೆಚ್ಚಿನ ಅನಾಹುತ ಉಂಟಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ನಗರಸಭೆಗೂ ಹಲವು ಮಂದಿ ಮನವಿ ಸಲ್ಲಿಸಿ, ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಅತಿವೃಷ್ಟಿ ಸಂದರ್ಭ ನಾನು ನನ್ನ ಮನೆಯನ್ನು ಕಳೆದುಕೊಂಡಿದ್ದೇನೆ. ೧೦ ದಿನ ಮಡಿಕೇರಿಯ ಸಂತ್ರಸ್ತರ ಕೇಂದ್ರದಲ್ಲಿ ಉಳಿದುಕೊಂಡಿದ್ದೆ. ಪರಿಹಾರ ಕೇಂದ್ರದಲ್ಲಿ ಶೌಚಾಲಯದ ತೊಂದರೆಯಾದ ಪರಿಣಾಮ ಮರಳಿ ಇಲ್ಲಿಗೆ ಬಂದಿದ್ದೇನೆ. ಪಕ್ಕದ ಮನೆಯಲ್ಲಿ ಆಶ್ರಯ ಪಡೆದುಕೊಂಡಿದ್ದೇನೆ
ಮೈನಾವತಿ, ನಿರಾಶ್ರಿತೆ
ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More