೪೦೦ ಗೋವುಗಳು ಕಣ್ಮುಚ್ಚಿದರೂ ಕಾಣಿಸಿಕೊಳ್ಳದ ಗೋರಕ್ಷಕರು, ರೈತರ ಆಕ್ರೋಶ

ಗೋವಿನಲ್ಲಿ ೩೬ ಸಾವಿರ ದೇವತೆಗಳಿವೆ ಎಂದು ನಂಬಿಸಿ ಜನರನ್ನು ವಂಚಿಸುವ ಕೆಲಸ ನಡೆಯುತ್ತಿದೆ. ರಾಸುಗಳನ್ನು ಕಳೆದುಕೊಂಡು ಲಕ್ಷಾಂತರ ರುಪಾಯಿ ನಷ್ಟ ಅನುಭವಿಸುತ್ತಿದ್ದರೂ ತಮ್ಮ ಸಂಕಷ್ಟವನ್ನು ಯಾರೂ ಕಿವಿಗೆ ಹಾಕಿಕೊಳ್ಳುತ್ತಿಲ್ಲ ಎಂದು ತುಮಕೂರು ಜಿಲ್ಲೆಯ ರೈತರು ಸಿಟ್ಟಾಗಿದ್ದಾರೆ

‘ಮೂವತ್ತಾರು ಕೋಟಿ ದೇವತೆಗಳಿರುವ ಸ್ವರ್ಣ ಗೋಮಾತೆಯನ್ನು ನೋಡಿದ ತಕ್ಷಣ ಶೇರ್ ಮಾಡಿದರೆ ಒಳ್ಳೆಯ ಸುದ್ದಿ ಬರುತ್ತೆ’ ಎಂಬ ಸಂದೇಶ ವಾಟ್ಸಾಪ್‌ನಲ್ಲಿ ಹರಿದಾಡುತ್ತಿತ್ತು. “ಈ ಚಿತ್ರವನ್ನು ಶೇರ್ ಮಾಡುವುದರಿಂದ ಹೇಗೆ ಒಳ್ಳೆಯದಾಗುತ್ತದೆ?” ಎಂದು ನನಗೆ ಮೆಸೇಜ್ ಕಳಿಸಿದವರಿಗೆ ಪ್ರಶ್ನಿಸಿದೆ. ಅದಕ್ಕೆ ಅವರು ನನ್ನೊಂದಿಗೆ ಮಾತನಾಡುವುದನ್ನೇ ಬಿಟ್ಟರು. ಈ ಘಟನೆಯನ್ನು ನೆನಪಿಸಲು ಒಂದು ಕಾರಣವಿದೆ. ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಕೆಲವು ಗ್ರಾಮಗಳಲ್ಲಿ ಗೋಮಾತೆ ಸಾವಿನ ದವಡೆಗೆ ಸಿಲುಕಿದೆ. ಈವರೆಗೆ ೪೦೦ಕ್ಕೂ ಹೆಚ್ಚು ಹಸುಗಳು ಮೃತಪಟ್ಟಿವೆ. ಅಂದಹಾಗೆ ೩೬ ಕೋಟಿ ದೇವತೆಗಳು ವಾಸ ಇರುವ ಗೋವುಗಳು ಸಾಯುತ್ತಿದ್ದರೂ ಗೋರಕ್ಷಕರು ಇತ್ತ ತಿರುಗಿಯೂ ನೋಡುತ್ತಿಲ್ಲ! ಗೋ ಸಂತತಿಯ ಸಾವಿನ ಕುರಿತು ಕಾಳಜಿಯನ್ನೂ ವ್ಯಕ್ತಪಡಿಸುತ್ತಿಲ್ಲ. ಅವುಗಳನ್ನು ಸಂರಕ್ಷಿಸುವ ಗೊಡವೆಗೂ ಹೋಗುತ್ತಿಲ್ಲ.

ಇಲ್ಲಿ ಮೇವಿಲ್ಲದೆ, ನೀರಿಲ್ಲದೆ ರೋಗ ಬಂದು ನರಳುತ್ತಿರುವ ಹಸುಗಳು ಯಾತನೆಯಿಂದ ಕಣ್ಮುಚ್ಚುತ್ತಿವೆ. ಕುಣಿಗಲ್ ತಾಲೂಕಿನ ಮೋದೂರು, ಹೊಸೂರು ಗ್ರಾಮಗಳಲ್ಲಿ ಆಫ್ರಿಕಾ ಖಂಡದ ಪ್ರಾಣಿಗಳಲ್ಲಿ ಕಂಡುಬರುವ ಕೆಟಾರಲ್ ಎಂಬ ಅಂಟುರೋಗ ಬಡಿದು ತಮ್ಮ ಹಸುಗಳು ಸಾಯುವುದನ್ನು ನೋಡಿ ರೈತರು ಕಂಗಾಲಾಗಿದ್ದಾರೆ. ಪಶುವೈದ್ಯ ಇಲಾಖೆ ಅಧಿಕಾರಿಗಳು ಗ್ರಾಮಗಳಿಗೆ ತೆರಳಿ ಚಿಕಿತ್ಸೆ ನೀಡುತ್ತಿದ್ದರೂ ರೋಗವನ್ನು ತಡೆಗಟ್ಟಲು ಸಾಧ್ಯವಾಗಿಲ್ಲ. ಇಂತಹ ಸಂದರ್ಭದಲ್ಲಿ ಗೋರಕ್ಷಕ ಪಡೆಗಳು ಎಲ್ಲಿ ಹೋದವು ಎಂಬ ಸಿಟ್ಟು ರೈತರಿಂದ ಕೇಳಿಬರತೊಡಗಿದೆ. ಗೋವುಗಳಿಗೆ ರೋಗ ಬಂದು ನರಳುವಾಗ, ಸಾಯುವಾಗ ಈ ಗೋರಕ್ಷಕರು ಎಲ್ಲಿ ಹೋಗುತ್ತಾರೆ. ಇದರತ್ತ ಗಮನ ಕೊಡುವುದಿಲ್ಲವೇಕೆ ಎಂಬ ಆಕ್ರೋಶ ವ್ಯಕ್ತವಾಗಿದೆ.

ಈ ಕುರಿತು ಮಾತನಾಡಿದ ಕುಣಿಗಲ್ ರೈತ ಜಿ ಕೆ ನಾಗಣ್ಣ, “ನಕಲಿ ಗೋರಕ್ಷಕರಿಂದ ಏನೂ ಆಗುವುದಿಲ್ಲ. ಗೋರಕ್ಷಕರು ಎಂದು ಹೇಳಿಕೊಳ್ಳುವವರು ಎಂದೂ ಸಗಣಿ ಬಾಚಲಿಲ್ಲ, ಗಂಜಳ ತೆಗೆಯಲಿಲ್ಲ. ದನಗಳ ಮೈತೊಳೆಯಲಿಲ್ಲ. ದನಕರುಗಳ ಆರೈಕೆ ಮಾಡುವುದು ಗೊತ್ತಿಲ್ಲ. ಹಸುಗಳು ಸಾವನ್ನಪ್ಪುವುದರಿಂದ ಗ್ರಾಮೀಣ ರೈತರ ಆರ್ಥಿಕತೆ ಮೇಲೆ ದೊಡ್ಡ ಪೆಟ್ಟು ಬೀಳುತ್ತದೆ ಎಂಬ ಸಣ್ಣ ಜ್ಞಾನವೂ ಅವರಿಗೆ ಇಲ್ಲ. ರೋಗ ಬಂದು ಸಾವನ್ನಪ್ಪುತ್ತಿರುವ ಹಸುಗಳಿಗೆ ಪರಿಹಾರ ಕೊಡಿಸುವ ಬಗ್ಗೆ ಹೋರಾಟ ಮಾಡುವುದಿಲ್ಲ. ರೈತರ ನೆರವಿಗೆ ನಕಲಿ ಗೋರಕ್ಷಕರು ಬರುವುದಿಲ್ಲ. ಸೆಲೆ (ಕಾಲುಬಾಯಿ ಜ್ವರ) ಬಂದಾಗ ಅವುಗಳಿಗೆ ನುಗ್ಗೆಸೊಪ್ಪಿನ ರಸ ಕುಡಿಸಬೇಕೆಂಬ ಕನಿಷ್ಠ ಸಲಹೆಯನ್ನು ನೀಡಿ ಅವುಗಳನ್ನು ಉಳಿಸುವ ಮಾರ್ಗದ ಬಗ್ಗೆ ಚಿಂತಿಸುವುದಿಲ್ಲ. ಕಾಲುಬಾಯಿ ಜ್ವರ ಬಂದು ರಾಸುಗಳು ಸಾವನ್ನಪ್ಪಿದಾಗಲೂ ಗೋಸಂರಕ್ಷಕರು ರೈತರಿಗೆ ಪರಿಹಾರ ಕೊಡಿಸಬೇಕೆಂಬ ಬಗ್ಗೆ ಹೋರಾಟ ಮಾಡಲಿಲ್ಲ. ಅಷ್ಟೇ ಅಲ್ಲ, ಅದರ ಬಗ್ಗೆ ಮಾತನಾಡಲೂ ಇಲ್ಲ,” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಗೋ ತಳಿ ಸಂವರ್ಧನೆ, ಗೋವಂಶ ವೃದ್ಧಿ, ಗೋಮೂತ್ರ, ಸಗಣಿ ಹೀಗೆ ಏನೆಲ್ಲ ಅನುಕೂಲಗಳಿವೆ ಎಂಬ ಬಗ್ಗೆ ಮಾತ್ರ ಬಾಯಿಮಾತಿನ ಉಪಚಾರ ನಡೆಯುತ್ತಿದೆಯೇ ಹೊರತು ರೈತರ ನೆರವಿಗೆ ಗೋರಕ್ಷಕರು ಬರುತ್ತಿಲ್ಲ. ಅವರಿಗೆ ಕೇವಲ ರಾಜಕೀಯ ಮಾಡಲು ಗೋವು ಬೇಕು. ರಾಜಕೀಯ ಲಾಭವನ್ನು ಪಡೆಯಲು ಹಸು ಬೇಕು. ಗೋವಿನಲ್ಲಿ ೩೬ ಸಾವಿರ ದೇವತೆಗಳಿವೆ ಎಂದು ನಂಬಿಸಿ ಜನರನ್ನು ವಂಚಿಸಲಾಗುತ್ತಿದೆ. ರಾಸುಗಳ ಪಾಲನೆಯ ಕುರಿತು ಕಿಂಚಿತ್ತೂ ಗಮನಹರಿಸದ, ತಮ್ಮ ಹಸುಗಳನ್ನು ಕಳೆದುಕೊಂಡ ರೈತರು ಲಕ್ಷಾಂತರ ರುಪಾಯಿ ನಷ್ಟ ಅನುಭವಿಸುತ್ತಿದ್ದರೂ ಕಿವಿಗೆ ಹಾಕಿಕೊಳ್ಳುತ್ತಿಲ್ಲ,” ಎಂದು ಹಲವು ರೈತರು ಕಿಡಿಕಾರಿದರು.

ಇದನ್ನೂ ಓದಿ : ಗೋ ಹಿಂಸಾಚಾರ ಹೆಚ್ಚಿದಂತೆಲ್ಲ ದೇಶದ ಚರ್ಮ ರಫ್ತು ಉದ್ಯಮದಲ್ಲಿ ಕುಸಿತ

“ದೇಶವ್ಯಾಪಿ ದನದ ಮಾಂಸ ತಿಂದರು, ಗೋವುಗಳನ್ನು ಸಕ್ರಮವಾಗಿ-ಅಕ್ರಮವಾಗಿ ಸಾಗಿಸಿದರು ಎಂಬ ಕಾರಣಕ್ಕೆ ಆರ್‌ಎಸ್ಎಸ್ ಮಾತೃತ್ವ ಒಪ್ಪಿಕೊಂಡ ಭಕ್ತಗಣ ಗುಂಪು ದಾಳಿ ನಡೆಸಿ ಭಯದ ವಾತಾವರಣ ಹುಟ್ಟುಹಾಕುತ್ತಿದೆ. ಗೋಸಂರಕ್ಷಕ ಯಾತ್ರೆ ನಡೆಸಿ ಜಾಗೃತಿ ಮೂಡಿಸುವ ಕೆಲಸವೂ ನಿರಂತರವಾಗಿ ನಡೆಯುತ್ತಿದೆ. ಗೋಸಂವರ್ಧನ ಟ್ರಸ್ಟ್‌ಗಳು, ಪ್ರಾಣಿದಯಾ ಸಂಘಗಳು ಸೇರಿದಂತೆ ಗೋವುಗಳನ್ನು ರಕ್ಷಿಸುವ ಹತ್ತಾರು ಸಂಸ್ಥೆಗಳು ಗೋವಿನ ಉತ್ಪನ್ನಗಳ ಕುರಿತು ಜನರಿಗೆ ಮಾಹಿತಿ ಕೊಡುತ್ತಲೇ ಬರುತ್ತಿವೆ. ಇಂತಹ ನಕಲಿ ಗೋಸಂರಕ್ಷಕ ಗುರುಗಳ ಪ್ರಚೋದನೆಗೊಳಪಟ್ಟ ಭಕ್ತಗಣ ಜನರ ಮೇಲೆ ಮನ ಬಂದಂತೆ ದಾಳಿ ಮಾಡುತ್ತಿದೆ. ಆದರೆ ಇವರ್ಯಾರೂ ಸಂಕಷ್ಟದ ವೇಳೆ ಪತ್ತೆ ಇರುವುದಿಲ್ಲ. ಗೋವುಗಳ ಬಗ್ಗೆ ಉದ್ದುದ್ದ ಭಾಷಣ ಮಾಡುವವರು ರೈತರ ನೆರವಿಗೆ ಧಾವಿಸಬೇಕು. ರಾಸುಗಳಿಗೆ ಬರುವ ಕಾಯಿಲೆಗಳನ್ನು ತಡೆಗಟ್ಟಿ ರೈತರಿಗೆ ಆಗುತ್ತಿರುವ ನಷ್ಟ ತಪ್ಪಿಸಲು ಕ್ರಮ ಕೈಗೊಳ್ಳಬೇಕು. ಇಂತಹ ಸಮಾಜೋದ್ಧಾರದ ಕೆಲಸಗಳನ್ನು ಮಾಡುವ ಬದಲು ಗೋಸಂಕ್ಷಣೆ ಹೆಸರಿನಲ್ಲಿ ರಾಜಕೀಯ ಮಾಡಿಕೊಂಡು ದಾಳಿ ಮಾಡುವುದು ಯಾರಿಗೂ ಶೋಭೆ ತರುವಂಥದ್ದಲ್ಲ. ಹೀಗಾಗಿ ಗೋರಕ್ಷಕರು, ಗೋವಿನ ಪರ ನಿರಂತರವಾಗಿ ಮಾತನಾಡುವ ಸ್ವಾಮೀಜಿಗಳು ಕೂಡಲೇ ರೈತರ ನೆರವಿಗೆ ಬರಬೇಕು,” ಎಂದು ಪ್ರಜ್ಞಾವಂತರು ಆಗ್ರಹಿಸಿದ್ದಾರೆ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More