ಕೊಡಗಿನಲ್ಲಿ ಕಾಡಾನೆ ತಡೆಗೆ ಅಳವಡಿಸಿದ್ದ ಮುಳ್ಳುಬೇಲಿ ತೆರವು; ಮುಂದೇನು?

ಅರಣ್ಯದ ಸುತ್ತ ಮುಳ್ಳುಬೇಲಿ ಅಳವಡಿಸಿದ್ದರಿಂದ ಕೊಡಗಿನಲ್ಲಿ ಕಾಡಾನೆಗಳ ಹಾವಳಿ ಕಡಿಮೆ ಆಗಿತ್ತು. ಆದರೆ, ಸುಪ್ರೀಂ ಕೋರ್ಟ್‌ ಆದೇಶದಂತೆ ಅಂಥ ಬೇಲಿಗಳನ್ನು ಇದೀಗ ತೆರವು ಮಾಡಲಾಗುತ್ತಿದೆ. ಆದರೆ, ತಮ್ಮ ಅಹವಾಲನ್ನು ಯಾರೂ ಆಲಿಸುತ್ತಿಲ್ಲ ಎಂದು ಅಲವತ್ತುಕೊಳ್ಳುತ್ತಾರೆ ಕೊಡಗಿನ ರೈತರು

ಸುಪ್ರೀಂ ಕೋರ್ಟು ಇತ್ತೀಚೆಗೆ ರಾಜ್ಯ ಸರ್ಕಾರಕ್ಕೆ ನೀಡಿರುವ ನಿರ್ದೇಶನದಿಂದ ವನ್ಯಜೀವಿಪ್ರಿಯರು ಸಂತಸ ಹೊಂದಿದ್ದಾರೆ. ಅರಣ್ಯದ ಸುತ್ತಲೂ ಅಳವಡಿಸಿರುವ ಮುಳ್ಳು ಹಾಗೂ ಮೊಳೆಗಳ ಬೇಲಿಯು ಕಾಡಾನೆಗಳಿಗೆ ಗಾಯ ಮಾಡುತ್ತಿದ್ದು, ಇದು ಅಮಾನವೀಯ ಎಂದು ಸುಪ್ರೀಂ ಕೋರ್ಟು ಅಭಿಪ್ರಾಯಪಟ್ಟಿದ್ದು, ಕೂಡಲೇ ಮುಳ್ಳುಬೇಲಿ ತೆರವುಗೊಳಿಸಲು ಸೂಚಿಸಿದೆ.

ಕೊಡಗಿನ ಅರಣ್ಯ ಇಲಾಖೆಯ ಅಧಿಕಾರಿಗಳು ಶನಿವಾರದಿಂದ ಅರಣ್ಯದ ಸುತ್ತಲೂ ಅಳವಡಿಸಿರುವ ತಂತಿಬೇಲಿ, ಚೂಪಾದ ಮೊಳೆಗಳ ಬೇಲಿಯನ್ನು ತೆರವುಗೊಳಿಸುತಿದ್ದಾರೆ. ಕಾಡಾನೆಗಳು ಊರಿನೊಳಗೆ ನುಗ್ಗದಂತೆ ಈ ರೀತಿಯ ಬೇಲಿಯನ್ನು ಅಳವಡಿಸಲಾಗಿದ್ದು, ಇದರಿಂದ ಆನೆಗಳ ಹಾವಳಿಯೂ ಕಡಿಮೆ ಆಗಿತ್ತು. ಆದರೆ, ಸುಪ್ರೀಂ ಕೋರ್ಟಿನ ಆದೇಶದಂತೆ ಈ ತೆರವು ಕಾರ್ಯಾಚರಣೆ ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಲಾಗಿದೆ.

ಕೊಡಗಿನಲ್ಲಿ ಮೊದಲಿನಿಂದಲೂ ಕಾಡಾನೆಗಳ ಹಾವಳಿ ಸಾಮಾನ್ಯ. ಜಿಲ್ಲೆಯ ಗಡಿ ಭಾಗ ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಹೊಂದಿಕೊಂಡಿರುವುದರಿಂದ ಇಲ್ಲಿ ಕಾಡಾನೆಗಳ ಹಾವಳಿ ಅಧಿಕ. ಜೊತೆಗೆ, ಕಾಡಾನೆಗಳ ಸಂತತಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದು ಮತ್ತು ಕಾಡಿನಲ್ಲಿ ಆಹಾರದ ಕೊರತೆಯಿಂದಾಗಿ ಆನೆಗಳು ಊರಿನ ಹೊರವಲಯಕ್ಕೆ ನುಗ್ಗಿ ಬೆಳೆ ನಾಶ ಮಾಡುತ್ತಿವೆ.

ಈ ಬೆಳೆ ನಾಶ ಮತ್ತು ಪ್ರಾಣಹಾನಿ ತಪ್ಪಿಸಲೆಂದೇ ಅರಣ್ಯ ಇಲಾಖೆ ಕಾಡಿನ ಸುತ್ತಲೂ ಕಂದಕವನ್ನು ತೋಡಿದ್ದು ಅದರ ಪಕ್ಕದಲ್ಲೇ ಕಬ್ಬಿಣದ ಬೇಲಿಯನ್ನು ಅಳವಡಿಸಿತ್ತು. ಇವುಗಳ ಕಂಬಗಳನ್ನು ಕಾಂಕ್ರೀಟ್ ಹಾಕಿ ನಿಲ್ಲಿಸಲಾಗಿದ್ದು, ಕಬ್ಬಿಣದ ರಾಡುಗಳನ್ನು ಚೂಚು ಮಾಡಿ ಅಳವಡಿಸಲಾಗಿತ್ತು. ಕಾಡಾನೆಗಳು ಕಂದಕ ದಾಟಿ ಬರುವಾಗ ಬೇಲಿಯನ್ನು ಗುದ್ದಿ ಕೆಳಕ್ಕೆ ಬೀಳಿಸಲು ಪ್ರಯತ್ನಿಸಿದರೆ ಚೂಪಾದ ರಾಡುಗಳು ಚುಚ್ಚುತ್ತಿದ್ದವು. ಆಗ ಆನೆಗಳು ಬೇಲಿಯನ್ನು ಮುರಿಯಲು ಸಾಧ್ಯವಾಗುವುದಿಲ್ಲ ಎಂಬುದು ಹಿಂದಿನ ಲೆಕ್ಕಾಚಾರ.

ಇನ್ನು, ಪರ್ಯಾಯ ಕ್ರಮ ಕೈಗೊಳ್ಳದ ಹೊರತು ಮುಳ್ಳುತಂತಿ ತೆರವಿನ ಕಾರ್ಯಾಚರಣೆಗೆ ಆರು ತಿಂಗಳ ಕಾಲಾವಕಾಶ ನೀಡಬೇಕೆಂದು ಕರ್ನಾಟಕದ ಪರ ವಕೀಲರು ಮನವಿ ಸಲ್ಲಿಸಿದ್ದಕ್ಕೆ ಸಮ್ಮತಿಸದ ಸುಪ್ರೀಂ ಕೋರ್ಟ್, ಅತಿ ಶೀಘ್ರದಲ್ಲಿ ತೆರವಿಗೆ ಆದೇಶಿತ್ತು. ಆದರೆ, ರಾಜ್ಯ ಸರಕಾರವು ಮುಳ್ಳುಬೇಲಿಗಳನ್ನು ತೆರವುಗೊಳಿಸುತ್ತಿಲ್ಲವೆಂದು ಅರ್ಜಿದಾರರ ಪರ ವಕೀಲರು ಆರೋಪಿಸಿದ್ದರು. ಮೂರು ವಾರಗಳ ನಂತರ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಳ್ಳುವುದಾಗಿ ತಿಳಿಸಿದ ಪೀಠ, ಮುಳ್ಳುಬೇಲಿ ತೆರವಿಗೆ ಕೈಗೊಂಡ ಕ್ರಮಗಳ ಬಗ್ಗೆ ಸಮಗ್ರ ವರದಿ ಸಲ್ಲಿಸುವಂತೆ ರಾಜ್ಯ ಸರಕಾರಕ್ಕೆ ಆದೇಶಿಸಿದೆ.

ಅಧಿಕಾರಿಗಳೇನೋ ಸುಪ್ರೀಂ ಕೋರ್ಟ್‌ ಆದೇಶ ಪಾಲಿಸುತ್ತಾರೆ, ಅದು ಅನಿವಾರ್ಯ ಕೂಡ. ಆದರೆ, ಕೊಡಗಿನ ಜನತೆಯ ಅಹವಾಲನ್ನು ಯಾರೂ ಆಲಿಸುತ್ತಿಲ್ಲ . ಇವರ ಪರವಾಗಿ ವಾದ ಮಾಡುವುದಕ್ಕೆ ಅಥವಾ ಗ್ರಾಮಸ್ಥರ ಅಹವಾಲು ಆಲಿಸುವುದಕ್ಕೆ ಸುಪ್ರೀಂ ಕೋರ್ಟಿನಲ್ಲಿ ಅವಕಾಶ ಸಿಕ್ಕಿಲ್ಲ. ಇದಕ್ಕೆ ಮಾಹಿತಿಯ ಕೊರತೆಯೇ ಕಾರಣವಾಗಿದೆ.

ಕೊಡಗಿನಲ್ಲಿ ಇತ್ತೀಚೆಗೆ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಕಳೆದ 5 ವರ್ಷಗಳಲ್ಲಿ ಜಿಲ್ಲೆಯಲ್ಲಿ ಪ್ರಾಣ ಕಳೆದುಕೊಂಡವರ ಸಂಖ್ಯೆ 30ನ್ನು ದಾಟಿದೆ. ಸುಪ್ರೀಂ ಕೋರ್ಟ್‌ ಆದೇಶದ ಕುರಿತು ಮಾತನಾಡಿದ ಸಿದ್ದಾಪುರ ಸಮೀಪದ ಮಾಲ್ದಾರೆ ಕಾಫಿ ಬೆಳೆಗಾರ ಎನ್ ಬೆಳ್ಳಿಯಪ್ಪ, "ಮೊದಲಿನಿಂದಲೂ ಕಾಡಾನೆಗಳ ಹಾವಳಿ ಇದ್ದು ಮುಳ್ಳುಬೇಲಿಯ ಕಾರಣದಿಂದ ಒಂದಷ್ಟು ಹಾವಳಿ ಕಡಿಮೆ ಆಗಿತ್ತು. ಗ್ರಾಮಸ್ಥರ ಒತ್ತಾಯದ ಮೇರೆಗೇ ಮುಳ್ಳುಬೇಲಿ ಅಳವಡಿಸಲಾಗಿತ್ತು. ಇದೀಗ ಮುಳ್ಳುಬೇಲಿಯನ್ನು ತೆರವುಗೊಳಿಸಿದರೆ ಕಾಡಾನೆಗಳು ಊರಿಗೆ ನುಗ್ಗುವುದಕ್ಕೆ ಯಾವುದೇ ಅಡೆತಡೆ ಇರುವುದಿಲ್ಲ,” ಎನ್ನುತ್ತಾರೆ. ಮುಳ್ಳುಬೇಲಿಗೆ ಪರ್ಯಾಯವಾಗಿ ಅರಣ್ಯ ಇಲಾಖೆ ಇತರ ಪರಿಣಾಮಕಾರಿ ತಡೆಬೇಲಿ ಅಳವಡಿಸಬೇಕು ಎಂದೂ ಅವರು ಆಗ್ರಹಿಸಿದರು.

"ಈ ವರ್ಷ ಮಹಾಮಳೆಯಿಂದ ಬೆಳೆಯೆಲ್ಲವೂ ಬಹುತೇಕ ನಾಶವಾಗಿದೆ. ಕಾಡಾನೆಗಳ ಕಾಟ ಅಧಿಕವಾದರೆ ಅಳಿದುಳಿದಿರುವ ಬೆಳೆ ಕೂಡ ನಾಶವಾಗುತ್ತದೆ,” ಎನ್ನುತ್ತಾರೆ ಸೋಮವಾರಪೇಟೆ ತಾಲೂಕಿನ ಯಡವಾರೆಯ ಕಾಫಿ ಬೆಳೆಗಾರ ಎಂ ಎಲ್ ನಾಗೇಶ್.

ಅರಣ್ಯ ಇಲಾಖೆ ಅರಣ್ಯದೊಳಗೆ ಮೇವು ನೀಡುವ ಮರಗಳನ್ನು ಬೆಳೆಸಿದರೆ ಕಾಡಾನೆಗಳ ಹಾವಳಿ ಕಡಿಮೆ ಆಗುತ್ತದೆ. ಆದರೆ, ಮೇವು ಬೆಳೆಸಲು ವರ್ಷಗಳೇ ಬೇಕಾಗುತ್ತವೆ. ಈಗ ತಮಿಳುನಾಡು, ಜಾರ್ಖಂಡ್, ಒಡಿಶಾ ರಾಜ್ಯಗಳಲ್ಲಿ ಕಾಡಾನೆಗಳ ಹಾವಳಿ ತಡೆಗೆ ಅರಣ್ಯದ ಸುತ್ತಲೂ ರೈಲುಹಳಿಗಳನ್ನು ಕಾಂಕ್ರೀಟ್ ಹಾಕಿ ನಿರ್ಮಿಸಲಾಗುತ್ತಿದೆ. ಇದು ಪರಿಣಾಮಕಾರಿ ಕೂಡ. ಏಕೆಂದರೆ ಆನೆಗಳು ಇದನ್ನು ದಾಟಿ ಒಳಬರಲು ಸಾಧ್ಯವಾಗುವುದಿಲ್ಲ. ಕೊಡಗಿನಲ್ಲೂ ಇದೇ ರೀತಿಯ ತಡೆಬೇಲಿ ನಿರ್ಮಿಸಿಕೊಡಬೇಕು ಎಂಬುದು ರೈತರ ಆಗ್ರಹ.

ಇದನ್ನೂ ಓದಿ : ರೈತರ ಆಕ್ರೋಶಕ್ಕೆ ಅಧಿಕಾರಿಗಳು ತತ್ತರ; ಕಾಡಾನೆ ಸೆರೆಗೆ ಮುಖ್ಯಮಂತ್ರಿ ಜತೆ ಚರ್ಚೆ

ಈ ಕುರಿತು ಮಾತನಾಡಿದ ಮಡಿಕೇರಿಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ ಮಂಜುನಾಥ್, “ಹಿರಿಯ ಅಧಿಕಾರಿಗಳ ಆದೇಶದಂತೆ ತಂತಿಬೇಲಿ ತೆರವು ಕಾರ್ಯಾಚರಣೆ ಮಾಡಲಾಗುತ್ತಿದ್ದು, ಈ ಕುರಿತು ಮೇಲಿನವರಿಗೆ ಮಾಹಿತಿ ಕಳಿಸಲಾಗಿದೆ. ಕಾಡಾನೆಗಳ ಹಾವಳಿ ತಡೆಗಟ್ಟುವ ಪರ್ಯಾಯ ಕ್ರಮದ ಬಗ್ಗೆ ಪ್ರಶ್ನಿಸಿದಾಗ ಕಾಡಾನೆಗಳು ಊರಿನೊಳಗೆ ಬರದಂತೆ ತಡೆಯಲು ಕಾವಲು ಹೆಚ್ಚಿಸಲಾಗುವುದು,” ಎಂದರು.

ತಂತಿಬೇಲಿ ತೆರವಿನಿಂದ ಕೊಡಗಿನ ಬೆಳೆಗಾರರು ಆತಂಕಗೊಂಡಿದ್ದು, ರಾಜ್ಯ ಸರ್ಕಾರ ಕೂಡಲೇ ಪರ್ಯಾಯ ತಡೆಬೇಲಿ ನಿರ್ಮಿಸಬೇಕಿದೆ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More