ಕಣ್ಣೆದುರೇ ತೋಟ, ಮನೆ ಕೊಚ್ಚಿಹೋದ ನಂತರ ಬೀದಿಗೆ ಬಂತು ಬದುಕು

ಅಂಗಡಿಯನ್ನು ಕಳೆದುಕೊಂಡ ದುಃಖದಲ್ಲಿದ್ದ ಮರುದಿನವೇ ಇವರ ಮನೆ, ತೋಟ ನೀರಿನಲ್ಲಿ ಸಂಪೂರ್ಣ ಕೊಚ್ಚಿಹೋಗಿದೆ. ಬಾಡಿಗೆ ಮನೆ ಕೇಳಿದರೆ ೮ರಿಂದ ೧೦ ಸಾವಿರ ಹೇಳುತ್ತಾರೆ. ಆದಾಯದ ಮೂಲಗಳೇ ಕಳೆದುಕೊಂಡ ಇಗ್ಗೋಡ್ಲು ಗ್ರಾಮದ ಇವರಿಗೆ ಮುಂದೇನು ಎಂಬುದೇ ತೋಚುತ್ತಿಲ್ಲ

ಇಗ್ಗೋಡ್ಲು ಗ್ರಾಮದಲ್ಲಿದ್ದ ಮೆದುರ್ ಕುಮಾರ್ ಅವರ ಮನೆಯ ಜಾಗ
ಮಡಿಕೇರಿಯಲ್ಲಿದ್ದ ಮಗ ಡೆನಿಲ್ ಅವರ ಅಂಗಡಿಯ ಸ್ಥಿತಿ

ನೆಮ್ಮದಿಯ ಜೀವನ ಸಾಗಿಸುತ್ತಿದ್ದ ಕೊಡಗಿನ ಇಗ್ಗೋಡ್ಲು ಗ್ರಾಮದ ಮೆದುರ ಕುಮಾರ್ ಬದುಕು ಮಹಾಮಳೆಯ ಆರ್ಭಟಕ್ಕೆ ಅಕ್ಷರಶಃ ಬೀದಿಪಾಲಾಗಿದೆ. ಮನೆ, ತೋಟ, ಗದ್ದೆ, ಅಂಗಡಿ ಎಲ್ಲವನ್ನೂ ಕಳೆದುಕೊಂಡ ಅವರೀಗ ಅಸಹಾಯಕರಾಗಿದ್ದಾರೆ.

“ಆ.೧೮ರಂದು ಬೆಳಗ್ಗೆ ಎಂದೂ ನೋಡದ ಭೀಕರ ಘಟನೆಯನ್ನು ನೋಡಿದೆ. ಮಣ್ಣಿನ ರಾಶಿಯೇ ಮನೆಯ ಹತ್ತಿರ ಬರುತ್ತಿತ್ತು. ಭಯಗೊಂಡು ಓಡಿದ ಕ್ಷಣಮಾತ್ರದಲ್ಲಿ ಮಣ್ಣಿನಡಿ ಮನೆ ಸಿಲುಕಿಕೊಂಡಿತು. ಹತ್ತಾರು ಎಕರೆ ತೋಟ, ಅಂಗಡಿ ಎಲ್ಲವೂ ಕೊಚ್ಚಿಕೊಂಡುಹೋಯಿತು. ಕಾಫಿ, ಕರಿಮೆಣಸು, ಬಾಳೆ ಎಲ್ಲವೂ ನೆಲಕಚ್ಚಿವೆ,” ಎಂದು ಘಟನೆಯನ್ನು ನೆನಪಿಸಿಕೊಳ್ಳುತ್ತಾರೆ, ಸೋಮವಾರಪೇಟೆ ತಾಲೂಕಿನ ಮಾದಪುರ ಸಮೀಪದಲ್ಲಿ ವಾಸವಿದ್ದ ಕುಮಾರ್.

“ಹೆಂಡತಿಯನ್ನು ಕಳೆದುಕೊಂಡ ನನಗೆ ಒಬ್ಬ ಮಗಳು ಹಾಗೂ ಮಗ ಇದ್ದಾನೆ. ಇಬ್ಬರಿಗೂ ಮದುವೆ ಮಾಡಿದ್ದೇನೆ. ಇನ್ನು ಇವರ ವಿದ್ಯಾಭ್ಯಾಸ, ಮದುವೆ, ಮನೆ, ಕೃಷಿಗೆ ಬ್ಯಾಂಕಿನಲ್ಲಿ ಲಕ್ಷಾಂತರ ಹಣ ಸಾಲ ಮಾಡಿಕೊಂಡಿದ್ದೇನೆ. ಕೃಷಿಯಿಂದ ಬಂದ ಲಾಭ ಹಾಗೂ ಮಗನ ಅಂಗಡಿಯಿಂದ ಬಂದ ಹಣದಿಂದಲೇ ಸಾಲ ತೀರಿಸಿಕೊಳ್ಳುತ್ತಿದ್ದೆವು. ಇನ್ನೆರಡು ವರ್ಷದಲ್ಲಿ ಸಾಲ ಕೂಡ ತೀರಿಸಿಕೊಳ್ಳುವ ವಿಶ್ವಾಸ ನಮ್ಮಲ್ಲಿತ್ತು. ಇದೀಗ ನನ್ನ ೬೦ ವರ್ಷದ ಜೀವನದಲ್ಲಿ ಮಕ್ಕಳ ಭವಿಷ್ಯತ್ತಿಗಾಗಿ ಯಾವುದನ್ನೂ ಉಳಿಸಿಕೊಳ್ಳಲಾಗದ ಸ್ಥಿತಿ ಎದುರಾಗಿದೆ,” ಎಂದು ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ : ಕೊಡಗು ಪ್ರವಾಹ | ಮಡಿಕೇರಿ ನಗರದಲ್ಲಿ ದುಬಾರಿಯಾಗಿರುವ ಬಾಡಿಗೆ ಮನೆ
ಅಂಗಡಿ ಕಳೆದುಕೊಂಡ ದುಃಖದಲ್ಲಿದ್ದ ಮರುದಿನವೇ ಮನೆ, ತೋಟ ನೀರಿನಲ್ಲಿ ಕೊಚ್ಚಿಹೋಗಿದೆ. ಅಪ್ಪ ಆಗಾಗ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದರು. ಇದೀಗ ವಾಸಕ್ಕೆ ಬಾಡಿಗೆ ಮನೆ ಕೇಳಿದರೆ ೮ರಿಂದ ೧೦ ಸಾವಿರ ಕೇಳುತ್ತಾರೆ. ಆದಾಯದ ಮೂಲಗಳೇ ಕಳೆದುಕೊಂಡ ನನಗೆ ದಿಕ್ಕು ತೋಚುತ್ತಿಲ್ಲ.
ಮೆದುರ ಡೆನಿಲ್, ಕುಮಾರ್‌ರವರ ಮಗ

“ಮಗ ಡೆನಿಲ್‌ಗೆ ಮಡಿಕೇರಿ ಖಾಸಗಿ ಬಸ್ ನಿಲ್ದಾಣದ ಬಳಿ ವರ್ಷದ ಹಿಂದೆ ಮೊಬೈಲ್ ಅಂಗಡಿಯೊಂದನ್ನು ತೆರೆದಿದ್ದ. ಇತ್ತೀಚೆಗೆ ಮದುವೆ ಕೂಡ ಮಾಡಿಕೊಂಡಿದ್ದ. ಆ.೧೭ರಂದು ಸುರಿದ ಮಳೆಗೆ ಅಂಗಡಿಗೂ ಹಾನಿಯಾಗಿವೆ. ಸದ್ಯ ಮಗ ಮತ್ತು ನಾನು ಬಿಳಿಗೇರಿಯಲ್ಲಿರುವ ಸೊಸೆಯ ಮನೆಯಲ್ಲಿ ವಾಸವಾಗಿದ್ದೇವೆ. ನಾನು ಕಳೆದ ೫ ವರ್ಷದಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ವೈದ್ಯಕೀಯ ಸೇವೆಗೆ ಖರ್ಚು ಭರಿಸಲು ಸಾಧ್ಯವಾಗುತ್ತಿಲ್ಲ,” ಎಂದು ಅಲವತ್ತುಕೊಂಡರು. ಎಲ್ಲವನ್ನೂ ಕಳೆದುಕೊಂಡ ಈ ಕುಟುಂಬವೀಗ ಸರ್ಕಾರದ ನೆರವು ಎದುರುನೋಡುತ್ತಿದೆ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More