ವಿಡಿಯೋ ಸ್ಟೋರಿ | ಅಕ್ಕಿಗುಂದದ ಜನರಿಗೆ ಅನ್ನಭಾಗ್ಯದ ಬದಲು ಗೊಬ್ಬರ ಭಾಗ್ಯ?

ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿರುವ ಅನ್ನಭಾಗ್ಯ ಅಕ್ಕಿಯಲ್ಲಿ ಕಲಬೆರಕೆಯ ಸಂಶಯ ಜನರಿಗೆ ತಲೆನೋವಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿದ ಅಧಿಕಾರಿಗಳು, ಅಕ್ಕಿಯಲ್ಲಿ ರಸಗೊಬ್ಬರ ಹೋಲುವ ಅಂಶ ಮಿಶ್ರಣವಾಗಿರುವ ಕುರಿತು ತನಿಖೆಗೆ ಆದೇಶಿಸಿದ್ದಾರೆ

ಬಡಜನರ ಹಸಿವು ನೀಗಿಸುವ ಉದ್ದೇಶದಿಂದ ಜಾರಿಗೆ ಬಂದ ಅನ್ನಭಾಗ್ಯ ಯೋಜನೆಯಿಂದ ಪಡೆದ ಅಕ್ಕಿಯೇ ಜೀವ ತೆಗೆಯುವ ಮಟ್ಟಕ್ಕೆ ತಲುಪಬಹುದಾದ ದುರಂತವೊಂದು ಗದಗ ಜಿಲ್ಲೆಯಲ್ಲಿ ಕಂಡುಬಂದಿದೆ. ಅನ್ನಭಾಗ್ಯ ಯೋಜನೆ ಅಕ್ಕಿಯಲ್ಲಿ ರಸಗೊಬ್ಬರ ಹೋಲುವ ಅಂಶ ಮಿಶ್ರಣವಾಗಿದ್ದು, ಜನ ಆತಂಕಕ್ಕೆ ಒಳಗಾಗಿದ್ದಾರೆ.

ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಅಕ್ಕಿಗುಂದ ತಾಂಡಾದ ನ್ಯಾಯಬೆಲೆ ಅಂಗಡಿಯಿಂದ ನೀಡಲಾದ ಅನ್ನಭಾಗ್ಯ ಅಕ್ಕಿಯಲ್ಲಿ ಯೂರಿಯಾ ರಸಗೊಬ್ಬರ ಹೋಲುವ ಅಂಶ ಮಿಶ್ರಣವಾಗಿರುವುದು ಬೆಳಕಿಗೆ ಬಂದಿದೆ. ಇದು ಸಹಜವಾಗಿ ಸ್ಥಳೀಯರ ಆಕ್ರೋಶಕ್ಕೂ ಕಾರಣವಾಗಿದೆ.

ಸರ್ಕಾರ ನಮ್ಮಂಥ ಬಡುವರಿಗೆ ಅಕ್ಕಿ ಕೊಡತೈತ್ರಿ. ಅದರಿಂದ ನಮಗೆ ಭಾಳ್ ಒಳ್ಳೆದಾಗೈತಿ. ಆದ್ರೆ ಈ ಬಾರಿ ಅಕ್ಕಿಯೊಳಗ ಗೊಬ್ಬರದ ಹರಳು ಕಲಬೆರಕಿ ಮಾಡ್ಯಾರ. ಈ ಅಕ್ಕಿ ಊಟ ಮಾಡಿ ಭಾಳ್ ಮಂದಿಗೆ ಹೊಟ್ಟಿ ನೋವಾಗಾಕತ್ತೈತ್ರಿ.
ಕಮಲವ್ವ, ಸ್ಥಳೀಯ ಮಹಿಳೆ
ಇದನ್ನೂ ಓದಿ : ಹೆಸರು, ಕಡಲೆಗೆ ಬೆಂಬಲ ಬೆಲೆ ನೀಡಿ ಖರೀದಿಸಲು ಧಾರವಾಡ, ಗದಗ ರೈತರ ಆಗ್ರಹ

ಈ ನ್ಯಾಯಬೆಲೆ ಅಂಗಡಿಯಲ್ಲಿ 396 ಫಲಾನುಭವಿಗಳು ಪಡಿತರ ಕಾರ್ಡ್ ಹೊಂದಿದ್ದಾರೆ. ಈ ಬಾರಿ 105 ಕ್ವಿಂಟಲ್ ಅಕ್ಕಿ ವಿತರಣೆ ಮಾಡಲಾಗಿದೆ. ವಿತರಿಸಿದ ಅಕ್ಕಿಯಿಂದ ಮಾಡಿದ ಅನ್ನ ಊಟ ಮಾಡಿದ ಅಕ್ಕಿಗುಂದ ತಾಂಡದ ಜನರಿಗೆ ವಾಂತಿ, ಬೇಧಿ ಶುರುವಾಗಿದೆ. ಈ ವಿಚಾರ ತಿಳಿದ ಗ್ರಾಮದ ಮಹಿಳೆ ಕಮಲವ್ವ ಎಂಬುವರು ಅಕ್ಕಿ ಪರೀಕ್ಷಿಸಿದ್ದಾರೆ. ಅದರಲ್ಲಿ ರಸಗೊಬ್ಬರದ ರೀತಿಯ ಅಂಶ ಪತ್ತೆಯಾಗಿದೆ. ಬೆಳೆಗೆ ಹಾಕುವ ಗೊಬ್ಬರ ಎಂಬ ಶಂಕೆ ಮೂಡಿದ ನಂತರ ಕಮಲವ್ವ ಈ ವಿಚಾರವನ್ನು ಇತರ ಗ್ರಾಮಸ್ಥರ ಜೊತೆಗೆ ಚರ್ಚಿಸಿದ್ದಾರೆ. ಇತರರು ನ್ಯಾಯಬೆಲೆ ಅಂಗಡಿಯಲ್ಲಿ ಪಡೆದುಕೊಂಡ ಅಕ್ಕಿಯಲ್ಲಿಯೂ ರಸಗೊಬ್ಬರದ ರೀತಿಯ ಅಂಶ ಇರುವುದು ತಿಳಿದುಬಂದಿದೆ. ಅಕ್ಕಿಯನ್ನು ಗಾಳಿಯಲ್ಲಿ ತೆರೆದಿಟ್ಟರೆ ಅರ್ಧಗಂಟೆಯಲ್ಲಿ ಗೊಬ್ಬರ ಅಂಶ ಕರಗುತ್ತದೆ. ನೀರಿನಲ್ಲಿ ಹಾಕಿದ 15 ರಿಂದ 20 ಸೆಕೆಂಡಿನಲ್ಲಿ ಗೊಬ್ಬರ ಅಂಶ ಕರಗಿದೆ.

ಅಕ್ಕಿಗುಂದ ಗ್ರಾಮದಲ್ಲಿ ಅಕ್ಕಿಯಲ್ಲಿ ಗೊಬ್ಬರದಂಥ ಅಂಶ ಪತ್ತೆಯಾಗಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಲಕ್ಷ್ಮೇಶ್ವರದ ಆಹಾರ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ವಿತರಿಸಿದ ಅಕ್ಕಿಯನ್ನು ಬೆಳಗಾವಿಯ ಆಹಾರ ಪರೀಕ್ಷಾ ಕೇಂದ್ರಕ್ಕೆ ಕಳಿಸಲಾಗುವುದು. ವರದಿ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು.
ಅಶೋಕ ಕಲಘಟಗಿ, ಆಹಾರ ಇಲಾಖೆ ಅಧಿಕಾರಿ

ರಸಗೊಬ್ಬರ ಮಿಶ್ರಣವಾಗಿದೆ ಎನ್ನಲಾದ ಎಲ್ಲ ಅಕ್ಕಿಮೂಟೆಗಳನ್ನೂ ಲಕ್ಷ್ಮೇಶ್ವರ ಉಗ್ರಾಣ ನಿಗಮದಿಂದ ವಿತರಣೆ ಮಾಡಲಾಗಿದೆ. ಅನ್ನಭಾಗ್ಯ ಅಕ್ಕಿಯಲ್ಲಿ ರಸಗೊಬ್ಬರ ಮಿಶ್ರಣ ಕಂಡುಬಂದಿರುವ ಬಗ್ಗೆ ಗಾಬರಿಯಾಗಿರುವ ಅಕ್ಕಿಗುಂದದ ಜನರಿಗೆ ಸಮಾಧಾನ ಹೇಳಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವ ಭರವಸೆಯನ್ನೂ ನೀಡಿದ್ದಾರೆ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More