ಸಂತ್ರಸ್ತರಿಂದ ಹಣ ವಾಪಸು ಪಡೆಯಲು ಯತ್ನಿಸಿದರೇ ಕೊಡಗು ಕರವೇ ನಾಯಕಿ?

ಕೊಡಗಿನ ಸಂತ್ರಸ್ತ ಕುಟುಂಬವೊಂದಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಹಣ ನೀಡಿ ಸಾಂತ್ವನ ಹೇಳಿತ್ತು. ನಂತರದಲ್ಲಿ, ಸೋಮವಾರಪೇಟೆ ಕರವೇ ಅಧ್ಯಕ್ಷೆ ಆ ಹಣವನ್ನು ಮರಳಿ ಪಡೆಯಲು ಯತ್ನಿಸಿರುವುದು ತಿಳಿದುಬಂದಿದೆ. ಈ ಸಂಬಂಧ ಸಂತ್ರಸ್ತ ದಂಪತಿ ದೂರು ದಾಖಲಿಸಿದ್ದಾರೆ

ಮಳೆ ಕಡಿಮೆ ಆಗಿರುವ ಹಿನ್ನೆಲೆಯಲ್ಲಿ ರಾಜ್ಯ ಮಟ್ಟದ ಸಂಘಟನೆಗಳ ಮುಖಂಡರು ಕೊಡಗಿನ ದುರಂತದ ಸ್ಥಳಗಳಿಗೇ ಭೇಟಿ ನೀಡಿ ನೆರವಿನ ಹಸ್ತ ಚಾಚಿ ಮಾನವೀಯತೆ ಮೆರೆದಿದ್ದಾರೆ. ಆದರೆ ಸೋಮವಾರಪೇಟೆಯಲ್ಲಿ ನಾಲ್ಕು ದಿನದ ಹಿಂದೆ ಅತ್ಯಂತ ಅಮಾನವೀಯ ಘಟನೆಯೊಂದು ನಡೆದ ಕುರಿತು ವರದಿಯಾಗಿದೆ.

ರಾಜ್ಯದೆಲ್ಲೆಡೆ ಶಾಖೆಗಳನ್ನು ಹೊಂದಿರುವ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾದ್ಯಕ್ಷ ಟಿ ಎ ನಾರಾಯಣ ಗೌಡ ಹಾಗೂ ಪಧಾಧಿಕಾರಿಗಳು, ಕೊಡಗು ಜಿಲ್ಲೆಗೆ ಭೇಟಿ ನೀಡಿ ದುರಂತಕ್ಕೀಡಾದ ಸ್ಥಳಗಳಲ್ಲಿ ಸಂತ್ರಸ್ಥರಿಗೆ ನೆರವನ್ನೂ ನೀಡಿದರು. ಅದೇ ರೀತಿ, ಮಾದಾಪುರ ಸಮೀಪದ ಇಗ್ಗೋಡ್ಲು ಗ್ರಾಮದಲ್ಲಿ ಮನೆ ಕಳೆದುಕೊಂಡಿದ್ದ ಡ್ಯಾನಿಷ್ ಎಂಬುವವರಿಗೆ ೬೦ ಸಾವಿರ ರುಪಾಯಿಗಳ ಪರಿಹಾರ ನೀಡಿ, ಸೋಮವಾರಪೇಟೆಯ ನಗರ ಪತ್ರಕರ್ತರ ಸಂಘದ ಭವನದಲ್ಲಿ ಸಂತ್ರಸ್ತರನ್ನು ಭೇಟಿ ಮಾಡಲು ಕಾರ್ಯಕ್ರಮ ಆಯೋಜಿಸಲಾಗಿತ್ತು. ಸೋಮವಾರಪೇಟೆ ತಾಲೂಕು ಘಟಕದ ಅದ್ಯಕ್ಷ ಕೆ ಎನ್ ದೀಪಕ್ ಅವರ ನೇತೃತ್ವದಲ್ಲಿ ಏರ್ಪಡಿಸಲಾಗಿದ್ದ ಈ ಸಭೆಯಲ್ಲಿ ಕರವೇ ಕಾರ್ಯಕರ್ತರೇ, ಮಸಗೋಡು ಎಂಬಲ್ಲಿ ಮನೆ ದುಸ್ಥಿತಿಯಲ್ಲಿರುವ ಸುಧೀರ್ ಮತ್ತು ಶೈಲಾ ಎಂಬ ದಲಿತ ದಂಪತಿಗಳನ್ನೂ ಕರೆತಂದಿದ್ದರು.

ಇದನ್ನೂ ಓದಿ : ಕೊಡಗು ಪ್ರವಾಹ | ಮಡಿಕೇರಿ ನಗರದಲ್ಲಿ ದುಬಾರಿಯಾಗಿರುವ ಬಾಡಿಗೆ ಮನೆ

ಕಾರ್ಯಕ್ರಮದಲ್ಲಿ ನಾರಾಯಣ ಗೌಡ ಅವರು ಕುವೆಂಪು ಅವರ ಸ್ಮರಣಾರ್ಥ ಜಿಲ್ಲೆಯ ೬ ಮಂದಿ ಸಂತ್ರಸ್ಥರಿಗೆ ‘ಕುವೆಂಪು ನಿವಾಸ’ದ ಹೆಸರಿನಲ್ಲಿ ತಲಾ ೫ ಲಕ್ಷ ರುಪಾಯಿ ವೆಚ್ಚದಲ್ಲಿ ಆರು ಮನೆಗಳನ್ನು ಕರವೇ ನಿರ್ಮಾಣ ಮಾಡಿಕೊಡುವದಾಗಿ ಘೋಷಿಸಿದರು. ನಂತರ ಸುಧೀರ್ ದಂಪತಿಗಳಿಗೆ ತಲಾ ೧೦ ಸಾವಿರ ರೂಪಾಯಿಗಳನ್ನು ಕವರ್‌ನಲ್ಲಿ ನೀಡಿದ ನಂತರ ಬೆಂಗಳೂರಿಗೆ ತೆರಳಿದ್ದರು.

ಅವರು ಅತ್ತ ತೆರಳಿದ್ದೇ ತಡ ಸೋಮವಾರಪೇಟೆ ತಾಲೂಕು ಘಟಕದ ಕರವೇ ಮಹಿಳಾ ಘಟಕದ ಅಧ್ಯಕ್ಷೆ ರೂಪಾ ಸುರೇಶ್ ಅವರು ದಲಿತ ಮಹಿಳೆ ಶೈಲಾ ಅವರನ್ನು, “ಎಷ್ಟು ಹಣ ಸಿಕ್ಕಿತು?” ಎಂದು ಕೇಳಿದ್ದಾರೆ. “ನನಗೂ ಮತ್ತು ಗಂಡನಿಗೂ ತಲಾ ಹತ್ತು ಸಾವಿರ ಮಾತ್ರ ಸಿಕ್ಕಿದೆ ಎಂದು ಹೇಳುತ್ತಿದ್ದಂತೆ ಕೆಂಡಮಂಡಲರಾದ ಅಧ್ಯಕ್ಷೆ ನನ್ನನ್ನು ಪತ್ರಿಕಾ ಭವನದ ಆವರಣದೊಳಗೆ ಕರೆದುಕೊಂಡು ಹೋಗಿ ಒಳಉಡುಪನ್ನೂ ಬಿಚ್ಚಿಸಿ ಹಣ ಎಲ್ಲಿ ಬಚ್ಚಿಟ್ಟಿರುವೆ ಹೇಳು ಎಂದು ಹುಡುಕಾಡಿದರು,” ಎಂದು ಶೈಲ ಅವರು ‘ದಿ ಸ್ಟೇಟ್‌’ಗೆ ವಿವರಿಸಿದರು.

ಈ ಕುರಿತು ಕರವೇ ಮಹಿಳಾ ಘಟಕದ ಅದ್ಯಕ್ಷೆ ರೂಪಾ ಅವರನ್ನು ಪ್ರಶ್ನಿಸಿದಾಗ ಅವರು ಆರೋಪವನ್ನು ನಿರಾಕರಿಸಿದರು. “ಇವರ ಬಳಿ ಇದ್ದ ಹಣವನ್ನು ಬ್ಯಾಂಕಿನಲ್ಲಿ ಜಂಟಿ ಖಾತೆಯಲ್ಲಿ ಠೇವಣಿ ಇಡಲು ಮೈ ಮುಟ್ಟಿ ಹುಡುಕಿದ್ದೇನೆ. ಆದರೆ ಬಟ್ಟೆ ಬಿಚ್ಚಿಸಿಲ್ಲ,” ಎಂದರು. ಈ ಘಟನೆ ನಡೆಯುವ ಸಂದರ್ಭದಲ್ಲಿ ಕೊಠಡಿಯ ಹೊರಗೇ ಇದ್ದ ಕೆ ಎನ್ ದೀಪಕ್ ಅವರನ್ನು ಪ್ರಶ್ನಿಸಿದಾಗ, “ಇವರು ಹಣವನ್ನು ಕುಡಿದು ಹಾಳು ಮಾಡುತ್ತಾರೆಂಬ ಹಿನ್ನೆಲೆಯಲ್ಲಿ ಹಣವನ್ನು ಜೋಪಾನ ಮಾಡಲು ಕೇಳಲಾಗಿದೆ. ಇದರಲ್ಲಿ ದುರುದ್ದೇಶ ಇಲ್ಲ,” ಎಂದು ಹೇಳಿದರು.

ಆದರೆ ಸಂತ್ರಸ್ತರು ಬೇರೆಯೇ ಆರೋಪ ಮಾಡಿದ್ದಾರೆ. ಮಾದಾಪುರದಲ್ಲಿ ಮನೆ ನಿರ್ಮಾಣಕ್ಕೆ ೬೦ ಸಾವಿರ ಹಣ ನೀಡಿದ್ದ ಗೌಡ ಅವರು, ಈ ದಂಪತಿಗೂ ೬೦ ಸಾವಿರ ನೀಡಿದ್ದಾರೆ ಎಂಬ ಗುಮಾನಿಯಿಂದ ಹಣವನ್ನು ಕಸಿದುಕೊಳ್ಳಲು ಅಧ್ಯಕ್ಷೆ ಅಮಾನವೀಯವಾಗಿ ವರ್ತಿಸಿದ್ದಾರೆ ಎಂದು ದಂಪತಿ ಅಭಿಪ್ರಾಯಪಡುತ್ತಾರೆ. ಸಂತ್ರಸ್ತ ದಂಪತಿಯನ್ನು ಮನೆಯಿಂದ ಕರೆದುಕೊಂಡು ಬರುವಾಗ ಸುರೇಶ್ ಅವರು, “ಮನೆಗೆ ಸಿಮೆಂಟ್ ಕೊಳ್ಳಲು ಹಣ ಕೊಡಿಸುತ್ತೇನೆ,” ಎಂದು ಹೇಳಿ ಕರೆದುಕೊಂಡು ಬಂದಿದ್ದರು ಎಂದು ಸುಧೀರ್ ಹೇಳಿದರು. ನಂತರ ಹಣ ಸಿಗದಾಗ ಕೊಲೆ ಬೆದರಿಕೆಯನ್ನೂ ಒಡ್ಡಿದರು ಎಂದು ಆರೋಪಿಸಿದರು.

ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರಿನ ಪ್ರತಿ
ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರಿನ ಪ್ರತಿ
ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರಿನ ಪ್ರತಿ

“ಹಣದ ಬದಲು ಚೆಕ್ ನೀಡಬಹುದಿತ್ತು. ಇಲ್ಲವೇ ಕವರ್ ಮಾತ್ರ ನೀಡಿ ಹಣವನ್ನು ಬ್ಯಾಂಕಿಗೇ ಹಾಕಬಹುದಿತ್ತು. ಅದರೆ ಇದೆರಡನ್ನೂ ಮಾಡದೇ ಹಣ ನೀಡಿ ನಂತರ ಕಿತ್ತುಕೊಳ್ಳೋದಾದರೆ ಯಾಕೆ ಹಣ ಕೊಡಿಸಬೇಕಿತ್ತು?” ಎಂದು ಸಂತ್ರಸ್ತ ಮಹಿಳೆ ಶೈಲಾ ನೋವಿನಿಂದ ನುಡಿದರು.

ಸುಧೀರ್ ಹಾಗೂ ಶೈಲಾ ದಂಪತಿ ಸೋಮವಾರಪೇಟೆ ಪೋಲೀಸ್ ಠಾಣೆಯಲ್ಲಿ ತಮಗಾದ ದೌರ್ಜನ್ಯದ ಕುರಿತು ದೂರು ನೀಡಿದ ಮೇರೆಗೆ ಶನಿವಾರ ಪೋಲೀಸರು ಕರವೇ ತಾಲೂಕು ಅಧ್ಯಕ್ಷ ಕೆ ಎನ್ ದೀಪಕ್, ಮಹಿಳಾ ಘಟಕದ ಅಧ್ಯಕ್ಷೆ ರೂಪಾ ಸುರೇಶ್ ಮತ್ತು ಪತಿ ಸುರೇಶ್ ಇವರ ವಿರುದ್ಧ ಜಾತಿ ನಿಂದನೆ ಮತ್ತು ದೌರ್ಜನ್ಯ ಕಾಯ್ದೆಯಡಿಯಲ್ಲಿ ಮೊಕದ್ದಮೆ ದಾಖಲು ಮಾಡಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.

ಕಳೆದ ಒಂದು ವಾರದಿಂದ ಕೊಡಗಿನಲ್ಲಿ ಮಳೆ ಕಡಿಮೆ ಆಗಿದ್ದು ಬಿಸಿಲು ಚುರುಕಾಗಿದೆ. ಅನೇಕ ಗ್ರಾಮಗಳಿಗೆ ಇಂದಿಗೂ ರಸ್ತೆ ಸಂಪರ್ಕ ಕಲ್ಪಿಸಲಾಗಿಲ್ಲ. ಏಕೆಂದರೆ, ರಸ್ತೆಯಲ್ಲೇ ನೂರಾರು ಅಡಿ ಆಳ ಮತ್ತು ನೂರಾರು ಅಡಿ ಅಗಲದ ಪ್ರಪಾತಗಳೇ ಸೃಷ್ಟಿಯಾಗಿವೆ. ಸೈನಿಕರು ಮತ್ತು ಸ್ಥಳೀಯ ಅಧಿಕಾರಿ ನೌಕರರು ಮರಳು ಮೂಟೆಗಳನ್ನಿಡುವ ಮೂಲಕ ರಸ್ತೆ ಸಂಪರ್ಕ ಕಲ್ಪಿಸಲು ಶ್ರಮಿಸುತ್ತಿದ್ದಾರೆ. ಈ ನಡುವೆ ಅನೇಕ ಸಂಘಟನೆ, ಸಂಘಸಂಸ್ಥೆಗಳು ಜಿಲ್ಲೆಯ ನಿರಾಶ್ರಿತ ಕೇಂದ್ರಗಳಿಗೆ ಭೇಟಿ ನೀಡಿ ನೊಂದವರಿಗೆ ನೆರವು ನೀಡುತ್ತಿವೆ. ರಾಜ್ಯದ ಅನೇಕ ಭಾಗಗಳಲ್ಲಿ ಸಂತ್ರಸ್ಥರಿಗಾಗಿ ನಿಧಿ ಸಂಗ್ರಹವೂ ನಡೆದಿದೆ. ಆಗಸ್ಟ್ ತಿಂಗಳ ೨೦ರಂದು ಜಿಲ್ಲೆಯಲ್ಲಿ ಒಟ್ಟು ೬೫೦೦ರಷ್ಟು ಸಂತ್ರಸ್ತರು ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದರೆ, ಸೆಪ್ಟೆಂಬರ್ ೧೦ಕ್ಕೆ ಸಂತ್ರಸ್ಥರ ಸಂಖ್ಯೆ ೧೨೦೦ಕ್ಕೆ ಇಳಿಕೆ ಆಗಿದೆ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More