ಕುಣಿಗಲ್‌ ತಾಲೂಕಿನಲ್ಲಿ ರೋಗದಿಂದ ಸತ್ತ ಗೋವುಗಳ ಅಸಲಿ ಸಂಖ್ಯೆ ಎಷ್ಟು?

ಕುಣಿಗಲ್‌ನ ಮೋದೂರು ಮತ್ತು ಹೊಸೂರು ಗ್ರಾಮಗಳಲ್ಲಿ ಕೆಟರಾಲ್ ರೋಗದಿಂದ ಸಾವನ್ನಪ್ಪಿರುವ ಗೋವುಗಳ ಬಗ್ಗೆ ರೈತರು ಮತ್ತು ಅಧಿಕಾರಿಗಳು ಹೇಳುವ ಅಂಕಿ-ಅಂಶಗಳಿಗೆ ಅಜಗಜಾಂತರ ವ್ಯತ್ಯಾಸವಿದೆ. ಅಧಿಕಾರಿಗಳು 36ನ್ನು ಮೀರುವುದಿಲ್ಲ, ರೈತರು 400ರಿಂದ ಕೆಳಗಿಳಿಯುವುದಿಲ್ಲ!

ಕಳೆದ ಐದು ವರ್ಷಗಳಲ್ಲಿ ಕೆಟರಾಲ್ ರೋಗದಿಂದ ಕೇವಲ ೩೬ ಹಸುಗಳು ಸಾವನ್ನಪ್ಪಿವೆ ಎಂಬುದನ್ನು ಪಶುವೈದ್ಯಾಧಿಕಾರಿಗಳ ವರದಿ ತಿಳಿಸುತ್ತದೆ. ಆದರೆ, ಆರೇಳು ವರ್ಷಗಳಿಂದ ಕೆಟರಾಲ್ ರೋಗ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಕೆಲವು ಗ್ರಾಮಗಳಲ್ಲಿದೆ ಎಂದು ಒಪ್ಪಿಕೊಳ್ಳುವ ಪಶುವೈದ್ಯರು, ಹಸುಗಳ ಸಾವಿನ ಸಂಖ್ಯೆ ಹೆಚ್ಚಾಗಿದೆ ಎಂದು ಹೇಳಲು ಜಿಗಟು ಸ್ವಭಾವ ತೋರುತ್ತಾರೆ. ಪಶುವೈದ್ಯರ ವರದಿಯ ಬಗ್ಗೆ ರೈತರ ಗಮನ ಸೆಳೆದರೆ ಅವರ ಬೈಗುಳ, ಆಕ್ರೋಶಕ್ಕೆ ಕಡಿವಾಣ ಹಾಕಲು ಸಾಧ್ಯವಿಲ್ಲ; ಹಾಗಿರುತ್ತದೆ ಹಸು ಕಳೆದುಕೊಂಡವರ ಪರಿಸ್ಥಿತಿ.

ಹೌದು, ಕುಣಿಗಲ್‌ನ ಮೋದೂರು ಮತ್ತು ಹೊಸೂರು ಗ್ರಾಮಗಳಲ್ಲಿ ಕೆಟರಾಲ್ ಅಂಟುರೋಗ ಬಂದು ಹಸುಗಳು ಸಾವನ್ನಪ್ಪಿರುವುದು ಸತ್ಯ. ಆದರೆ, ರೈತರು ಮತ್ತು ಅಧಿಕಾರಿಗಳು ಹೇಳುವ ಅಂಕಿ-ಅಂಶಗಳಿಗೆ ಅಜಗಜಾಂತರ ವ್ಯತ್ಯಾಸವಿದೆ. ಅಧಿಕಾರಿಗಳ ಅಂಕಿ-ಅಂಶಗಳು ೩೬ ಮೀರುವುದಿಲ್ಲ. ರೈತರು ೪೦೦ರಿಂದ ಕೆಳಗಿಳಿಯುವುದಿಲ್ಲ. ಹಾಗಾದರೆ ಯಾರು ಸುಳ್ಳು ಹೇಳುತ್ತಿದ್ದಾರೆ, ಯಾರು ಸತ್ಯ ಹೇಳುತ್ತಿದ್ದಾರೆ ಎಂದು ನೋಡಿದರೆ, ಅಧಿಕಾರಿಗಳು ನೀಡುವ ಅಂಕಿಗಳು ಅನುಮಾನಕ್ಕೆ ಎಡೆಮಾಡಿಕೊಡುತ್ತವೆ. ಹಸುಗಳಿಗೆ ರೋಗ ಅಂಟಿಕೊಂಡಿರುವುದು ಹೇಗೆಂಬ ಬಗ್ಗೆಯೂ ಪಶುವೈದ್ಯರಲ್ಲಿ ಉತ್ತರವಿಲ್ಲ.

ಮೋದೋರು, ಹೊಸೂರು ಗ್ರಾಮಗಳಿಗೆ ತೆರಳಿ ಸತ್ತ ಹಸುಗಳ ಮರಣೋತ್ತರ ಪರೀಕ್ಷೆ ನಡೆಸಿರುವ ಪಶುವೈದ್ಯ ವಿನಯ್, "ಕೆಟರಾಲ್ ಅಂಟುಜಾಡ್ಯ. ಎಂಸಿಬಿ ಅಂತ ಈ ರೋಗವನ್ನು ಕರೆಯಲಾಗುತ್ತದೆ. ಕೆಟರಾಲ್ ರೋಗ ಕಳೆದ ಆರೇಳು ವರ್ಷಗಳಿಂದ ಇರುವುದು ಸತ್ಯ. ಇದುವರೆಗೆ ನಾನು ಮರಣೋತ್ತರ ಪರೀಕ್ಷೆ ನಡೆಸಿರುವ ಸತ್ತ ಹಸುಗಳ ಸಂಖ್ಯೆ ಮೂವತ್ತಾರು. ಆರೇಳು ವರ್ಷಗಳಿಂದಲೂ ದನಗಳಿಗೆ ರೋಗ ಬರುವುದು, ಸಾವನ್ನಪ್ಪುವುದು ನಡೆಯುತ್ತಲೇ ಇತ್ತು. ನಾವು ಕೂಡ ಗ್ರಾಮಗಳಿಗೆ ಭೇಟಿ ನೀಡಿ ಹಸುಗಳು, ಕರುಗಳು ಸೇರಿದಂತೆ ಎಲ್ಲ ರಾಸುಗಳಿಗೆ ಚಿಕಿತ್ಸೆ ನೀಡಿ ಬರುತ್ತಿದ್ದೆವು. ಕೊನೆಗೆ ೨೦೧೬ರಲ್ಲಿ ರಾಜ್ಯ ಮಟ್ಟದ ಅಧಿಕಾರಿಗಳನ್ನು ಕರೆಸಿ ಸತ್ತ ಹಸುಗಳ ಮಾದರಿಯನ್ನು ತೆಗೆದುಕೊಂಡು ಲ್ಯಾಬೊರೇಟರಿಗೆ ಕಳಿಸಿದೆವು. ಆಗ ಗೊತ್ತಾಗಿದ್ದೇ ಈ ಕೆಟರಾಲ್ ವೈರಸ್,” ಎಂದರು.

“ರೋಗ ನಿಯಂತ್ರಣಕ್ಕೆ ಆಗಿನಿಂದಲೂ ಪ್ರಯತ್ನ ಮಾಡುತ್ತಲೇ ಇದ್ದೇವೆ. ಚಿಕಿತ್ಸೆಯನ್ನು ಕೊಟ್ಟು ಹೋಗುತ್ತಿದ್ದೇವೆ. ಆದರೂ ಹಸುಗಳ ಸಾವು ನಿಂತಿಲ್ಲ. ಕೆಲವು ಸೀಮೆ ಹಸುಗಳಿಗೆ ವಿಮೆ ಮಾಡಿಸಲಾಗಿತ್ತು. ಅಂಥವುಗಳ ಮಾಲಿಕರಿಗೆ ಪರಿಹಾರ ದೊರೆತಿದೆ. ಅದು ಕೇವಲ ೧೫ ರೈತರಿಗೆ ಮಾತ್ರ ವಿಮೆ ಹಣ ದೊರೆತಿರಬಹುದು. ಅದು ಬಿಟ್ಟರೆ, ಬಹುತೇಕ ರೈತರಿಗೆ ಪರಿಹಾರ ಹಣ ಸಿಕ್ಕಿಲ್ಲ. ನಾಟಿ ಹಸುಗಳಿಗೆ ವಿಮೆ ಮಾಡಿಸಿಲ್ಲ. ಜೊತೆಗೆ ಹೊಸದಾಗಿ ತಂದ ಹಸುಗಳಿಗೂ ವಿಮೆ ಮಾಡಿಸಿಲ್ಲ. ಇದರಿಂದಾಗಿ ಸ್ವಲ್ಪ ಸಮಸ್ಯೆಯಾಗಿರುವುದು ನಿಜ. ಸತ್ತ ಸಣ್ಣ ಕರುಗಳಿಗೂ ಹಣ ಬಂದಿಲ್ಲ. ಕಳೆದ ಐದು ವರ್ಷಗಳಲ್ಲಿ ನಮ್ಮ ಗಮನಕ್ಕೆ ಬರದೆ ನೂರು ಹಸುಗಳು ಸತ್ತಿರಬಹುದು. ಅದರ ಮೇಲೆ ಹೇಳಲು ಬರುವುದಿಲ್ಲ,” ಎನ್ನುತ್ತಾರೆ.

ಕುಣಿಗಲ್ ತಾಲೂಕಿನ ಪಶುವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ ಬೂದಿಹಾಳ್ ಹೇಳುವುದೇ ಬೇರೆ. "ನಾವು ವರದಿ ಬಿಟ್ಟು ಮಾತನಾಡಲು ಆಗುವುದಿಲ್ಲ,” ಎನ್ನುತ್ತಾರವರು. ಹಾಗಾದರೆ, ರೈತರ ಮಾತು ಸುಳ್ಳೇ ಎಂದು ಪ್ರಶ್ನಿಸಿದರೆ, “ಅದೆಲ್ಲ ಗೊತ್ತಿಲ್ಲ,” ಎನ್ನುತ್ತಾರೆ. ಮುಂದುವರಿದು, “ರೋಗನಿರೋಧಕ ಶಕ್ತಿ ಕಳೆದುಕೊಂಡ ಹಸುಗಳಿಗೆ ಕೆಟರಾಲ್ ಅಂಟು ರೋಗ ತಗಲುತ್ತದೆ. ಚಿಕಿತ್ಸೆ ಕೊಟ್ಟರೂ ಉಳಿಯುವುದಿಲ್ಲ. ಹೀಗಾಗಿ, ಪ್ರತಿಯೊಂದು ಹಸು ಕರುಗಳಿಗೂ ವಿಮೆ ಮಾಡಿಸಲಾಗುತ್ತಿದೆ. ಕಾಯಿಲೆ ಬಂದು ಹಸುಗಳು ಸಾವನ್ನಪ್ಪಿರುವ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಿದ್ದೇವೆ. ಸತ್ತ ಹಸುವಿನ ಕುಟುಂಬಕ್ಕೆ ೧೦ ಸಾವಿರ ರು. ಪರಿಹಾರ ಕೊಡುತ್ತೇವೆ ಎಂದು ಹೇಳಿದ್ದೇವೆ. ಅದು ರೈತರಿಗೆ ಬೇಕಿಲ್ಲ. ಮರಣೋತ್ತರ ಪರೀಕ್ಷೆ ನಡೆಸದೇ ಇರುವ ಹಸುಗಳಿಗೆ ಪರಿಹಾರ ಕೊಡುವುದಿಲ್ಲ. ಹಿಂದೆ ಹೋರಿಕರುಗಳಿಗೆ ವಿಮೆ ಮಾಡುತ್ತಿರಲಿಲ್ಲ. ಈಗ ಎಲ್ಲ ಕರುಗಳಿಗೂ ವಿಮೆ ಮಾಡಿಸುತ್ತಿದ್ದೇವೆ,” ಎನ್ನುತ್ತಾರೆ.

ಇದನ್ನೂ ಓದಿ : ೪೦೦ ಗೋವುಗಳು ಕಣ್ಮುಚ್ಚಿದರೂ ಕಾಣಿಸಿಕೊಳ್ಳದ ಗೋರಕ್ಷಕರು, ರೈತರ ಆಕ್ರೋಶ

ವೈದ್ಯರು ನೀಡುವ ಅಂಕಿ-ಅಂಶಗಳನ್ನು ಹೇಳಿದರೆ ಹೊಸೂರು ರೈತ ಕುಮಾರ್ ಕೆರಳಿ ಕೆಂಡವಾಗುತ್ತಾರೆ. “ನಾವು ರೈತರು, ಸುಳ್ಳು ಹೇಳಿ ಏನು ಮಾಡಬೇಕು? ನಮ್ಮ ಪಕ್ಕದ ಮನೆಯವರ ಏಳು ಹಸುಗಳು ಕಣ್ಣ ಮುಂದೆಯೇ ಹೋದವು. ಐದಾರು ವರ್ಷಗಳಲ್ಲಿ ೪೦೦ಕ್ಕೂ ಹೆಚ್ಚು ರಾಸುಗಳು ಕೆಟರಾಲ್ ರೋಗದಿಂದ ಮೃತಪಟ್ಟಿವೆ. ರೋಗ ಬಂದ ಹಸುಗಳನ್ನು ಕೇವಲ ೨ ಸಾವಿರಕ್ಕೆ ಮಾರಿದ್ದೇವೆ. ಕೆಲವರು ಸುಮ್ಮನೆ ಮಣ್ಣಲ್ಲಿ ಮಣ್ಣು ಮಾಡಿದ್ದಾರೆ. ಇದನ್ನು ನೋಡಲಾರದವರು ಕಟುಕರಿಗೆ ಕೊಟ್ಟು ಕೈತೊಳೆದುಕೊಂಡಿದ್ದಾರೆ. ರೈತರು ಜೀವನ ಮಾಡಬೇಕಲ್ಲ. ಅಧಿಕಾರಿಗಳು ಬರುವುದನ್ನು ನೋಡುತ್ತ ಕುಳಿತರೆ ನಮ್ಮ ಹೊಟ್ಟೆ ಪಾಡು ನಡೆಯಬೇಕಲ್ಲ. ಮನೆಯಲ್ಲಿದ್ದ ಒಡವೆಗಳನ್ನು ಮಾರಿ ಹಸುಗಳನ್ನು ತಂದವರು ಇದ್ದಾರೆ. ಹಣವಿಲ್ಲದವರು ಸತ್ತು ಹೋದ ಹಸುಗಳನ್ನು ಮಣ್ಣು ಮಾಡಿ ಸುಮ್ಮನಾಗಿದ್ದಾರೆ. ಪರಿಸ್ಥಿತಿ ಹೀಗೇ ಆದರೆ ಏನು ಮಾಡಬೇಕೆಂಬುದು ತಿಳಿಯುತ್ತಿಲ್ಲ. ರೈತರ ಸಮಸ್ಯೆಗೆ ತುಮಕೂರು ಹಾಲು ಒಕ್ಕೂಟ ಸ್ಪಂದಿಸುತ್ತಿಲ್ಲ. ಎಂಎಲ್‌ಎ ಬಂದು ಹಣ ಕೊಡಿಸುವ ಭರವಸೆ ನೀಡಿ ಹೋಗಿದ್ದಾರೆ,” ಎಂದು ಅವರು ಸರ್ಕಾರವನ್ನು, ಹಾಲು ಒಕ್ಕೂಟವನ್ನು ಶಪಿಸುತ್ತಾರೆ.

ಹಸು, ಕರುಗಳನ್ನು ಕಳೆದುಕೊಂಡಿರುವ ರೈತರಿಗೆ ಪರಿಹಾರ ಬೇಕು. ಅದು ನಾಟಿ ಹಸು, ಸೀಮೆ ಹಸು ಎಂಬ ತಾರತಮ್ಯ ಮಾಡುವ ಮೊದಲು ಹಸುವಿಗೆ ವಿಮೆ ಮಾಡಿದೆಯೋ ಇಲ್ಲವೋ ಎಂದು ನೋಡುವ ಬದಲು ಸೂಕ್ತ ಪರಿಹಾರ ನೀಡುವ ಮೂಲಕ ರೈತರ ನೆರವಿಗೆ ಬರಬೇಕು. ದುಃಖದಲ್ಲಿರುವ ರೈತರಿಗೆ ಪಶುಸಂಗೋಪಕರಿಗೆ ಸಾಂತ್ವನ, ಧೈರ್ಯ ತುಂಬುವ ಕೆಲಸ ತುರ್ತಾಗಿ ಆಗಬೇಕು.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More