ನಕಲಿ ಪ್ರಮಾಣಪತ್ರ ನೀಡಿ ವೈದ್ಯನಾದ; ಸರ್ಕಾರಿ ಸಂಬಳ ಪಡೆದು ನಾಪತ್ತೆಯಾದ!

ಗದಗ ಜಿಲ್ಲೆಯ ಲಕ್ಷ್ಮೇಶ್ವರದ ಈ ಪ್ರಕರಣ ಇದೀಗ ಅಸಲಿ ವೈದ್ಯರನ್ನೂ ಬೆಚ್ಚಿಬೀಳಿಸಿದೆ. ವ್ಯಕ್ತಿಯೊಬ್ಬ ನಕಲಿ ಪ್ರಮಾಣ ಸೃಷ್ಟಿಸಿ, ನಾಲ್ಕು ತಿಂಗಳ ಕಾಲ ವೈದ್ಯನಾಗಿ ಸೇವೆ ಸಲ್ಲಿಸಿದ್ದಲ್ಲದೆ, ಸರ್ಕಾರಿ ಸಂಬಳವನ್ನೂ ಗಿಟ್ಟಿಸಿಕೊಂಡ ಮಹಾಮೋಸದ ಕತೆ ಇದು. ಇದೆಲ್ಲ ನಡೆದದ್ದು ಹೇಗೆ? ಇಲ್ಲಿದೆ ವಿವರ

ಗದಗ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿನ ಘಟನೆಯೊಂದು ವೈದ್ಯರನ್ನು ಬೆಚ್ಚಿಬೀಳಿಸಿದೆ. ತಾವು ಕಷ್ಟಪಟ್ಟು ಓದಿ ಗಳಿಸಿದ ಪ್ರಮಾಣಪತ್ರಗಳನ್ನು ತಡಬಡಾಯಿಸಿ ಹುಡುಕುವಂತೆ ಮಾಡಿದೆ. ವ್ಯಕ್ತಿಯೊಬ್ಬ ನಕಲಿ ಪ್ರಮಾಣ ಸೃಷ್ಟಿಸಿ, ನಾಲ್ಕು ತಿಂಗಳ ಸರ್ಕಾರಿ ಸಂಬಳ ಗಿಟ್ಟಿಸಿಕೊಂಡಿದ್ದು ಇದಕ್ಕೆ ಕಾರಣ.

ಆದರೆ, ತನ್ನ ಮುಖವಾಡ ಬಯಲಾದ ಬೆನ್ನಲ್ಲೇ ಆತ ನಾಪತ್ತೆ ಆಗಿದ್ದಾನೆ. ತಾನು ಡಾ.ವಿಕಾಸ್ ಪಾಟೀಲ್ ಎಂಬ ನಕಲಿ ಪ್ರಮಾಣಪತ್ರ ತಯಾರಿಸಿ ವೈದ್ಯನಾಗಿ ನೇಮಕಗೊಂಡಿದ್ದಾನೆ. ಜೊತೆಗೆ, ತಿಂಗಳಿಗೆ 46,000ದಂತೆ ನಾಲ್ಕು ತಿಂಗಳ ಸರ್ಕಾರಿ ಸಂಬಳವನ್ನೂ ಪಡೆದು ಅಧಿಕಾರಿಗಳನ್ನೇ ಯಾಮಾರಿಸಿದ್ದೂ ಆಗಿದೆ.

ಶಿರಹಟ್ಟಿ ತಾಲೂಕಿನ ಬನ್ನಿಕೊಪ್ಪ ಹಾಗೂ ಲಕ್ಷ್ಮೇಶ್ವರದಲ್ಲಿ ವೈದ್ಯನಾಗಿ ಕಾರ್ಯನಿರ್ವಹಿಸುತ್ತಿದ್ದ ಬೆಳಗಾವಿ ಮೂಲದ ಡಾ.ವಿಕಾಸ್ ಪಾಟೀಲ್ ಎಂಬುವವರು ಸದ್ಯ ಎಂಬಿಬಿಎಸ್ ಮುಗಿಸಿ‌ ಮಕ್ಕಳ ವಿಭಾಗದಲ್ಲಿ ಎಂಡಿ ಮಾಡುತ್ತಿದ್ದಾರೆ. ಆದರೆ, ವಿಕಾಸ್ ಅವರ ವೈದ್ಯ ಶಿಕ್ಷಣದ ಪ್ರಮಾಣಪತ್ರವನ್ನು ಹೇಗೋ ಗಿಟ್ಟಿಸಿದ ಆರೋಪಿಯು ನಕಲಿ ಪ್ರಮಾಣಪತ್ರ ಸೃಷ್ಟಿಸಿರುವ ಅನುಮಾನ ಮೂಡಿದೆ. ಈ ವಿಷಯ ಡಾ.ವಿಕಾಸ್ ಅವರ ತಂದೆಗೆ ಅವರ ಸ್ನೇಹಿತರಿಂದ ಗೊತ್ತಾಗಿದೆ. ವಿಷಯ ತಿಳಿದ ತಕ್ಷಣ ತಮ್ಮ ಮಗನ ಮೂಲ ಪ್ರಮಾಣಪತ್ರದೊಂದಿಗೆ ಆ.5ರಂದು ಡಿಎಒ ಅವರನ್ನು ಭೇಟಿ ಮಾಡಿ ತಮ್ಮ ಮಗನ ಪ್ರಮಾಣಪತ್ರ ದುರ್ಬಳಕೆ ಆಗಿರುವ ವಿಷಯ ತಿಳಿಸಿದ್ದಾರೆ. ಈ ಕುರಿತು ಮೆಡಿಕಲ್ ಕೌನ್ಸಿಲ್‌ಗೂ ದೂರು ನೀಡಿದ್ದಾರೆ.

ಗದಗ ಡಿಎಚ್ಓ ಹೊನಕೇರಿ ಅವರು ತಕ್ಷಣವೇ, ವಿಕಾಸ್ ಹೆಸರಿನ ನಕಲಿ ವೈದ್ಯನಿಗೆ ಕರೆ ಮಾಡಿ, ಆತನ ಪದವಿಯ ರಿಜಿಸ್ಟ್ರೇಷನ್ ನಂಬರ್ ಕೇಳಿದ್ದಾರೆ. ಇದರಿಂದ ಅನುಮಾನದಲ್ಲೇ ತಡಬಡಾಯಿಸಿ ಯಾವುದೋ ಸಂಖ್ಯೆ ಹೇಳಿ ಫೋನ್ ಕಟ್ ಮಾಡಿದ್ದಾನೆ. ಅದಾದ ನಂತರದಿಂದ ಆ.8ರಿಂದ ನಕಲಿ ವೈದ್ಯ ನಾಪತ್ತೆ ಆಗಿದ್ದಾನೆ. ಮೊಬೈಲ್ ಕೂಡ ಸ್ವಿಚ್ ಆಫ್ ಆಗಿದೆ.

ಡಾ.ವಿಕಾಸ್ ಪಾಟೀಲ್ ಎಂದು ಎಲ್ಲರನ್ನೂ ನಂಬಿಸಿದ್ದ ಆರೋಪಿ
ನಾಪತ್ತೆಯಾದ ವ್ಯಕ್ತಿ ಚಿತ್ರದುರ್ಗದಲ್ಲಿಯೂ ಇದೇ ಹೆಸರಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದ ಹಾಗೂ ಚಿತ್ರದುರ್ಗ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ. ನಾನೂ ಕೂಡ ಆತನ ವಿರುದ್ಧ ದೂರು ದಾಖಲಿಸುತ್ತೇನೆ.
ಎಸ್ ಎಮ್ ಹೊನಕೇರಿ, ಡಿಎಚ್ಓ
ಇದನ್ನೂ ಓದಿ : ಪರಿಹಾರ ಲಪಟಾಯಿಸಲು ಕೊಡಗಿನಲ್ಲಿ ಹುಟ್ಟಿಕೊಂಡರು ನಕಲಿ ಸಂತ್ರಸ್ತರು!

ಈ ಹಿಂದೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿದ್ದಾಗಿಯೂ ನಕಲಿ ವೈದ್ಯ ತನ್ನ ಸಹೋದ್ಯೋಗಿಗಳ ಬಳಿ ಹೇಳಿಕೊಂಡಿದ್ದಾನೆ ಎನ್ನಲಾಗಿದೆ. ಜೊತೆಗೆ, ಹೆಚ್ಚಾಗಿ ರಾತ್ರಿ ಪಾಳಿಯಲ್ಲೇ ಇರಲು ಬಯಸುತ್ತಿದ್ದ. ಸಹೋದ್ಯೋಗಿಗಳ ಜೊತೆ ಹೆಚ್ಚಾಗಿ ಬೆರೆಯುತ್ತಿರಲಿಲ್ಲ. ರೋಗಿಗಳೊಂದಿಗಿನ ವರ್ತನೆ ಕೂಡ ಸಹ್ಯವಾಗಿ ಇರಲಿಲ್ಲ. ಚಿಕಿತ್ಸೆ ವೇಳೆ ಬಿಎಂಎಸ್ ವೈದ್ಯರ ಸಲಹೆ ಮೇಲೆ ಚಿಕಿತ್ಸೆ ನೀಡುತ್ತಿದ್ದ. ಇನ್ನು, ಹಿರಿಯ ನರ್ಸ್‌ಗಳಿಂದ ಚುಚ್ಚುಮದ್ದು ಕೊಡಿಸುತ್ತಿದ್ದ. ಈ ಎಲ್ಲ ವರ್ತನೆಗಳಿಂದ ಆರಂಭದಿಂದಲೂ ಸಿಬ್ಬಂದಿ ಸಂಶಯದಿಂದ ಇದ್ದರು. ಸಾಲದೆಂಬಂತೆ, ಸಹೋದ್ಯೋಗಿಗಳ ಬಳಿಯೇ ಆಗಾಗ ಸಾಲ ಪಡೆಯುತ್ತಿದ್ದ ಎಂಬ ಅಂಶಗಳು ಬೆಳಕಿಗೆ ಬಂದಿವೆ.

ಇತ್ತೀಚೆಗಷ್ಟೇ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಹರ್ಲಾಪುರ ಗ್ರಾಮದ ಯುವತಿಯನ್ನು ನಕಲಿ ವೈದ್ಯ ವಿವಾಹವಾಗಿದ್ದಾನೆ. ಸೆ.6ರಂದು ಹಾವೇರಿಯ ಕಲ್ಯಾಣ ಮಂಟಪದಲ್ಲಿ ವಿವಾಹ ನಡೆದಿತ್ತು. ಮದುವೆಗಾಗಿ 20 ದಿನ ರಜೆಯ ಮೇಲೆ ತೆರಳಿದ್ದ. ಈ ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ ಇದೀಗ ಹರ್ಲಾಪುರದ ಈತನ ಬೀಗರ ಮನೆಗೂ ಬೀಗ ಬಿದ್ದಿದೆ. ಆತನ ಊರು, ನಿಜವಾದ ಹೆಸರು ಏನು ಎಂಬುದು ಕೂಡ ಈವರೆಗೆ ಯಾರಿಗೂ ಗೊತ್ತಾಗಿಲ್ಲ.

ನಾಪತ್ತೆಯಾದ ಈ ನಕಲಿ ವೈದ್ಯನ ಕುರಿತು ಮೆಡಿಕಲ್ ಕೌನ್ಸಿಲ್ ಯಾವ ನಿರ್ಧಾರ ತಳೆಯಲಿದೆ ಎಂಬುದಕ್ಕಾಗಿ ಗದಗ ಜಿಲ್ಲಾ ಆರೋಗ್ಯ ಇಲಾಖೆ ಕಾಯುತ್ತಿದೆ. ಒಂದು ವೇಳೆ ಈತ, ನಕಲಿ ಪ್ರಮಾಣಪತ್ರ ಸೃಷ್ಟಿಸಿ ವೈದ್ಯನಾಗಿದ್ದು ದೃಢಪಟ್ಟರೆ ಈತನಿಂದ ಕೇವಲ ಸರ್ಕಾರಕ್ಕಷ್ಟೇ ಅಲ್ಲ, ರೋಗಿಗಳ ಜೊತೆಗೆ ಒಂದು ಹೆಣ್ಣಿಗೂ ವಂಚಿಸಿದ ಆರೋಪ ಎದುರಿಸಬೇಕಾಗುತ್ತದೆ.

ಚಿತ್ರ: ಚಿಕಿತ್ಸೆ ನೀಡುತ್ತಿರುವ ನಕಲಿ ವೈದ್ಯ (ಬಲತುದಿ)

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More