ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು

ಫೋನಿನಲ್ಲಿ ಹೆಚ್ಚು ಮಾತನಾಡುವಂತಿಲ್ಲ. ಸಿಸಿಟಿವಿ ಕಣ್ಗಾವಲು, ರಜೆ ದಿನಗಳಲ್ಲಿ ಹೊರ ಹೋಗಲು ಕಾರ್ಖಾನೆ ಅನುಮತಿ ಪಡೆಯಬೇಕು, ಇದು ಹಾಸನದ ಎರಡು ಗಾರ್ಮೆಂಟ್‌ಗಳು  ಒದಗಿಸಿರುವ ಹಾಸ್ಟೆಲ್ ನಲ್ಲಿ ಅವಿವಾಹಿತ ಮಹಿಳಾ ನೌಕರರ ಸ್ಥಿತಿ. ಈ ಕುರಿತ ‘ದಿ ಹಿಂದೂ’ ಪತ್ರಿಕೆ ವರದಿಯ ಭಾವಾನುವಾದ ಇಲ್ಲಿದೆ

ಹಾಸನದ ಗಾರ್ಮೆಂಟ್ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ನೂರಾರು ಮಹಿಳೆಯರು ವಾಸಿಸುವ ಹಾಸ್ಟೆಲ್ ಒಂದರ್ಥದಲ್ಲಿ ಬಂಧಿಖಾನೆಯಂತಿದೆ. ಹತ್ತಿರದಲ್ಲೇ ಇರುವ ಗಾರ್ಮೆಂಟ್ ಗಳಿಗೆ ಕರೆದೊಯ್ಯಲು ವಾಹನಗಳು ಬರುತ್ತವೆ. ಅದೊಂದೇ ಅವರು ಪಯಣಿಸಲು ಇರುವ ಏಕೈಕ ಸೌಲಭ್ಯ. ಏಕೆಂದರೆ ರಜೆ ದಿನಗಳಲ್ಲೂ ಅವರು ಹಾಸ್ಟೆಲ್ ಬಿಟ್ಟು ತೆರಳುವಂತಿಲ್ಲ. ಹಾಸ್ಟೆಲ್ ನಲ್ಲಿ ತೂಗುಬಿಟ್ಟಿರುವ ಸಿಸಿಟಿವಿಗಳು ಮಹಿಳಾ ನೌಕರರ ಪ್ರತಿ ಚಲನವಲನವನ್ನೂ ಗಮನಿಸುತ್ತವೆ. ವಾರ್ಡನ್ ಗಳು ಕಣ್ಣಿಡಲು ಅನುಕೂಲವಾಗಲೆಂದು ಅವರ ಕೊಠಡಿಗಳಿಗೆ ಬಾಗಿಲುಗಳ ವ್ಯವಸ್ಥೆಯನ್ನೇ ಮಾಡಿಲ್ಲ. ಮೊಬೈಲ್ ಫೋನ್ ಬಳಕೆ ಕಡ್ಡಾಯ ನಿಷಿದ್ಧ. ಪಾವತಿ ಮಾಡುವ ಫೋನ್ ಗಳ ಮೂಲಕವೇ ಅವರು ತಮ್ಮ ಕುಟುಂಬದ ಜೊತೆ ಮಾತುಕತೆ ನಡೆಸಬೇಕು. ಕುಟುಂಬದ ಸದಸ್ಯರು ಇವರನ್ನು ಭೇಟಿಯಾಗಬೇಕು ಎಂದಾದರೆ ಕಂಪನಿಯಿಂದ ಮೊದಲೇ ಅನುಮತಿ ಪಡೆಯಬೇಕು.

ಹಾಸನ ಜಿಲ್ಲೆಯಲ್ಲಿ ಕೃಷಿ ಬಿಕ್ಕಟ್ಟು ಉಲ್ಬಣಿಸಿದಂತೆ ಎರಡು ಗಾರ್ಮೆಂಟ್ ಉದ್ಯಮಗಳು ಸ್ಥಳೀಯ ಹಳ್ಳಿಗರಿಗೆ ಉದ್ಯೋಗವಕಾಶ ಕಲ್ಪಿಸಿದವು. ಸಂಪ್ರದಾಯಕ್ಕೆ ಕಟ್ಟುಬಿದ್ದ ಸಮಾಜದಿಂದ ಬಂದ ಹೆಣ್ಣುಮಕ್ಕಳು ಹೆಚ್ಚು ವಿದ್ಯಾಭ್ಯಾಸ ಸಾಧ್ಯವಾಗದೇ ಗಾರ್ಮೆಂಟ್ ಗಳಲ್ಲಿ ಉದ್ಯೋಗ ಕಂಡುಕೊಳ್ಳುವ ಸ್ಥಿತಿ ನಿರ್ಮಾಣವಾಯಿತು. ಪರಿಣಾಮ ಕಾರ್ಖಾನೆಗಳು ಅವರ ರಕ್ಷಕರಂತೆ ವರ್ತಿಸತೊಡಗಿದವು.

“ನಾವು ಜೀತದಾಳುಗಳಂತೆ ಬದುಕುತ್ತಿದ್ದೇವೆ,” ಎನ್ನುತ್ತಾರೆ ಹಾಸ್ಟೆಲ್ಲಿನಲ್ಲಿ ವಾಸಿಸುವ ಮಹಿಳಾ ಉದ್ಯೋಗಿಯೊಬ್ಬರು. ಈ ನಿಬಂಧನೆಗಳು ಕೇವಲ ಮಹಿಳೆಯರಿಗೆ ಅದರಲ್ಲಿಯೂ ಅವಿವಾಹಿತ ಮಹಿಳೆಯರಿಗೆ ಮಾತ್ರ. ಅವರಿಗೆ ಸುರಕ್ಷತೆ ಕಲ್ಪಿಸುವ ದೃಷ್ಟಿಯಿಂದಲೇ ಕಂಪೆನಿಗಳು ಈ ಕ್ರಮ ಕೈಗೊಂಡಿವೆಯಂತೆ.

ಹಾಸನದ ಹೊರವಲಯದ ಕೈಗಾರಿಕಾ ಪಾರ್ಕ್ ನಲ್ಲಿರುವ ‘ಹಿಮತ್ಸಿಂಗ್ಕಾ ಲಿನೆನ್ಸ್’ ಕಾರ್ಖಾನೆಯಲ್ಲಿ ಸುಮಾರು 2000 ಮಂದಿ ಮತ್ತು ‘ಪ್ರಿಕಾಟ್ ಮೆರಿಡಿಯನ್’ ಕಾರ್ಖಾನೆಯಲ್ಲಿ 200ಕ್ಕೂ ಹೆಚ್ಚು ಮಂದಿ ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಈ ಕಾರ್ಖಾನೆಗಳಲ್ಲಿ ದುಡಿಯುತ್ತಿದ್ದ ವಿಜಯಾ ಎಂಬ ಮಹಿಳೆ, “ನಾವು ನೋಡುತ್ತಿದ್ದುದು ಹಾಸ್ಟೆಲ್, ಕಾರ್ಖಾನೆ ಮತ್ತು ವಾಹನವನ್ನು ಮಾತ್ರ. ಪೇಫೋನ್ ಗಳು ಅಥವಾ ವಾರ್ಡನ್ ಗಳು ನೀಡಿದ ಫೋನ್ ಗಳ ಮೂಲಕವೇ ನಮ್ಮ ಕುಟುಂಬದವರನ್ನು ಸಂಪರ್ಕಿಸಬೇಕಿತ್ತು. ನಮಗೆ ಮದುವೆಯಾದ ನಂತರ ಹಾಸ್ಟೆಲ್ ನಲ್ಲಿ ವಾಸಿಸಲು ಅವಕಾಶ ಸಿಗದೇ ಇದ್ದುದರಿಂದ ಕೆಲಸವನ್ನೂ ಕಳೆದುಕೊಳ್ಳಬೇಕಾಯಿತು,” ಎನ್ನುತ್ತಾರೆ.

ರಜೆ ದಿನಗಳಲ್ಲಿ ಕೂಡ ಕುಟುಂಬದವರೊಂದಿಗೆ (ಕೆಲಸಕ್ಕೆ ಸೇರುವ ಸಂದರ್ಭದಲ್ಲಿ ಮಹಿಳಾ ನೌಕರರು ಅವರ ಕುಟುಂಬ ಸದಸ್ಯರ ಭಾವಚಿತ್ರಗಳನ್ನು ಕಂಪೆನಿಗೆ ಕೊಟ್ಟಿರಬೇಕು) ಮಾತ್ರ ಹೊರಗೆ ಹೋಗಲು ಅವಕಾಶವಿದೆ. ಇಲ್ಲಿ ನೌಕರಿ ಬಯಸುವ ಹೆಣ್ಣುಮಕ್ಕಳು ಈ ನಿಬಂಧನೆಗಳನ್ನು ಪಾಲಿಸುವುದು ಅನಿವಾರ್ಯ.

“ಬಹುಪಾಲು ಹೆಣ್ಣುಮಕ್ಕಳು ಗ್ರಾಮೀಣ ಪ್ರದೇಶದಿಂದ ಬಂದವರಾಗಿದ್ದು ಸುರಕ್ಷೆಯ ವಾತಾವರಣ ಕಲ್ಪಿಸದಿದ್ದರೆ ಅಥವಾ ತೊಂದರೆಯಾಗುವಂತಹ ಸಂದರ್ಭ ಇದ್ದರೆ ಅವರನ್ನು ಉದ್ಯೋಗಕ್ಕೆ ಕಳಿಸುವುದಿಲ್ಲ,” ಎನ್ನುತ್ತಾರೆ ‘ಹಿಮತ್ಸಿಂಗ್ಕಾ ಲಿನೆನ್ಸ್’ ಕಾರ್ಖಾನೆಯ ಮಾನವ ಸಂಪನ್ಮೂಲ ವಿಭಾಗದ ಉಪಾಧ್ಯಕ್ಷ ಕೆ. ಬಿ. ವಿನೋದ್. ಕಾರ್ಖಾನೆಯ ವಾತಾವರಣ ತಿಳಿಯಲು ಭೇಟಿ ನೀಡಿದ್ದ ‘ದ ಹಿಂದೂ’ ಪತ್ರಿಕೆ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, “ಸ್ಮಾರ್ಟ್ ಫೋನ್ ಗಳಲ್ಲಿ ಬರುವ ‘ಆಹ್ವಾನಗಳು’ ತೊಂದರೆ ಒಡ್ಡುವುದರಿಂದ ಅವುಗಳನ್ನು ನಿಷೇಧಿಸಲಾಗಿದೆ. ಅಂತಹ ಘಟನೆಗಳು ನಡೆದಾಗ ಅದನ್ನು ತಡೆಯಲು ಕಾರ್ಖಾನೆಗಳಲ್ಲಿ ಯಾರೂ ಇರುವುದಿಲ್ಲ, ಯಾರಾದರೂ ನಮ್ಮನ್ನು ಅತಿಹೆಚ್ಚು ಶಿಸ್ತುಪಾಲಿಸುವವರು ಎಂದು ದೂಷಿಸಿದರೆ ಅದನ್ನು ನಮಗೆ ನೀಡಿದ ಮೆಚ್ಚುಗೆಯ ಪ್ರಮಾಣಪತ್ರ ಎಂದೇ ಭಾವಿಸುತ್ತೇವೆ” ಎನ್ನುತ್ತಾರೆ ಅವರು.

ಮಹಿಳಾ ನೌಕರರ ಶಿಕ್ಷಣಕ್ಕೆ ಕೂಡ ಈ ‘ರಕ್ಷಕ’ನ ಕೆಲಸವನ್ನು ವಿಸ್ತರಿಸಲಾಗಿದೆ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದೊಂದಿಗೆ ‘ಹಿಮತ್ಸಿಂಗ್ಕಾ ಲಿನೆನ್ಸ್’ ಒಪ್ಪಂದ ಮಾಡಿಕೊಂಡಿದ್ದು ಉದ್ಯೋಗನಿರತ ಮಹಿಳೆಯರು ವಿದ್ಯಾಭ್ಯಾಸದಲ್ಲಿ ತೊಡಗಿಕೊಳ್ಳಬಹುದು ಎಂದು ಕಾರ್ಖಾನೆ ಹೇಳಿದೆ.

ಪ್ರಿಕಾಟ್ ಮೆರಿಡಿಯನ್ ಹಾಸ್ಟೆಲ್ ನಲ್ಲಿ “ಸ್ಮಾರ್ಟ್ ಫೋನ್ ಬಳಕೆಗೆ ಅವಕಾಶವಿದೆ ಅಲ್ಲದೆ ಇಲ್ಲಿನ ಮಹಿಳಾ ನೌಕರರು ಸ್ವತಂತ್ರವಾಗಿ ಓಡಾಡಲೂ ಅವಕಾಶವಿದೆ,” ಎನ್ನುತ್ತಾರೆ ಕಾರ್ಖಾನೆಯ ಮಾನವ ಸಂಪನ್ಮೂಲ ವಿಭಾಗದ ವ್ಯವಸ್ಥಾಪಕ ಎನ್. ಶಿವಶಂಕರ್.

ನೌಕರರಿಂದ ಯಾವುದೇ ದೂರು ಬರದೆ ಕ್ರಮ ಕೈಗೊಳ್ಳವುದು ಅಸಾಧ್ಯ ಎನ್ನುತ್ತದೆ ಸ್ಥಳೀಯ ಕಾರ್ಮಿಕ ಇಲಾಖೆ.

ಆದರೆ ಬಹುಪಾಲು ಮಹಿಳಾ ನೌಕರರ ಪಾಲಿಗೆ ಇದೊಂದು ಅನಗತ್ಯ ನಿರ್ಬಂಧ. “ನಮ್ಮದು ಐವರು ಸದಸ್ಯರಿರುವ ಕುಟುಂಬ. ಮೂರು ಎಕರೆ ಖುಷ್ಕಿ ಭೂಮಿ ಇದೆ. ಬೇಸಾಯದಿಂದ ಬರುವ ಆದಾಯ ಕುಟುಂಬಕ್ಕೆ ಸಾಕಾಗುವುದಿಲ್ಲ. ನಗರದ ಕಾಲೇಜಿನಲ್ಲಿ ವ್ಯಾಸಂಗ ಮಾಡಲು ನಮ್ಮ ಮನೆಯಲ್ಲಿ ಬಿಡುವುದಿಲ್ಲ. ಆದರೆ ನಿರ್ಬಂಧಿತ ವಾತಾವರಣ ಇರುವ ಹಾಸ್ಟೆಲ್ ಸೌಲಭ್ಯ ಕಲ್ಪಿಸುವ ಕಂಪೆನಿಯಲ್ಲಿ ಕೆಲಸ ಮಾಡುವುದಾದರೆ ಅವರಿಗೆ ಯಾವುದೇ ತೊಂದರೆ ಇಲ್ಲ” ಎನ್ನುತ್ತಾರೆ ಅರಸೀಕೆರೆ ಮೂಲದ ಮಹಿಳಾ ನೌಕರರೊಬ್ಬರು. ಅವರು ಸಂಪಾದಿಸುವ ಮಾಸಿಕ ರು 8000 ಕುಟುಂಬಕ್ಕೆ ಮಹತ್ವದ್ದಾಗಿದ್ದೆ.

ಇದನ್ನೂ ಓದಿ : ಟ್ವಿಟರ್ ಸ್ಟೇಟ್ | ಶಬರಿಮಲೆಗೆ ಮಹಿಳೆ ಪ್ರವೇಶಕ್ಕೂ ಪ್ರವಾಹಕ್ಕೂ ಎತ್ತಣ ಸಂಬಂಧ?

‘ಸುರಕ್ಷತಾ ಕ್ರಮ’ಗಳನ್ನು ಕಣ್ಣಾರೆ ಕಂಡ ಬಳಿಕವಷ್ಟೇ ಪೋಷಕರು ನನ್ನನ್ನು ಇಲ್ಲಿಗೆ ಸೇರಿಸಿದರು” ಎನ್ನುತ್ತಾರೆ ಒಬ್ಬ ನೌಕರರು. “ನನಗೆ ನಿರ್ಬಂಧಗಳ ಬಗ್ಗೆ ಗೊತ್ತಿತ್ತು. ಆದರೆ ಅದು ಮದುವೆಯಾಗುವವರೆಗೆ ಮಾತ್ರ ಜಾರಿಯಲ್ಲಿರುತ್ತದೆ ಎಂದೂ ತಿಳಿದಿತ್ತು,” ಎನ್ನುತ್ತಾರೆ ಅವರು.

ತಮ್ಮ ಮಗಳನ್ನು ಕಾಣಲು ಹಾಸ್ಟೆಲ್ ಗೆ ಬಂದಿದ್ದ ಮಹಿಳೆಯೊಬ್ಬರು ಅಲ್ಲಿನ ಮೇಲ್ವಿಚಾರಕರೊಂದಿಗೆ ಮಾತನಾಡುತ್ತಾ, “ನನ್ನ ಮಗಳ ಫೋನ್ ಬಳಕೆಯನ್ನು ನಿಯಂತ್ರಿಸಿ. ಪದೇ ಪದೇ ಫೋನ್ ಕೊಡಬೇಡಿ. ಆದರೆ ಅವಳ ಸಂಬಳ ಹೆಚ್ಚಿಸಿ” ಎಂದದ್ದು ಕಂಡುಬಂತು.

ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
ಬಿಜೆಪಿ ಪ್ರಾಬಲ್ಯದ ಕರಾವಳಿಯಲ್ಲೂ ‘ಭಾರತ್ ಬಂದ್‌’ಗೆ ವ್ಯಕ್ತವಾಯಿತು ಜನಬೆಂಬಲ
Editor’s Pick More