ಜನಪ್ರಿಯತೆಯಲ್ಲಿ ಸ್ಟಾರ್‌ ಹೀರೋಗಳನ್ನು ಹಿಂದಿಕ್ಕಿದ ಆಫ್‌ಬೀಟ್ ಹೀರೋಸ್

ಹೀರೋಗಳಿಗೆ ಸರಿಸಮನಾಗಿ, ಕೆಲವೊಮ್ಮೆ ಹೀರೋಗಳಿಗೂ ಮೀರಿದ ಜನಪ್ರಿಯತೆ ಪಡೆಯುತ್ತಾರಿವರು. ತಮ್ಮ ಅಭಿನಯದ ಮೂಲಕವೇ ಗಮನ ಸೆಳೆಯಬಲ್ಲ ಇರ್ಫಾನ್, ಸಿದ್ದಿಕಿಯಂಥ ಪೋಷಕನಟರು ಬಾಲಿವುಡ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸುತ್ತಿದ್ದಾರೆ, ಜನಪ್ರೀತಿಯನ್ನೂ ಗಳಿಸುತ್ತಿದ್ದಾರೆ

ಹೀರೋ ಅಂದ್ರೆ ಒಂದ್ ಹೈಟು, ಒಂದ್ ಲುಕ್ಕು, ಹುಡ್ಗೀರ್ ನಿದ್ದೆ ಹಾಳ್ ಮಾಡೋ ಒಂದ್ ಕಳ್ ನಗು... ಗುಂಗುರು ಕೂದಲು, ನೀಲಿ ಕಣ್ಗಳು, ಟಾಲ್-ಡಾರ್ಕರ್‌-ಹ್ಯಾಂಡ್ಸಮ್- ಹೀಗೇ ಇನ್ನೂ ಏನೇನೋ ವ್ಯಾಖ್ಯಾನಗಳಿದ್ವು ಆ ಕಾಲಕ್ಕೆ. ಕಥೆ-ಕಾದಂಬರಿ ಲೆಕ್ಕಕ್ಕೆ ಒಂದು ವ್ಯಾಖ್ಯೆ ಆದ್ರೆ ಸಿನಿಮಾ ನಾಟಕದ ಲೆಕ್ಕಕ್ಕೆ ಇನ್ನೊಂದು... ಈಗ ಟಿವಿ ಸೀರಿಯಲ್, ವೆಬ್ ಸೀರೀಸ್, ಶಾರ್ಟರ್ ಸಿನಿಮಾ ಲೆಕ್ಕಕ್ಕೂ ಬೇರೊಂದೇ ರಿಕ್ವೈರ್‌ಮೆಂಟ್‌ ಇದೆ. ಹೀಗೆಲ್ಲ ಇದ್ದಾಗ್ಯೂ, ಆ ಎಲ್ಲ ಲಕ್ಷಣಗಳನ್ನ ಸಹಜವಾಗಿ ಮೈಗೂಡಿಸಿಕೊಂಡವರ ಬಗ್ಗೆ ಅಥವಾ ಅಂಥವರ ಜನಪ್ರಿಯತೆ, ಅವರು ಕಂಡ ಯಶಸ್ಸು, ಪ್ರೇಕ್ಷಕರ ಮೇಲೆ ಅವರು ಉಂಟು ಮಾಡಿರುವ ಸಕಾರಾತ್ಮಕ ಪರಿಣಾಮಗಳ ಬಗ್ಗೆ ಬರೆಯೋದು ತೀರಾ ಕ್ಲೀಷೆ ಅನ್ನಿಸಬಹುದು. ಹಾಗಾಗಿ, ಯಾವುದು ಹೇಗೆ ಇದ್ರೂ ಆಯಾ ಕಾಲಕ್ಕೆ ಆ ಪಾಪ್ಯುಲರ್ ಡಿಮ್ಯಾಂಡಿಗೆ ಸೆಡ್ಡು ಹೊಡೆದು ಆಫ್‌ಬೀಟ್ ಅನ್ನಿಸ್ಕೊಂಡಾದ್ರೂ ಸರಿಯೆ ತಮ್ತಮ್ಮ ಛಾಪನ್ನು ಒತ್ತಿ ಬೇರೆ ನಾಯಕನಟರ ಜೊತೆಜೊತೆಗೇ ಜನಪ್ರಿಯತೆ ಮತ್ತು ಸಾಕಷ್ಟು ಮಟ್ಟಿನ ಯಶಸ್ಸು ಹಂಚಿಕೊಂಡವರ ಬಗ್ಗೆ ಈ ಬರಹ.

ಶಾರುಖ್, ಆಮೀರ್, ಸಲ್ಮಾನ್ ಖಾನ್‌ತ್ರಯರು ಒಂದೆಡೆ ಆದ್ರೆ, ಹೃತಿಕ್ ರೋಷನ್, ವರುಣ್ ಧವನ್, ಟೈಗರ್ ಶ್ರಾಫ್ ಥರದ ಆರೆಂಟು ಪ್ಯಾಕುಗಳ ಸರದಾರರು ಇನ್ನೊಂದೆಡೆ. ಹೀರೋಯಿನ್ನುಗಳ ಜೊತೆ ರೊಮ್ಯಾಂಟಿಕ್ಕಾಗಿ ಯೂರೋಪಿನ ಬೀದಿಬೀದಿಗಳಲ್ಲಿ ಇಲ್ಲವೇ ಅಮೆರಿಕೆಯ ಹೈವೇಗಳಲ್ಲಿ ಲಾಂಗ್ ಡ್ರೈವ್ ಹೋಗಿಬಿಡುವ ರೂಪವಂತ್ರು... ಇವರಿಗೆ ಹೋಲಿಸಿದರೆ ಅಂತಾ ರೂಪವಂತರೇನೂ ಅಲ್ಲದ ಇರ್ಫಾನ್ ಖಾನ್‌ನ ಕತೆಯೇ ಬೇರೆ. ಚಾಣಕ್ಯನ ಶಿಷ್ಯನಾಗಿ ಇಲ್ಲವೇ ಚಂದ್ರಕಾಂತ ಸೀರಿಯಲ್ಲಿನ ಕ್ರೂರ ಸಿಂಗ್ ಬಂಟನಾಗಿ ನೋಡಿದ್ದಾಗ ಈತ ಮುಂದೊಂದು ದಿನ ಬಾಲಿವುಡ್ ಬಿಡಿ ಬ್ರಿಟಿಶ್ ಸಿನಿಮಾ ಮತ್ತು ಹಾಲಿವುಡ್‌ ಎತ್ತರಕ್ಕೆ ಬೆಳೆದು ನಿಲ್ತಾನೆ ಅಂತ ಕನಸೂ ಕಂಡಿರಲಿಲ್ಲವೇನೋ.

‘ಸಲಾಮ್ ಬಾಂಬೆ’ ಚಿತ್ರದಿಂದ ಬೆಳಕಿಗೆ ಬಂದದ್ದಾದ್ರೂ ನಾಟಕದ ಹಿನ್ನೆಲೆ ಇದ್ದಿದ್ರಿಂದ ಅಭಿನಯದ ಸೂಕ್ಷ್ಮತೆಗಳನ್ನು ಅರಿತಿದ್ದರಿಂದ, ಅತ್ತ ಓವರ್ಬೋರ್ಡ್‌ ಅನ್ನಿಸದ ಇತ್ತ ಎಕ್ಸ್‌ಪ್ರೆಷನ್‌ಲೆಸ್‌ ಅಥವಾ ಭಾವರಹಿತ ಅಭಿನಯ ಅನ್ನಿಸಿಕೊಳ್ಳುವ ಸಾಧ್ಯತೆಗಳನ್ನು ಮೀರಿ ಮಧ್ಯದ ಸಟ್ಲ್ ಅನ್ನಬಹುದಾದ ಮೆಥಡ್ ಆಕ್ಟಿಂಗ್ ಹಾದಿಯನ್ನು ಹಿಡಿದ ಓರ್ವ ಸಾಧಾರಣ ರೂಪಲಕ್ಷಣದ ಇರ್ಫಾನ್‌ ಖಾನ್ ಕೇಳರಿಯದ ಎತ್ತರಕ್ಕೆ ಬೆಳೆದು ನಿಲ್ಲುವಂತಾಯ್ತು.

‘ಸ್ಲಮ್ ಡಾಗ್ ಮಿಲಿಯನೇರ್’, ‘ನೇಮ್ಸೇಕ್’, ಲೈಫ್ ಆಫ್ ಪೈ', 'ದಾರ್ಜಲಿಂಗ್‌ ಲಿಮಿಟೆಡ್' ತರದ ವಿಶ್ಲೇಷಕರ ಅಪಾರ ಮೆಚ್ಚುಗೆ ಗಳಿಸಿದ ಅಥವಾ ಕಲಾತ್ಮಕ ಪಾತ್ರಗಳ ಜೊತೆಜೊತೆಗೇ 'ಜುರಾಸಿಕ್ ವರ್ಲ್ಡ್', 'ಮೈಟಿ ಹಾರ್ಟರ್‌', 'ಅಮೇಝಿಂಗ್ ಸ್ಪೈಡರ್ ಮ್ಯಾನ್', 'ಇನ್ಫರ್ನೋ' ಮುಂತಾದ ಕಮರ್ಷಿಯಲ್ ಚಿತ್ರಗಳಲ್ಲೂ ಪಾತ್ರಗಳು ಹುಡುಕಿಕೊಂಡು ಬಂದಿದ್ದರಲ್ಲಿ ಆಶ್ಚರ್ಯವೇ ಇಲ್ಲ. ಇರ್ಫಾನ್ ಖಾನ್‌ನ ಅಭಿನಯ ಚತುರತೆ ಮತ್ತು ಅತ್ಯದ್ಭುತ ಟೈಮಿಂಗ್ ಅಸ್ವಾದಿಸೋಕೆ 'ಮಕ್ಬೂಲ್' ಮತ್ತು 'ಪೀಕು’ ಎರಡು ಸಿನಿಮಗಳನ್ನು ಉದಾಹರಣೆಯಾಗಿ ನೋಡಬಹುದು.

ರಾಜ್‌ಕುಮಾರ್‌ ರಾವ್‌

ಈತನ ಹಾದಿಯಲ್ಲೇ ಬೆಳಕಿಗೆ ಬರ್ತಿರೋ ಮತ್ತೊಬ್ಬ ಯುವನಟ ರಾಜ್‌ಕುಮಾರ್ ರಾವ್. ಹೆಚ್ಚಿಗೆ ಸದ್ದು ಮಾಡದ ಹೊಸ ಅಲೆಯ ಸಿನಿಮಾಗಳನ್ನು ಬಹಳ ಎಚ್ಚರಿಕೆಯಿಂದ ಆಯ್ದುಕೊಂಡು ಮುಂದೆ ಬರ್ತಿರೋ ರಾಜ್‌ಕುಮಾರ್‌ ರಾವ್‌ನ ನಟನಾಕ್ರಮ ಹಲವರ ಮನಗೆದ್ದಿದೆ. "ಕಯ್ಪೋಚೆ" ಚೇತನ್ ಭಗತ್‌ನ ಕೃತಿ ಆಧಾರಿತ ಕಮರ್ಷಿಯಲ್ ಸಿನಿಮಾ ಆದ್ರೂ ಕೂಡ ಆ ಸಿನಿಮಾಗೊಂದು ಕಲಾತ್ಮಕತೆಯ ಮೆರುಗಿತ್ತು. ರಾಜ್‌ಕುಮಾರ್‌ ರಾವ್, ಸುಶಾಂತ್ ಸಿಂಗ್ ರಜಪೂತ್ ಮತ್ತಿತರರು ಉತ್ತಮವಾಗಿ ಅಭಿನಯಿಸಿದ್ದರು. ರಾಜ್‌ಕುಮಾರ್‌ ರಾವ್ ಆ ಎಲ್ಲರ ನಡುವೆ ಎದ್ದು ನಿಲ್ಲುವಂತ ಪ್ರತಿಭೆ ಅನ್ನಿಸಿದ್ದ. ‘ವಸೇಪುರ್', 'ತಲಾಶ್' ಚಿತ್ರಗಳಲ್ಲಿ ಸಣ್ಣ ಪಾತ್ರಗಳನ್ನೇ ಮಾಡಿದ್ರೂ ಮನಸಲ್ಲುಳಿಯುವಂಥ ಪಾತ್ರಗಳನ್ನಾಗಿ ಮಾಡಿದ್ದ. ನಂತರದ 'ಕ್ವೀನ್' ಮತ್ತು 'ಸಿಟಿ ಲೈಟ್ಸ್' ಚಿತ್ರಗಳಲ್ಲಿ ಕೂಡಾ ಇದೇ ಭರವಸೆಯನ್ನು ಮೂಡಿಸಿದ್ದನಾದರೂ 'ಶಾಹಿದ್' ಅನ್ನೋ ಚಿತ್ರದ ಆತನ ವಕೀಲ ಪಾತ್ರವು ರಾಷ್ಟ್ರಪ್ರಶಸ್ತಿಗೆ ಭಾಜನವಾಯ್ತು. ಚಿತ್ರವೂ ಅಷ್ಟೇ ಸೀರಿಯಸ್ಸಾಗಿ ಪ್ರೇಕ್ಷಕರ ಗಮನವನ್ನು ಹಿಡಿದಿಟ್ಟುಕೊಳ್ಳುವಂತಹ ವಿಷಯವಾಗಿದ್ದರಿಂದ ಈತನ ಆ ಗಂಭೀರ ಅಭಿನಯಕ್ಕೆ ಅದ್ಭುತ ಮನ್ನಣೆ ದೊರೆಯಿತು.

ಹೋದ ವರ್ಷದ 'ಟ್ರಾಪ್ಡ್' ಮತ್ತು 'ಅಲಿಘರ್' ಚಿತ್ರಗಳು ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದವಾದ್ರೂ ಮೇನ್‌ಸ್ಟ್ರೀಮ್‌ ಸಿನಿಮಾಗಳಾಗಿ ಜನಪ್ರಿಯತೆ ಪಡೆದುಕೊಳ್ಳಲಿಲ್ಲ. ಆದ್ರೂ ರಾಜ್‌ಕುಮಾರ್‌ ರಾವ್‌ನ ಪ್ರತಿಭೆಗೆ ತುಂಬಾ ಜನಮೆಚ್ಚುಗೆ ಸಿಕ್ಕಿತು. ರಾಜೀವ್ ಮಸಂದ್ ಮೊದಲ್ಗೊಂಡು ವಿಮರ್ಶಕರೆಲ್ಲರೂ ಹೆಚ್ಚಿನ ಡೈಲಾಗುಗಳಿಲ್ಲದ ಪಾತ್ರ ಕೊಟ್ಟರೂ ಸಿನಿಮಾದಲ್ಲಿ ತಾನಿರುವ, ತನಗಿರುವ ವರ್ಚಸ್ಸನ್ನು ಎದ್ದುಕಾಣುವಂತೆ ಮಾಡಬಲ್ಲ ಕೆಲವೇ ನಟರಲ್ಲಿ ಈತ ಕೂಡ ಎಂದು ಹಾಡಿಹೊಗಳಿದರು. ಇತ್ತೀಚೆಗೆ ಭಾರತದ ಆಸ್ಕರ್ ಎಂಟ್ರಿ ಅಂತಲೇ ಸುದ್ದಿಯಾದ 'ನ್ಯೂಟನ್' ಸಿನಿಮಾದಲ್ಲಿ ಕೂಡ ಅದ್ಭುತವಾಗಿ ನಟಿಸಿರುವ ರಾಜ್ ಕುಮಾರ್ ರಾವ್ ಪಾತ್ರದ ಒಳಹೊಕ್ಕು ಅಭಿನಯಿಸಿದ್ದಾನೆ . ತಾನು ನಿರ್ವಹಿಸಲಿರುವ ಪಾತ್ರದ ಮೂಲಧಾತುಗಳಿಗನುಗುಣವಾಗಿ ತನ್ನ ಆಂಗಿಕ ಮತ್ತು ಮುಖಚರ್ಯೆಗಳನ್ನು ಬದಲಿಸಿಕೊಂಡು ಅಭಿನಯಿಸುವುದರಲ್ಲಿ ವಯಸ್ಸಿಗೆ ಮೀರಿದ ಪರಿಪಕ್ವತೆ ತೋರಿಸಿದ್ದಾನೆ.

ಹೀರೋಗಳಂತೆ, ಕೆಲವು ಬಾರಿ ಹೀರೋಗಳಿಗೂ ಮೀರಿದ ಜನಪ್ರಿಯತೆ ಮತ್ತು ಮೆಚ್ಚುಗೆಯನ್ನು ತಮ್ಮ ಅಭಿನಯದ ಮೂಲಕವೇ ಎಲ್ಲರ ಗಮನ ಸೆಳೆಯಬಲ್ಲ ಪೋಷಕ ನಟರು ಇತ್ತೀಚೆಗೆ ಬರ್ತಿರೋದು ನಮ್ಮ ಪುಣ್ಯವೇ. ಇವರುಗಳು ಪಾತ್ರದ ಒಳಹೊಕ್ಕು ಸಿನಿಮಾಗೂ ಮಿಗಿಲಾಗಿ ಆ ಪಾತ್ರಗಳನ್ನು ಪೋಷಿಸಿರುತ್ತಾರೆ. ಒಂದೊಮ್ಮೆ ಸಿನಿಮಾ ನೆನಪು ಮಾಸಿದರೂ ಆ ಪಾತ್ರಗಳು ಹಾಗೆ ಅಚ್ಚಾಗಿ ಉಳಿದುಹೋಗ್ತವೆ.

ನವಾಜುದ್ದೀನ್‌ ಸಿದ್ದಿಕಿ

ಅಂತಹ ಒಂದು ಪಾತ್ರವೆಂದರೆ ಕಬೀರ್ ಖಾನ್ ನಿರ್ದೇಶನದ 'ನ್ಯೂಯಾರ್ಕ್‌' ಸಿನಿಮಾದ್ದು. ಜಾನ್ ಅಬ್ರಹಾಂ, ನೀಲ್ ನಿತಿನ್ ಮುಖೇಶ್, ಕತ್ರಿನಾ ಕೈಫ್ ಇದ್ರೂ ಇರ್ಫಾನ್ ಖಾನ್ ಒಂದು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ರೂ ಆ ಸಿನಿಮಾ ಚೆನ್ನಾಗಿರದ ಕಾರಣ ಅವ್ಯಾವುವೂ ನೆನಪಲ್ಲುಳಿಯಲೇ ಇಲ್ಲ. ಆದ್ರೆ ಒಂದು ಪಾತ್ರ - ಭಯೋತ್ಪಾದಕ ಅಂತ ಸುಳ್ಳು ಸುಳ್ಳೇ ಅಪವಾದಕ್ಕೀಡಾಗಿ ಅಮೆರಿಕೆಯ ಪೊಲೀಸರಿಂದ ದೌರ್ಜನ್ಯಕ್ಕೆ ಒಳಗಾಗಿ ನಂತರ ನಿರಪರಾಧಿ ಅಂತ ಸಾಬೀತಾಗಿ ಹೊರಬಂದರೂ ಮಾನಸಿಕವಾಗಿ ಜರ್ಜರಿತನಾಗಿ ಕತ್ರಿನಾ ಕೈಫ್‌ನ ವಿಡಿಯೋ ಸಂದರ್ಶನದಲ್ಲಿ ನೋಡುಗರ ಕಣ್ಣೆಲ್ಲ ನೀರಾಗಿಸುವ ಆ ಪಾತ್ರ.. ಅದೊಂದು ಉಳಿದುಬಿಡುತ್ತದೆ ಚಿತ್ರ ನೋಡಿದ ನಂತರವೂ. 'ಮನೋರಮಾ ಸಿಕ್ಸ್ ಫೀಟ್ ಅಂಡರ್' ಸಿನಿಮಾದ ಪುಡಿರೌಡಿಯ ಪಾತ್ರವೂ, 'ಪೀಪ್ಲಿ ಲೈವ್'ನ ರಿಪೋರ್ಟರ್ ಪಾತ್ರವೂ ಸಹ.. ತೀರಾ ಸಣ್ಣ ಪಾತ್ರವಾದ್ರೂ ಅಷ್ಟು ಸುಲಭಕ್ಕೆ ಮರೆಯಲಾಗದ ಪಾತ್ರಗಳು. 'ಗ್ಯಾಂಗ್ಸ್ ಆಫ್ ವಸೇಪುರ್'ನ ಫೈಜಲ್ ಖಾನ್ ಅಂದ್ರೆ ಅದೊಂಥರಾ ಮ್ಯಾಜಿಕ್. ನವಾಝುದ್ದೀನ್ ಸಿದ್ಧಿಕಿ ಅನ್ನೋ ಸಾಧಾರಣ ರೂಪದ ಕುಳ್ಳೇ ಅನ್ನಬಹುದಾದ ನಟನೆಯನ್ನೇ ಮೈಗೂಡಿಸಿಕೊಂಡ ಅಗಾಧ ಶಕ್ತಿಯ ಪುಟ್ಟ ಬಾಂಬ್ ಈತ.

'ತಲಾಶ್' ಸಿನಿಮಾದ ಕ್ರಿಮಿನಲ್ ಇರಬಹುದು, ಇಲ್ಲ 'ಬದ್ಲಾಪುರ'ದ ಕುಂಟು ಲಿಯಾಕ್ ಇರಬಹುದು. ಆಂಗಿಕ ಅಭಿನಯದ ಸೂಕ್ಷ್ಮಗಳನ್ನು ಮೈಗೂಡಿಸಿಕೊಂಡು ಈತ ಹೊರಹಾಕುವ ಅಭಿನಯವನ್ನು ನೋಡುವುದೇ ಒಂದು ಭಾಗ್ಯ. 'ರಮನ್-ರಾಘವ್' ಚಿತ್ರದ ರಾಕ್ಷಸೀ ಅವತಾರ ರಕ್ತ ಹೆಪ್ಪುಗಟ್ಟಿಸುವಂತಾ ಕ್ರೌರ್ಯ ಅವನ ಕಣ್ಣಲ್ಲೇ ತೋರಿಸಿಬಿಡಬಲ್ಲ ಮಾಂತ್ರಿಕ. ತೀರಾ ಕೇಡಿ, ಕಳ್ಳ, ಕೊಲೆಗಾರ ಅಂತಲೇ ಅಲ್ಲದೆ 'ತೀನ್', 'ಕಹಾನಿ' ಚಿತ್ರಗಳಲ್ಲಿನ ಪೊಲೀಸ್ ಪಾತ್ರಗಳಿಗೂ ಸೈ ಅನ್ನಿಸಿಕೊಂಡಿದ್ದರಲ್ಲಿ ಆಶ್ಚರ್ಯವೇ ಇಲ್ಲ.

ಇರ್ಫಾನ್‌ ಖಾನ್, ರಾಜ್‌ಕುಮಾರ್‌ ರಾವ್, ನವಾಜುದ್ದೀನ್ ಸಿದ್ದಿಕಿಯಂಥವರು ಇನ್ನೂ ಹಲವಾರು ಒಳ್ಳೋಳ್ಳೆ ಸಿನಿಮಾಗಳ ಜೊತೆಜೊತೆಗೆ ಮೇನ್‌ಸ್ಟ್ರೀಮ್‌ ಅಥವಾ ಬಿಗ್ ಬಜೆಟ್ ಸಿನಿಮಾಗಳಲ್ಲೂ ಸಣ್ಣಪುಟ್ಟ ಕೆಟ್ಟ ಪಾತ್ರಗಳನ್ನು ಮಾಡಿರುವುದೂ ಇದೆ. ನಟನೊಬ್ಬನಿಗೆ ಪಾತ್ರಗಳ ಆಯ್ಕೆ ಮುಖ್ಯವಾಗಿ ಸಿನಿಮಾಗಳಲ್ಲವೆಂಬುದನ್ನು ಮನಸಲ್ಲಿಟ್ಟುಕೊಂಡು ಅಂತಹ ಕೆಟ್ಟ ಚಿತ್ರಗಳ ಬಗ್ಗೆ ಮಾತನಾಡದಿರುವುದು ನಮ್ಮ ಜಾಣತನ. ಈ ಮೂರೂ ಜನರನ್ನು ನೋಡಿದ್ರೆ ಒಂದು ಕಾಲದ ನಾಸೀರುದ್ದೀನ್ ಶಾ, ಓಂ ಪುರಿ, ಪಂಕಜ್ ಕಪೂರ್ ನೆನಪಾಗ್ತಾರೆ. ಎಲ್ಲರಿಗೂ ರಂಗಭೂಮಿಯ ಹಿನ್ನೆಲೆಯಿದ್ದರೂ ಅದಕ್ಕೂ ಮಿಗಿಲಾಗಿ ರಾಜ್‌ಕುಮಾರ್‌ ರಾವ್‌ ಒಬ್ಬನನ್ನು ಹೊರತು ಪಡಿಸಿದರೆ ಮಿಕ್ಕೆಲ್ಲರನ್ನೂ ಹೀಗೆ ಒಟ್ಟಿಗೆ ಹಿಡಿದಿಟ್ಟಿರುವುದು "ನ್ಯಾಷನಲ್ ಸ್ಕೂಲ್ ಆಫ್ ಡ್ರಾಮ" ಅನ್ನೋ ಒಂದು ತಂತು. ಅಲ್ಲಿದೆ ಎಲ್ಲ ಮ್ಯಾಜಿಕ್ !

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More