ಸ್ಯಾಂಡಲ್‌ವುಡ್‌ನಲ್ಲಿ ವಿಶಿಷ್ಟ ಸಂಚಲನ ಸೃಷ್ಟಿಸಿರುವ ಸಿಂಹ ಕಂಠದ ನಟ ವಸಿಷ್ಠ

ಪ್ರಸ್ತುತ ಸ್ಯಾಂಡಲ್‌ವುಡ್‌ನಲ್ಲಿ ಸುದ್ದಿ ಮಾಡುತ್ತಿರುವ ನಟರ ಪೈಕಿ ವಸಿಷ್ಠ ಸಿಂಹ ಅವರ ಹೆಸರು ಪ್ರಮುಖವಾಗಿ ಪ್ರಸ್ತಾಪವಾಗುತ್ತದೆ. ವಿಶಿಷ್ಟ ಧ್ವನಿ, ಆಕರ್ಷಕ ಕಣ್ಣುಗಳಿಂದಲೇ ಅವರು ಪ್ರೇಕ್ಷಕರನ್ನು ಸೆಳೆಯಬಲ್ಲ ಪ್ರತಿಭೆ. ಗಾಂಧಿನಗರದ ಕೆಲವು ಚಿತ್ರಕಥೆಗಾರರು ವಸಿಷ್ಠರಿಗೆಂದೇ ಕತೆ ಹೆಣೆಯುತ್ತಿರುವುದು ಗಮನಾರ್ಹ

ಅರಕಲಗೂಡು ಸಮೀಪದ ರಾಮನಾಥಪುರದ ಯುವಕ ವಸಿಷ್ಠ. ಗಾಯಕನಾಗಬೇಕೆಂದು ಸಿನಿಮಾಗೆ ಎಂಟ್ರಿ ಕೊಟ್ಟವರು ನಟನಾಗಿ ಬೆಳೆಯುತ್ತಿದ್ದಾರೆ. ಹಂಸಲೇಖ ಅವರಲ್ಲಿ ಶಿಷ್ಯನಾಗಿ ಸುಮಾರು ಒಂದೂವರೆ ವರ್ಷ ಸಿನಿಮಾದ ಒಳಹೊರಗುಗಳನ್ನು ಅರಿತರು. ಮುಂದೆ ಕಾಲೇಜು ಓದಲು ಸೇರಿಕೊಂಡಾಗ ಸಿನಿಮಾರಂಗದ ನಂಟು ತಾತ್ಕಾಲಿಕವಾಗಿ ಕಡಿತಗೊಂಡಿತು. ನ್ಯಾಷನಲ್ ಕಾಲೇಜಿನಲ್ಲಿ ಡಿಗ್ರಿ ಓದುತ್ತಲೇ ಅಲ್ಲಿನ ರಂಗತಂಡದಲ್ಲಿ ಸಕ್ರಿಯರಾಗಿದ್ದರು. ವಸಿಷ್ಠ ನಟನಾಗಿ ರೂಪುಗೊಂಡದ್ದು ಅಲ್ಲಿಯೇ. ಆನಂತರ ಸಿನಿಮಾಗೆ ಕಾಲಿಟ್ಟ ಅವರೀಗ ಬೇಡಿಕೆಯ ಕಲಾವಿದ. ತಮ್ಮ ಸಿನಿಮಾ ಜರ್ನಿ ಕುರಿತಾಗಿ ಅವರಿಲ್ಲಿ ಮಾತನಾಡಿದ್ದಾರೆ.

ಸಾಫ್ಟ್‌ವೇರ್‌ ಕಂಪನಿ ಕೆಲಸ ಬಿಟ್ಟು ಸಿನಿಮಾ ಪ್ರವೇಶಿಸುವಾಗ ನಿಮಗೆ ಆತಂಕವಿರಲಿಲ್ಲವೇ?

ಅಫ್‌ಕೋರ್ಸ್‌ ಅಳುಕು ಇತ್ತು. ಅದೃಷ್ಟಕ್ಕೆ ಸಿನಿಮಾ ಕೈಹಿಡಿಯಿತು, ಹೆಸರು ಬಂತು. ಅವಕಾಶಗಳು ಅರಸಿ ಬರುತ್ತಿದ್ದಂತೆ ಆತಂಕ ಇಲ್ಲವಾಯ್ತು. ಆರಂಭದಲ್ಲಿ ನನ್ನ ಸ್ಟ್ರೆಂಥ್ ನನಗೆ ಗೊತ್ತಿರಲಿಲ್ಲ. ‘ರಾಜಾಹುಲಿ’ ಸಿನಿಮಾದಲ್ಲಿನ ಪಾತ್ರ ಕ್ಲಿಕ್ಕಾದಾಗ ಕಾನ್ಫಿಡೆನ್ಸ್ ಬಂತು. ಏನೇ ಕೆಲಸ ಮಾಡಿದರೂ ಅದರ ಬಗ್ಗೆ ನಮಗೆ ಅರಿವಿರಬೇಕು. ಮುಂದೆ ಅಭಿನಯಕ್ಕೆ ಅವಕಾಶವಿರುವಂತಹ ಖಳ, ಪೋಷಕ ಪಾತ್ರಗಳನ್ನು ಒಪ್ಪಿಕೊಳ್ಳುತ್ತಾ ಆತ್ಮವಿಶ್ವಾಸ ಹೆಚ್ಚಿಸಿಕೊಂಡೆ.

ರಂಗಭೂಮಿ ಹಿನ್ನೆಲೆಯ ನೀವು ಪಾತ್ರವೈವಿಧ್ಯ ಅಪೇಕ್ಷಿಸುತ್ತೀರಿ. ಸಿನಿಮಾ ಪಾತ್ರಗಳು ತೃಪ್ತಿ ಕೊಟ್ಟಿವೆಯೇ?

ಇಲ್ಲಿಯವರೆಗಿನ ಪಾತ್ರಗಳು ಖಂಡಿತ ತೃಪ್ತಿ ಕೊಟ್ಟಿವೆ. ಸಾಮಾನ್ಯವಾಗಿ ನಾನು ಎಲ್ಲ ಪಾತ್ರಗಳನ್ನೂ ಒಪ್ಪಿಕೊಳ್ಳೋಲ್ಲ. ನನಗಿಷ್ಟವಾಗುವ ಪಾತ್ರಗಳಿಗೆ ಆಧ್ಯತೆ. ನಮಗೆ ಚಾಲೆಂಜಿಂಗ್ ಎನಿಸುವಂತಹ, ಒಳ್ಳೆಯ ವಸ್ತು, ಪಾತ್ರಗಳಿದ್ದರೆ ನಮಗೂ ನಟಿಸಲು ಮೋಟಿವೇಷನ್ ಇರುತ್ತೆ.                       

ತಮಿಳು ಚಿತ್ರದಲ್ಲಿ ನಟಿಸಿದ್ದೀರಿ, ಕಾಲಿವುಡ್ ಬಗ್ಗೆ ಏನು ಹೇಳುತ್ತೀರಿ?

ಅದು ಒಂದು ಸಮುದ್ರ. ನನ್ನ ಮೊದಲ ಸಿನಿಮಾ ಆಗಿದ್ದು ಅಲ್ಲೇ. ಅಲ್ಲಿಗೂ, ನಮ್ಮಲ್ಲಿನ ಮೇಕಿಂಗ್‌ಗೂ ಹೆಚ್ಚೇನೂ ವ್ಯತ್ಯಾಸವಿಲ್ಲ. ಅವರು ಕೆಲಸ ಮಾಡೋ ರೀತಿ, ತಯಾರಿ, ಬಜೆಟ್, ಅಪ್ರೋಚ್‌ನಲ್ಲಿ ಚೇಂಜ್ ಇರುತ್ತೆ. ಒಂದಷ್ಟು ಪ್ರಯೋಗಗಳಾಗುತ್ತವೆ. ಹಾಗೆ ನೋಡಿದರೆ “ಲೂಸಿಯಾ” ನಂತರ ನಮ್ಮ ಉದ್ಯಮದಲ್ಲಿಯೂ ಒಳ್ಳೆಯ ಎಕ್ಸ್‌ಪೆರಿಮೆಂಟ್ ಆಗ್ತಿವೆ. ಇಲ್ಲಿ ಪ್ರಯೋಗ ಎಂದಾಕ್ಷಣ... ಸಿನಿಮಾ ದೊಡ್ಡ ಯಶಸ್ಸು ಕಾಣುತ್ತದೆ, ಇಲ್ಲವೇ ಡಿಸಾಸ್ಟರ್ ಆಗುತ್ತೆ! ಇದು ಸಹಜ. ಮಲೆಯಾಳಂ ವಿಷಯಕ್ಕೆ ಬಂದರೆ, ತೊಂಬತ್ತರ ದಶಕದಲ್ಲಿ ಅಲ್ಲಿ ಕೂಡ ಕಳಪೆ ಸಿನಿಮಾಗಳಿದ್ದವು. ಅದನ್ನು ಬ್ರೇಕ್ ಮಾಡ್ಬೇಕು ಅಂತ ಅವರು ಟೊಂಕ ಕಟ್ಟಿ ನಿಂತರು. ಹಾಗೆ ಇದೆಲ್ಲಾ ಸೈಕಲ್ ಥರ. ನಮ್ಮಲ್ಲೂ ಹಾಗಾಗಿತ್ತು. ಈಗ ಒಳ್ಳೆಯ ಪ್ರಯೋಗಗಳಾಗುತ್ತಿವೆ.

ರಂಗಭೂಮಿಯಲ್ಲಿ ಈಗಲೂ ಆಕ್ಟೀವ್ ಇದ್ದೀರಾ?

ಸಿನಿಮಾ ನಟನೆಯ ಒತ್ತಡದ ಮಧ್ಯೆ ಸಾಧ್ಯವಾಗುತ್ತಿಲ್ಲ. ಪ್ರದರ್ಶನ ಕಲಾ ಸಂಸ್ಥೆ (ಪ್ರಕಸಂ) ರಂಗತಂಡದ ಜೊತೆಗಿದ್ದೇನೆ. ರಂಗದ ಮೇಲೆ ನಟಿಸಲು ಸಾಧ್ಯವಾಗದಿದ್ದರೂ ನಾಟಕಗಳನ್ನು ನೋಡುತ್ತಿರುತ್ತೇನೆ.

ಧ್ವನಿ ನಿಮ್ಮ ಸ್ಟ್ರೆಂಥ್. ಇದೇನು ಹೆರಿಡಿಟಿಯೇ?

ಖಂಡಿತ ಇಲ್ಲ. ದೇವರು ಕೊಟ್ಟ ವರ ಇರಬಹುದು. ಆದರೆ ಬೇರೆಯವರು ಗುರುತಿಸಿದ ನಂತರವೇ ನಾನು ಆ ಬಗ್ಗೆ ಯೋಚಿಸಿದ್ದು.

ಸದ್ಯದ ನಿಮ್ಮ ಸಿನಿಮಾಗಳು...

ನಾಲ್ಕು ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿವೆ. “ಟಗರು”, “ಕೆಜಿಎಫ್” ಚಿತ್ರೀಕರಣದಲ್ಲಿವೆ. ನಾನು ನಾಯಕನಾಗಿ ನಟಿಸಿರುವ “ಸಂಘರ್ಷ”ದ ಬಗ್ಗೆ ನನಗೆ ತುಂಬಾ ಪ್ರೀತಿ. ನನ್ನ ಪ್ರಕಾರ ಸಿನಿಮಾ ಅಂದ್ರೆ ದೊಡ್ಡ ಕ್ಯಾನ್ವಾಸ್‌ನಲ್ಲಿ ವಿಷಯವೊಂದನ್ನು ಕನ್ವಿನ್ಸಿಂಗ್ ಆಗಿ ಹೇಳೋದು. “ಸಂಘರ್ಷ”ದಲ್ಲಿ ಇದಾಗಿದೆ.

ಗಾಯಕನಾಗಿಯೂ ಪ್ರೀತಿ ಗಳಿಸಿದ್ದೀರಿ...

ಹಾಡು, ಗಾಯನ ಚಿಕ್ಕಂದಿನ ಪ್ಯಾಷನ್. ಒಂದೇ ಒಂದು ಬಾರಿ ಕ್ಯಾಸೆಟ್, ಸಿಡಿಗಳ ಮೇಲೆ ಗಾಯಕನಾಗಿ ನನ್ನ ಹೆಸರು ಬರಬೇಕೆಂದು ಅಪೇಕ್ಷೆ ಪಟ್ಟಿದ್ದೆ. “ಕಿರಿಕ್ ಪಾರ್ಟಿ” ಸಿನಿಮಾಗೆ ಹಾಡುವ ಮೂಲಕ ಆಸೆ ಈಡೇರಿತು. ನನ್ನ “ದಯವಿಟ್ಟು ಗಮನಿಸಿ” ಸಿನಿಮಾ ಪ್ರೊಮೋಷನ್ ವೀಡಿಯೋಗೆ ಹಾಡಿದೆ. ಈಗ ಮತ್ತೆರೆಡು ಸಿನಿಮಾಗಳಿಗೆ ಹಾಡುತ್ತಿದ್ದೇನೆ. ನಾನು ಪ್ರೊಫೆಷನಲ್ ಸಿಂಗರ್ ಥರ ಹಾಡ್ಲಿಕ್ಕೆ ಹೋಗ್ತಿಲ್ಲ. ನಾನು ಹಾಡದೇ ಇರೋದ್ರಿಂದ ಪ್ರತಿಭಾವಂತ ಗಾಯಕರೊಬ್ಬರಿಗೆ ಅವಕಾಶ ಸಿಕ್ಕರೆ ಅದು ನನಗೆ ಖುಷಿಯೇ. ನಟನಾಗಿ ಕೆಲಸ ಮಾಡುತ್ತಿದ್ದೇನೆ. ಗಾಯನದಲ್ಲಿ ಕೆರಿಯರ್ ಮಾಡ್ಕೋಬೇಕು ಅಂತೇನಿಲ್ಲ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More