ರಾಜೀವ್ ಗಾಂಧಿ ಹತ್ಯೆ ಆಧರಿಸಿದ ವೆಬ್‌ ಸೀರೀಸ್‌ನಲ್ಲಿ ನವಾಜುದ್ದೀನ್‌ ಸಿದ್ದಿಕಿ?

ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಹತ್ಯೆಗೆ ಸಂಬಂಧಿಸಿದ ವಸ್ತು ಆಧರಿಸಿ ‘ಆಸ್ಫೋಟ’ ಸಿನಿಮಾ ಮಾಡುವುದಾಗಿ ಕನ್ನಡ ನಿರ್ದೇಶಕ ಎಎಂಆರ್ ರಮೇಶ್ ಹೇಳಿದ್ದರು. ಇದೀಗ ಇದು ಬದಲಾದ ಶೀರ್ಷಿಕೆಯೊಂದಿಗೆ ವೆಬ್‌ ಸೀರಿಸ್‌ ಆಗಿ ಮೂಡಿಬರಲಿದ್ದು, ನವಾಜುದ್ದೀನ್‌ ಸಿದ್ದಿಕಿ ನಟಿಸುವ ಸಾಧ್ಯತೆ ಇದೆ

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ವೇಳೆಗಾಗಲೇ ಎಎಂಆರ್ ರಮೇಶ್ ನಿರ್ದೇಶನದ ‘ಆಸ್ಫೋಟ’ ಸಿನಿಮಾ ಸೆಟ್ಟೇರಬೇಕಿತ್ತು. ರಾಜೀವ್ ಗಾಂಧಿ ಹತ್ಯೆ ಆಧರಿಸಿದ ಈ ಚಿತ್ರ ಮೂರು ಭಾಷೆಗಳಲ್ಲಿ ತಯಾರಾಗಲಿದೆ ಎಂದಿದ್ದರು ರಮೇಶ್‌. ಇದೀಗ ಅದೇ ವಸ್ತು ‘ಎಲ್‌ಟಿಟಿಇ’ ಶೀರ್ಷಿಕೆಯಡಿ ವೆಬ್ ಸೀರೀಸ್ ಅಗಿ ಮೂಡಿಬರಲಿದೆ. ಹಿಂದಿ ನಟ ನವಾಜುದ್ದೀನ್‌ ಸಿದ್ದಿಕಿ, ತೆಲುಗು ನಟರಾದ ವೆಂಕಟೇಶ್‌, ರಾಣಾ ಇದರಲ್ಲಿ ನಟಿಸುವ ಸಾಧ್ಯತೆಗಳಿವೆ. ಕಲಾವಿದರ ಕುರಿತಂತೆ ಮುಂದಿನ ತಿಂಗಳು ಹೆಚ್ಚಿನ ಮಾಹಿತಿ ನೀಡುವುದಾಗಿ ಹೇಳುತ್ತಾರೆ ರಮೇಶ್‌.

"ಇದು ಎರಡು ಸೀಸನ್‌ಗಳಲ್ಲಿ ತಯಾರಾಗಲಿದೆ. ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಹತ್ಯೆಯ ಘಟನಾವಳಿಗಳನ್ನು ಒಂದು ಸೀಸನ್‌ನಲ್ಲಿ ಹೇಳಲಿದ್ದೇವೆ. ಮತ್ತೊಂದು ಸೀಸನ್‌ನಲ್ಲಿ ಎಲ್‌ಟಿಟಿಇ ಬೆಳೆದ ಬಗೆ ಮತ್ತು ಸಂಘಟನೆಯ ಮುಖ್ಯಸ್ಥ ವಿ ಪ್ರಭಾಕರನ್‌ ಕುರಿತು ಚಿತ್ರಿಸುತ್ತೇವೆ. ವೆಬ್‌ ಸೀರೀಸ್‌ ನಾಲ್ಕು ಭಾಷೆಗಳಲ್ಲಿ ತಯಾರಾಗಲಿದ್ದು, ನೇಟಿವಿಟಿಗೆ ಹೊಂದುವಂತೆ ಆಯಾ ಭಾಗಗಳಲ್ಲೇ ಚಿತ್ರೀಕರಣ ನಡೆಸುತ್ತೇವೆ,” ಎನ್ನುವ ರಮೇಶ್, ಈ ಹಿಂದೆ ಇದೇ ವಸ್ತು ಆಧರಿಸಿ ‘ಸೈನೈಡ್‌’ ಸಿನಿಮಾ ಮಾಡಿದ್ದರು. ಈಗ ವೆಬ್‌ ಸೀರೀಸ್‌ನಲ್ಲಿ ಕತೆ ಹೆಚ್ಚು ವಿಸ್ತಾರವಾಗಲಿದೆ.

ಇದನ್ನೂ ಓದಿ : ರಿವೀಲ್ ಆಯ್ತು ಠಾಕ್ರೆ ಪಾತ್ರದಲ್ಲಿನ ನವಾಜುದ್ದೀನ್‌ ಸಿದ್ದಿಕಿ ಲುಕ್!‌ 

ಸಿನಿಮಾ ಮಾಡಲು ಹೊರಟ ಅವರಿಗೆ ಸ್ಕ್ರಿಪ್ಟ್‌ ಹಂತದಲ್ಲೇ ಸಮಸ್ಯೆಗಳು ಎದುರಾದವಂತೆ. ತಾವು ಹೇಳಲಿರುವ ಕತೆಯನ್ನು ಎರಡೂವರೆ ಗಂಟೆಯಲ್ಲಿ ಹಿಡಿದಿಡಲು ಸಾಧ್ಯವಿಲ್ಲ ಎನಿಸಿದೆ. "ನಾವು ಆಯ್ದುಕೊಂಡ ವಸ್ತು ವಿಸ್ತಾರವಾದುದು. ಈ ಕುರಿತು ಚರ್ಚಿಸುವುವಾಗ ಇದನ್ನು ವೆಬ್‌ ಸೀರೀಸ್ ಆಗಿ ಮಾಡಿದರೆ ಹೇಗೆಂದು ತೆಲುಗು ನಟ ರಾಣಾ ದಗ್ಗುಬಾತಿ ಪ್ರಶ್ನಿಸಿದರು. ನನಗೂ ಅದು ಸರಿ ಎನಿಸಿತು. ಖುದ್ದು ಅವರೇ ಪ್ರಾಜೆಕ್ಟ್‌ ಕುರಿತಂತೆ ಹೆಚ್ಚು ಆಸಕ್ತಿ ವಹಿಸಿ ಇದರಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ವೆಬ್ ಸೀರೀಸ್‌ನಲ್ಲಿ ಅವರೊಂದು ಪ್ರಮುಖ ಪಾತ್ರ ನಿರ್ವಹಿಸಿಲಿದ್ದಾರೆ,” ಎನ್ನುತ್ತಾರೆ ರಮೇಶ್.

ವೆಬ್‌ ಸೀರೀಸ್‌ಗೆ ಹಿಂದಿ, ಕನ್ನಡ, ತಮಿಳು ಮತ್ತು ತೆಲುಗಿನ ದೊಡ್ಡ ತಾರೆಯರನ್ನು ಕರೆತರುವ ಯೋಜನೆಯೂ ಅವರಿಗಿದೆ. "ಐಪಿಎಸ್ ಅಧಿಕಾರಿ ಕಾರ್ತಿಕೇಯನ್‌ ಪಾತ್ರಕ್ಕೆ ತೆಲುಗು ನಟ ವೆಂಕಟೇಶ್‌ ಅವರನ್ನು ಕರೆತರುವ ಉದ್ದೇಶವಿದೆ. ಬೆಂಗಳೂರು, ಚೆನ್ನೈ, ದೆಹಲಿ, ಶ್ರೀಲಂಕಾದಲ್ಲಿ ಚಿತ್ರೀಕರಣ ನಡೆಸಲಿದ್ದೇವೆ. ಮುಂದಿನ ತಿಂಗಳು ವೆಬ್‌ ಸೀರೀಸ್‌ನಲ್ಲಿ ನಟಿಸಲಿರುವ ಕಲಾವಿದರ ಬಗ್ಗೆ ಅಧಿಕೃತ ಮಾಹಿತಿ ನೀಡಲಿದ್ದೇನೆ,” ಎನ್ನುತ್ತಾರವರು.

ದೇಶ, ಧರ್ಮಗಳ ಗಡಿ ಮೀರಿದ ಸತ್ಯ ಮತ್ತು ಮಾನವೀಯತೆ ಎತ್ತಿಹಿಡಿವ ಚಿತ್ರ ‘ಮಂಟೋ’
ಕನ್ನಡ ಸಿನಿಮಾರಂಗದ ಹಿರಿಯ ಕಲಾವಿದ ಸದಾಶಿವ ಬ್ರಹ್ಮಾವರ ಇನ್ನಿಲ್ಲ
ದೇವರಾಜ್‌ ಮಾತು | ಓಡಿಬಂದು ಖಳನನ್ನೇ ಅಪ್ಪಿಕೊಂಡ ‘ಆಗಂತುಕ’ ನಾಯಕಿ!
Editor’s Pick More