ಚಿತ್ರ ವಿಮರ್ಶೆ | ರಾಜಕೀಯ ವಿಡಂಬನೆಯ ಅಪರೂಪದ ಸಿನಿಮಾ ‘ನೊಗ್‌ರಾಜ್‌’

ವ್ಯವಸ್ಥೆಯನ್ನು ಅಣಕ ಮಾಡುತ್ತಲೇ ಬೆಳೆಯುವ ನಾಗರಾಜ್‌, ತನ್ನನ್ನು ಬೆಂಬಲಿಸುವುದು ಅನಿವಾರ್ಯ ಎಂದು ಜನರನ್ನೂ ಮರುಳುಗೊಳಿಸುತ್ತಾನೆ! ವಾಮಮಾರ್ಗಗಳನ್ನು ಕರಗತ ಮಾಡಿಕೊಂಡ ಆತನ ಈ ಪಾತ್ರದಲ್ಲಿ ಪ್ರೇಕ್ಷಕರು ದೇಶದ ಪ್ರಸ್ತುತ ರಾಜಕೀಯ ಸ್ಥಿತಿಗತಿಗಳನ್ನು ಕಾಣಬಹುದು

ಪ್ರೀತಿ-ಪ್ರೇಮ, ಹೊಡೆದಾಟ, ಹಾರರ್‌ ಮಾದರಿಗಳಿಂದ ಹೊರತಾದ ಪೊಲಿಟಿಕಲ್‌ ಡ್ರಾಮಾ ‘ಹಂಬಲ್‌ ಪೊಲಿಟಿಷೀಯನ್‌ ನೊಗ್‌ರಾಜ್‌.’ ಚಿತ್ರದುದ್ದಕ್ಕೂ ರಾಜಕೀಯ ವಿಡಂಬನೆ ಇದೆ. ರಾಜಕೀಯಕ್ಕೆ ಮಾತೇ ಬಂಡವಾಳವಾದರೂ, ಇಲ್ಲಿ ಅತಿಯಾಗಿರುವ ಮಾತು ಚಿತ್ರವನ್ನು ಭಾರವಾಗಿಸಿದೆ. ಕೆಲವೆಡೆ ನಿಧಾನಗತಿಯಿಂದಾಗಿ ನೋಡುಗನ ಸಂಯಮ ಕೆಣಕುವ ಸಿನಿಮಾದ ಒಟ್ಟಾರೆ ಆಶಯ ಮಾತ್ರ ಚೆನ್ನಾಗಿದೆ. ಅಪರೂಪದ ಪ್ರಯತ್ನದಿಂದ ಗಮನ ಸೆಳೆಯುತ್ತದೆ.

ದುಡ್ಡು ಮಾಡುವುದನ್ನೇ ಗುರಿಯಾಗಿಸಿಕೊಂಡಿರುವ ರಾಜಕಾರಣಿ ನಾಗರಾಜನ ರಾಜಕೀಯ ನಾಟಕಗಳ ಕಥಾನಕವಿದು. ಕಾರ್ಪೋರೇಟರ್‌ ನಾಗರಾಜ್‌ ಎಂಎಲ್‌ಎ ಅಗಲು ನಡೆಸುವ ರಾಜಕೀಯ ತಂತ್ರಗಾರಿಕೆ, ಹಣ ಮಾಡಲು ಸಾಧ್ಯವಾಗುವ ಯಾವುದೇ ಹಾದಿಯನ್ನು ಬಿಟ್ಟುಕೊಡದ ಆತನ ಮನಸ್ಥಿತಿ, ಪ್ರತಿಸ್ಪರ್ಧಿಯನ್ನು ಹಣಿಯಲು ಮಾನ-ಮರ್ಯಾದೆ ಬಿಟ್ಟು ನಡೆದುಕೊಳ್ಳುವ ರೀತಿನೀತಿಗಳನ್ನು ನಿರ್ದೇಶಕರು ಚಿತ್ರದಲ್ಲಿ ಅನಾವರಣಗೊಳಿಸುತ್ತ ಹೋಗುತ್ತಾರೆ.

ಎಂಎಲ್‌ಎ ಚುನಾವಣೆಯಲ್ಲಿ ನಾಗರಾಜ್‌ಗೆ ಅನಿವಾಸಿ ಭಾರತೀಯ ಅರುಣ್‌ ಪಾಟೀಲ್‌ ಪ್ರತಿಸ್ಪರ್ಧೆ. ವ್ಯವಸ್ಥೆಯ ಬಲುಪಶುವಾಗುವ ಆತ, ಬದಲಾವಣೆಗೆ ಅವಕಾಶ ಕೊಡಿರೆಂದು ಜನರ ಬಳಿ ಹೋಗುತ್ತಾನೆ. ಎಲ್ಲ ರೀತಿಯ ತಂತ್ರಗಳನ್ನು ಬಲ್ಲ ನಾಗರಾಜ್‌ ಎದುರು ಪಾಟೀಲ್‌ ಪ್ರಾಮಾಣಿಕತೆ ಮುಕ್ಕಾಗುತ್ತದೆ. ವ್ಯವಸ್ಥೆಯನ್ನು ಅಣಕ ಮಾಡುತ್ತಲೇ ಬೆಳೆಯುವ ನಾಗರಾಜ್‌, ತನ್ನನ್ನು ಬೆಂಬಲಿಸುವುದು ಅನಿವಾರ್ಯ ಎಂದು ಜನರನ್ನೂ ಮರುಳುಗೊಳಿಸುತ್ತಾನೆ! ವಾಮಮಾರ್ಗಗಳನ್ನು ಕರಗತ ಮಾಡಿಕೊಂಡ ಆತನ ಪಾತ್ರದಲ್ಲಿ ಪ್ರೇಕ್ಷಕರು ಪ್ರಸ್ತುತ ರಾಜಕೀಯ ಸ್ಥಿತಿಗತಿಗಳನ್ನು ನೋಡಬಹುದು.

ಶೀರ್ಷಿಕೆ ಪಾತ್ರದಲ್ಲಿ ನಟಿಸಿರುವ ದಾನಿಷ್‌ ಸೇಠ್‌ ಚಿತ್ರವನ್ನು ತುಂಬಿಕೊಂಡಿದ್ದಾರೆ. ಕಂಗ್ಲಿಷ್‌ ಭಾಷೆ, ಹಾವಭಾವಗಳಿಂದ ಅವರು ಪಾತ್ರಕ್ಕೆ ಸೂಕ್ತ ನ್ಯಾಯ ಸಲ್ಲಿಸಿದ್ದಾರೆ. ಮೂಲತಃ ಆರ್‌ಜೆ, ನಿರೂಪಕ ಆಗಿರುವ ಅವರಿಗೆ ಪಾತ್ರ ನಿರ್ವಹಣೆ ಸಲೀಸಾಗಿರುವಂತಿದೆ. ಅವರ ಸಹಾಯಕನ ಪಾತ್ರದಲ್ಲಿ ವಿಜಯ್‌ ಚೆಂಡೂರ್, ಪತ್ನಿಯಾಗಿ ಸುಮುಖಿ ಸುರೇಶ್‌ ಪಾತ್ರಗಳೂ ನೆನಪಿನಲ್ಲುಳಿಯುತ್ತವೆ. ‘ಯು ಟರ್ನ್‌’ ಖ್ಯಾತಿಯ ರೋಜರ್ ನಾರಾಯಣ್‌ ಮತ್ತು ಶೃತಿ ಹರಿಹರನ್‌ ಅವರದ್ದು ಹದವರಿತ ನಟನೆ.

ಇದನ್ನೂ ಓದಿ : ಸೈಕಲಾಜಿಕಲ್‌ ಥ್ರಿಲ್ಲರ್‌ ‘ಜವ’ ಚಿತ್ರದಲ್ಲಿ ಉ‍ಷಾ ಉತ್ತುಪ್‌ ಗಾಯನ ಹೈಲೈಟ್‌

ಆರಂಭದಲ್ಲಿ ಕಥಾನಾಯಕನನ್ನು ಪರಿಚಯಿಸುವ ತಂತ್ರ ಚೆನ್ನಾಗಿದೆ. ಮುಂದೆ ಕೆಲವೆಡೆ ಕತೆಯ ಓಘಕ್ಕೆ ಹಿನ್ನೆಡೆ ಅಗುತ್ತದೆ ಎನಿಸುವುದು ಹೌದು. ಏಕತಾನತೆಯ ಮಾತು, ನಟನೆಯಿಂದ ಹೀಗಾಗಿರುವ ಸಾಧ್ಯತೆ ಒಂದಾದರೆ, ನಿರ್ದೇಶಕರ ಅನನುಭವವೂ ಇದಕ್ಕೆ ಕಾರಣವಾಗಿರಬಹುದು. ದ್ವಂದ್ವಾರ್ಥಗಳನ್ನು ಧ್ವನಿಸುವ ನಾಲ್ಕಾರು ಸಂಭಾಷಣೆಗಳು ಸಂದರ್ಭೋಚಿತವಾಗಿದ್ದು, ಈ ವಿಚಾರದಲ್ಲಿ ನಿರ್ದೇಶಕರ ಜಾಣ್ಮೆಗೆ ತಲೆದೂಗಬೇಕು. ಚಿತ್ರಕತೆ, ಸಂಭಾಷಣೆಯಲ್ಲಿ ನಿರ್ದೇಶಕ ಸಾದ್ ಖಾನ್‌ಗೆ ದಾನಿಷ್‌ ಸೇಠ್‌ ಜೊತೆಯಾಗಿದ್ದಾರೆ. ಇವರ ಮಾತು ಮತ್ತು ಸಂಕಲನಕಾರರ ಕೆಲಸಕ್ಕೆ ಹೆಚ್ಚಿನ ಮಾರ್ಕು ಸಲ್ಲಬೇಕು. ಟೈಟಲ್‌ ಟ್ರ್ಯಾಕ್‌ನಲ್ಲಿ ಕನ್ನಡವೇಕಿಲ್ಲ ಎನ್ನುವುದಕ್ಕೆ ಚಿತ್ರತಂಡ ಕಾರಣ ಕೊಡಬೇಕು. ಸದ್ಯದ ಪ್ರೀತಿ, ಆಕ್ಷನ್‌, ಕಾಮಿಡಿ, ಹಾರರ್‌ ಫಾರ್ಮುಲಾ ಸಿನಿಮಾಗಳ ಮಧ್ಯೆ ‘ನೊಗ್‌ರಾಜ್‌’ ಭಿನ್ನವಾಗಿ ನಿಲ್ಲುತ್ತದೆ. ಹೊಸ ಅನುಭವ ಪಡೆಯಬೇಕೆನ್ನುವವರು ನೋಡಬಹುದಾದ ಪ್ರಯೋಗವಿದು.

ನಿರ್ದೇಶನ: ಸಾದ್ ಖಾನ್‌‌‌ | ನಿರ್ಮಾಣ: ಪುಷ್ಕರ್ ಮಲ್ಲಿಕಾರ್ಜುನಯ್ಯ, ಹೇಮಂತ್ ರಾವ್ ಮತ್ತು ರಕ್ಷಿತ್‌ ಶೆಟ್ಟಿ‌ | ಸಂಗೀತ: ಶ್ರೀಚರಣ್‌ ಪಕಾಲಾ, ಜೀತ್ ಸಿಂಗ್‌, ಡಿಜೆ ಜಸ್ಮೀತ್‌, ಪ್ರಜ್ವಲ್‌ ಪೈ‌ | ಛಾಯಾಗ್ರಹಣ: ಕರ್ಮ್‌ ಚಾವ್ಲಾ‌ | ತಾರಾಗಣ: ದಾನಿಶ್‌ ಸೇಠ್‌, ವಿಜಯ್ ಚೆಂಡೂರ್‌, ಸುಮುಖಿ ಸುರೇಶ್‌, ರೋಜರ್ ನಾರಾಯಣ್‌, ಶೃತಿ ಹರಿಹರನ್ ಮತ್ತಿತರರು.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More