ಸ್ಮರಣೆ | ಐತಿಹಾಸಿಕ, ಪೌರಾಣಿಕ ಸಿನಿಮಾಗಳ ಅಪೂರ್ವ ತಾರೆ ಅಂಜಲಿದೇವಿ

ತೆಲುಗು ಮತ್ತು ತಮಿಳು ಸಿನಿಮಾಗಳ ಐತಿಹಾಸಿಕ ಮತ್ತು ಪೌರಾಣಿಕ ಪಾತ್ರಗಳಲ್ಲಿ ಅಂಜಲಿದೇವಿ ದೊಡ್ಡ ಜನಪ್ರಿಯತೆ ಗಳಿಸಿದ್ದರು. ಅವರ ಸೀತೆ, ಅನಾರ್ಕಲಿ ಪಾತ್ರಗಳು ಸಿನಿಪ್ರಿಯರಿಗೆ ಅಚ್ಚುಮೆಚ್ಚು. ಚಿತ್ರನಿರ್ಮಾಣದಲ್ಲೂ ತೊಡಗಿಸಿಕೊಂಡಿದ್ದ ತಾರೆ. ಇಂದು (ಜ.13) ಅವರು ಅಗಲಿದ ದಿನ

ದಕ್ಷಿಣ ಭಾರತದಲ್ಲಿ ತೆಲುಗು ಐತಿಹಾಸಿಕ ಮತ್ತು ಪೌರಾಣಿಕ ಸಿನಿಮಾಗಳಿಗೆ ವಿಶೇಷ ಮಹತ್ವವಿದೆ. ಹೆಚ್ಚಿನ ಸೌಲಭ್ಯಗಳಿಲ್ಲದ ಆಗಿನ ಕಾಲದಲ್ಲಿ ಅಪರೂಪದ ಮತ್ತು ಅದ್ಧೂರಿ ಐತಿಹಾಸಿಕ, ಪೌರಾಣಿಕ ಸಿನಿಮಾಗಳನ್ನು ತಯಾರಿಸಿದ ಹೆಗ್ಗಳಿಕೆ ತೆಲುಗು ಚಿತ್ರರಂಗದ್ದು. ಇಂತಹ ಹಲವು ಐತಿಹಾಸಿಕ ಸಿನಿಮಾಳಲ್ಲಿ ನಟಿ ಅಂಜಲಿದೇವಿ ಅಭಿನಯಿಸಿದ್ದಾರೆ. ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ತಯಾರಾದ ‘ಲವ ಕುಶ’ (1963) ಸಿನಿಮಾದಲ್ಲಿನ ಅವರ ಸೀತೆ ಪಾತ್ರ ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚೊತ್ತಿವೆ.

ವಿಶೇಷವಾಗಿ ಐತಿಹಾಸಿಕ ಮತ್ತು ಪೌರಾಣಿಕ ಪಾತ್ರಗಳಲ್ಲಿ ಅಂಜಲಿದೇವಿ ದೊಡ್ಡ ಜನಪ್ರಿಯತೆ ಗಳಿಸಿದ್ದವರು. ತೆಲುಗು ಮತ್ತು ತಮಿಳು ಸೇರಿದಂತೆ ವಿವಿಧ ಭಾಷೆಗಳ ನಾಲ್ಕುನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಂಜಲಿದೇವಿ ಅಭಿನಯಿಸಿದ್ದಾರೆ. ಚಿತ್ರನಿರ್ಮಾಣದಲ್ಲಿಯೂ ಅವರು ಸಕ್ರಿಯರಾಗಿದ್ದ ಅವರು ಸಮಾಜಮುಖಿ ವ್ಯಕ್ತಿತ್ವ ಮೈಗೂಡಿಸಿಕೊಂಡಿದ್ದ ತಾರೆ.

ಆಂಧ್ರದ ಪೂರ್ವ ಗೋಧಾವರಿಯ ಪೆದ್ದಪುರಂನಲ್ಲಿ ಜನಿಸಿದ ಅಂಜನಮ್ಮ ಮೂಲತಃ ವೃತ್ತಿ ರಂಗಭೂಮಿ ಕಲಾವಿದೆ. ಮುಂದೆ ಅಂಜಲಿ ದೇವಿ ಹೆಸರಿನೊಂದಿಗೆ ಸಿನಿಮಾದಲ್ಲಿ ಜನಪ್ರಿಯತೆ ಗಳಿಸಿದರು. ‘ರಾಜಾ ಹರಿಶ್ಚಂದ್ರ’ (1936) ಚಿತ್ರದ ಪುಟ್ಟ ಪಾತ್ರದೊಂದಿಗೆ ಬೆಳ್ಳಿತೆರೆ ಪ್ರವೇಶಿಸಿದ ಅಂಜಲಿದೇವಿ ನಾಯಕಿಯಾಗಿ ನಟಿಸಿದ ಮೊದಲ ಸಿನಿಮಾ ‘ಕಷ್ಟಜೀವಿ’ (1940). ಆದರೆ ಈ ಸಿನಿಮಾ ಸ್ಥಗಿತಗೊಂಡಿತು. ‘ಗೊಲ್ಲಭಾಮ’ (1947) ಚಿತ್ರದ ‘ಮೋಹಿನಿ’ ಪಾತ್ರ ಅವರನ್ನು ದಿನಬೆಳಗಾಗುವುದರೊಂದಿಗೆ ಸ್ಟಾರ್ ಆಗಿಸಿತು. ಮುಂದೆ ಅವರು ತೆಲುಗು ಮತ್ತು ತಮಿಳು ಸಿನಿಮಾಗಳ ಬೇಡಿಕೆಯ ನಾಯಕನಟಿಯಾಗಿ ಗುರುತಿಸಿಕೊಂಡರು.

ಇದನ್ನೂ ಓದಿ : ವೀಡಿಯೋ | ಕನ್ನಡ ಚಿತ್ರನಿರ್ದೇಶಕ ಎನ್‌.ಲಕ್ಷ್ಮೀನಾರಾಯಣ ನೆನಪು

ಮೊದಲ ತೆಲುಗು ಕಲರ್‌ ಸಿನಿಮಾ ‘ಲವ ಕುಶ’ದಲ್ಲಿನ (1963) ಸೀತೆ ಪಾತ್ರ ಅಂಜಲಿದೇವಿ ವೃತ್ತಿ ಬದುಕಿಗೆ ಮಹತ್ವದ ತಿರುವಾಯ್ತು. ‘ಸುವರ್ಣ ಸುಂದರಿ’ ಮತ್ತು ‘ಅನಾರ್ಕಲಿ’ ಅವರ ಮತ್ತೆರೆಡು ಅತ್ಯಂತ ಜನಪ್ರಿಯ ಪಾತ್ರಗಳು. ‘ಅನಾರ್ಕಲಿ’ ಸಿನಿಮಾದಲ್ಲಿ ಅಕ್ಕಿನೇನಿ ನಾಗೇಶ್ವರ್‌ ರಾವ್ ಅವರ ಜೋಡಿಯಾಗಿ ನಟಿಸಿದರು. ಇದು ಅವರ ನಿರ್ಮಾಣದ ಚಿತ್ರವೂ ಹೌದು. ಇಪ್ಪತ್ತೇಳು ತೆಲುಗು ಸಿನಿಮಾಗಳನ್ನು ಅವರು ನಿರ್ಮಿಸಿದ್ದಾರೆ. 2014ರ ಜನವರಿ 13ರಂದು ಅಂಜಲಿದೇವಿ ನಿಧನರಾದರು.

ಸಿದ್ದಲಿಂಗಯ್ಯನವರ ನೆಚ್ಚಿನ ತಾರೆ | ಕನ್ನಡ ಚಿತ್ರರಂಗದ ಮೇರು ನಿರ್ದೇಶಕ ಸಿದ್ದಲಿಂಗಯ್ಯನವರು ನಟಿ ಅಂಜಲಿದೇವಿ ಅಭಿಮಾನಿಯಾಗಿದ್ದುದು ಪುಸ್ತಕವೊಂದರಲ್ಲಿ ದಾಖಲಾಗಿದೆ. ‘ಅಂಜಲಿದೇವಿ ಅವರ ಸಿನಿಮಾ, ಪಾತ್ರಗಳಿಂದ ನಾನು ತುಂಬಾ ಪ್ರಭಾವಿತನಾಗಿದ್ದೆ. ನಾನು ಸಿನಿಮಾದೆಡೆ ಅಕರ್ಷಿತನಾಗಲು ಅವರೂ ಕಾರಣ! ಸಿನಿಮಾ ಸೇರಬೇಕೆನ್ನುವ ಆಸೆಯನ್ನು ನಿವೇದಿಸಿಕೊಂಡು ಚೆನ್ನೈನ ಅವರ ವಿಳಾಸಕ್ಕೆ ಪತ್ರ ಬರೆದಿದ್ದೆ. ಅಚ್ಚರಿ ಎನ್ನುವಂತೆ ಅವರು ನನಗೆ ಪತ್ರದ ಮೂಲಕ ಪ್ರತಿಕ್ರಿಯಿಸಿದ್ದರು. ಸಿನಿಮಾ ಬೇಡ, ಮೊದಲು ಚೆನ್ನಾಗಿ ಓದಿ ಕೆಲಸ ಸಂಪಾದಿಸುವಂತೆ ಅವರು ಸಲಹೆ ಮಾಡಿದ್ದರು’ ಎಂದು ಸಿದ್ದಲಿಂಗಯ್ಯ ಹೇಳಿಕೊಂಡಿದ್ದರು.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More