ಒಗಟಿನೊಂದಿಗೆ ಭಾರಿ ಸದ್ದು ಮಾಡುತ್ತಿದೆ ಹಂಸಲೇಖ ನಿರ್ದೇಶನದ ‘ಶಕುಂತ್ಲೆ’ 

ಚಿತ್ರಸಾಹಿತಿ, ಸಂಗೀತ ನಿರ್ದೇಶಕ ಹಂಸಲೇಖ ನಿರ್ದೇಶಿಸಲಿರುವ ‘ಶಕುಂತ್ಲೆ’ ಸಿನಿಮಾ ಸುದ್ದಿ ರಾಜ್ಯಾದ್ಯಂತ ಸದ್ದು ಮಾಡುತ್ತಿದೆ. ದೇಸಿ ಸಂಗೀತ ಮಾಂತ್ರಿಕ ಹಂಸಲೇಖ, ಚಿಕ್ಕಂದಿನಲ್ಲಿ ತಾವು ಕೇಳಿದ ಒಗಟೊಂದನ್ನು ಚಿತ್ರದಲ್ಲಿ ಅಳವಡಿಸಿದ್ದಾರೆ. ಈ ಒಗಟು ಬಿಡಿಸುವಂತೆ ಸಿನಿರಸಿಕರಿಗೆ ಟಾಸ್ಕ್ ಕೊಟ್ಟಿದ್ದಾರೆ

ಸ್ಯಾಂಡಲ್‌ವುಡ್‌ನ ಖ್ಯಾತ ಸಂಗೀತ ಸಂಯೋಜಕ, ಚಿತ್ರಸಾಹಿತಿ ಹಂಸಲೇಖ ಚೊಚ್ಚಲ ನಿರ್ದೇಶನದ ‘ಶಕುಂತ್ಲೆ’ ಸಿನಿಮಾ ಸದ್ಯದಲ್ಲೇ ಚಿತ್ರೀಕರಣ ಆರಂಭಿಸಲಿದೆ. ಅಗತ್ಯ ತಯಾರಿಗಳೆಲ್ಲವೂ ಅಂತಿಮ ಹಂತದಲ್ಲಿದ್ದು, ‘ಶಕುಂತ್ಲೆ’ ನಿರ್ದೇಶನಕ್ಕೆ ಚಾಲನೆ ಕೊಡುವುದಾಗಿ ಸ್ವತಃ ಹೇಳಿಕೊಂಡಿದ್ದಾರೆ. ಚಿತ್ರಕ್ಕೆ ಸಂಬಂಧಿಸಿದಂತೆ ಮಾಹಿತಿ ಕೊಡಲು ಫೇಸ್‌ಬುಕ್‌ ಲೈವ್‌ಗೆ ಬಂದಿದ್ದ ಅವರು, ಕುತೂಹಲ ಸಂಗತಿಗಳನ್ನು ಹರವಿಟ್ಟಿದ್ದಾರೆ.

ಹಂಸಲೇಖ ‘ಶಕುಂತ್ಲೆ’ ಸಿನಿಮಾದಲ್ಲೊಂದು ಒಗಟು ಅಳವಡಿಸಿದ್ದಾರೆ. ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ಇದನ್ನು ಹಾಡಿದ್ದು, ಅದೀಗ ವೈರಲ್ ಆಗಿದೆ. ಈ ಒಗಟು ಬಿಡಿಸಿದವರಿಗೆ ‘ಶಕುಂತ್ಲೆ’ ಚಿತ್ರತಂಡದಿಂದ ಒಂದು ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿದ್ದು, ಚಿತ್ರಪ್ರೇಮಿಗಳಿಂದ ಇದಕ್ಕೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. "ಇದು ನಾನು ಚಿಕ್ಕಂದಿನಲ್ಲಿ ಕೇಳಿದ್ದ ಒಗಟು. ನಮ್ಮ ಚಿತ್ರಕ್ಕೇಕೆ ಇದನ್ನು ಅಳವಡಿಸಬಾರದು ಎಂದು ಅಲೋಚಿಸಿದೆ. ಚಿತ್ರಕತೆಗೆ ಸೂಕ್ತ ರೀತಿಯಲ್ಲಿ ಹೊಂದಿಕೆ ಆಗಿದ್ದುದರಿಂದ ಅಳವಡಿಸಿದ್ದೇವೆ,” ಎನ್ನುತ್ತಾರೆ ಹಂಸಲೇಖ.

ಇದನ್ನೂ ಓದಿ : ವಾರದಲ್ಲಿ ಏಳೆಂಟು ಸಿನಿಮಾ ತೆರೆಗೆ; ಬೆಕ್ಕಿನ ಕೊರಳಿಗೆ ಗಂಟೆ ಕಟ್ಟೋರು ಯಾರು?

ಇಲ್ಲಿಯವರೆಗೆ ಒಗಟಿಗೆ ಸೂಕ್ತ ಉತ್ತರ ಸಿಕ್ಕಿಲ್ಲವಂತೆ. ಸಿನಿಪ್ರಿಯರ ಪ್ರಯತ್ನವಂತೂ ಜಾರಿಯಲ್ಲಿದೆ. "ಈ ಒಗಟಿನ ಪ್ರತಿ ಸಾಲನ್ನೂ ಬಿಡಿಸಬೇಕು. ಅಲ್ಲಿ ಸಿಗುವ ಅರ್ಥಗಳನ್ನು ಕ್ರೂಢೀಕರಿಸಿದರೆ ಒಂದು ಉತ್ತರ ಸಿಗುತ್ತದೆ. ಆ ಉತ್ತರಕ್ಕೆ ನಾವು ಕಾದಿದ್ದೇವೆ,” ಎನ್ನುತ್ತಾರೆ ಹಂಸಲೇಖ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಶೀರ್ಷಿಕೆಗೀತೆಯ ಪಲ್ಲವಿ ಕ್ಲಿಕ್ಕಾಗಿದೆ. ಚಿತ್ರಕತೆ ತಯಾರಿ ಮುಗಿದಿದ್ದು, ಚಿತ್ರೀಕರಣಕ್ಕೆ ಸಜ್ಜಾಗುತ್ತಿದ್ದಾರೆ. ಇದೇ ವರ್ಷ ಯಾವುದಾದರೂ ಹಬ್ಬದ ದಿನದಂದು ‘ಶಕುಂತ್ಲೆ’ಯನ್ನು ತೆರೆಗೆ ತರುತ್ತೇವೆ ಎನ್ನುತ್ತಾರವರು.

ಚಿತ್ರದ ತಾರಾಬಳಗದ ಗುಟ್ಟು ಬಿಟ್ಟುಕೊಡದ ಹಂಸಲೇಖ, ತಂತ್ರಜ್ಞರ ಬಗ್ಗೆ ಮಾತ್ರ ಹೇಳುತ್ತಾರೆ. ಈ ಚಿತ್ರದಲ್ಲಿ ಕಲಾನಿರ್ದೇಶನಕ್ಕೆ ಹೆಚ್ಚು ಪ್ರಾಶಸ್ತ್ಯವಿದ್ದು, ನಾಗೇಶ್ ನಂದ ಕಲಾನಿರ್ದೇಶಕರಾಗಿ ಕೆಲಸ ಮಾಡಲಿದ್ದಾರೆ. ‘ಸ್ಕ್ರೀನ್‌ಪ್ಲೇ’ ಇರುವಂತೆ ‘ಲೆನ್ಸ್‌ಪ್ಲೇ’ ಕೂಡ ಮಾಡಿಕೊಳ್ಳಲಾಗಿದೆಯಂತೆ. "ಚಿತ್ರಕತೆ ಬೇರೆ, ಕ್ಯಾಮೆರಾದ ಲೆನ್ಸ್‌ ಮೂಲಕ ನಾವು ನೋಡುವ ಕತೆಯೇ ಬೇರೆ. ಇದೇ ಲೆನ್ಸ್‌ಪ್ಲೇ!" ಎನ್ನುವ ಅವರು, ನಿರ್ದೇಶನಕ್ಕೆ ಸಜ್ಜಾಗುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ ಈಗಾಗಲೇ ನಿರ್ದೇಶನ ಶುರುವಾಗಬೇಕಿತ್ತು. "ನಾನು ಚಿತ್ರಕತೆಗೊಂದು ಫ್ರೇಮ್‌ ಹಾಕಿಕೊಂಡಿದ್ದೆ. ಅದು ತಾನಾಗಿಯೇ ಬೆಳೆಯತೊಡಗಿತು. ಅಷ್ಟರಲ್ಲಿ ಸರಿಗಮಪ ಲಿಟ್ಲ್‌ ಚಾಂಪ್ಸ್‌ ಶುರುವಾಯ್ತು. ಹೀಗಾಗಿ ನಿರ್ದೇಶನ ತಡವಾಯ್ತು. ಇನ್ನೇನು ಚಿತ್ರೀಕರಣ ಶುರುವಾಗಲಿದೆ,” ಎಂದಿದ್ದಾರೆ ಹಂಸಲೇಖ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More