ಯೋಗರಾಜ್‌ ಭಟ್ಟರ ‘ಪಂಚತಂತ್ರ’ ಚಿತ್ರೀಕರಣಕ್ಕೆ ಸಜ್ಜಾದ ನಟಿ ಸೋನಲ್‌

ಅಮ್ಮನ ಒತ್ತಾಯಕ್ಕೆ ಮಣಿದು ಸಿನಿಮಾರಂಗಕ್ಕೆ ಬಂದವರು ಸೋನಲ್ ಮಾಂಟೆರೊ. ಈಗ ಯೋಗರಾಜ್‌ ಭಟ್ಟರ ದೊಡ್ಡ ಸಿನಿಮಾ ‘ಪಂಚತಂತ್ರ’ದಲ್ಲಿ ನಟಿಸಲಿರುವ ಖುಷಿಯಲ್ಲಿದ್ದಾರೆ. ಮೊನ್ನೆಯಷ್ಟೇ ಫೋಟೋಶೂಟ್‌ ಮುಗಿದಿದ್ದು, ಮುಂದಿನ ವಾರದಲ್ಲಿ ಸಿನಿಮಾದ ಚಿತ್ರೀಕರಣಕ್ಕೆ ಚಾಲನೆ ಸಿಗಲಿದೆ

ಮಾಡೆಲಿಂಗ್‌ ಮೂಲದ ಸೋನಲ್‌ ಮಾಂಟೆರೊ ಅವರಿಗೆ ಸಿನಿಮಾದಲ್ಲಿ ನಟಿಸುವ ಉಮೇದು ಇರಲಿಲ್ಲ. ‘ಮಿಸ್‌ ಕೊಂಕಣ್‌ 2015’ ಕಿರೀಟ ತೊಟ್ಟ ಬೆಡಗಿಗೆ, ‘ಎಕ್ಕ ಸಕ್ಕ’ ತುಳು ಚಿತ್ರಕ್ಕೆ ಕರೆ ಬಂದಿತ್ತು. ಅಮ್ಮನ ಒತ್ತಾಯಕ್ಕೆ ಬಣ್ಣ ಹಚ್ಚಿದರು. ಈ ಚಿತ್ರ ಯಶಸ್ಸು ಕಾಣುತ್ತಿದ್ದಂತೆ ಅವರು ನಟನೆಯಲ್ಲಿ ಗಂಭೀರವಾಗಿ ತೊಡಗಿಸಿಕೊಳ್ಳಲು ನಿರ್ಧರಿಸಿದರು. ಎರಡನೇ ತುಳು ಸಿನಿಮಾ ‘ಪಿಲಿಬೈಲ್ ಯಮುನಕ್ಕ’ ಚಿತ್ರದ ಗೆಲುವು ಅವರನ್ನು ಸ್ಯಾಂಡಲ್‌ವುಡ್‌ನತ್ತ ಕರೆತಂದಿತು.

‘ಅಭಿಸಾರಿಕೆ’ ಚಿತ್ರದೊಂದಿಗೆ ಸ್ಯಾಂಡಲ್‌ವುಡ್‌ಗೆ ಬಂದ ಅವರು ‘ಪ್ರೀತ್ಸೋರು’, ‘ಎಂಎಲ್‌ಎ’ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ‘ಅಭಿಸಾರಿಕೆ’ ಮುಂದಿನ ತಿಂಗಳಲ್ಲಿ ತೆರೆಕಾಣಲಿದೆಯಂತೆ. ಪ್ರಥಮ್ ಜೊತೆಗಿನ ‘ಎಂಎಲ್‌ಎ’ ದೊಡ್ಡ ಬಜೆಟ್‌ನಲ್ಲಿ ತಯಾರಾಗುತ್ತಿರುವ ಸಿನಿಮಾ. ಈ ಮಧ್ಯೆ, ಯೋಗರಾಜ್‌ ಭಟ್ಟರ ಸಿನಿಮಾದ ಅವಕಾಶ ತಮ್ಮ ವೃತ್ತಿಬದುಕಿಗೆ ತಿರುವು ನೀಡಲಿದೆ ಎನ್ನುವ ಸಂಭ್ರಮದಲ್ಲಿದ್ದಾರೆ‌. ಚಿತ್ರದಲ್ಲಿ ಅವರು ವಿಹಾನ್‌ ಗೌಡಗೆ ಜೋಡಿ.

ಇದನ್ನೂ ಓದಿ : ಒಗಟಿನೊಂದಿಗೆ ಭಾರಿ ಸದ್ದು ಮಾಡುತ್ತಿದೆ ಹಂಸಲೇಖ ನಿರ್ದೇಶನದ ‘ಶಕುಂತ್ಲೆ’ 

ಯೋಗರಾಜ್‌ ಭಟ್ಟರ ಸಿನಿಮಾ ಅವಕಾಶಕ್ಕಾಗಿ ಯುವನಟಿಯರು ತುದಿಗಾಲಲ್ಲಿ ನಿಂತಿರುತ್ತಾರೆ. ಸೋನಲ್‌ ಅವರಿಗೆ ಈ ಅವಕಾಶ ಸಿಕ್ಕಿದ್ದು ಹೇಗೆ? "ಭಟ್ಟರ ಕಚೇರಿಯಿಂದ ಎರಡು ವರ್ಷಗಳ ಹಿಂದೆಯೇ ಕರೆ ಬಂದಿತ್ತು. ಆಗ ನಾನು ಬೇರೆ ಸಿನಿಮಾಗಳಲ್ಲಿ ಬಿಝಿಯಾಗಿದ್ದೆ. ಈ ಬಾರಿ ಅವಕಾಶ ತಪ್ಪಿಸಿಕೊಳ್ಳಲಿಲ್ಲ,” ಎನ್ನುವ ಅವರಿಗೆ ಭಟ್ಟರ ಸಿನಿಮಾಗಳ ಪೈಕಿ ‘ಮುಂಗಾರು ಮಳೆ’ ಫೇವರಿಟ್ ಸಿನಿಮಾ. ವಿಶೇಷವಾಗಿ, ಅವರ ಸಿನಿಮಾಗಳಲ್ಲಿ ಹಾಡುಗಳು ಮತ್ತು ಹಾಡುಗಳನ್ನು ಚಿತ್ರಿಸುವ ಪರಿ ಸೋನಲ್‌ಗೆ ಬಲು ಇಷ್ಟವಂತೆ. ಈ ಚಿತ್ರದಲ್ಲಿ ತುಂಬಾ ಮಾಡ್ರನ್‌ ಅಲ್ಲದ, ತೀರಾ ಸಾಂಪ್ರದಾಯಿಕವೂ ಅಲ್ಲದ ಪಾತ್ರ ಅವರದು.

ಮಂಗಳೂರಿನ ಸೋನಲ್‌, ಸೈಕಾಲಜಿ ವಿಷಯದಲ್ಲಿ ಪದವಿ ಪಡೆದಿದ್ದಾರೆ. ಹದಿನೈದರ ಹರೆಯದಲ್ಲೇ ಮಾಡೆಲಿಂಗ್‌ನಲ್ಲಿ ತೊಡಗಿಸಿಕೊಂಡಿದ್ದರು. ಸದ್ಯ ಸಿನಿಮಾ ನಟನೆ ಜೊತೆ ಮಾಡೆಲಿಂಗ್‌ನಲ್ಲಿ ಸಕ್ರಿಯರಾಗಿದ್ದು, ಮಾಡೆಲಿಂಗ್‌ಗೆ ಪದಾರ್ಪಣೆ ಮಾಡುವ ಯುವತಿಯರಿಗೆ ತರಬೇತಿ ನೀಡುತ್ತಾರೆ. ‘ಸಾಜನ್ ಚಲೆ ಸಸುರಾಲ್‌’ ಸರಣಿ ಹಿಂದಿ ಚಿತ್ರದೊಂದಿಗೆ ಅವರು ಬಾಲಿವುಡ್‌ಗೂ ಪದಾರ್ಪಣೆ ಮಾಡುತ್ತಿದ್ದಾರೆ. ಪ್ರಸ್ತುತ ಯೋಗರಾಜ್‌ ಭಟ್ಟರ ಸಿನಿಮಾದಲ್ಲಿ ತೊಡಗಿಸಿಕೊಂಡಿರುವ ಅವರು ಸ್ಯಾಂಡಲ್‌ವುಡ್‌ನಲ್ಲಿ ಭದ್ರವಾಗಿ ನೆಲೆ ಕಂಡುಕೊಳ್ಳುವ ಹಾದಿಯಲ್ಲಿದ್ದಾರೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More