ಚಿತ್ರ ವಿಮರ್ಶೆ | ಸಾಮಾನ್ಯನ ಕ್ರಾಂತಿಕಾರಿ ಸಾಧನೆ ಸಾರುವ ಪ್ಯಾಡ್‌ಮ್ಯಾನ್‌

ಶುಕ್ರವಾರ ತೆರೆ ಕಂಡಿರುವ ಸಿನಿಮಾ ‘ಪ್ಯಾಡ್‌ಮ್ಯಾನ್’ ಮಹಿಳೆಯರ ಋತುಸ್ರಾವ ವಿಚಾರವಾಗಿ ಇರುವ ಮಂಡಿವಂತಿಕೆಯ ಬಗ್ಗೆ ಮುಕ್ತವಾಗಿ ಮಾತಾಡುತ್ತದೆ. ತಮಿಳುನಾಡಿನ ಸಮಾಜೋದ್ಯಮಿಯ ಬದುಕಿನ ಕತೆಯನ್ನು ಮುಂದಿಡುತ್ತಾ ಪ್ರೇಕ್ಷಕರನ್ನು ತಮ್ಮ ಸೀಮಿತ ಆಲೋಚನೆಗಳಿಂದ ಹೊರತರಲು ಯತ್ನಿಸಿದೆ

ಕೆಲವು ತಿಂಗಳುಗಳ ಹಿಂದೆ 'ಹ್ಯಾಪಿ ಟು ಬ್ಲೀಡ್' ಹೆಸರಿನ ಕ್ಯಾಂಪೇನ್‌ ಒಂದು ಜಾಲತಾಣಗಳಲ್ಲಿ ಗಮನಸೆಳೆಯಿತು. ಜೈವಿಕವಾಗಿ ಮತ್ತು ನೈಸರ್ಗಿಕವಾಗಿ ನಡೆಯುವ ಸಹಜ ಸಂಗತಿಗಳ ಬಗ್ಗೆ ವಿವಿಧ ಕಾರಣಗಳಿಗೆ ಸಂಪ್ರದಾಯದ ಚೌಕಟ್ಟಿನಲ್ಲೇ ನೋಡುವ ಮನಃಸ್ಥಿತಿಯೊಂದನ್ನು ಈ ಕ್ಯಾಂಪೇನ್‌ ಅಲುಗಾಡಿಸಿತ್ತು.

ಋತುಸ್ರಾವ ಹೆಣ್ಣಿನ ಜೀವನದ ಅವಿಭಾಜ್ಯ ಸಂಗತಿ. ಈ ಸಂದರ್ಭದಲ್ಲಿ ಆಕೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಅನುಭವಿಸುವ ಸಂಕಟವನ್ನು ಸ್ವತಃ ಆಕೆಯೇ ವಿವರಿಸಲಾರಳು. ಅಂಥ ಸಂದರ್ಭವನ್ನು ಸಂಪ್ರದಾಯದ ಕಣ್ಣುಗಳಲ್ಲಿ ನೋಡುತ್ತಾ, ಆಕೆಯನ್ನು ದೂರವಿಡುವ, ಮಡಿಯ ಹೆಸರಿನಲ್ಲಿ ನಿರ್ಬಂಧಿಸುವುದು ನಡೆಯುತ್ತಲೇ ಬಂದಿದ್ದೆ. ಇಂಥ ಸಂದರ್ಭಗಳಲ್ಲಿ ಜೀವಕ್ಕೆ ಎರವಾದ ಉದಾಹರಣೆಗಳಿವೆ.

ಆದರೆ ಆಧುನಿಕ ಬದುಕು, ಶಿಕ್ಷಣ ಕಣ್ಣು ತೆರೆಸಿ, ಋತುಸ್ರಾವದ ಕುರಿತು ಜಾಗೃತಿ ಮೂಡಿಸುವ ಕೆಲಸಗಳು ನಡೆಯುತ್ತಾ ಬಂದಿವೆ. ಆದರೆ ಜನಪ್ರಿಯ ಮಾಧ್ಯಮದ ಮೂಲಕ ಮಾಡುವ ಪ್ರಯತ್ನವಾಗಿ 'ಪ್ಯಾಡ್‌ಮ್ಯಾನ್‌' ವಿಶೇಷವಾಗಿ ಕಾಣಿಸುತ್ತದೆ.

ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಋತುಸ್ರಾವದ ಸಂದರ್ಭದಲ್ಲಿ ಬಹುತೇಕ ಮಹಿಳೆಯರು ಸ್ಯಾನಿಟರಿ ಪ್ಯಾಡ್ ಗಳನ್ನು ಬಳಸುವುದಿಲ್ಲ. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಜಾಹೀರಾತು ಸಿನಿಮಾ ಇದೆಂದರೂ ತಪ್ಪಿಲ್ಲ. 20 ವರ್ಷಗಳ ಹಿಂದೆ ತಮ್ಮ ಪತ್ನಿ ನೈರ್ಮಲ್ಯವಲ್ಲದ ಹಾದಿಯಲ್ಲಿ ‘ಐದು ದಿನಗಳನ್ನು’ ಕಳೆಯುವುದನ್ನು ತಪ್ಪಿಸಲು ಅರುಣಾಚಲಂ ಮುರುಗನಾಥನ್ ಅವರು ಆಕೆಗೆ ಸ್ಯಾನಿಟರಿ ಪ್ಯಾಡ್ ಗಳನ್ನು ಖರೀದಿಸಿಕೊಡಲು ಬಯಸುತ್ತಾರೆ. ಆದರೆ ಸ್ಯಾನಿಟರಿ ಪ್ಯಾಡ್ ಬೆಲೆ ದುಬಾರಿಯಾಗಿದ್ದ ಕಾರಣ ಅವರು ಸ್ವತಃ ಅದನ್ನು ಅಗ್ಗದಲ್ಲಿ ತಯಾರಿಸಲು ಪ್ರಯತ್ನಿಸಿ ಯಶಸ್ವಿಯಾಗುತ್ತಾರೆ. ಆದರೆ ಈ ನಡುವೆ ಅವರು ಎದುರಿಸಿದ ಕೌಟುಂಬಿಕ ಮತ್ತು ಸಾಮಾಜಿಕ ಅವಹೇಳನಗಳು ಸಿನಿಮಾದ ಚಿತ್ರಕತೆಯನ್ನು ‘ಕಮರ್ಶಿಯಲ್’ ದೃಷ್ಟಿಕೋನದಲ್ಲಿ ಬಿಂಬಿಸಲು ಸಾಧ್ಯವಾಗುವಂತೆ ಮಾಡಿದೆ.

ಸಾಮಾಜಿಕ ಸಂದೇಶವಿರುವ ಚಿತ್ರವನ್ನು ವಾಣಿಜ್ಯ ಸೂತ್ರಗಳನ್ನು ಅಳವಡಿಸಿಕೊಂಡು ಬಾಲ್ಕಿ ಸಮರ್ಥವಾಗಿ ಹೇಳುವಲ್ಲಿ ಯಶಸ್ವಿಯಾಗಿದ್ದಾರೆ. ಕಥಾನಾಯಕನ ಪಾತ್ರ ಸೃಷ್ಟಿಗೆ ಪ್ರೇರಕವಾದ ಅರುಣಾಚಲಂ ಕುರಿತು ಹಲವು ಸಾಕ್ಷ್ಯಚಿತ್ರಗಳು ಬಂದಿವೆ. ಆದರೆ ಮುಖ್ಯವಾಹಿನಿಯಲ್ಲಿ ಆತನ ಕಥೆಯನ್ನು, ಸಾಧನೆಯನ್ನು ಇದುವರೆಗೂ ಯಾರು ಮಾಡಿರಲಿಲ್ಲ. ಬಾಲ್ಕಿ ಆ ನಿಟ್ಟಿನಲ್ಲಿ ನಡೆಸಿದ ಪ್ರಯತ್ನ ಅನನ್ಯವೂ, ಯಶಸ್ವಿಯೂ ಆಗಿದೆ. ಕಮರ್ಷಿಯಲ್‌ ಸೂತ್ರಗಳು ಚಿತ್ರದ ಆಸಕ್ತಿ, ಓಘವನ್ನು ಕಾಪಾಡುತ್ತವೆ ಎಂಬುದಕ್ಕೆ ತ್ರಿಕೋಣ ಪ್ರೇಮದ ಆಯಾಮವೇ ಸಾಕ್ಷಿ.

ಇನ್ನು ಚಿತ್ರದ ಕೇಂದ್ರಬಿಂದು ಅಕ್ಷಯ್ ಕುಮಾರ್ ಅವರು ತಮ್ಮ ಸಿನಿಮಾ ಇಮೇಜ್ ಬಗ್ಗೆ ಹೆಚ್ಚು ಗಮನ ಕೊಡದೆ ಕೆಲವು ದೃಶ್ಯಗಳಲ್ಲಿ ಅಭಿನಯಿಸಿದ್ದಾರೆ. ತಮ್ಮ ಸ್ಯಾನಿಟರಿ ಪ್ಯಾಡ್ ಆವಿಷ್ಕಾರಕ್ಕೆ ನೆರವಾಗಲು ಮಹಿಳೆಯರು ಮುಂದೆ ಬಾರದಾದಾಗ ತಾವೇ ಮಹಿಳೆಯ ಒಳಚಡ್ಡಿಯನ್ನು ಖರೀದಿಸಿ ಧರಿಸಿ, ಪ್ರಯೋಗಕ್ಕೆ ಇಳಿಯುವುದು ಮತ್ತು ದಾರಿ ಮಧ್ಯೆ ರಕ್ತ ಸಿಕ್ತವಾಗಿ ನದಿಗೆ ಹಾರುವ ದೃಶ್ಯ ಭಾವನಾತ್ಮಕವಾಗಿ ಸಿನಿಮಾಗೆ ಮೌಲ್ಯ ಕಟ್ಟಿಕೊಡಬಹುದು. ಆದರೆ ವಿಪರೀತ ವೈಭವೀಕರಣದ ಪ್ರಯತ್ನವಾಗಿಯೂ ಕಾಣುತ್ತದೆ. ಅಕ್ಷಯ್ ಕುಮಾರ್ ಅವರು ಈ ಸನ್ನಿವೇಶವನ್ನು ಅತ್ಯುತ್ತಮವಾಗಿ ನಿಭಾಯಿಸಿದ್ದಾರೆ.

ಇದನ್ನೂ ಓದಿ : ಬನ್ಸಾಲಿಯ ಪದ್ಮಾವತಿ ಸೌಂದರ್ಯವತಿ, ಆದರೆ ಖಿಲ್ಜಿಯೇ ಚಿತ್ರದ ಜೀವಾಳ

ಸಿನಿಮಾದ ಆರಂಭದಲ್ಲಿ ಋತುಸ್ರಾವದ ಬಗ್ಗೆ ಮಹಿಳೆಯರಲ್ಲಿರುವ ‘ಮರೆ ಮಾಚುವ’ ಸ್ವಭಾವವನ್ನು ಹಲವು ದೃಶ್ಯಗಳಲ್ಲಿ ಅತ್ಯುತ್ತಮವಾಗಿ ವಿವರಿಸಲಾಗಿದೆ. ಅಲ್ಲದೆ ಬಾಲಿವುಡ್ ಸಿನಿಮಾಗಳಲ್ಲಿ ಸಹಜವಾಗಿ ಕಂಡು ಬರುವ ವೈಭವೀಕರಣ, ಭಾವನಾತ್ಮಕವಾಗಿ ಶ್ರೀಮಂತವಾಗಿರುವುದು, ಹಾಡುಗಳು ಮೊದಲಾದ ಅಂಶಗಳೆಲ್ಲವೂ ಸೇರಿರುವ ಕಾರಣ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲೂ ಗೆಲ್ಲಬಹುದು.

ಅಂತಿಮವಾಗಿ ಅಮಿತಾಬ್ ಬಚ್ಚನ್ ಅವರ ಭಾಷಣ ಮತ್ತು ಅಕ್ಷಯ್ ಕುಮಾರ್ ಅವರು ವಿಶ್ವಸಂಸ್ಥೆಯಲ್ಲಿ ಮಾಡುವ ಭಾಷಣಗಳು ಸಿನಿಮಾದ ಸಂದೇಶವನ್ನು ಜನರಿಗೆ ತಲುಪಿಸುವ ಪ್ರಯತ್ನವಾಗಿದೆ. ಆದರೆ ಕಮರ್ಶಿಯಲ್ ಗಿಮಿಕ್‌ ಆಗಿ ತೋರುವುದಕ್ಕಿಂತ ಹೆಚ್ಚಾಗಿ, ವಾಸ್ತವದಲ್ಲಿ ತಮಿಳುನಾಡಿನ ಸಾಮಾನ್ಯ ವ್ಯಕ್ತಿಯೊಬ್ಬರು ಸಾಮಾಜಿಕ ಉದ್ಯಮವೊಂದನ್ನು ಹೇಗೆ ಕಟ್ಟಿದ್ದಾರೆ ಎನ್ನುವುದಕ್ಕೆ ಹೆಚ್ಚು ಪ್ರಾಶಸ್ತ್ಯ ಸಿಗುವ ಅಗತ್ಯವಿತ್ತು. ಅಲ್ಲದೆ ಸಿನಿಮಾ ನಾಯಕ ಮಧ್ಯಪ್ರದೇಶದ ಗ್ರಾಮವೊಂದರ ನಿವಾಸಿ. ಹೀಗಾಗಿ ವಾಸ್ತವದ ಕತೆಯಲ್ಲಿ ನಮಗೆ ಕಾಣುವ ತಮಿಳುನಾಡಿನ ‘ನೇಟಿವಿಟಿ’ ಸಿನಿಮಾದಿಂದ ಮರೆಯಾಗಿದೆ. ಬಾಲಿವುಡ್ ಸಿನಿಮಾ ವೀಕ್ಷಕರಿಗೆ ಈ ವ್ಯತ್ಯಾಸ ಕಾಣದೆ ಇರಬಹುದು. ಆದರೆ ಅರುಣಾಚಲಂ ಸಾಕ್ಷ್ಯಚಿತ್ರವನ್ನು ನೋಡಿದವರಿಗೆ ಈ ವ್ಯತ್ಯಾಸ ಸ್ಪಷ್ಟವಾಗಿ ತಿಳಿಯುತ್ತದೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More