ಧೂಮಪಾನ ಜಾಹೀರಾತಿನ ಪುಟಾಣಿ ಈಗ ‘ಕಾಜಲ್‌’ ಕನ್ನಡ ಚಿತ್ರದ ಹಿರೋಯಿನ್‌!

ಸಿನಿಮಾ ಪ್ರದರ್ಶನಕ್ಕೆ ಮುನ್ನ ಥಿಯೇಟರ್‌ಗಳಲ್ಲಿ ಮೂಡಿಬರುವ ‘ನೋ ಸ್ಮೋಕಿಂಗ್’ ಜಾಹೀರಾತನ್ನು ಎಲ್ಲರೂ ನೋಡಿರುತ್ತಾರೆ. ಕೇಂದ್ರ ಸರ್ಕಾರದ ಈ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದ ಸಿಮ್ರನ್‌ ನಾಟೆಕರ್‌ ಇದೀಗ ‘ಕಾಜಲ್‌’ ಕನ್ನಡ ಚಿತ್ರದ ನಾಯಕಿಯಾಗಿ ಸ್ಯಾಂಡಲ್‌ವುಡ್‌ಗೆ ಬರುತ್ತಿದ್ದಾರೆ

ಧೂಮಪಾನದ ಬಗ್ಗೆ ಜಾಗೃತಿ ಮೂಡಿಸುವ ಕೇಂದ್ರ ಸರ್ಕಾರದ ಜಾಹೀರಾತಿನಲ್ಲಿ ಕಾಣಿಸಿಕೊಂಡಾಗ ಸಿಮ್ರನ್‌ ನಾಟೆಕರ್‌ಗೆ ಏಳು ವರ್ಷ. ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನಕ್ಕೆ ಮುನ್ನ ಈ ಹಿಂದಿ ಹಾಗೂ ಪ್ರಾದೇಶಿಕ ಭಾಷೆಗಳಲ್ಲಿ ಜಾಹೀರಾತು ಕಡ್ಡಾಯವಾಗಿ ಮೂಡಿಬರುತ್ತದೆ. ಜಾಹೀರಾತಿನಲ್ಲಿ ನಟಿಸಿದ್ದ ಸಿಮ್ರನ್ ನಾಟೆಕರ್‌ ಇದೀಗ ಕನ್ನಡ ಸಿನಿಮಾಗೆ ನಾಯಕಿಯಾಗಿ ಸ್ಯಾಂಡಲ್‌ವುಡ್‌ಗೆ ಬರುತ್ತಿದ್ದಾರೆ. ‘ಗಣಪ’, ‘ಕರಿಯಾ 2’ ಖ್ಯಾತಿಯ ಸಂತೋಷ್‌ ಈ ಚಿತ್ರದ ಹೀರೋ.

“ಹೌದು, ನಮ್ಮ ಚಿತ್ರದಲ್ಲಿ ಸಿಮ್ರನ್‌ ನಾಟೆಕರ್‌ ನಾಯಕಿಯಾಗಿ ನಟಿಸಲಿದ್ದಾರೆ. ನಾಯಕಿ ಪಾತ್ರಕ್ಕೆ ಅವರು ಸೂಕ್ತ ರೀತಿಯಲ್ಲಿ ಹೊಂದಿಕೆಯಾಗುತ್ತಾರೆ. ಸುಮಂತ್ ಕ್ರಾಂತಿ ನಿರ್ದೇಶಿಸುತ್ತಿರುವ ಚಿತ್ರದಲ್ಲಿ ನನ್ನ ಪುತ್ರ ಸಂತೋಷ್‌ ಹೀರೋ. ಇದೇ ತಿಂಗಳಲ್ಲಿ ಸಿನಿಮಾ ಆರಂಭವಾಗಲಿದೆ. ಇನ್ನಿತರ ವಿಷಯಗಳ ಬಗ್ಗೆ ಮುಂದಿನ ದಿನಗಳಲ್ಲಿ ತಿಳಿಸುತ್ತೇವೆ,” ಎನ್ನುತ್ತಾರೆ ನಿರ್ಮಾಪಕ ಆನೇಕಲ್ ಬಾಲರಾಜ್‌. ಕಳೆದ ವರ್ಷ ಅವರು ನಿರ್ಮಿಸಿದ್ದ ‘ಕರಿಯಾ 2’ ಸಿನಿಮಾ ಉತ್ತಮ ಮೇಕಿಂಗ್‌ನಿಂದಾಗಿ ಗಮನ ಸೆಳೆದಿತ್ತು.

ಇದನ್ನೂ ಓದಿ : ‘ಆನಂದ್’ ತೆರೆಕಂಡು 47 ವರ್ಷ; ಸಿನಿಮಾ ಕುರಿತು ಟ್ವೀಟ್ ಮಾಡಿದ ಅಮಿತಾಭ್‌

ಧೂಮಪಾನ ಜಾಹೀರಾತಿನೊಂದಿಗೆ ಮೊದಲ ಬಾರಿಗೆ ಕ್ಯಾಮೆರಾ ಎದುರಿಸಿದ ಸಿಮ್ರನ್, ನಂತರ ನೂರೈವತ್ತೂ ಹೆಚ್ಚು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಆರಂಭದ ಧೂಮಪಾನ ಜಾಹೀರಾತು ಈಗಲೂ ಥಿಯೇಟರ್‌ಗಳಲ್ಲಿ ಪ್ರಸಾರವಾಗುತ್ತಿದೆ. ಹನ್ನೊಂದರ ಹರೆಯದಲ್ಲಿ ಅವರು ‘ಏಕ್ ಹಜಾರೋನ್‌ ಮೇ ಮೇರಿ ಬೆಹ್ನಾ ಹೈ’ನೊಂದಿಗೆ ಸೀರಿಯಲ್ ಕ್ಷೇತ್ರದಲ್ಲಿ ತೊಡಗಿಸಿಕೊಂಡರು. ಮುಂದೆ ಏಳೆಂಟು ಸೀರಿಯಲ್‌ಗಳಲ್ಲಿ ವಿವಿಧ ಪಾತ್ರಗಳಲ್ಲಿ ಅಭಿನಯಿಸಿದರು.

‘ಜಾನೇ ಕಹಾ ಸೇ ಆಯೀ ಹೈ’ (2010) ಹಿಂದಿ ಸಿನಿಮಾ ಮೂಲಕ ಬೆಳ್ಳಿತೆರೆ ಪ್ರವೇಶಿಸಿದ ಸಿಮ್ರನ್‌, ‘ಕ್ರಿಷ್‌ 3’, ‘ದಾವತ್‌ ಎ ಇಶ್ಕ್‌’, ‘ಡಿಶ್ಕಿಯಾ’ ಚಿತ್ರಗಳಲ್ಲಿ ನಟಿಸಿದ್ದಾರೆ. ಕಳೆದ ವರ್ಷ ತೆರೆಕಂಡ ‘ಬೆಸ್ಟ್‌ ಆಫ್‌ ಲಕ್‌ ಲಾಲೂ’ ಗುಜರಾತಿ ಸಿನಿಮಾದಲ್ಲಿ ನಾಯಕಿಯಾಗಿದ್ದರು. ಇದೀಗ ‘ಕಾಜಲ್‌’ ಚಿತ್ರದೊಂದಿಗೆ ದಕ್ಷಿಣ ಭಾರತಕ್ಕೆ ಬರುತ್ತಿದ್ದಾರೆ. ಬಾಲಿವುಡ್‌ನಲ್ಲೂ ಅವರಿಗೆ ಅವಕಾಶಗಳಿವೆ. ‘ಕಾಜಲ್‌’ನಲ್ಲಿ ನಾಯಕಿ ಪಾತ್ರಕ್ಕೆ ನಟನೆಗೆ ಹೆಚ್ಚು ಸ್ಕೋಪ್‌ ಇದ್ದು, ಆ ಕಾರಣಕ್ಕೆ ಸಿಮ್ರನ್‌ ಕನ್ನಡ ಚಿತ್ರದಲ್ಲಿ ನಟಿಸುವ ಒಲವು ತೋರಿದ್ದಾರೆ ಎನ್ನಲಾಗುತ್ತಿದೆ. ‘ನಾನಿ’, ‘ಕಾಲಚಕ್ರ’ ಕನ್ನಡ ನಿರ್ದೇಶಿಸಿದ್ದ ಸುಮಂತ್ ಕ್ರಾಂತಿ ‘ಕಾಜಲ್‌’ ಚಿತ್ರವನ್ನು ನಿರ್ದೇಶಿಸಲಿದ್ದಾರೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More