ಕಾವೇರಿ ವಿವಾದ: ವೈರಲ್ ಆಯ್ತು ನಟ ಅನಂತ ನಾಗ್ ಮಾತಿನ ವಿಡಿಯೋ

ಸಿನಿಮಾ ಹೊರತಾಗಿ ಇತರ ವಿಚಾರಗಳಿಂದ ಕೊಂಚ ದೂರವೇ ಇರುತ್ತಿದ್ದ ಹಿರಿಯ ನಟ ಅನಂತ ನಾಗ್ ಈಗ ಕಾವೇರಿ ವಿವಾದದ ಬಗ್ಗೆ ಮಾತನಾಡಿದ್ದಾರೆ. ತಮಿಳುನಾಡು ನಟರು ಕಾವೇರಿ ಕುರಿತು ಹೋರಾಟ ನಡೆಸುತ್ತಿರುವ ಸಂದರ್ಭದಲ್ಲಿ ಅನಂತ ನಾಗ್ ಮಾತಿನ ವಿಡಿಯೋ ಗಮನ ಸೆಳೆದಿದೆ

ತಮಿಳುನಾಡು ಸಿನಿಮಾ ನಟರು ಕಾವೇರಿ ವಿವಾದದ ಬಗ್ಗೆ ಮಾತನಾಡುತ್ತಿದ್ದಾರೆ. ನಿನ್ನೆ ತಮಿಳು ನಟ ಸಿಂಬು ಮಾತಿನ ವಿಡಿಯೋ ವೈರಲ್‌ ಅಗಿತ್ತು. ಇದೀಗ ಕನ್ನಡದ ಹಿರಿಯ ನಟ ಅನಂತ ನಾಗ್‌ ಕಾವೇರಿ ವಿವಾದದ ಬಗ್ಗೆ ಮಾತನಾಡಿರುವ ವಿಡಿಯೋ ಎಲ್ಲರ ಗಮನ ಸೆಳೆದಿದೆ. ಇತ್ತೀಚಿನ ದಿನಗಳಲ್ಲಿ ಸಿನಿಮಾ ಹೊರತಾಗಿ ಇತರ ವಿಚಾರಗಳ ಬಗ್ಗೆ ಅನಂತ ನಾಗ್‌ ಪ್ರತಿಕ್ರಿಯಿಸುತ್ತಿರಲಿಲ್ಲ. ತಟಸ್ಥವಾಗಿರುತ್ತಿದ್ದ ಅವರು ಇದೀಗ ಕಾವೇರಿ ವಿಚಾರದ ಬಗ್ಗೆ ಮಾತನಾಡಿರುವುದು ಸಿನಿಮಾರಂಗ ಹಾಗೂ ಅವರ ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿದೆ. ಒಂದೂವರೆ ನಿಮಿಷಗಳ ವಿಡಿಯೋದಲ್ಲಿ ಅನಂತ ನಾಗ್ ಮಾತುಗಳು ಹೀಗಿವೆ:

“ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ತಮಿಳುನಾಡು ಲಾಗಾಯ್ತಿನಿಂದಲೂ ಅಸಹನೆ, ಅಸಹಕಾರ ಮತ್ತು ಘರ್ಷಣೆಯ ನಿಲುವನ್ನು ತೋರಿಸುತ್ತ ಬಂದಿದೆ ಎನ್ನುವುದರಲ್ಲಿ ಆಶ್ಚರ್ಯವಿಲ್ಲ. ಇಂದು ಮತ್ತೊಮ್ಮೆ ತಮಿಳುನಾಡಿನ ಮುಖಂಡರು ತಮಿಳುನಾಡು ಬಂದ್ ಆಚರಿಸಿ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತ ಬಂದಿದ್ದಾರೆ. ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗಳು ಮುಂದಿರುವುದರಿಂದ ಕೇಂದ್ರದಲ್ಲಿರುವ ಸರ್ಕಾರ ಕರ್ನಾಟಕಕ್ಕೆ ಹೆಚ್ಚು ಅನುಕೂಲ ಮಾಡಿಕೊಡಬಹುದು ಎನ್ನುವ ಮಾತು ಬರುತ್ತಿದೆ. ನಿಜವೆಂದರೆ, ಕೇಂದ್ರದಲ್ಲಿ ಯಾವ ಸರ್ಕಾರ ಅಧಿಕಾರಕ್ಕೆ ಬಂದರೂ ನೀರು ಹಂಚಿಕೆಗೆ ಯಾವ ಸೂಕ್ತ ಪರಿಹಾರ ಸೂಚಿಸಿದರೂ ತಮಿಳುನಾಡು ಅಪಸ್ವರ ಎತ್ತುವುದು ವಾಡಿಕೆ. ಕೇಂದ್ರ ಸರ್ಕಾರಗಳು ಬಿಡಿ, ಸುಪ್ರೀಂ ಕೋರ್ಟ್‌ ಕೂಡ ಯಾವುದೇ ಪರಿಹಾರ ನೀಡಲು ಮುಂದಾದರೂ ಅಲ್ಲಿನ ರಾಜಕಾರಣಿಗಳು ಒಪ್ಪುವುದಿಲ್ಲ. ಈಗ ಸದ್ಯದಲ್ಲಿ ತಮಿಳುನಾಡಿನಲ್ಲಿ ಯಾವುದೇ ಚುನಾವಣೆ ಇಲ್ಲದಾಗ್ಯೂ ಅಲ್ಲಿನ ನಟರೀರ್ವರು ರಾಜಕೀಯ ಪ್ರವೇಶ ಮಾಡುವ ಆತುರದಲ್ಲಿ ಹಿಂದಿನ ಪೀಳಿಗೆಗಳಂತೆಯೇ ಅನೇಕ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಕನ್ನಡದ ಭಾಷೆ, ನೆಲ, ಜಲ ಕಾಪಾಡಿಕೊಳ್ಳುವ ಉದಾತ್ತ ಕರ್ತವ್ಯದಲ್ಲಿ ಸಮಸ್ತ ಕನ್ನಡಿಗರ ಜೊತೆ ನಾನು ಕೂಡ ಟೊಂಕ ಕಟ್ಟಿ ನಿಂತಿದ್ದೇನೆ ಎನ್ನುವುದನ್ನು ಗಂಟಾಘೋಷವಾಗಿ ಅನಿವಾರ್ಯವಾಗಿ ನಮ್ರತೆಯಿಂದ ಹೇಳಲು ಇಚ್ಛಿಸುತ್ತೇನೆ.”

ಇದನ್ನೂ ಓದಿ : ಜನುಮ ದಿನ | ಕನ್ನಡ ಚಿತ್ರರಂಗವನ್ನು ಶ್ರೀಮಂತಗೊಳಿಸಿದ ತರಾಸು ಕೃತಿಗಳು
ಸಂಜನಾ ಮನದ ಮಾತು | ‘ಸ್ವರ್ಣಖಡ್ಗಂ’ಗೆ ಜೀವನವನ್ನೇ ಮುಡಿಪಾಗಿಟ್ಟಿದ್ದೇನೆ
ವಿಡಿಯೋ ಸಾಂಗ್ | ‘ಟಗರು’ ಐವತ್ತು ದಿನದ ಸಂಭ್ರಮಕ್ಕೆ ‘ಯಾರೇ ನೀ ಚತುರೆ’
ಟ್ರೈಲರ್‌ | ತೆರೆಗೆ ಸಿದ್ಧವಾದ ‘ಜುರಾಸಿಕ್‌ ವರ್ಲ್ಡ್‌; ದಿ ಫಾಲನ್‌ ಕಿಂಗ್‌ಡಮ್‌’
Editor’s Pick More