ಆರ್‌ಜಿವಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ ‘ಆಫೀಸರ್’ ತೆಲುಗು ಸಿನಿಮಾ ಟೀಸರ್

ನಿರ್ದೇಶಕ ರಾಮ್‌ಗೋಪಾಲ್‌ ವರ್ಮಾ ಮತ್ತು ನಟ ನಾಗಾರ್ಜುನ ಜೋಡಿಯ ‘ಆಫೀಸರ್‌’ ತೆಲುಗು ಸಿನಿಮಾದ ಟೀಸರ್‌ ಅಭಿಮಾನಿಗಳಿಗೆ ಸಮಾಧಾನ ತಂದಿಲ್ಲ. ಟೀಸರ್ ತೀರಾ ಸಾಧಾರಣವಾಗಿದ್ದು, ಅಲ್ಲಿ ವರ್ಮಾ ಅವರ ಝಲಕ್‌ ಇಲ್ಲ ಎನ್ನುವುದು ಸಿನಿಪ್ರಿಯರ ತಕರಾರು

ರಾಮ್‌ಗೋಪಾಲ್‌ ವರ್ಮಾ ನಿರ್ದೇಶನದ ‘ಆಫೀಸರ್‌’ ತೆಲುಗು ಸಿನಿಮಾದ ಟೀಸರ್‌ ಬಗ್ಗೆ ಸಿನಿಪ್ರಿಯರಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ವರ್ಮಾ ಮತ್ತು ನಟ ನಾಗಾರ್ಜುನ ಇಪ್ಪತ್ನಾಲ್ಕು ವರ್ಷಗಳ ನಂತರ ಜೊತೆಯಾಗಿರುವ ಬಹುನಿರೀಕ್ಷಿತ ಚಿತ್ರವಿದು. "ನಟ ನಾಗಾರ್ಜುನರ ಲಾರ್ಜರ್‌ ದ್ಯಾನ್‌ ಇಮೇಜನ್ನು ಸಿನಿಮಾದಲ್ಲಿ ಚಿತ್ರಿಸಿದ್ದೇನೆ. ಭರ್ಜರಿ ರಿಯಲಿಸ್ಟಿಕ್ ಫೈಟ್‌ಗಳನ್ನು ನೀವು ನೋಡಬಹುದು,” ಎಂದು ಟ್ವೀಟ್ ಮಾಡಿ ಟೀಸರ್ ಹಾಕಿದ್ದರು ವರ್ಮಾ. ಆದರೆ, ಟೀಸರ್‌ನಲ್ಲಿ ಆರ್‌ಜಿವಿ ಅವರ ಸಿನಿಮಾಗಳ ಝಲಕ್ ಇಲ್ಲ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಇದೊಂದು ಮಾಮೂಲಿ ಆಕ್ಷನ್‌ ಸಿನಿಮಾದಂತೆ ಭಾಸವಾಗುತ್ತಿದ್ದು, ತಾಂತ್ರಿಕವಾಗಿಯೂ ವರ್ಮಾ ಶೈಲಿ ಕಾಣಿಸುತ್ತಿಲ್ಲ ಎನ್ನುವುದು ಅಭಿಮಾನಿಗಳ ಅಂಬೋಣ. ಮತ್ತಷ್ಟು ಸಿನಿಪ್ರಿಯರು ಟೀಸರ್ ಮೆಚ್ಚಿಕೊಂಡು ವರ್ಮಾರನ್ನು ಅಭಿನಂದಿಸಿದ್ದಾರೆ.

ಅಂಡರ್‌ವರ್ಲ್ಡ್‌ ಹಿನ್ನೆಲೆಯಲ್ಲಿ ಪೊಲೀಸ್ ಆಧಿಕಾರಿಯ ಸಾಹಸಗಳನ್ನು ತೋರಿಸುವ ಸಿನಿಮಾ ‘ಆಫೀಸರ್‌.’ ಚಿತ್ರದಲ್ಲಿ ನಾಗಾರ್ಜುನ ಪೊಲೀಸ್ ಅಧಿಕಾರಿ ‘ಶಿವ’ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 1989ರಲ್ಲಿ ನಾಗಾರ್ಜುನ್‌ಗಾಗಿ ವರ್ಮಾ ನಿರ್ದೇಶಿಸಿದ ಚಿತ್ರ ‘ಶಿವ’ ಶೀರ್ಷಿಕೆಯೇ ‘ಆಫೀಸರ್‌’ನಲ್ಲಿ ಹೀರೋ ಹೆಸರಾಗಿದೆ. "ಭಾರತೀಯ ಸೆಲ್ಯುಲಾಯ್ಡ್‌ ಇತಿಹಾಸದಲ್ಲೇ ಚಿತ್ರದಲ್ಲಿನ ನಾಗಾರ್ಜುನ ಅವರಂಥ ಪೊಲೀಸ್‌ ಆಫೀಸರ್ ಪಾತ್ರ ಬಂದಿರಲಾರದು,” ಎಂದಿದ್ದಾರೆ ವರ್ಮಾ. ಆದರೆ, ಟೀಸರ್‌ನಲ್ಲಿ ನಾಗಾರ್ಜುನ ಪಾತ್ರದ ಚಿತ್ರಣವೇ ಸಮರ್ಪಕವಾಗಿಲ್ಲ. ವರ್ಮಾ ಏನು ಹೇಳಲು ಹೊರಟಿದ್ದಾರೆ ಎನ್ನುವ ಸೂಚನೆಯೂ ಸಿಗುವುದಿಲ್ಲ. ಹಾಗಾಗಿಯೇ, ಟೀಸರ್‌ ಬಗ್ಗೆ ಮಿಶ್ರ ಅಭಿಪ್ರಾಯ ವ್ಯಕ್ತವಾಗಿದೆ. ಮೇ ತಿಂಗಳ ಮೂರನೇ ವಾರದಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ.

ಇದನ್ನೂ ಓದಿ : ಕಾವೇರಿ ವಿವಾದ: ವೈರಲ್ ಆಯ್ತು ನಟ ಅನಂತ ನಾಗ್ ಮಾತಿನ ವಿಡಿಯೋ
ಸಂಜನಾ ಮನದ ಮಾತು | ‘ಸ್ವರ್ಣಖಡ್ಗಂ’ಗೆ ಜೀವನವನ್ನೇ ಮುಡಿಪಾಗಿಟ್ಟಿದ್ದೇನೆ
ವಿಡಿಯೋ ಸಾಂಗ್ | ‘ಟಗರು’ ಐವತ್ತು ದಿನದ ಸಂಭ್ರಮಕ್ಕೆ ‘ಯಾರೇ ನೀ ಚತುರೆ’
ಟ್ರೈಲರ್‌ | ತೆರೆಗೆ ಸಿದ್ಧವಾದ ‘ಜುರಾಸಿಕ್‌ ವರ್ಲ್ಡ್‌; ದಿ ಫಾಲನ್‌ ಕಿಂಗ್‌ಡಮ್‌’
Editor’s Pick More