ಅನಿತಾ ಭಟ್‌ ಮನದ ಮಾತು | ತಾಳ್ಮೆಯಿಂದ ಕಾದಿದ್ದಕ್ಕೆ ಉದ್ಯಮ ಕೈಹಿಡಿಯಿತು

ಅನಿತಾ ಭಟ್‌ ಬೆಳ್ಳಿತೆರೆಗೆ ಪ್ರವೇಶಿಸಿದ ‘ಸೈಕೋ’ ಕನ್ನಡ ಸಿನಿಮಾ ತೆರೆಕಂಡು ಹತ್ತು ವರ್ಷವಾಯ್ತು. ಈ ಚಿತ್ರದ ನಂತರ ಅವರು ಹತ್ತಾರು ಸಿನಿಮಾಗಳಲ್ಲಿ ನಟಿಸಿದರೂ, ಗುರುತಿಸಿಕೊಳ್ಳುವಂತಹ ಪಾತ್ರಗಳಿರಲಿಲ್ಲ. ಆದರೆ ಕಳೆದ ವರ್ಷದಿಂದೀಚೆಗೆ ಅವರು ವೈವಿಧ್ಯಮಯ ಪಾತ್ರಗಳಿಗೆ ಸಹಿ ಮಾಡುತ್ತಿದ್ದಾರೆ

ಮೊನ್ನೆಯಷ್ಟೇ ಸೆಟ್ಟೇರಿದ ‘ಪ್ರಭುತ್ವ’ ಸಿನಿಮಾದಲ್ಲಿ ನಟಿ ಅನಿತಾ ಭಟ್‌ ಅವರಿಗೆ ತಹಸೀಲ್ದಾರ್ ಪಾತ್ರವಿದೆ. ಪ್ರಾಮಾಣಿಕ ಮಹಿಳಾ ಅಧಿಕಾರಿಯಾಗಿ ಅನಿತಾ ಭಟ್‌ ಮೊದಲ ಬಾರಿಗೆ ಡಿಗ್ಲಾಮ್‌ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ‘ವೈಶಾಖಿನಿ’ ಮತ್ತು ‘ಅಭಿರಾಮಿ’ ಚಿತ್ರಗಳ ಶೀರ್ಷಿಕೆ ಪಾತ್ರಗಳು ಅವರ ಪಾಲಾಗಿವೆ. ಈ ಮಧ್ಯೆ ಕಳೆದ ವರ್ಷ ಸೆಟ್ಟೇರಿದ ಮೂರು ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿವೆ. ವೃತ್ತಿ ಬದುಕಿನ ವಿಶಿಷ್ಟ ತಿರುವಿನ ಈ ಸಂದರ್ಭದಲ್ಲಿ ಅವರು ಖುಷಿಯಿಂದ ಮಾತನಾಡಿದ್ದಾರೆ.

ಇದೊಂಥರಾ ನಿಮಗೆ ವೃತ್ತಿ ಬದುಕಿನ ಸೆಕೆಂಡ್ ಇನ್ನಿಂಗ್ಸ್‌ ಎಂದು ಹೇಳಬಹುದೇ?

ಒಂದು ರೀತಿ ಹೌದು. ಸೂರಿ ನಿರ್ದೇಶನದ ‘ಟಗರು’ ಸಿನಿಮಾದ ಪಾತ್ರದಲ್ಲಿ ಜನರು ನನ್ನನ್ನು ಗುರುತಿಸಿದರು. ಚಿಕ್ಕ ಪಾತ್ರವಾದರೂ ಅದನ್ನು ನಿರ್ದೇಶಕರು ಸೊಗಸಾಗಿ ಕಟ್ಟಿದ್ದರು. ನನ್ನ ವೃತ್ತಿ ಬದುಕಿಗೆ ತಿರುವು ನೀಡುವಲ್ಲಿ ಈ ಪಾತ್ರದ ಕೊಡುಗೆ ದೊಡ್ಡದಿದೆ. ಇದೀಗ ಜನರು ‘ಟಗರು’ ಪಾತ್ರದ ಮೂಲಕವೇ ಗುರುತಿಸುತ್ತಿದ್ದಾರೆ. ವೈವಿಧ್ಯಮಯ ಪಾತ್ರಗಳು ಸಿಗುತ್ತಿವೆ. ಇಷ್ಟು ದಿನ ತಾಳ್ಮೆಯಿಂದ ಕಾದಿದ್ದಕ್ಕೆ ಸಾರ್ಥಕವಾಯ್ತು ಎನ್ನುವ ಭಾವ ನನ್ನದಾಗಿದೆ.

ಗ್ಲಾಮರಸ್‌ ರೋಲ್‌ಗಳಲ್ಲೇ ನಟಿಸಿದ್ದ ನೀವು ಈಗ ತಹಸೀಲ್ದಾರ್‌ ಪಾತ್ರ ಮಾಡುತ್ತಿದ್ದೀರಿ?

ಇಂಥದ್ದೊಂದು ಪಾತ್ರವನ್ನು ಎದುರುನೋಡುತ್ತಿದ್ದೆ. ರಂಗನಾಥ್ ನಿರ್ದೇಶನದ ‘ಪ್ರಭುತ್ವ’ ಚಿತ್ರದ ಮೂಲಕ ಪಾತ್ರ ಸಿಕ್ಕಿದೆ. ಈ ಡಿಗ್ಲಾಮ್‌ ರೋಲ್‌ನಲ್ಲಿ ನಟನೆಗೆ ಹೆಚ್ಚು ಸ್ಕೋಪ್ ಇದ್ದು, ಪ್ರೇಕ್ಷಕರು ಖಂಡಿತಾ ನನ್ನನ್ನು ಮೆಚ್ಚಲಿದ್ದಾರೆ. ಪ್ರಾಮಾಣಿಕ ಮಹಿಳಾ ಅಧಿಕಾರಿ ಕೆಟ್ಟ ರಾಜಕೀಯ ಮತ್ತು ಸಾಮಾಜಿಕ ವ್ಯವಸ್ಥೆಯಲ್ಲಿ ಹೇಗೆ ದಾಳವಾಗುತ್ತಾಳೆ? ಎಲ್ಲವನ್ನೂ ಮೀರಿ ಆಕೆಗುರಿ ಸಾಧಿಸುತ್ತಾಳೆಯೇ ಎನ್ನುವ ಪ್ರಶ್ನೆಗಳಿಗೆ ನೀವು ಚಿತ್ರವನ್ನೇ ನೋಡಬೇಕು. ಪಾತ್ರಕ್ಕೆ ಹಲವು ಶೇಡ್‌ಗಳಿದ್ದು, ಕ್ಯಾಮೆರಾ ಎದುರಿಸಲು ಕಾತರಳಾಗಿದ್ದೇನೆ.

ನಿಮ್ಮ ಈ ಪಾತ್ರಕ್ಕೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಪ್ರೇರಣೆ ಇದ್ದಂತಿದೆ!?

ಪ್ರೇರಣೆ ಇದ್ದರೂ ಇರಬಹುದು. ಆದರೆ ಅವರಿಗೂ ನಮ್ಮ ಸಿನಿಮಾಗೂ ಯಾವುದೇ ರೀತಿಯ ಸಂಬಂಧವಿಲ್ಲ. ನಿರ್ದೇಶಕರು ಕೂಡ ಆ ಬಗ್ಗೆ ಪ್ರಸ್ತಾಪಿಸಿಲ್ಲ. ಎರಡು ದಿನಗಳ ಚಿತ್ರೀಕರಣವಷ್ಟೇ ಆಗಿದ್ದು, ಮುಂದೆ ಪಾತ್ರ ಹೇಗೆಲ್ಲಾ ರೂಪುಗೊಳ್ಳುತ್ತದೆ ಎಂದು ನೋಡಬೇಕು. ಈ ಚಿತ್ರದಲ್ಲಿ ಖ್ಯಾತ ನಟ ನಾಜರ್‌ ಅವರೊಂದಿಗೆ ನಟಿಸಲಿದ್ದೇನೆ ಎನ್ನುವ ಖುಷಿಯೂ ನನಗಿದೆ.

‘ವೈಶಾಖಿನಿ’ ಚಿತ್ರದ ಟೀಸರ್‌

‘ವೈಶಾಖಿನಿ’, ‘ಅಭಿರಾಮಿ’ ಎನ್ನುವ ಚೆಂದದ ಹೆಸರಿನ ಚಿತ್ರದಳಲ್ಲಿ ಶೀರ್ಷಿಕೆ ಪಾತ್ರಗಳನ್ನು ನಿರ್ವಹಿಸುತ್ತಿದ್ದೀರಿ..

ಹೌದು ಈ ಹೆಸರುಗಳು ತುಂಬಾ ಮುದ್ದಾಗಿವೆ. ಹಾರರ್ ಮಾದರಿಯ ‘ವೈಶಾಖಿನಿ’ ಚಿತ್ರದಲ್ಲಿ ನಾನು ರಾಜಕುಮಾರಿಯಾಗಿ ಕಾಣಿಸಿಕೊಂಡಿದ್ದೇನೆ. ‘ಅರುಂಧತಿ’ ತೆಲುಗು ಸಿನಿಮಾದ ಫೀಲ್‌ ಇಲ್ಲಿದೆ. ‘ಅಭಿರಾಮಿ’ ನನ್ನ ವೃತ್ತಿ ಬದುಕಿನ ಮತ್ತೊಂದು ವಿಶೇಷ ಸಿನಿಮಾ ಆಗಲಿದೆ. ಇದು ಅಪರೂಪದ ಜನಾಂಗವೊಂದರ ಜನರು, ಅವರ ಆಚಾರ, ವಿಚಾರ, ಸಂಸ್ಕೃತಿ, ನಡೆ-ನುಡಿಯ ಮೇಲೆ ಬೆಳಕು ಚೆಲ್ಲಲಿದೆ.

ಇದನ್ನೂ ಓದಿ : ಕಾವೇರಿ ವಿವಾದ: ವೈರಲ್ ಆಯ್ತು ನಟ ಅನಂತ ನಾಗ್ ಮಾತಿನ ವಿಡಿಯೋ

ತೆರೆಗೆ ಸಿದ್ಧವಿರುವ ನಿಮ್ಮ ಚಿತ್ರಗಳಾವುದು?

ಎರಡು ಸಿನಿಮಾಗಳು ಸದ್ಯ ತೆರೆಗೆ ಸಿದ್ಧವಾಗಿವೆ. ಇವುಗಳ ಪೈಕಿ ಪ್ರಕಾಶ್ ರಾಜ್‌ ಮೇಹು ನಿರ್ದೇಶನದ ‘ಡಿಎನ್‌ಎ’ ಚಿತ್ರವನ್ನು ನಾನು ವಿಶೇಷವಾಗಿ ಪ್ರಸ್ತಾಪಿಸುತ್ತೇನೆ. ನೆಗೆಟಿವ್‌ ಶೇಡ್‌ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾದ ಬಗ್ಗೆ ನನಗೆ ವಿಶೇಷ ಪ್ರೀತಿ. ಇಡೀ ಸಿನಿಮಾ ನನ್ನ ಪಾತ್ರದ ಮೇಲೆ ನಿಂತಿದೆ. ‘ಹೊಸ ಕ್ಲೈಮ್ಯಾಕ್ಸ್‌’ ಚಿತ್ರಕ್ಕೆ ಜರ್ಮನಿ ಮೂಲದ ಉದ್ಯಮಿಯೊಬ್ಬರು ಸಹನಿರ್ಮಾಪಕರಾಗಿದ್ದಾರೆ. ಕಥಾವಸ್ತು, ಮೇಕಿಂಗ್ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿರುವ ಅವರು ಈ ಚಿತ್ರವನ್ನು ಜರ್ಮನ್‌ ಭಾಷೆಗೆ ಡಬ್ ಮಾಡುವ ಉದ್ದೇಶ ಹೊಂದಿದ್ದಾರೆ. ‘ಡೇಸ್‌ ಆಫ್ ಬೋರಾಪುರ’ ಚಿತ್ರವೂ ತೆರೆಗೆ ಸಿದ್ಧವಾಗುತ್ತಿದೆ.

ಸಿನಿಮಾ ಜೊತೆಗೆ ಮಾಡೆಲಿಂಗ್‌ನಲ್ಲೂ ತೊಡಗಿಸಿಕೊಂಡಿದ್ದೀರಾ?

ಖಂಡಿತಾ ಇಲ್ಲ. ನಾನು ಮಾಡೆಲಿಂಗ್‌ ಮಾಡುತ್ತೇನೆ ಎಂದು ಹಲವರು ಭಾವಿಸಿದ್ದಾರೆ. ಆದರೆ ನನಗೂ, ಮಾಡೆಲಿಂಗ್‌ಗೂ ಸಂಬಂಧವೇ ಇಲ್ಲ. ನಾನು ಕ್ಯಾಮೆರಾ ಎದುರು ಕಂಫರ್ಟ್‌ ಆಗಿರುತ್ತೇನೆ. ರ್ಯಾಂಪ್‌ ಮೇಲೆ ಕ್ಯಾಟ್‌ವಾಕ್‌ ಮಾಡು ಎಂದರೆ ನನ್ನಿಂದಾಗದು.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More