ಜನುಮದಿನ | ಬಹುಮುಖ ಪ್ರತಿಭೆಯ ಕಲಾವಿದೆ ರೋಹಿಣಿ ಹಟ್ಟಂಗಡಿ 

ಬ್ರಿಟಿಷ್ ಅಕಾಡೆಮಿ ಪುರಸ್ಕಾರಕ್ಕೆ ಭಾಜನರಾದ ಏಕೈಕ ಭಾರತೀಯ ನಟಿ ರೋಹಿಣಿ ಹಟ್ಟಂಗಡಿ. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟಿ ಇಂದು (ಏ.11) ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. ಪೋಷಕ ಪಾತ್ರಗಳಿಗೆ ಘನತೆ ತಂದುಕೊಟ್ಟ ರೋಹಿಣಿ ರಂಗಭೂಮಿ, ಸಿನಿಮಾ, ಕಿರುತೆರೆ ಅಭಿಯಾನದ ಕುರಿತ ಲೇಖನ ಇಲ್ಲಿದೆ

ರಂಗಭೂಮಿಯಲ್ಲಿ ಸಕ್ರಿಯರಾಗಿದ್ದ ರೋಹಿಣಿ ಅವರ ನಟನಾ ಬದುಕಿಗೆ ‘ಗಾಂಧಿ’ ಇಂಗ್ಲಿಷ್ ಸಿನಿಮಾ ಮಹತ್ವದ ತಿರುವಾಯ್ತು. ರಿಚರ್ಡ್‌ ಅಟೆನ್‌ಬರೋ ನಿರ್ದೇಶನದ ‘ಗಾಂಧಿ’ ಇಂಗ್ಲಿಷ್‌ ಚಿತ್ರದ ಉತ್ತಮ ನಟನೆಗೆ ಅವರು ಬ್ರಿಟಿಷ್ ಅಕಾಡೆಮಿ ಗೌರವಕ್ಕೆ ಪಾತ್ರರಾದರು. ಅಲ್ಲಿಂದ ಮುಂದೆ ಸಿನಿಮಾಗಳಲ್ಲಿ ಹೆಚ್ಚು ಸಕ್ರಿಯರಾದ ಅವರು ಪೋಷಕ ಪಾತ್ರಗಳಿಗೆ ಗೌರವ ತಂದುಕೊಟ್ಟ ನಟಿ ಎಂದೇ ಕರೆಸಿಕೊಳ್ಳುತ್ತಾರೆ. ಅವರ ಜನ್ಮನಾಮ ರೋಹಿಣಿ ಓಕ್. ದಿಲ್ಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ಎಸ್‌ಡಿ ) ಪದವೀಧರೆ. ಖ್ಯಾತ ರಂಗಕರ್ಮಿ ಇಬ್ರಾಹಿಂದ ಅಲ್ಕಾಜಿ ನಾಟಕ ಶಾಲೆಯಲ್ಲಿ ಅವರಿಗೆ ಗುರು. ರಾಷ್ಟ್ರೀಯ ನಾಟಕ ಶಾಲೆಯಲ್ಲಿ ರೋಹಿಣಿ ಅತ್ಯುತ್ತಮ ವಿದ್ಯಾರ್ಥಿನಿ ಗೌರವ ಪಡೆದರು.

ಮುಂದೆ ಪ್ರೊಫೆಸರ್ ಸುರೇಂದ್ರ ವಡಗಾವ್‌ಕರ್ ಅವರಿಂದ ರೋಹಿಣಿಗೆ ಶಾಸ್ತ್ರೀಯ ಕಥಕ್ಕಳಿ ಮತ್ತು ಭರತನಾಟ್ಯ ತರಬೇತಿ ಸಿಕ್ಕಿತು. ನಂತರದ ದಿನಗಳಲ್ಲಿ ಪತಿ ಜಯದೇವ್ ಅವರೊಡಗೂಡಿ ರೋಹಿಣಿ ಮರಾಠಿ ರಂಗತಂಡ ‘ಆವಿಷ್ಕಾರ್’ ಕಟ್ಟಿದರು. ಮಹಾರಾಷ್ಟ್ರ ರಾಜ್ಯ ನಾಟಕ ಹಬ್ಬದಲ್ಲಿ ಪ್ರದರ್ಶನಗೊಂಡ ‘ಚಂಗುನ’ ನಾಟಕದ ಉತ್ತಮ ಅಭಿನಯಕ್ಕಾಗಿ ರೋಹಿಣಿ ಅತ್ಯುತ್ತಮ ನಟಿ ಪುರಸ್ಕಾರ ಪಡೆದರು. ಜಪಾನಿನ ಕಬುಕಿ ಮತ್ತು ಕರ್ನಾಟಕದ ಯಕ್ಷಗಾನ ಪ್ರದರ್ಶಿಸಿದ ಏಷ್ಯಾದ ಮೊದಲ ಮಹಿಳೆ ಎನ್ನುವ ಹೆಗ್ಗಳಿಕೆಯೂ ಅವರದಾಗಿದೆ. ನಿತಿನ್ ಸೇನ್ ಕೃತಿಯನ್ನಾಧಿರಿಸಿದ ‘ಅಪರಾಜಿತ’ ಏಕವ್ಯಕ್ತಿ ಪ್ರದರ್ಶನ ರೋಹಿಣಿ ಅವರಿಗೆ ದೊಡ್ಡ ಹೆಸರು ತಂದುಕೊಟ್ಟಿತು. ಪತಿ ಜಯದೇವ ಹತ್ತಂಗಡಿ ರಚಿಸಿದ ಐದು ನಾಟಕಗಳಲ್ಲಿ ರೋಹಿಣಿ ಅಭಿನಯಿಸಿದ್ದರು. ರಂಗಭೂಮಿ ಸಾಧನೆಗಾಗಿ ಅವರಿಗೆ ಸಂಗೀತ ನಾಟಕ ಅಕಾಡೆಮಿ ಗೌರವ ಸಿಕ್ಕಿದೆ. ಮುಂಬೈನಲ್ಲಿ ಹತ್ತಂಗಡಿ ದಂಪತಿ ‘ಕಲಾಶ್ರಯ್’ ಹೆಸರಿನ ಶಿಕ್ಷಣ ಮತ್ತು ಸಂಶೋಧನ ಸಂಸ್ಥೆ ನಡೆಸುತ್ತಿದ್ದರು.

‘ಗಾಂಧಿ’ (1982) ಇಂಗ್ಲಿಷ್ ಸಿನಿಮಾ

ರೋಹಿಣಿ ಬೆಳ್ಳಿತೆರೆಗೆ ಪರಿಚಯವಾಗಿದ್ದು ‘ಅರವಿಂದ್ ದೇಸಾಯಿ ಕಿ ಅಜೀಬ್ ದಾಸ್ತಾನ್’ (1978) ಚಿತ್ರದಲ್ಲಿ. ನಂತರ ‘ಆಲ್ಬರ್ಟ್ ಪಿಂಟೋ ಕೋ ಗುಸ್ಸಾ ಕ್ಯೂ ಆತಾ ಹೈ’ ಸಿನಿಮಾದಲ್ಲಿ ನಟಿಸಿದರು. ನಾಸಿರುದ್ದೀನ್ ಷಾ ಮತ್ತು ಸ್ಮಿತಾ ಪಾಟೀಲ್ ಅಭಿನಯಿಸಿದ್ದ ‘ಚಕ್ರ’ ಚಿತ್ರದಲ್ಲಿ ಅವರಿಗೆ ಉತ್ತಮ ಪಾತ್ರವಿತ್ತು. ರೋಹಿಣಿಗೆ ಜಾಗತಿಕ ಮನ್ನಣೆ ತಂದುಕೊಟ್ಟ ಸಿನಿಮಾ ‘ಗಾಂಧಿ’ (1982). ರಿಚರ್ಡ್ ಅಟೆನ್‌ಬರೋ ನಿರ್ದೇಶನದ ಈ ಇಂಗ್ಲಿಷ್ ಸಿನಿಮಾದಲ್ಲಿ ರೋಹಿಣಿ, ಕಸ್ತೂರಬಾ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿನ ಉತ್ತಮ ಅಭಿನಯಕ್ಕಾಗಿ ರೋಹಿಣಿ ಬಾಫ್ಟಾ ಗೌರವಕ್ಕೆ ಪಾತ್ರರಾದರು.

ಮಹೇಶ್ ಭಟ್ ನಿರ್ದೇಶನದ ‘ಅರ್ಥ್’ (1984) ಚಿತ್ರದ ಅಭಿನಯಕ್ಕಾಗಿ ರೋಹಿಣಿ ಅವರಿಗೆ ಫಿಲ್ಮ್‌ಫೇರ್‌ ಪುರಸ್ಕಾರ ಸಂದಿತು. ಗೋವಿಂದ ನಿಹಲಾನಿ ನಿರ್ದೇಶನದ ‘ಪಾರ್ಟಿ’ (1984) ಚಿತ್ರದಲ್ಲೂ ಅವರ ಪಾತ್ರ ಮಹತ್ವದ್ದು. ಈ ಪಾತ್ರಪೋಷಣೆಗೆ ಅವರು ರಾಷ್ಟ್ರಪ್ರಶಸ್ತಿಗೆ ಭಾಜನರಾದರು. ‘ಮೋಹನ್ ಜೋಶಿ ಹಜಾರ್ ಹೋ!’, ‘ಸಾರಾಂಶ್’ ಚಿತ್ರಗಳೊಂದಿಗೆ ರೋಹಿಣಿ ಮಧ್ಯವಯಸ್ಸಿನ ಗೃಹಿಣಿಯ ಪಾತ್ರಗಳತ್ತ ಹೊರಳಿದರು. ‘ಚಾಲ್‌ಬಾಜ್‌’, ‘ಲಡಾಯಿ’ ಚಿತ್ರಗಳಲ್ಲಿನ ಅವರ ಹಾಸ್ಯ ಪಾತ್ರಗಳು ಮನ್ನಣೆಗೆ ಪಾತ್ರವಾದವು.

ಇದನ್ನೂ ಓದಿ : ಜನುಮದಿನ | ಸಹಜ ಅಭಿನಯದ ನಟಿ ‘ಗುಡ್ಡಿ’ ಜಯಾ ಬಾದುರಿಗೆ ಈಗ ಎಪ್ಪತ್ತು

‘ಸಾರಾಂಶ್‌’ ಹಿಂದಿ ಸಿನಿಮಾ

80, 90ರ ದಶಕಗಳ ಪ್ರತಿಭಾವಂತ ನಿರ್ದೇಶಕರ ಚಿತ್ರಗಳಲ್ಲಿ ರೋಹಿಣಿ ಅಭಿನಯಿಸಿದ್ದಾರೆ. ಗೋವಿಂದ ನಿಹಲಾನಿ ಅವರ ‘ಆಘಾತ್’, ಮುಜಾಫಿರ್ ಆಲಿ ನಿರ್ದೇಶನದ ‘ಅಂಜುಮನ್’, ಕನ್ನಡಿಗ ಗಿರೀಶ್ ಕಾಸರವಳ್ಳಿ ಅವರ ‘ಮನೆ’ ಮತ್ತು ‘ಎಕ್ ಘರ್’, ರಾಜಕುಮಾರ್‌ ಸಂತೋಷಿ ನಿರ್ದೇಶನದ ‘ದಾಮಿನಿ’, ‘ಘಾತಕ್’ ಕೆಲವು ಉದಾಹರಣೆ. ‘ಅಗ್ನಿಪಥ್’ ಚಿತ್ರದ ಉತ್ತಮ ಅಭಿನಯಕ್ಕಾಗಿ ಅವರಿಗೆ ಮತ್ತೊಮ್ಮೆ ಫಿಲ್ಮ್‌ಫೇರ್‌ ಪುರಸ್ಕಾರ ಸಂದಿತು. ‘ಪುಕಾರ್’ನಲ್ಲಿ ಅವರದು ಹಾಸ್ಯಪಾತ್ರ. ಸೂಪರ್‌ಹಿಟ್‌ ‘ಮುನ್ನಾಭಾಯ್ ಎಂಬಿಬಿಎಸ್’ ಚಿತ್ರದಲ್ಲಿ ಅವರು ಸಂಜಯ್ ದತ್ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಹಿಂದಿ, ಇಂಗ್ಲಿಷ್‌, ತಮಿಳು, ತೆಲುಗು, ಗುಜರಾತ್‌, ಮಲಯಾಳಂ ಭಾಷೆಗಳ ಸಿನಿಮಾಗಳಲ್ಲಿ ರೋಹಿಣಿ ಅಭಿನಯಿಸಿದ್ದಾರೆ. ‘ಚಾರ್ ದಿವಸ್ ಸಸೂಚೆ’ ಮರಾಠಿ ಸೀರಿಯಲ್‌ ಪಾತ್ರ ಅವರಿಗೆ ಹೆಸರು ತಂದುಕೊಟ್ಟಿತು. ‘ಮಹಾಯಜ್ಞ’, ‘ಥೋಡಾ ಹೈ ಥೋಡಾ ಕಿ ಜರೂರತ್ ಹೈ’, ‘ಟೀಚರ್’, ‘ಘರ್ ಕಿ ಲಕ್ಷ್ಮಿ ಭೇಟಿಯಾನ್’, ‘ವಾಹಿನಿ ಸಾಹೇಬ್’ ಅವರ ಕೆಲವು ಪ್ರಮುಖ ಹಿಂದಿ ಧಾರಾವಾಹಿಗಳು.

‘ಅಸಂಭವ್‌’ ಹಿಂದಿ ಸಿನಿಮಾ

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More