ರಾಜ್‌ ಸ್ಮರಣೆ | ‘ಒಲವು ಗೆಲುವು’ ಚಿತ್ರಕ್ಕೆ ನಂದಿಬೆಟ್ಟದ ಮೇಲೊಂದು ಫೈಟ್

ಸ್ಥಿರಚಿತ್ರ ಛಾಯಾಗ್ರಾಹಕ ಭವಾನಿ ಲಕ್ಷ್ಮೀನಾರಾಯಣ ಅವರು ವರನಟ ಡಾ ರಾಜಕುಮಾರ್ ಅವರ ಆತ್ಮೀಯ ಒಡನಾಡಿಯಾಗಿದ್ದರು. ನಂದಿಬೆಟ್ಟದಲ್ಲಿ ನಡೆದ ‘ಒಲವು ಗೆಲುವು’ ಸಿನಿಮಾ ಚಿತ್ರೀಕರಣ ಸಂದರ್ಭಗಳನ್ನು ಅವರಿಲ್ಲಿ ನೆನಪು ಮಾಡಿಕೊಂಡಿದ್ದಾರೆ. ಇಂದು (ಏ 12) ರಾಜ್‌ ನಮ್ಮನ್ನಗಲಿದ ದಿನ

ನಂದಿಬೆಟ್ಟದಲ್ಲಿ ‘ಒಲವು ಗೆಲುವು’ ಚಿತ್ರದ ಶೂಟಿಂಗ್ ನಡೆಯುತ್ತಿದ್ದ ಸಂದರ್ಭ. ಭಾರ್ಗವ ನಿರ್ದೇಶನದ ಈ ಚಿತ್ರಕ್ಕೆ ಅಲ್ಲಿ ಎರಡು ದಿನ ಚಿತ್ರೀಕರಣ ನಡೆದ ನೆನಪು. ಖ್ಯಾತ ಸಾಹಸ ಸಂಯೋಜಕ ಶಿವಯ್ಯನವರ ನಿರ್ದೇಶನದಲ್ಲಿ ಫೈಟ್ ಸನ್ನಿವೇಶಗಳನ್ನು ಚಿತ್ರಿಸುತ್ತಿದ್ದರು. ಪ್ರಭಾಕರ್ ಮತ್ತು ಜ್ಯೂನಿಯರ್ ಶೆಟ್ಟಿ ಮುಖ್ಯ ಸ್ಟಂಟ್‌ಮ್ಯಾನ್‌ಗಳು. ಬೆಟ್ಟದ ತುದಿಯ ಟಿಪ್ಪು ಡ್ರಾಪ್‌ನ ಈ ಫೈಟಿಂಗ್ ಸನ್ನಿವೇಶದಲ್ಲಿ ನಟ ಪ್ರಭಾಕರ್ ಇದ್ದರು. ಅವರು ಆಗಿನ್ನೂ ಪೂರ್ಣ ಪ್ರಮಾಣದ ನಟನಾಗಿರಲಿಲ್ಲ. ಫೈಟರ್ ಆಗಿ ಕಾಣಿಸಿಕೊಳ್ಳುತ್ತಿದ್ದರು. ನಾನು ಕ್ಯಾಮೆರಾಗೆ ಪೋಸ್ ಕೇಳಿದಾಗ, ರಾಜ್ ಸಜ್ಜಾದರು. ಫೈಟರ್ ಶೆಟ್ಟಿ ಮತ್ತು ಪ್ರಭಾಕರ್‌ರನ್ನು ಎದುರು ನಿಲ್ಲಿಸಿಕೊಂಡು ಒಮ್ಮೆಗೇ ಜಂಪ್ ಮಾಡಿದರು.

ದೈತ್ಯದೇಹಿ ಪ್ರಭಾಕರ್ ಕೊಂಚ ಹೆಚ್ಚೇ ರಿಸ್ಕ್‌ ತೆಗೆದುಕೊಂಡು ಫೈಟ್ ಮಾಡುತ್ತಿದ್ದರು. ಸೂಕ್ಷ್ಮ ಮನಸ್ಸಿನ ರಾಜ್ ಇದನ್ನು ಗಮನಿಸದಿರಲಿಲ್ಲ. ಅಂದು ಶಾಟ್ ಮುಗಿದ ನಂತರ ರಾಜ್, ‘ಸ್ವಲ್ಪ ಹುಷಾರು ಮರಿ..’ ಎಂದು ಪ್ರಭಾಕರ್‌ಗೆ ಕಿವಿಮಾತು ಹೇಳಿದ್ದರು. ಪ್ರಭಾಕರ್‌ಗೆ ಎಚ್ಚರಿಕೆ ನೀಡಿದ ರಾಜ್ ಕೂಡ ರಿಸ್ಕ್‌ ತೆಗೆದುಕೊಳ್ಳುವಲ್ಲಿ ಮುಂದು. ಯೋಗಪಟು ರಾಜ್ ಅವರದ್ದು ಕಟ್ಟುಮಸ್ತು ದೇಹ. ಕೆಲವು ಅಪಾಯಕಾರಿ ಸ್ಟಂಟ್‌ಗಳನ್ನು ಸ್ವತಃ ತಾವೇ ನಿಭಾಯಿಸುತ್ತಿದ್ದರು. ಆದರೆ ಹಲವು ಬಾರಿ ಇದಕ್ಕೆ ನಿರ್ದೇಶಕರೇ ಒಪ್ಪುತ್ತಿರಲಿಲ್ಲ. ಆಗ ಡ್ಯೂಪ್‌ಗಳನ್ನು ಹಾಕಲು ರಾಜ್‌ಗೆ ಮನವರಿಕೆ ಮಾಡಿಕೊಡಬೇಕಿತ್ತು. ಇನ್ನು ಚಿಕ್ಕ - ಪುಟ್ಟ ಮೇಕಪ್‌ಗಳನ್ನು ಸ್ವತಃ ಅವರೇ ಮಾಡಿಕೊಳ್ಳುತ್ತಿದ್ದರು. ಹಾಗೆ ಅಂದು ಶಾಟ್‌ಗೆ ಮುನ್ನ ‘ಟಚ್’ ಮಾಡಿಕೊಳ್ಳುತ್ತಿದ್ದ ಸಂದರ್ಭವನ್ನು ದಾಖಸಿಕೊಂಡೆ.

‘ಒಲವು ಗೆಲುವು’ ಚಿತ್ರದ ‘ಗಿಣಿಯೇ ನನ್ನ ಅರಗಿಣಿಯೇ’ ಹಾಡು

ಮಧ್ಯಾಹ್ನ ಊಟದ ಹೊತ್ತಿನಲ್ಲೊಂದು ತಮಾಷೆ ನಡೆಯಿತು. ಚಿತ್ರತಂಡದ ಎಲ್ಲರೂ ಸಾಲಾಗಿ ನೆಲದ ಮೇಲೆ ಊಟಕ್ಕೆ ಕುಳಿತಿದ್ದರು. ರಾಜ್ ಕೂಡ ಎಂದಿನಂತೆ ಎಲ್ಲರೊಂದಿಗೆ ಊಟಕ್ಕೆ ಕುಳಿತಿದ್ದರು. ಅವರ ಪಕ್ಕದಲ್ಲೇ ನನಗೊಂದು ಸೀಟ್ ಕಾಯ್ದಿರಿಸಿದ್ದರು. ಚಚ್ಚೌಕಾಕೃತಿಯಲ್ಲಿ ಕುಳಿತಿದ್ದ ಚಿತ್ರತಂಡವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಬೇಕೆನಿಸಿತು. ಫೋಟೋ ಕ್ಲಿಕ್ಕಿಸಿಕೊಂಡು ಬರುವಂತೆ ರಾಜ್ ಕೂಡ ಹೇಳಿದರು. ಒಂದಷ್ಟು ದೂರದಲ್ಲಿ ನಿಂತಿದ್ದ ಅಂಬಾಸಿಡರ್ ಕಾರಿನ ಬಳಿ ಹೋದವನೇ ಫೋಟೋ ಕ್ಲಿಕ್ಕಿಸಿದೆ. ಅಷ್ಟರಲ್ಲಿ ಕೋತಿಯೊಂದು ಬಂದದ್ದೇ ಕಾರಿನ ಬಾನೆಟ್ ಮೇಲಿದ್ದ ಫ್ಲಾಶ್‌ ಎತ್ತಿಕೊಂಡು ಮರ ಹತ್ತಿತು! ನಾನು ಕೋತಿಗೆ ಏನೇ ಸನ್ನೆ ಮಾಡಿದರೂ ಉಪಯೋಗವಾಗಲಿಲ್ಲ.

ನನ್ನ ಪಜೀತಿ ನೋಡಿದ ರಾಜ್ ಊಟ ಬಿಟ್ಟು ಓಡಿ ಬಂದರು. ಪರಿಸ್ಥಿತಿ ನೋಡಿಕೊಂಡು ಹೋದವರು ಅದೇನೋ ತಿಂಡಿ ಹಿಡಿದುಕೊಂಡು ಮರಳಿದರು. ಅವರು ತಿಂಡಿ ತೋರಿಸಿ ಕರೆದಾಗ ಕೋತಿ ಕೆಳಗಿಳಿದು ಬಂತು. ಅದರ ಕೈಲಿದ್ದ ಫ್ಲಾಶ್‌ ಕೆಳಗೆ ಜಾರಿತು! ಚಿತ್ರತಂಡದವರೊಬ್ಬರು ಅದನ್ನು ಕ್ಯಾಚ್‌ ಹಿಡಿದರು. ನಾನು ಕೋತಿಯನ್ನು ಬಯ್ದುಕೊಳ್ಳುತ್ತಿದ್ದರೆ, ರಾಜ್ ನಗುತ್ತಾ ನನ್ನ ಕೈಹಿಡಿದು ಊಟಕ್ಕೆ ಕರೆದೊಯ್ದರು.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More