ರಾಜ್‌ ಸ್ಮರಣೆ | ಗೋವಾದಲ್ಲಿ ಪೊಲೀಸರು ಅಣ್ಣಾವ್ರನ್ನು ಅರೆಸ್ಟ್‌ ಮಾಡಿದ್ದರು!

ಡಾ ರಾಜ್‌ ಅವರನ್ನು ದೇಸಿ ಬಾಂಡ್‌ ಆಗಿ ತೆರೆಗೆ ಪರಿಚಯಿಸಿದವರು ದೊರೈ-ಭಗವಾನ್‌. ಬಾಂಡ್ ಸರಣಿಯ ಎರಡನೇ ಸಿನಿಮಾ ‘ಗೋವಾದಲ್ಲಿ ಸಿಐಡಿ 999’ ಚಿತ್ರೀಕರಣ ಸಂದರ್ಭವೊಂದನ್ನು ನಿರ್ದೇಶಕ ಭಗವಾನ್‌ ನೆನಪು ಮಾಡಿಕೊಂಡಿದ್ದಾರೆ. ಇಂದು (ಏ 12) ರಾಜ್‌ ನಮ್ಮನ್ನಗಲಿದ ದಿನ

‘ಗೋವಾದಲ್ಲಿ ಸಿಐಡಿ 999’ (1968) ಚಿತ್ರವನ್ನು ಗೋವಾದಲ್ಲಿ ಚಿತ್ರಿಸುತ್ತಿದ್ದ ಸಂದರ್ಭ. ಬಾಂಡ್ ಚಿತ್ರಕ್ಕೆಂದೇ ಮೂರು ವಿಶೇಷ ಕಾರುಗಳನ್ನು ಬಳಕೆ ಮಾಡಿದ್ದೆವು. ಪ್ರಾದೇಶಿಕತೆಯ ಸೊಗಡು ಇರಲೆಂದು ಕಾರುಗಳಿಗೆ ‘ಜಿಡಿಎ’ (ಗೋವಾ) ಇಂಗ್ಲಿಷ್ ಅಕ್ಷರಗಳ ನಂಬರ್ ಪ್ಲೇಟ್ ಅಂಟಿಸಿ ಶೂಟ್ ಮಾಡುತ್ತಿದ್ದೆವು. ಇದನ್ನು ಗಮನಿಸಿದ ಅಲ್ಲಿನ ಒಬ್ಬ ಸಾರ್ಜೆಂಟ್, ಕಚೇರಿಗೆ ಹೋಗಿ ಕಡತದಲ್ಲಿ ಚೆಕ್ ಮಾಡಿದ್ದಾನೆ. ಗೋವಾದ ಯಾವ ಕಾರುಗಳು ಕೂಡ ಆ ನಂಬರ್‌ನಲ್ಲಿಲ್ಲ ಎನ್ನುವುದು ಆತನಿಗೆ ಖಾತ್ರಿಯಾಗಿದೆ. ಮರುದಿನ ಇಬ್ಬರು ಕಾನ್‌ಸ್ಟೇಬಲ್‌ಗಳೊಂದಿಗೆ ಶೂಟಿಂಗ್ ಜಾಗದಲ್ಲಿ ಅವನು ಹಾಜರಾದ. ಹೀರೋ ರಾಜಕುಮಾರ್ ಒಂದು ಕಾರು ಓಡಿಸುತ್ತಿದ್ದರು. ಮತ್ತೊಂದು ಕಾರು ಚೇಸಿಂಗ್‌ನಲ್ಲಿತ್ತು. ಮೂರನೇ ಕಾರಿನಲ್ಲಿ ನಾನು ಕ್ಯಾಮರಾದೊಂದಿಗೆ ಹಿಂಬಾಲಿಸುತ್ತಿದ್ದೆ. ‘ಕಾರಿಗೆ ನಕಲಿ ನಂಬರ್‌ಗಳಿವೆ’ ಎಂದು ರಾಜಕುಮಾರ್ ಸೇರಿದಂತೆ ಕಾರು ಓಡಿಸುತ್ತಿದ್ದ ಮೂವರನ್ನೂ ಆತ ಅರೆಸ್ಟ್‌ ಮಾಡಿಬಿಟ್ಟ!

ಚಿತ್ರೀಕರಣಕ್ಕೆ ಕಲೆಕ್ಟರ್ ಅವರಿಂದ ಪಡೆದ ಅನುಮತಿ ಪತ್ರ ತೋರಿಸಿದರೂ ಸಾರ್ಜೆಂಟ್ ಒಪ್ಪಲಿಲ್ಲ. ಮೂವರನ್ನೂ ತನ್ನ ಜೀಪಿಗೆ ಹತ್ತಿಸಿಕೊಂಡು ಪೊಲೀಸ್ ಸ್ಟೇಷನ್‌ಗೆ ಕರೆದೊಯ್ದ. “ನಾನು ಈ ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕ. ನಾನು ಹೇಳಿದಂತೆ ಹೀರೋ ಕೇಳುತ್ತಾರೆ. ನಾನು ನಿಮ್ಮೊಂದಿಗಿರುತ್ತೇನೆ. ಅವರನ್ನು ಬಿಟ್ಟುಬಿಡಿ,” ಎಂದು ವಿನಂತಿಸಿಕೊಂಡೆ. ಪರಿಸ್ಥಿತಿಯನ್ನು ಹೇಗೆ ಎದುರಿಸಬೇಕೆಂದು ಗೊತ್ತಾಗದೆ ರಾಜ್ ಮುಗುಳ್ನಗುತ್ತಾ ನಿಂತಿದ್ದರು. ರಾಜ್ ಮುಖ ನೋಡಿದವನೇ ಕೊಂಚ ಯೋಚಿಸಿ ಅವರನ್ನು ಬಿಡುಗಡೆ ಮಾಡಿದ. ಸ್ವಲ್ಪ ಹೊತ್ತಿನಲ್ಲೇ ಅಲ್ಲಿಗೆ ಬಂದ ಸ್ನೇಹಿತ ದೊರೈ ಹಾಗೂ ಇತರರು ರಾಜ್‌ರನ್ನು ಕರೆದೊಯ್ದರು. ನನ್ನನ್ನು ಎಸಿಪಿ ಅವರಲ್ಲಿಗೆ ಕರೆದೊಯ್ದರು. ಅದೃಷ್ಟಕ್ಕೆ ಎಸಿಪಿ ಸುರೇಂದ್ರ ಕುಲಕರ್ಣಿ ಕನ್ನಡದವರೇ ಆಗಿದ್ದರು. ನಾನು ವಿವರಣೆ ಕೊಟ್ಟ ನಂತರ ಚಿತ್ರೀಕರಣಕ್ಕೆ ತೆರವು ಮಾಡಿಕೊಟ್ಟರು. ‘ಚಿತ್ರೀಕರಣ ಮಾಡುವಾಗಷ್ಟೇ ಕಾರುಗಳಿಗೆ ನಂಬರ್‌ಪ್ಲೇಟ್‌ ಅಂಟಿಸಿ’ ಎನ್ನುವ ಸೂಚನೆ ಅವರಿಂದ ಸಿಕ್ಕಿತು. ಹೀರೋ ರಾಜ್‌ರನ್ನು ಕರೆದುಕೊಂಡು ಒಮ್ಮೆ ಮನೆಗೆ ಊಟಕ್ಕೆ ಬನ್ನಿ ಎಂದು ಎಸಿಪಿ ಆತ್ಮೀಯತೆಯಿಂದ ಬೀಳ್ಗೊಟ್ಟರು.

ಜನುಮದಿನ | 70ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಮಿನುಗಿದ ನಕ್ಷತ್ರ ಕಲ್ಪನಾ
ವಿಡಿಯೋ | ಚಿತ್ರದಲ್ಲಿ ಯುವಜನತೆಗೆ ಉತ್ತಮ ಸಂದೇಶವಿದೆ ಎಂದ ನಿರ್ಮಾಪಕ ಎಚ್‌ಡಿಕೆ
ಜನುಮದಿನ | ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟ ಸಂಚಾರಿ ವಿಜಯ್ ಮನದ ಮಾತು
Editor’s Pick More