ಸ್ಮರಣೆ | ಹಿಂದಿಗಿಂತಲೂ ಇಂದಿಗೆ ಹೆಚ್ಚು ಪ್ರಸ್ತುತವಾಗುವ ‘ರಾಜ್‌ ಮಾದರಿ’

ರಾಜಕುಮಾರ್‌ ಸಿನಿಮಾ ಕ್ಷೇತ್ರವನ್ನು ಮೀರಿದ ವ್ಯಕ್ತಿತ್ವ. ಅವರು ಕನ್ನಡದ ಅಸ್ಮಿತೆಯಾಗಿ ರೂಪುಗೊಂಡವರು. ರಾಜ್‌ ಅಗಲಿ ಇಂದಿಗೆ (ಏ.12) ಹನ್ನೆರೆಡು ವರ್ಷ. ಭೌತಿಕವಾಗಿ ಇಲ್ಲವಾದರೂ ಉತ್ತಮ ಅಭಿರುಚಿಯ ಸಿನಿಮಾಗಳು, ಅಪೂರ್ವ ವ್ಯಕ್ತಿತ್ವ, ಕನ್ನಡದ ಪ್ರಜ್ಞೆಯಾಗಿ ಜನಮಾನಸದಲ್ಲಿ ನೆಲೆಸಿದ್ದಾರೆ

ಕನ್ನಡ ಸಿನಿಮಾರಂಗ ಎಂದಾಕ್ಷಣ ಕಣ್ಮುಂದೆ ಬರುವ ವ್ಯಕ್ತಿತ್ವ ರಾಜಕುಮಾರ್‌. ರಂಗಭೂಮಿ ಹಿನ್ನೆಲೆಯ ಮುತ್ತುರಾಜ್‌ ಕನ್ನಡಿಗರ ಪ್ರೀತಿಯ ರಾಜಕುಮಾರನಾಗಿ ಎಲ್ಲರ ಮನಸ್ಸಿನಲ್ಲಿ ಸ್ಥಾನ ಪಡೆದವರು. ಇಂತಹ ಪ್ರಭಾವ ತೆರೆಯ ಮೇಲಿನ ಪಾತ್ರಗಳಿಂದಷ್ಟೇ ಸಾಧ್ಯವಾಗದು. ವಿನಯವಂತಿಕೆ, ಸಜ್ಜನಿಕೆಯ ವ್ಯಕ್ತಿತ್ವ, ಭಾಷಾ ಶುದ್ಧತೆ, ಕನ್ನಡಪರ ನಿಲುವು-ಹೋರಾಟಗಳಿಂದಾಗಿ ರಾಜ್‌ ಮಾದರಿಯಾದರು. ಪಾತ್ರ, ಸಿನಿಮಾಗಳ ಆಯ್ಕೆಯಲ್ಲಿ ಅಪಾರ ಬದ್ಧತೆ ಹೊಂದಿದ್ದ ಅವರ ಪ್ರತಿ ನಡೆಯಲ್ಲೂ ಜವಾಬ್ದಾರಿ ಇರುತ್ತಿತ್ತು. ಸಾರ್ವಜನಿಕ ವ್ಯಕ್ತಿ ಹೇಗಿರಬೇಕು ಎನ್ನುವುದಕ್ಕೂ ಅವರು ಉದಾಹರಣೆಯಾಗಿದ್ದರು. ಸ್ವಹಿತಾಸಕ್ತಿ, ಸೃಜನಪಕ್ಷಪಾತ, ಒಳಜಗಳಗಳೇ ಹೆಚ್ಚಾಗಿರುವ ಇಂದಿನ ದಿನಮಾನಗಳಲ್ಲಿ ರಾಜ್‌ ಮತ್ತೆ-ಮತ್ತೆ ಪ್ರಸ್ತುತವಾಗುತ್ತಾರೆ.

ಸಿನಿಮಾವನ್ನು ಮೀರಿದ ಪ್ರಭೆ ರಾಜ್‌. ಯುವ ಚಿತ್ರನಿರ್ದೇಶಕ ಚೈತನ್ಯ ಈ ಬಗ್ಗೆ ಅಭಿಮಾನದಿಂದ ಮಾತನಾಡುತ್ತಾರೆ. “1956ರಲ್ಲಿ ಭಾಷಾವಾರು ಪ್ಯಾಂತ್ಯವಾಗಿ ಕರ್ನಾಟಕ ರೂಪುಗೊಂಡ ನಂತರ ಕನ್ನಡಿಗರಿಗಿನ್ನೂ ಕನ್ನಡದ ಅಸ್ತಿತ್ವ ಏನು ಎನ್ನುವ ಗೊಂದಲವಿತ್ತು. ಕನ್ನಡದ ಅಸ್ತಿತ್ವವನ್ನು ರೂಪುಗೊಳಿಸಿದ ಪ್ರಮುಖರಲ್ಲಿ ಕುವೆಂಪು, ರಾಜಕುಮಾರ್ ಮತ್ತು ಲಂಕೇಶ್‌ ಮುಂಚೂಣಿಯಲ್ಲಿ ಕಾಣಿಸುತ್ತಾರೆ. ಆ ನಿಟ್ಟಿನಲ್ಲಿ ರಾಜಕುಮಾರ್‌ ಕರ್ನಾಟಕದ ಒಂದು ಪ್ರಜ್ಞೆ, ಗುರುತಿನ ಸಂಕೇತ,’’ ಎನ್ನುತ್ತಾರೆ ಚೈತನ್ಯ. ಹಿರಿಯ ಚಿತ್ರನಿರ್ದೇಶಕ ಭಗವಾನ್ ಮತ್ತು ರಾಜಕುಮಾರ್ ಅವರದ್ದು ಐವತ್ತು ವರ್ಷಗಳ ಆತ್ಮೀಯ ಒಡನಾಟ. ರಾಜ್‌ರನ್ನು ಸ್ಮರಿಸಿಕೊಳ್ಳುವ ಭಗವಾನ್‌, “ರಾಜ್‌ ಚೆನ್ನೈನಲ್ಲಿ ಎಂಟು ರೂಪಾಯಿ ಬಾಡಿಗೆ ಮನೆಯಲ್ಲಿ ಇದ್ದಾಗಿನಿಂದ ಬೆಂಗಳೂರಿನ ಸದಾಶಿವನಗರದಲ್ಲಿ ಎಂಟು ಕೋಟಿ ರೂಪಾಯಿ ಮನೆ ಖರೀದಿಸುವವರೆಗೂ ಅವರನ್ನು ಬಲ್ಲೆ. ನಮ್ಮದು ಐವತ್ತು ವರ್ಷಗಳ ಸ್ನೇಹ, ಆತ್ಮೀಯತೆ. ಅವರಿಲ್ಲ ಅಂತ ನಾನೆಂದೂ ಫೀಲ್ ಮಾಡಿಲ್ಲ. ಅವರು ಯಾವತ್ತೂ ನನ್ನ ಮನದಲ್ಲಿರುತ್ತಾರೆ,’’ ಎನ್ನುತ್ತಾರೆ.

ನಾಯಕನಟನಾಗಿ ರಾಜ್ ನೂರು ಸಿನಿಮಾಗಳನ್ನು ಪೂರೈಸಿದಾಗ (1968) ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದ ಸಂದರ್ಭದ ವಿಡಿಯೋ

ಇದನ್ನೂ ಓದಿ : ರಾಜ್‌ ಸ್ಮರಣೆ | ಗೋವಾದಲ್ಲಿ ಪೊಲೀಸರು ಅಣ್ಣಾವ್ರನ್ನು ಅರೆಸ್ಟ್‌ ಮಾಡಿದ್ದರು!

ಇನ್ನು, ಕನ್ನಡ ಚಿತ್ರರಂಗದ ದೃಷ್ಟಿಯಿಂದ ಹೇಳುವುದಾದರೆ ಪ್ರಸ್ತುತ ದಿನಗಳಲ್ಲಿ ವರನಟನ ಅನುಪಸ್ಥಿತಿ ಹಿಂದಿಗಿಂತ ಹೆಚ್ಚು ಕಾಣಿಸುತ್ತದೆ. ಆಗ ಚಿತ್ರರಂಗದಲ್ಲಿ ಯಾವುದೇ ಸಮಸ್ಯೆಗಳು ತಲೆದೋರಿದರೂ ‘ದೊಡ್ಡವರು ಗಮನಿಸುತ್ತಿದ್ದಾರೆ’ ಎನ್ನುವ ತಾತ್ವಿಕ ಭಯ ಇರುತ್ತಿತ್ತು. ಅದೆಷ್ಟೋ ಸಮಸ್ಯೆಗಳು ಇದೇ ಕಾರಣಕ್ಕೆ ಆರಂಭದಲ್ಲೇ ಶಮನವಾಗುತ್ತಿದ್ದವು. ಚಿತ್ರನಿರ್ಮಾಣಕ್ಕೆ ಸಂಬಂಧಿಸಿದಂಥ ತೊಡಕುಗಳು, ಕಲಾವಿದರ ನಡುವಿನ ವೈಮನಸ್ಸು, ಡಬ್ಬಿಂಗ್ ವಿವಾದ, ಕನ್ನಡಪರ ಹೋರಾಟಗಳಿಗೆ ರಾಜಕುಮಾರ್ ನೇತೃತ್ವ ಇರುತ್ತಿತ್ತು. ಹಲವು ಬಾರಿ ರಾಜಕುಮಾರ್ ನೇರವಾಗಿ ಇದರಲ್ಲಿ ಭಾಗಿಯಾಗದಿದ್ದರೂ, ಅವರೊಂದು ನೈತಿಕ ಶಕ್ತಿಯಾಗಿ ಬೆನ್ನಿಗಿರುತ್ತಿದ್ದರು. ಆ ನಿಟ್ಟಿನಲ್ಲಿ ಅವರ ಅಗಲಿಕೆ ಉದ್ಯಮವನ್ನು ಕಾಡುತ್ತಿರುವುದು ದಿಟ. ನೈತಿಕ ಶಕ್ತಿ ತುಂಬುವ ಯಜಮಾನನಿಗಾಗಿ ಚಿತ್ರರಂಗ ಈ ಹೊತ್ತಿಗೂ ಹುಡುಕಾಟ ನಡೆಸಿದೆ.

"ಚಿತ್ರರಂಗದ ಪ್ರಸ್ತತ ದಿನಗಳಲ್ಲಿ ರಾಜ್‌ ಅನುಪಸ್ಥಿತಿ ನನಗೆ ಪದೇ ಪದೇ ಕಾಣುತ್ತಿದೆ. ಏನಾದರೂ ವಿವಾದಗಳು ತಲೆದೋರಿದಾಗ ಯಾರಲ್ಲಿಗೆ ಹೋಗಬೇಕು ಎನ್ನುವ ಪ್ರಶ್ನೆ ತಲೆದೋರುತ್ತಿದೆ. ಹಾಗೆಲ್ಲ ನನಗೆ ರಾಜಕುಮಾರ್ ನೆನಪಾಗುತ್ತಾರೆ,” ಎನ್ನುತ್ತಾರೆ ನಿರ್ದೇಶಕ ಭಗವಾನ್‌. ಸದ್ಯ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಬಿಸಿ ಇದೆ. ಪಕ್ಕದ ತಮಿಳು, ತೆಲುಗು ರಾಜಕಾರಣದಲ್ಲಿ ಎಪ್ಪತ್ತರ ದಶಕದಿಂದಲೇ ಸಿನಿಮಾ ತಾರೆಯರ ನೇರ ಪಾಲ್ಗೊಳ್ಳುವಿಕೆಯಿತ್ತು. ಕನ್ನಡ ನಾಡಿನಲ್ಲಿ ಅಪಾರ ಜನಪ್ರಿಯತೆ ಇದ್ದ ರಾಜಕುಮಾರ್ ಅವರನ್ನು ರಾಜಕೀಯಕ್ಕೆ ಕರೆತರುವ ವಿಫಲ ಯತ್ನಗಳು ನಡೆದಿದ್ದವು. ಆದರೆ ಸಿನಿಮಾರಂಗದ ಜನಪ್ರಿಯತೆಯನ್ನು ರಾಜ್ ಎಂದೂ ಇತರೆಡೆ ಬಳಕೆ ಮಾಡಿಕೊಳ್ಳಲಿಲ್ಲ. “ರಾಜ್‌ ತಾವು ಮಾಡುತ್ತಿರುವ ಕೆಲಸವನ್ನು ರಾಜಕಾರಣಕ್ಕೂ ಮೀರಿದ್ದು ಎಂದು ನಂಬಿದ್ದರು. ಅದರಿಂದಾಗಿ ರಾಜ್ಯ ರಾಜಕಾರಣ ಪರ್ಸನಾಲಿಟಿ ಕಲ್ಟ್‌ ಆಗಲಿಲ್ಲ. ಇಲ್ಲಿ ಇಶ್ಯೂ ಬೇಸ್ಡ್ ಆಗಿ ಉಳಿಯಿತು,” ಎನ್ನುತ್ತಾರೆ ನಿರ್ದೇಶಕ ಚೈತನ್ಯ. ಹೀಗೆ, ವಿವಿಧ ಧಾರೆಗಳಲ್ಲಿ ‘ರಾಜ್‌ ಮಾದರಿ’ ಇಂದಿಗೆ ಹೆಚ್ಚೆಚ್ಚು ಪ್ರಸ್ತುತವಾಗುತ್ತದೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More