ನೆನಪು | ಬಹುಮುಖ ಪ್ರತಿಭೆಯ ನಟಿ, ನಿರ್ದೇಶಕಿ ವೈಶಾಲಿ ಕಾಸರವಳ್ಳಿ

ಬಿ ವಿ ಕಾರಂತರ ರಂಗತಂಡದಲ್ಲಿ ನಟಿಯಾಗಿ ಬೆಳಕಿಗೆ ಬಂದ ವೈಶಾಲಿ ಕಾಸರವಳ್ಳಿ (12/04/1952 - 27/09/2010) ವಸ್ತ್ರವಿನ್ಯಾಸ, ನಿರ್ದೇಶನದಲ್ಲೂ ಛಾಪು ಮೂಡಿಸಿದವರು. ಮರಾಠಿ, ಹಿಂದಿ ನಾಟಕಗಳನ್ನು ಅವರು ಕನ್ನಡಕ್ಕೆ ಅಳವಡಿಸಿದ್ದಾರೆ. ಇಂದು (ಏ.12) ಅವರ ಜನ್ಮದಿನ

‘ಯಾವ ಜನ್ಮದ ಮೈತ್ರಿ’ ಚಿತ್ರದೊಂದಿಗೆ ಬೆಳ್ಳಿತೆರೆಗೆ ಪರಿಚಯವಾದ ವೈಶಾಲಿ ಕಾಸರವಳ್ಳಿ ಕನ್ನಡದ ಪ್ರಮುಖ ಪೋಷಕ ಕಲಾವಿದೆಯಾಗಿ ಜನಪ್ರಿಯತೆ ಗಳಿಸಿದರು. ನಟನೆ ಜೊತೆಗೆ ವಸ್ತ್ರವಿನ್ಯಾಸ, ಕಿರುತೆರೆ ಧಾರಾವಾಹಿ ನಿರ್ದೇಶನದಲ್ಲೂ ಅವರಿಗೆ ಯಶಸ್ಸು ಸಿಕ್ಕಿತು. ಹುಟ್ಟೂರು ಗುಲ್ಬರ್ಗದಿಂದ ಬೆಂಗಳೂರಿಗೆ ಬಂದ ವೈಶಾಲಿ ಅವರಿಗೆ ರಂಗಭೂಮಿ ಉತ್ತಮ ಭೂಮಿಕೆ ಒದಗಿಸಿತು. ಖ್ಯಾತ ರಂಗಕರ್ಮಿ ಬಿ ವಿ ಕಾರಂತ ನಿರ್ದೇಶನದ ನಾಟಕಗಳು ಅವರ ಅಭಿನಯ ಪ್ರತಿಭೆಗೆ ಸಾಣೆ ಹಿಡಿದವು. ‘ಹಯವದನ’, ‘ಜೋಕುಮಾರಸ್ವಾಮಿ’, ‘ಮಿಡ್‌ಸಮ್ಮರ್ ನೈಟ್ಸ್ ಡ್ರೀಮ್‌’ ನಾಟಕಗಳಲ್ಲಿ ಗುರುತಿಕೊಂಡರು. ವೈಶಾಲಿ ನಿರ್ದೇಶನದ ‘ಸೇವಂತಿ ಪ್ರಸಂಗ’ ನಾಟಕ ಜನಪ್ರಿಯವಾಗಿತ್ತು. ಹಲವು ಮರಾಠಿ ಮತ್ತು ಹಿಂದಿ ನಾಟಕಗಳನ್ನು ಅವರು ಕನ್ನಡಕ್ಕೆ ತಂದಿದ್ದಾರೆ.

ಸಿನಿಮಾ ಕ್ಷೇತ್ರದಲ್ಲಿ ಪ್ರಮುಖ ಪೋಷಕ ಕಲಾವಿದೆಯಾಗಿ ಅವರು ಪ್ರೇಕ್ಷಕರ ಮೆಚ್ಚುಗೆ ಗಳಿಸಿದರು. ಮಧ್ಯಮವರ್ಗದ ಗೃಹಿಣಿಯರ ಪಾತ್ರಗಳಲ್ಲಿ ಅವರದ್ದು ಅಪರೂಪದ ಅಭಿವ್ಯಕ್ತಿ. ‘ಗಣೇಶನ ಮದುವೆ’, ‘ಗೌರಿ ಗಣೇಶ’, ‘ಯಾರಿಗೂ ಹೇಳ್ಬೇಡಿ’ಯಂತಹ ಹಾಸ್ಯಪ್ರಧಾನ ಚಿತ್ರಗಳಲ್ಲಿ ಉತ್ತಮ ಕಾಮಿಡಿ ಟೈಮಿಂಗ್‌ನಿಂದ ಗಮನ ಸೆಳೆದಿದ್ದರು. ‘ಆಕ್ರಮಣ’ ಮತ್ತು ‘ಫಲಿತಾಂಶ’ ಚಿತ್ರಗಳಲ್ಲಿನ ಅತ್ಯುತ್ತಮ ನಟನೆಗೆ ಅವರಿಗೆ ರಾಜ್ಯಪ್ರಶಸ್ತಿಗಳು ಸಂದಿವೆ. ಪತಿ, ಅಂತಾರಾಷ್ಟ್ರೀಯ ಖ್ಯಾತಿಯ ಚಿತ್ರನಿರ್ದೇಶಕ ಗಿರೀಶ್ ಕಾಸರವಳ್ಳಿ ನಿರ್ದೇಶನದ ‘ಬಣ್ಣದ ವೇಷ’, ‘ಮನೆ’, ‘ಕುಬಿ ಮತ್ತು ಇಯಾಲಾ’, ‘ಕ್ರೌರ್ಯ’, ‘ತಾಯಿ ಸಾಹೇಬ’, ‘ದ್ವೀಪ’, ‘ಕನಸೆಂಬೋ ಕುದುರೆಯನೇರಿ’ ಚಿತ್ರಗಳಿಗೆ ವೈಶಾಲಿ ವಸ್ತ್ರವಿನ್ಯಾಸಕಿಯಾಗಿ ಕಾರ್ಯನಿರ್ವಹಿಸಿದ್ದಾರೆ. ‘ತಾಯಿ ಸಾಹೇಬ’ ಚಿತ್ರದ ಅತ್ಯುತ್ತಮ ವಸ್ತ್ರವಿನ್ಯಾಸಕ್ಕಾಗಿ ಅವರಿಗೆ ರಾಷ್ಟ್ರಪ್ರಶಸ್ತಿ ಸಂದಿದೆ. ವೈಶಾಲಿ ನಿರ್ದೇಶನದ ‘ಮುತ್ತಿನ ತೋರಣ’ ಮತ್ತು ‘ಮೂಡಲ ಮನೆ’ ಧಾರಾವಾಹಿಗಳು ಕನ್ನಡ ಕಿರುತೆರೆಯಲ್ಲಿ ವಿಶೇಷ ಪ್ರಯೋಗಗಳಾಗಿ ದಾಖಲಾಗಿವೆ.

ವೈಶಾಲಿ ಕಾಸರವಳ್ಳಿ ನಿರ್ದೇಶನದ ‘ಮೂಡಲ ಮನೆ’ ಧಾರಾವಾಹಿ ಶೀರ್ಷಿಕೆ ಗೀತೆ

‘ಕಲ್ಯಾಣ ಮಂಟಪ’ ಕನ್ನಡ ಸಿನಿಮಾ ದೃಶ್ಯ

ವೈಶಾಲಿ ಕಾಸರವಳ್ಳಿ ನಿರ್ದೇಶನದ ‘ಮುತ್ತಿನ ತೋರಣ’ ಧಾರಾವಾಹಿ ಶೀರ್ಷಿಕೆ ಗೀತೆ

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More