ಇಂಗ್ಲಿಷ್ ರಂಗಭೂಮಿ ನಟ, ನಿರ್ದೇಶಕ ಶಶಾಂಕ್ ಪುರುಷೋತ್ತಮ್ ಹೆಚ್ಚು ಜನಪ್ರಿಯರಾಗಿದ್ದು ‘ಮಹಾಪರ್ವ’ ಸೀರಿಯಲ್ನಲ್ಲಿ. ಟಿ ಎನ್ ಸೀತಾರಾಂ ನಿರ್ದೇಶನದ ಧಾರಾವಾಹಿಯಲ್ಲಿ ಅಂಡರ್ವರ್ಲ್ಡ್ ಡಾನ್ ಪಾತ್ರದಲ್ಲಿ ಅವರು ನಟಿಸಿದ್ದರು. ಸಾಮಾನ್ಯ ಪಾತ್ರವಾದರೂ ಮೆಥೆಡ್ ಆಕ್ಟಿಂಗ್ನಿಂದಾಗಿ ಅವರ ಪಾತ್ರಕ್ಕೆ ಮೆರುಗು ಸಿಕ್ಕಿತ್ತು. ವಿಶೇಷವಾಗಿ ಅವರು ಡೈಲಾಗ್ ಹೇಳುವ ಶೈಲಿಯನ್ನು ವೀಕ್ಷಕರು ತುಂಬಾ ಇಷ್ಟಪಟ್ಟಿದ್ದರು. ಇದೀಗ ಸಂಭಾಷಣೆಯೇ ಇಲ್ಲದ ‘ಮರ್ಕ್ಯೂರಿ’ ಸೈಲೆನ್ಸ್ ಥ್ರಿಲ್ಲರ್ನೊಂದಿಗೆ ಅವರು ತೆರೆಗೆ ಬರುತ್ತಿದ್ದಾರೆ.
ಸಂಭಾಷಣೆಯೇ ಇಲ್ಲದ ‘ಮರ್ಕ್ಯೂರಿ’ ಸಿನಿಮಾ ಬಗ್ಗೆ ಏನು ಹೇಳುತ್ತೀರಿ?
ಖಂಡಿತವಾಗಿ ಇದೊಂದು ವಿಭಿನ್ನವಾದ ಅನುಭವ ಎಂದೇ ಹೇಳಬಹುದು. ತಯಾರಿ ಕಠಿಣವಷ್ಟೇ ಅಲ್ಲ, ಸವಾಲಾಗಿತ್ತು. ದಿಲ್ಲಿಯ ರಾಷ್ಟ್ರೀಯ ನಾಟಕ ಶಾಲೆಯ (ಎನ್ಎಸ್ಡಿ) ವ್ಯಕ್ತಿಯೊಬ್ಬರು ಚಿತ್ರೀಕರಣಕ್ಕೆ ಮುನ್ನ ನಮಗೆ ತರಬೇತಿ ನೀಡಿದ್ದರು. ಚಿತ್ರದಲ್ಲಿ ನಮಗೆ ಲಿಪ್ ಮೂವ್ಮೆಂಟ್ ಇದೆ, ಆದರೆ ಡೈಲಾಗ್ ಇಲ್ಲ.
ಚಿತ್ರದ ಅವಕಾಶ ಸಿಕ್ಕಿದ್ದು ಹೇಗೆ?
‘ಜಿಗರ್ಥಂಡಾ’ ತಮಿಳು ಚಿತ್ರ ತೆರೆಕಂಡ ನಂತರ ಕಾಮನ್ ಫ್ರೆಂಡ್ವೊಬ್ಬರ ಮೂಲಕ ನನಗೆ ನಿರ್ದೇಶಕ ಕಾರ್ತೀಕ್ ಸುಬ್ಬರಾಜ್ ಪರಿಚಯವಾಯ್ತು. ಬೆಂಗಳೂರಿಗೆ ಬಂದಾಗ ನನ್ನ ಮನೆಯಲ್ಲೇ ಅವರು ಉಳಿಯುತ್ತಿದ್ದರು. ಮುಂದಿನ ಚಿತ್ರದ ಸಂದರ್ಭದಲ್ಲಿ ಆಡಿಷನ್ಗೆ ಅವಕಾಶ ಕೊಡುವಂತೆ ವಿನಂತಿಸಿದ್ದೆ. ‘ಇರೈವಿ’ ಸಿನಿಮಾ ಶುರುಮಾಡಿದಾಗ ನನಗೆ ಹೇಳಿ ಕಳುಹಿಸಿದ್ದರು. ನಾನು ಚೆನ್ನೈಗೆ ತೆರಳಿ ಆಡಿಷನ್ ಕೊಟ್ಟೆ. ಕನ್ನಡಿಗನಾದರೂ ಇತರ ಭಾಷೆಗಳ ರಿದಮ್ ಇತ್ತು. ನನ್ನ ಪಾತ್ರಕ್ಕೆ ಇತರೆಯವರು ಡಬ್ ಮಾಡುವುದು ನನಗಿಷ್ಟವಿಲ್ಲ. “ಒಂದೊಮ್ಮೆ ಇಷ್ಟವಾಗದಿದ್ದರೆ ಬೇರೆಯವನ್ನೇ ಹಾಕಿಕೊಳ್ಳಿ. ಪಾತ್ರಕ್ಕೆ ನಾನೇ ಡಬ್ ಮಾಡಬೇಕು,” ಎಂದು ಹೇಳಿದ್ದೆ. ಕಾರ್ತೀಕ್ ನನ್ನಿಂದಲೇ ಡಬ್ ಮಾಡಿಸಿದರು. ಇದಾದ ನಂತರ ‘ಮರ್ಕ್ಯೂರಿ’ಗೂ ಆಯ್ಕೆ ಮಾಡಿಕೊಂಡರು.
ನಿಮ್ಮ ಪಾತ್ರದ ಚಿತ್ರಣ ಹೇಗಿದೆ?
ಒಂದೇ ಸ್ಕೂಲ್ನಲ್ಲಿ ಓದಿದ ಐವರು ಸ್ನೇಹಿತರು ಸ್ಕೂಲ್ ರೀಯೂನಿಯನ್ ನೆಪದಲ್ಲಿ ಮತ್ತೆ ಸೇರುತ್ತೇವೆ. ನಾವು ಓದಿದ್ದ ಊರು ಮೆರ್ಕ್ಯೂರಿ ಪಾಯಿಸನ್ನಿಂದ ಎಫೆಕ್ಟ್ ಆಗಿರುತ್ತೆ. ನಾವೆಲ್ಲರೂ ಸೇರಿ ಪಾರ್ಟಿ ನಡೆಸಿದ ನಂತರ ಅಲ್ಲೊಂದು ಘಟನೆ ನಡೆಯುತ್ತೆ. ಅದೇ ಚಿತ್ರಕ್ಕೆ ತಿರುವು. ನನಗೆ ಈ ಅವಕಾಶದ ಬಗ್ಗೆ ಕಲ್ಪನೆಯೇ ಇರಲಿಲ್ಲ. ಭಾಷೆಯ ಮಿತಿ ಇರದ ಈ ಚಿತ್ರದೊಂದಿಗೆ ರಾಜ್ಯ, ದೇಶದ ಗಡಿ ದಾಟಿ ನಾವು ಪ್ರೇಕ್ಷಕರನ್ನು ರೀಚ್ ಆಗುತ್ತಿದ್ದೇವೆ. ನನಗೆ ಇದೊಂದು ರೀತಿ ವಿಶೇಷ ವರ.
ಡೈಲಾಗ್ ಇಲ್ಲದೆ ನಟಿಸುವ ಪಾತ್ರ ನಿಭಾಯಿಸುವಲ್ಲಿ ರಂಗಭೂಮಿ ಅನುಭವ ನಿಮ್ಮ ನೆರವಿಗೆ ಬಂದಿರಬೇಕು ಅಲ್ಲವೇ?
ಚಲನಚಿತ್ರ ಮಾಧ್ಯಮವೇ ಬೇರೆ ಥರ. ಆದರೆ ರಿಹರ್ಸಲ್ ಸಂದರ್ಭಗಳಲ್ಲಿ ರಂಗಭೂಮಿ ಡಿಸಿಪ್ಲೀನ್ ನೆರವಿಗೆ ಬಂದಿದ್ದು ಹೌದು. ಸಂಭಾಷಣೆಯೇ ಇಲ್ಲದ ಚಿತ್ರವಾದ್ದರಿಂದ ಇಲ್ಲಿ ಭಾವಾಭಿವ್ಯಕ್ತಿ ಬಹುಮುಖ್ಯ. ಥಿಯೇಟರ್ನಲ್ಲಿ ಇಲ್ಲಿವರೆಗೆ ನಾನೇನು ಕಲಿತಿದ್ದೇನೋ, ಎಲ್ಲವನ್ನೂ ಬ್ಲ್ಯಾಂಕ್ ಮಾಡಿಕೊಂಡು ನಾನು ಸಿನಿಮಾ ಪಾತ್ರದ ರಿಹರ್ಸಲ್ಗೆ ಹೋದೆ.

ಕನ್ನಡ ಮೂಲದ ನಟ, ನಿರ್ದೇಶಕ ಪ್ರಭುದೇವ ಅವರ ಬಗ್ಗೆ ಏನು ಹೇಳುತ್ತೀರಿ?
ಪ್ರಭುದೇವ ನನ್ನೊಂದಿಗೆ ಕನ್ನಡದಲ್ಲೇ ಮಾತನಾಡುತ್ತಿದ್ದರು. ನಟನೆಗೆ ಸಂಬಂಧಿಸಿದಂತೆ ಅವರಿಂದ ಸಲಹೆ-ಸೂಚನೆ ಸಿಕ್ಕಿದ್ದಿದೆ. ನಾನೊಂದು ಸ್ಟಂಟ್ ಸೀಕ್ವೆನ್ಸ್ನಲ್ಲಿ ಪಾಲ್ಗೊಳ್ಳಬೇಕಿತ್ತು. ನಾನು ಮಾಡಲು ಸಿದ್ಧನಿದ್ದೆ. ಆದರೆ ಪ್ರಭುದೇವ, ಆ ರಿಸ್ಕ್ ಬೇಡವೆಂದು ನಿರ್ದೇಶಕರಿಗೆ ಸೂಚಿಸಿದರು. ಚಿತ್ರದಲ್ಲಿ ಅವರಿಗೆ ವಿಭಿನ್ನವಾದ ಪಾತ್ರವಿದೆ. ಪ್ರೇಕ್ಷಕರು ಹಿಂದೆಂದೂ ನೋಡಿರದ ಪ್ರಭುದೇವರನ್ನು ತೆರೆ ಮೇಲೆ ನೋಡಬಹುದು. ಕಾರ್ತೀಕ್ರ ಈ ಹಿಂದಿನ ಸಿನಿಮಾಗಳಲ್ಲಿ ವಿಜಯ್ ಸೇತುಪತಿ (ಪಿಜ್ಜಾ), ಬಾಬ್ಬಿ ಸಿಂಹ (ಜಿಗರ್ಥಂಡಾ), ಎಸ್ ಜಿ ಸೂರ್ಯ (ಇರೈವಿ) ಹೆಸರು ಮಾಡಿದರು. ಅದೇ ರೀತಿ ‘ಮೆರ್ಕ್ಯೂರಿ’ ಪ್ರಭುದೇವ ಅವರಿಗೆ ದೊಡ್ಡ ಹೆಸರು ತಂದುಕೊಡಲಿದೆ.
ಸಿನಿಮಾ ಜೊತೆಗೆ ರಂಗಭೂಮಿಯಲ್ಲೂ ತೊಡಗಿಸಿಕೊಂಡಿದ್ದೀರಾ?
ಇಲ್ಲಿಗೆ ರಂಗಭೂಮಿ ಪರಿಚಯವಾಗಿ ಹನ್ನೆರೆಡು ವರ್ಷ. ‘ಶುದ್ಧಿ’ ಚಿತ್ರದ ನಂತರ ಅವಕಾಶಗಳು ಬರುತ್ತಿವೆ. ಹಾಗಾಗಿ ನಾನೇ ಸಿನಿಮಾಗೆ ಹೆಚ್ಚು ಕಾನ್ಸಂಟ್ರೇಷನ್ ಮಾಡೋಣವೆಂದು ಥಿಯೇಟರ್ ಕಡಿಮೆ ಮಾಡಿದ್ದೇನೆ. ‘ಮರ್ಕ್ಯೂರಿ’ ಅಪರೂಪದ ಅವಕಾಶಗಳನ್ನು ತಂದುಕೊಡಬಹುದು ಎನ್ನುವ ನಿರೀಕ್ಷೆಯಿದೆ. ‘ಶುದ್ಧಿ’ ನಿರ್ದೇಶಕ ಆದರ್ಶ್ ಈಶ್ವರಪ್ಪ ‘ಭಿನ್ನ’ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದ ಕಾರ್ಯಕಾರಿ ನಿರ್ಮಾಪಕನಾಗಿ ಕೆಲಸ ಮಾಡುತ್ತಿದ್ದೇನೆ. ಚಿತ್ರದಲ್ಲಿ ನಾನು ನಟಿಸುವ ಬಗ್ಗೆ ಮುಂದಿನ ದಿನಗಳಲ್ಲಿ ಖಚಿತಪಡಿಸಲಿದ್ದೇನೆ.

ಕನ್ನಡದಲ್ಲೀಗ ನ್ಯೂವೇವ್ ಸಿನಿಮಾಗಳು ಹೆಚ್ಚು ತಯಾರಾಗುತ್ತಿವೆ?
ಅಫ್ಕೋರ್ಸ್, ಆದರೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಇಂತಹ ಚಿತ್ರಗಳು ತಯಾರಾಗಬೇಕು. ಜನರು ಈಗ ನೆಟ್ಸ್ಪ್ಲೆಕ್ಸ್, ಅಮೆಜಾನ್ ಮೂಲಕ ಜಗತ್ತಿನ ವಿವಿಧ ಭಾಷೆಗಳ ಸಿನಿಮಾಗಳನ್ನು ನೋಡುತ್ತಾರೆ. ಹಾಗಾಗಿ ನಮಗೂ ದೊಡ್ಡ ಸವಾಲಿದೆ. ಮುಖ್ಯವಾಹಿನಿ ನಿರ್ಮಾಪಕರು ಇಂತಹ ಸಿನಿಮಾಗಳನ್ನು ನಿರ್ಮಿಸಲು ಹೊರಟಾಗ ಸಹಜವಾಗಿಯೇ ಉದ್ಯಮದ ಗಮನ ಅಂತಹ ಸಿನಿಮಾಗಳೆಡೆ ಹೋಗುತ್ತದೆ. ‘ಭಿನ್ನ’ ಚಿತ್ರವನ್ನು ರಾಕ್ಲೈನ್ ವೆಂಕಟೇಶ್ ಪುತ್ರ ಯತೀಶ್ ನಿರ್ಮಿಸುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ.
‘ಅಗ್ನಿಸಾಕ್ಷಿ’ ನಂತರ ನೀವು ಮತ್ತೆ ಕನ್ನಡ ಕಿರುತೆರೆಗೆ ಮರಳಲಿಲ್ಲ..
ಸಿನಿಮಾ, ರಂಗಭೂಮಿ, ಕಿರುತೆರೆ ಯಾವುದೇ ಕ್ಷೇತ್ರವಾದರೂ ಬರವಣಿಗೆ ಮುಖ್ಯ. ಪಾತ್ರಗಳ ಚಿತ್ರಣ ಗಟ್ಟಿಯಾಗಿರಬೇಕು. ‘ಅಗ್ನಿಸಾಕ್ಷಿ’ ನಂತರ ಸಾಕಷ್ಟು ಅವಕಾಶಗಳು ಬಂದಿದ್ದವು. ಸೀರಿಯಲ್ಗಳಲ್ಲಿ ನನಗೆ ಕ್ರಿಯೇಟಿವ್ ಸ್ಯಾಟಿಸ್ಫ್ಯಾಕ್ಷನ್ ಸಿಗಲಿಲ್ಲ. ಅದಕ್ಕೆ ಮತ್ತೆ ಆ ಕಡೆ ಹೋಗಲಿಲ್ಲ.
ಕಳೆದ ವರ್ಷ ತೆರೆಕಂಡ ಶಶಾಂಕ್ ಅಭಿನಯಿಸಿದ್ದ ‘ಶುದ್ಧಿ’ ಚಿತ್ರದ ಟ್ರೈಲರ್