65ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ; ಶ್ರೀದೇವಿ, ರಿದ್ಧಿ ಸೇನ್‌ ಶ್ರೇಷ್ಠ ನಟಿ-ನಟ

65ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದೆ. ‘ಮಾಮ್‌’ ಚಿತ್ರಕ್ಕಾಗಿ ಶ್ರೀದೇವಿ ಮತ್ತು ‘ನಾಗರ್‌ಕೀರ್ತನ್‌’ ಬೆಂಗಾಲಿ ಸಿನಿಮಾಗಾಗಿ ರಿದ್ಧಿ ಸೇನ್‌ ಕ್ರಮವಾಗಿ ಅತ್ಯುತ್ತಮ ನಟಿ-ನಟ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ವಿನೋದ್ ಖನ್ನಾ ಅವರಿಗೆ ಮರಣೋತ್ತರ ದಾದಾ ಫಾಲ್ಕೆ ಗೌರವ ಘೋಷಿಸಲಾಗಿದೆ

ಪ್ರತಿಷ್ಠಿತ 65ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಶುಕ್ರವಾರ ಪ್ರಕಟವಾಗಿವೆ. ಇತ್ತೀಚೆಗೆ ನಿಧನರಾದ ನಟಿ ಶ್ರೀದೇವಿ ‘ಮಾಮ್‌’ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ‘ನಾಗರ್‌ಕೀರ್ತನ್‌’ ಚಿತ್ರದ ಉತ್ತಮ ನಟನೆಗೆ ರಿದ್ಧಿ ಸೇನ್‌ ಅತ್ಯುತ್ತಮ ನಟ ಗೌರವಕ್ಕೆ ಭಾಜನರಾಗಿದ್ದಾರೆ. ನಟ ವಿನೋದ್ ಖನ್ನಾ ಅವರಿಗೆ ಮರಣೋತ್ತರ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಿಸಲಾಗಿದೆ. ‘ಬಾಹುಬಲಿ 2’ ತೆಲುಗು ಸಿನಿಮಾ ಅತ್ಯುತ್ತಮ ಜನಪ್ರಿಯ ಸಿನಿಮಾ ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿಯ ಗೌರವಕ್ಕೆ ಪಾತ್ರವಾಗಿದೆ. ಕನ್ನಡಕ್ಕೆ ಎರಡು ಪ್ರಶಸ್ತಿಗಳು ಲಭ್ಯವಾಗಿದೆ. 'ಹೆಬ್ಬೆಟ್‌ ರಾಮಕ್ಕ' ಅತ್ಯುತ್ತಮ ಪ್ರಾದೇಶಕ ಭಾಷಾ ಚಿತ್ರ ಪ್ರಶಸ್ತಿಗೆ ಭಾಜನವಾದರೆ, 'ಮಾರ್ಚ್ 22' ಕನ್ನಡ ಚಿತ್ರದ ‘ಮುತ್ತುರತ್ನದ ಪ್ಯಾಟೆ’ ಗೀತಸಾಹಿತ್ಯಕ್ಕೆ ಪ್ರಶಸ್ತಿ ಲಭಿಸಿದೆ. ಅಭಯ್ ಸಿಂಹ ನಿರ್ದೇಶನದ 'ಪಡ್ಡಾಯಿ' ತುಳು ಸಿನಿಮಾ ಅತ್ಯುತ್ತಮ ಪ್ರಾದೇಶಿಕ ಭಾಷಾ ಸಿನಿಮಾ ಪ್ರಶಸ್ತಿ ಪಡೆದಿದೆ.

ಖ್ಯಾತ ಚಿತ್ರನಿರ್ದೇಶಕ ಶೇಖರ್ ಕಪೂರ್ ನೇತೃತ್ವದ ಪ್ರಶಸ್ತಿ ಆಯ್ಕೆ ಸಮಿತಿ ಶುಕ್ರವಾರ ದೆಹಲಿಯಲ್ಲಿ ಪ್ರಶಸ್ತಿ ಪಟ್ಟಿ ಪ್ರಕಟಿಸಿತು. ಅಮಿತ್ ವಿ ಮಸೂರ್ಕರ್‌ ಅವರ 'ನ್ಯೂಟನ್' ಪ್ರಾದೇಷಿಕ ಭಾಷಾ ವಿಭಾಗದಲ್ಲಿ ಅತ್ಯುತ್ತಮ ಹಿಂದಿ ಚಿತ್ರ ಪುರಸ್ಕಾರಕ್ಕೆ ಪಾತ್ರವಾದರೆ, ಈ ಚಿತ್ರದಲ್ಲಿನ ಉತ್ತಮ ನಟನೆಗೆ ಪಂಕಜ್‌ರಾಜ್‌ ತ್ರಿಪಾಠಿ ಅವರಿಗೆ ವಿಶೇಷ ಗೌರವ ಸಿಕ್ಕಿದೆ. 'ಟಾಯ್ಲೆಟ್ ಏಕ್ ಪ್ರೇಮ್ ಕಥಾ' ಚಿತ್ರದ ‘ಗೋಲಿ ತು ಲಾತ್ ಮಾರಾ’ ಹಾಡಿನ ನೃತ್ಯಸಂಯೋಜನೆಗಾಗಿ ಗಣೇಶ್ ಅಚಾರ್ಯ ಉತ್ತಮ ಕೋರಿಯೋಗ್ರಾಫರ್ ಪ್ರಶಸ್ತಿ ಪಡೆದಿದ್ದಾರೆ.

‘ಮಾಮ್‌’ ಹಿಂದಿ ಚಿತ್ರದ ಟ್ರೈಲರ್‌

ಇನ್ನು, ಅತ್ಯುತ್ತಮ ರಾಷ್ಟ್ರೀಯ ಏಕೀಕರಣ ನರ್ಗೀಸ್ ದತ್ ಪ್ರಶಸ್ತಿ ಮರಾಠಿಯ 'ಧಪ್ಪಾ’ ಪಾಲಾಗಿದೆ. 'ಇರಾದಾ' ಚಿತ್ರದ ಅತ್ಯುತ್ತಮ ನಟನೆಗಾಗಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಗೆ ದಿವ್ಯಾ ದತ್ತ ಆಯ್ಕೆಯಾಗಿದ್ದಾರೆ. ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಗೆ 'ಕಾಟ್ರು ವೆಲಿಯಿದೈ' ತಮಿಳು ಚಿತ್ರದ ಹಾಡಿಗಾಗಿ ಸಶಾ ತಿರುಪತಿ ಭಾಜನರಾಗಿದ್ದಾರೆ. ಅತ್ಯುತ್ತಮ ಹಿನ್ನೆಲೆ ಗಾಯಕ ಪ್ರಶಸ್ತಿ ಖ್ಯಾತ ಗಾಯಕ ಏಸುದಾಸ್ ಅವರಿಗೆ ಲಭಿಸಿದೆ. 'ಮೋರ್ಕಿಯಾ' ಚಿತ್ರ ಅತ್ಯುತ್ತಮ ಮಕ್ಕಳ ಚಿತ್ರ ಪ್ರಶಸ್ತಿಗೆ ಭಾಜನವಾಗಿದೆ. ಅತ್ಯುತ್ತಮ ಅನಿಮೇಶನ್ ಚಿತ್ರ ಪ್ರಶಸ್ತಿ 'ಫಿಶ್ ಕರಿ', ವಿಶೇಷ ಜ್ಯೂರಿ ಪ್ರಶಸ್ತಿ' ದಿ ಓಲ್ಡ್‌ ಮ್ಯಾನ್', ಅತ್ಯುತ್ತಮ ಕಿರುಚಿತ್ರ 'ಮಯಾತ್', ಕೌಟುಂಬಿಕ ಮೌಲ್ಯಗಳ ಅತ್ಯುತ್ತಮ ಚಿತ್ರ 'ಹ್ಯಾಪಿ ಬರ್ತಡೇ'ಗೆ ಲಭ್ಯವಾಗಿದೆ. ಪ್ರಾದೇಶಿಕ ಭಾಷಾ ವಿಭಾಗದಲ್ಲಿ ‘ಟು ಲೆಟ್‌’ (ತಮಿಳು), ‘ಈಶೂ’ (ಅಸ್ಸಾಮಿ) , ‘ಘಾಝಿ’ (ತೆಲುಗು), ಧಾ (ಗುಜರಾತಿ), ‘ಕಚ್ಛಾ ಲಿಂಬೂ’ (ಮರಾಠಿ), ಮಯೂರಾಕ್ಷಿ (ಬೆಂಗಾಲಿ), ನ್ಯೂಟನ್‌ (ಹಿಂದಿ) ರಾಷ್ಟ್ರಪ್ರಶಸ್ತಿಯ ಗೌರವಕ್ಕೆ ಪಾತ್ರವಾಗಿವೆ.

‘ಕಾಟ್ರು ವೆಲಿಯಿದೈ’ ತಮಿಳು ಸಿನಿಮಾ ಹಾಡು

ಪ್ರಶಸ್ತಿ ಪುರಸ್ಕೃತ ಸಿನಿಮಾ, ಕಲಾವಿದರು, ತಂತ್ರಜ್ಞರು

 • ಅತ್ಯುತ್ತಮ ನಟಿ: ಶ್ರೀದೇವಿ (ಮಾಮ್‌, ಹಿಂದಿ)
 • ಅತ್ಯುತ್ತಮ ನಟ: ರಿದ್ಧಿ ಸೇನ್ (ನಾಗರ್‌ಕೀರ್ತನ್‌, ಬೆಂಗಾಲಿ)
 • ಅತ್ಯುತ್ತಮ ನಿರ್ದೇಶಕ: ಜಯರಾಜ್ (ಭಯಾನಕಂ, ಮಲಯಾಳಂ)
 • ಅತ್ಯುತ್ತಮ ಹಿನ್ನೆಲೆ ಗಾಯಕಿ: ಸಶಾ ತಿರುಪತಿ (ಕಾಟ್ರು ವೆಲಿಯಿದೈ, ತಮಿಳು)
 • ಅತ್ಯುತ್ತಮ ಹಿನ್ನೆಲೆ ಗಾಯಕ: ಯೇಸುದಾಸ್ (ವಿಶ್ವಾಸಪೂರ್ವಂ ಮನ್ಸೂರ್‌, ಮಲಯಾಳಂ)
 • ಅತ್ಯುತ್ತಮ ಬಾಲ ನಟಿ: ಅನಿತಾ ದಾಸ್ (ವಿಲೇಜ್ ರಾಕ್ ಸ್ಟಾರ್ಸ್, ಅಸ್ಸಾಮಿ)
 • ಅತ್ಯುತ್ತಮ ಪೋಷಕ ನಟ: ಫಹದ್ ಫಾಸಿಲ್ (ಥಾಂಡಿಮುತ್ತಲಮ್‌ ದ್ರಿಕ್ಸಾಕ್ಷಿಯಂ, ಮಲಯಾಳಂ)
 • ಅತ್ಯುತ್ತಮ ಪೋಷಕ ನಟಿ: ದಿವ್ಯಾ ದತ್ತಾ (ಇರಾದಾ, ಹಿಂದಿ)
 • ಅತ್ಯುತ್ತಮ ಮಕ್ಕಳ ಚಿತ್ರ: ಮೋರ್ಕಿಯಾ (ಮರಾಠಿ)
 • ಪರಿಸರ ಸಂರಕ್ಷಣೆ ಕುರಿತ ಅತ್ಯುತ್ತಮ ಚಿತ್ರ: ಇರಾದಾ (ಹಿಂದಿ)
 • ಸಾಮಾಜಿಕ ಕಳಕಳಿಯ ಅತ್ಯುತ್ತಮ ಚಿತ್ರ: ಅಲೋರುಕ್ಕಂ (ಮಲಯಾಳಂ)
 • ಅತ್ಯುತ್ತಮ ಮೂಲ ಚಿತ್ರಕತೆ: ಥಾಂಡಿಮುತ್ತಲಮ್‌ ದ್ರಿಕ್ಸಾಕ್ಷಿಯಂ (ಮಲಯಾಳಂ)
 • ಅತ್ಯುತ್ತಮ ಛಾಯಾಗ್ರಹಣ: ಭಯಾನಕಂ (ಮಲಯಾಳಂ)
 • ಅತ್ಯುತ್ತಮ ಮೇಕಪ್ ಕಲಾವಿದ: ರಾಮ್ ರಜಾಕ್‌ (ನಾಗರ್‌ಕೀರ್ತನ್‌, ಬೆಂಗಾಲಿ)
 • ಅತ್ಯುತ್ತಮ ವೇಷಭೂಷಣ: ಗೋವಿಂದ ಮಂಡಲ್‌ (ನಾಗರ್‌ಕೀರ್ತನ್‌, ಬೆಂಗಾಲಿ)
 • ಅತ್ಯುತ್ತಮ ನಿರ್ಮಾಣ ವಿನ್ಯಾಸ: ಸಂತೋಷ್ ರಾಮನ್ (ಟೇಕ್ ಆಫ್, ಮಲಯಾಳಂ)
 • ಅತ್ಯುತ್ತಮ ಎಡಿಟಿಂಗ್: ರಿಮಾ ದಾಸ್ (ವಿಲೇಜ್ ರಾಕ್‌ಸ್ಚಾರ್, ಅಸ್ಸಾಮಿ)
 • ಅತ್ಯುತ್ತಮ ಧ್ವನಿ ವಿನ್ಯಾಸ: ಸನಲ್‌ ಜಾರ್ಜ್ ಮತ್ತು ಜಸ್ಟಿನ್ ಎ ಜೋಸ್‌ (ಲಡಾಕ್‌)
 • ಅತ್ಯುತ್ತಮ ಧ್ವನಿಗ್ರಹಣ: ಮಲ್ಲಿಕಾ ದಾಸ್ (ವಿಲೇಜ್ ರಾಕ್‌ಸ್ಟಾರ್, ಅಸ್ಸಾಮಿ)
 • ಅತ್ಯುತ್ತಮ ಹಿನ್ನೆಲೆ ಸಂಗೀತ: ಎ ಆರ್ ರೆಹಮಾನ್ (ಮಾಮ್‌, ಹಿಂದಿ)
 • ಅತ್ಯುತ್ತಮ ಸಾಹಿತ್ಯ: ಮುತ್ತುರತ್ನ, (ಮಾರ್ಚ್ 22, ಕನ್ನಡ)
 • ಅತ್ಯುತ್ತಮ ಸಂಗೀತ ನಿರ್ದೇಶನ: ಎ ಆರ್ ರೆಹಮಾನ್ (ಕಾಟ್ರು ವೆಲಿಯಿದೈ, ತಮಿಳು)
 • ಅತ್ಯುತ್ತಮ ಸಾಹಸ ನಿರ್ದೇಶಕ: ಅಬ್ಬಾಸ್ ಅಲಿ ಮೊಘಲ್ (ಬಾಹುಬಲಿ 2, ತೆಲುಗು)
 • ಅತ್ಯುತ್ತಮ ನೃತ್ಯ ಸಂಯೋಜನೆ: ಗಣೇಶ್ ಆಚಾರ್ಯ (ಟಾಯ್ಲೆಟ್‌ ಏಕ್‌ ಪ್ರೇಮ್ ಕಥಾ, ಹಿಂದಿ)
 • ಅತ್ಯುತ್ತಮ ಮನರಂಜನಾ ಚಿತ್ರ: ಬಾಹುಬಲಿ 2, ತೆಲುಗು
 • ಅತ್ಯುತ್ತಮ ನಿರ್ದೇಶನ: ಜಯರಾಜ್‌ (ಭಯಾನಕಂ, ಮಲಯಾಳಂ)
 • ಅತ್ಯುತ್ತಮ ಛಾಯಾಗ್ರಹಣ: ಭಯಾನಕಂ, ಮಲಯಾಳಂ
 • ಅತ್ಯುತ್ತಮ ಸ್ಪೆಷಲ್ ಎಫೆಕ್ಟ್‌: ಬಾಹುಬಲಿ (ತೆಲುಗು)
 • ಅತ್ಯುತ್ತಮ ಆನಿಮೇಷನ್ ಚಿತ್ರ: ಫಿಶ್ ಕರಿ, ಮಾಚಾರ್ ಜೋಲ್
 • ವಿಶೇಷ ಜ್ಯೂರಿ ಪ್ರಶಸ್ತಿ: ದಿ ಓಲ್ಡ್ ಮ್ಯಾನ್, ಮಂಡೇ
 • ಅತ್ಯುತ್ತಮ ಕಿರುಚಿತ್ರ (ಫಿಕ್ಷನ್‌): ಮೇಯಾತ್‌
 • ಅತ್ಯುತ್ತಮ ಕೌಟುಂಬಿಕ ಚಿತ್ರ: ಹ್ಯಾಪಿ ಬರ್ತ್‌ಡೇ
 • ಅತ್ಯುತ್ತಮ ತನಿಖಾ ಚಿತ್ರ:1984-ವೆನ್ ದಿ ಸನ್ ಡಿಡ್‌ನಾಟ್ ರೈಸ್
 • ಅತ್ಯುತ್ತಮ ಸಿನಿಮಾ ವಿಮರ್ಶಕ: ಗಿರಿಧರ್ ಝಾ (ಸುನೀಲ್ ಮಿಶ್ರಾ ಅವರಿಗೆ ವಿಶೇಷ ಪ್ರಶಸ್ತಿ)

ಅತ್ಯುತ್ತಮ ಪ್ರಾದೇಶಿಕ ಚಿತ್ರಗಳು

 • ಬೆಂಗಾಲಿ: ಮಯೂರಾಕ್ಷಿ
 • ಅಸ್ಸಾಮಿ: ಇಶು
 • ತಮಿಳು: ಟು ಲೆಟ್
 • ಕನ್ನಡ: ಹೆಬ್ಬೆಟ್ ರಾಮಕ್ಕ
 • ತೆಲುಗು: ಘಾಝೀ
 • ಹಿಂದಿ: ನ್ಯೂಟನ್‌
 • ಗುಜರಾತಿ: ಧು
 • ಲಕ್ಷದ್ವೀಪ್‌: ಸಿಂಜಾರ್‌
 • ಮಲಯಾಳಂ: ಥಾಂಡಿಮುತ್ತಲಮ್‌ ದ್ರಿಕ್ಸಾಕ್ಷಿಯಂ
 • ಲಡಾಕ್‌: ವಾಕಿಂಗ್ ವಿತ್ ದಿ ವಿಂಡ್
 • ತುಳು: ಪಡ್ಡಾಯಿ
 • ಒರಿಯಾ: ಹಲೋ ಆರ್ಸಿ
 • ಮರಾಠಿ: ಕಚ್ಛಾ ಲಿಂಬು

‘ಥಾಂಡಿಮುತ್ತಲಮ್‌ ದ್ರಿಕ್ಸಾಕ್ಷಿಯಂ’ ಮಲಯಾಳಂ ಸಿನಿಮಾ ಟ್ರೈಲರ್‌

ಅತ್ಯುತ್ತಮ ಪ್ರಾದೇಶಿಕ ಚಿತ್ರಗಳು (ವಿಶೇಷ ಮನ್ನಣೆ)

 • ಮೋರ್ಕಿಯಾ (ಮರಾಠಿ)
 • ಟೇಕ್ ಆಫ್ (ಮಲಯಾಳಂ)
 • ಪಾರ್ವತಿ (ಟೇಕ್‌ ಆಫ್ ಮಲಯಾಳಂ ಸಿನಿಮಾ)
 • ಪಂಕಜ್ ತ್ರಿಪಾಠಿ (ನ್ಯೂಟನ್‌ ಹಿಂದಿ ಸಿನಿಮಾ)

ಹತ್ತು ಸದಸ್ಯರನ್ನು ಒಳಗೊಂಡಿರುವ ಆಯ್ಕೆ ಸಮಿತಿಯಲ್ಲಿ ಕನ್ನಡ ಚಿತ್ರನಿರ್ದೇಶಕ ಪಿ ಶೇಷಾದ್ರಿ, ಚಿತ್ರಕತೆಗಾರರಾದ ಇಮ್ತಿಯಾಜ್ ಹುಸೇನ್, ನಟಿ ಗೌತಮಿ ತಡಿಮಲ್‌, ಗೀತಸಾಹಿತಿ ಮೆಹಬೂಬ್, ಅನಿರುದ್ಧ್ ರಾಯ್ ಚೌಧರಿ, ರಂಜಿತ್ ದಾಸ್, ರಾಜೇಶ್ ಮಪುಸ್ಕರ್, ತ್ರಿಪುರಾರಿ ಶರ್ಮಾ ಮತ್ತು ರುಮಿ ಜಾಫ್ರಿ ಇದ್ದರು.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More