ಅಜಾನುಬಾಹು ಹಿಂದಿ ಆಕ್ಷನ್ ಹೀರೋ ವಿನೋದ್ ಖನ್ನಾಗೆ ದಾದಾ ಫಾಲ್ಕೆ 

ಕಳೆದ ವರ್ಷ ಅಗಲಿದ ನಟ ವಿನೋದ್ ಖನ್ನಾ ಅವರಿಗೆ ಮರಣೋತ್ತರ ದಾದಾ ಫಾಲ್ಕೆ ಪುರಸ್ಕಾರ ಘೋಷಿಸಲಾಗಿದೆ. ಖಳಪಾತ್ರಗಳೊಂದಿಗೆ ಬೆಳ್ಳಿತೆರೆ ಪ್ರವೇಶಿಸಿದ ವಿನೋದ್‌ ಖನ್ನಾ (06/10/1946 - 27/04/2017) ಮುಂದೆ ಜನಪ್ರಿಯ ಆಕ್ಷನ್ ಹೀರೋ ಆಗಿ ಮಿಂಚಿದರು

ಸಿನಿಮಾಗಳ ಸಾಹಸ ಸನ್ನಿವೇಶಗಳಲ್ಲಿ ಡ್ಯೂಪ್ ಬಳಕೆ ಮಾಡದೆ ಸ್ವತಃ ತಾವೇ ಆ್ಯಕ್ಷನ್ ಮಾಡುತ್ತಿದ್ದ ನಟ ಎನ್ನುವ ಖ್ಯಾತಿ ವಿನೋದ್ ಖನ್ನಾರಿಗೆ ಇದೆ. ಚಿತ್ರರಂಗದಲ್ಲಿ ಯಶಸ್ಸಿನ ಉತ್ತುಂಗದಲ್ಲಿದ್ದಾಗಲೇ ಆಧ್ಯಾತ್ಮದ ಕಡೆ ಹೊರಳಿದ ವಿಕ್ಷಿಪ್ತ ಮನಸ್ಸಿನ ನಟ. ಜನಿಸಿದ್ದು ಅವಿಭಜಿತ ಭಾರತದ ಪೇಶಾವರ್‌ನಲ್ಲಿ (1946, ಅಕ್ಟೋಬರ್ 6). ದೇಶ ವಿಭಜನೆಯ ನಂತರ ಖನ್ನಾ ಕುಟುಂಬದವರು ಪಂಜಾಬ್‌ನ ಅಮೃತ್‌ಸರ್‌ಗೆ ವಲಸೆ ಬಂದರು. ನಂತರ ಈ ಕುಟುಂಬ ಲುಧಿಯಾನಾದಲ್ಲಿ ನೆಲೆ ನಿಂತಿತು. ವಿನೋದ್ ಮುಂಬೈನ ಸಿಡೆನ್ಹಾಮ್‌ ಕಾಲೇಜ್‌ನಲ್ಲಿ ಪದವಿ ಪಡೆದು ಚಿತ್ರರಂಗದತ್ತ ಹೊರಳಿದರು.

ವಿನೋದ್ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದ ಸಿನಿಮಾ ‘ಮನ್ ಕಾ ಮೀಟ್’ (1969). ತಮ್ಮ ಸಹೋದರ ಸೋಮ್ ದತ್‌ರನ್ನು ಚಿತ್ರರಂಗಕ್ಕೆ ಪರಿಚಯಿಸಲು ನಟ ಸುನಿಲ್ ದತ್ ನಿರ್ಮಿಸಿದ ಚಿತ್ರವಿದು. ಈ ಸಿನಿಮಾದಲ್ಲಿ ವಿನೋದ್‌ಗೆ ಖಳ ಪಾತ್ರವಿತ್ತು. ಈ ಚಿತ್ರದ ನಂತರ ಖನ್ನಾ ‘ಸಚ್ಛಾ ಝೂಟಾ’, ‘ಆನ್ ಮಿಲೋ ಸಜ್ನಾ’, ‘ಮೇರಾ ಗಾವ್ ಮೇರಾ ದೇಶ್’ ಚಿತ್ರಗಳಲ್ಲಿ ಖಳನಟನಾಗಿ ತಮ್ಮ ಪ್ರತಿಭೆ ಸಾಬೀತು ಮಾಡಿದರು.

ಸತ್ಯಮೇವ ಜಯತೇ (1987)

‘ಮೇರೆ ಅಪ್ನೇ’ (1972) ಮತ್ತು ‘ಅಚಾನಕ್’ (1973) ಚಿತ್ರಗಳು ವಿನೋದ್ ವೃತ್ತಿ ಜೀವನಕ್ಕೆ ದೊಡ್ಡ ತಿರುವು. ಅಜಾನುಬಾಹು ಖನ್ನಾರ ಚೂಪು ನೋಟ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಮುಂದೆ ‘ಹೇರಾ ಫೇರಿ’, ‘ಅಮರ್ ಅಕ್ಬರ್ ಆಂಥೋಣಿ’, ‘ಪರ್ವಾರಿಷ್’, ‘ಖೂನ್ ಪಸೀನಾ’, ‘ಮುಕದ್ದರ್ ಕಾ ಸಿಕಂದರ್’ ಚಿತ್ರಗಳಲ್ಲಿ ಅಮಿತಾಭ್ ಬಚ್ಚನ್‌ಗೆ ವಿನೋದ್ ಸರಿಸಾಟಿಯಾದ ಅಭಿನಯ ನೀಡಿದರು. ಈ ವೇಳೆಯಲ್ಲಿ ತಾಯಿಯನ್ನು ಕಳೆದುಕೊಂಡ ವಿನೋದ್ ಖಿನ್ನತೆಯಿಂದ ಬಳಲಿದರು. ಬದುಕಿನಲ್ಲಿ ಶಾಂತಿ ಅರಸುತ್ತಾ ಭಗವಾನ್ ರಜನೀಶ್ ಹಿಂದೆ ಹೋಗಿದ್ದು ಅವರ ಸಿನಿಮಾ ಜೀವನಕ್ಕೆ ಹಿನ್ನೆಡೆಯಾಯ್ತು.

‘ಇನ್ಸಾಫ್‌’ (1987) ಚಿತ್ರದೊಂದಿಗೆ ಹಿಂದಿ ಚಿತ್ರರಂಗದಲ್ಲಿ ವಿನೋದ್ ಸೆಕೆಂಡ್ ಇನ್ನಿಂಗ್ಸ್‌ ಆರಂಭವಾಯಿತು. ಆದರೆ ಇಲ್ಲಿ ಅವರಿಗೆ ಮೊದಲಿನ ಯಶಸ್ಸು ಸಿಗಲಿಲ್ಲ. ‘ಹಾಥ್ ಕಿ ಸಫಾಯ್’ (1974) ಚಿತ್ರದ ಉತ್ತಮ ಅಭಿನಯಕ್ಕಾಗಿ ವಿನೋದ್ ಫಿಲ್ಮ್‌ಫೇರ್‌ ಅತ್ಯುತ್ತಮ ಪೋಷಕ ನಟ ಪುರಸ್ಕಾರ ಪಡೆದರು. 1999ರಲ್ಲಿ ಅವರಿಗೆ ಫಿಲ್ಮ್‌ಫೇರ್‌ ಜೀವಮಾನ ಸಾಧನೆ ಪುರಸ್ಕಾರ ಸಂದಾಯವಾಯಿತು. 90ರ ದಶಕದ ನಂತರ ಖನ್ನಾ ‘ರಿಸ್‌ಕ್‌’, ‘ವಾಂಟೆಡ್’, ‘99’, ‘ದಬಾಂಗ್‌’, ‘ಪ್ಲೇಯರ್ಸ್‌’, ‘ದಿಲ್‌ವಾಲೇ’ ಸೇರಿದಂತೆ ಕೆಲವು ಚಿತ್ರಗಳಲ್ಲಿ ಅಭಿನಯಿಸಿದರು.

ದೌಲತ್‌ (1982)

1997ರಲ್ಲಿ ವಿನೋದ್ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾದರು. ಮರುವರ್ಷವೇ ಪಂಜಾಬ್‌ನ ಗುರುದಾಸ್‌ಪುರ್‌ ಕ್ಷೇತ್ರದಿಂದ ಖನ್ನಾ ಲೋಕಸಭೆಗೆ ಆಯ್ಕೆಯಾದರು. 2002ರಲ್ಲಿ ಕೇಂದ್ರ ಸರ್ಕಾರ ಅವರಿಗೆ ಸಚಿವ ಪದವಿ ನೀಡಿತು. 2009ರಲ್ಲೂ ಅವರು ಮತ್ತೊಮ್ಮೆ ಲೋಕಸಭೆಗೆ ಆಯ್ಕೆಯಾದರು. ವಿನೋದ್ ಖನ್ನಾಗೆ ಇಬ್ಬರು ಪತ್ನಿಯರಿಂದ ನಾಲ್ವರು ಮಕ್ಕಳಿದ್ದಾರೆ. ಮೊದಲ ಪತ್ನಿ ಗೀತಾಂಜಲಿ ಜೊತೆಗಿನ ದಾಂಪತ್ಯಕ್ಕೆ ಇಬ್ಬರು ಪುತ್ರರು - ಅಕ್ಷಯ್ ಖನ್ನಾ ಮತ್ತು ರಾಹುಲ್ ಖನ್ನಾ. ಇವರಿಬ್ಬರೂ ಹಿಂದಿ ಚಿತ್ರರಂಗದಲ್ಲಿ ಹೀರೋಗಳಾಗುವ ಅದೃಷ್ಟ ಪರೀಕ್ಷೆ ನಡೆಸಿ ವಿಫಲರಾದವರು. 1990ರಲ್ಲಿ ಖನ್ನಾ, ಕವಿತಾರನ್ನು ವರಿಸಿದರು. ಈ ದಾಂಪತ್ಯಕ್ಕೆ ಸಾಕ್ಷಿ (ಪುತ್ರ) ಮತ್ತು ಶ್ರದ್ಧಾ (ಪುತ್ರಿ) ಇಬ್ಬರು ಮಕ್ಕಳು. 2017ರ ಏಪ್ರಿಲ್‌ 27ರಂದು ವಿನೋದ್ ಖನ್ನಾ ಅಗಲಿದರು.

ಇದನ್ನೂ ಓದಿ : 65ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ; ಶ್ರೀದೇವಿ, ರಿದ್ಧಿ ಸೇನ್‌ ಶ್ರೇಷ್ಠ ನಟಿ-ನಟ

ಆರೋಪ್‌ (1973)

ಇನ್ಸಾನ್‌ (1982)

ಮಸ್ತಾನಾ (1970)

ವಿಡಿಯೋ ಸಾಂಗ್‌ | ಶಿವ ರಾಜಕುಮಾರ್‌ ‘ಟಗರು’ ಶೀರ್ಷಿಕೆ ಹಾಡು ಬಿಡುಗಡೆ
ಟೀಸರ್‌ | ಸಂಜಯ್‌ ದತ್ ಬಯೋಪಿಕ್‌ ‘ಸಂಜು’ ಪಾತ್ರದಲ್ಲಿ ಮಿಂಚಿದ ರಣಬೀರ್
ರಾಜ್‌ ಜನುಮದಿನ | ರಾಜಕುಮಾರ್‌ ಕುಳಿತ ಎಮ್ಮೆಗೆ ಡಿಮಾಂಡ್ ಬಂತು!
Editor’s Pick More