ಚಿತ್ರವಿಮರ್ಶೆ | ಭರ್ಜರಿ ಹೊಡೆದಾಟಗಳಿಂದ ಬಸವಳಿಯುವ ‘ಸೀಝರ್‌’

ಕಾರು ಫೈನಾನ್ಸ್‌ ಮಾಫಿಯಾ ಸಿನಿಮಾದ ವಸ್ತು. ಒಂದಕ್ಕೊಂದು ಸಂಬಂಧವಿರದ ಚಿತ್ರದ ಸನ್ನಿವೇಶಗಳು ಪ್ರೇಕ್ಷಕರ ಸಹನೆ ಪರೀಕ್ಷಿಸುತ್ತವೆ. ಭರ್ಜರಿ ಹೊಡೆದಾಟಗಳಿಂದ ಚಿತ್ರವೊಂದನ್ನು ಮಾಡಬಹುದು ಎನ್ನುವ ನಿರ್ದೇಶಕ ವಿನಯ್‌ ಕೃಷ್ಣರ ಐಡಿಯಾ ಇಲ್ಲಿ ಕೈಕೊಟ್ಟಿದೆ

ಆಕ್ಷೇಪಾರ್ಹ ಸಂಭಾಷಣೆ ಚಿತ್ರದಲ್ಲಿದೆ ಎನ್ನುವ ಕಾರಣಕ್ಕೆ ‘ಸೀಜರ್‌’ ಬಿಡುಗಡೆ ಮುನ್ನ ವಿವಾದ ಸೃಷ್ಟಿಸಿತ್ತು. ಸೋಷಿಯಲ್ ಮೀಡಿಯಾದಲ್ಲಿ ಪ್ರತಿರೋಧ ವ್ಯಕ್ತವಾದ ನಂತರ ಆಕ್ಷೇಪಾರ್ಹ ಸಂಭಾಷಣೆಯನ್ನು ಮ್ಯೂಟ್ ಮಾಡಿದ್ದರು. ಹಾಗೆ ನೋಡಿದರೆ ಈ ಸಂಭಾಷಣೆಯಿದ್ದ ಸನ್ನಿವೇಶ ಚಿತ್ರಕ್ಕೆ ಯಾವುದೇ ರೀತಿಯಲ್ಲೂ ಕನೆಕ್ಟ್‌ ಆಗುವುದಿಲ್ಲ. ಉದ್ದೇಶಪೂರ್ವಕವಾಗಿ ಈ ಸನ್ನಿವೇಶ ಸೃಷ್ಟಿಸಿ ಸಮುದಾಯವೊಂದರ ಜನರ ಭಾವನೆಗಳಿಗೆ ಹಾನಿ ಮಾಡುವ ಅಗತ್ಯವೇನಿತ್ತು ಎನ್ನುವ ಪ್ರಶ್ನೆ ಕಾಡುತ್ತದೆ. ಇದೊಂದು ಸನ್ನಿವೇಶ ಮಾತ್ರವಲ್ಲ, ಇಂತಹ ಹಲವು ಒಂದಕ್ಕೊಂದು ಸಂಬಂಧವಿರದ ಸನ್ನಿವೇಶಗಳು ಪ್ರೇಕ್ಷಕರ ಸಹನೆ ಪರೀಕ್ಷಿಸುತ್ತವೆ. ಭರ್ಜರಿ ಹೊಡೆದಾಟಗಳಿಂದ ಚಿತ್ರವೊಂದನ್ನು ಮಾಡಬಹುದು ಎನ್ನುವ ನಿರ್ದೇಶಕರ ಐಡಿಯಾ ಇಲ್ಲಿ ಕೈಕೊಟ್ಟಿದೆ.

ಕಾರು ಫೈನಾನ್ಸ್‌ ಮಾಫಿಯಾ ಸಿನಿಮಾದ ವಸ್ತು. ಫೈನಾನ್ಸ್ ದಂಧೆಗೆ ಕೆಲಸ ಮಾಡುವ ಚಿತ್ರದ ನಾಯಕನಿಗೆ ಲೋನ್‌ ಕಟ್ಟದ ಕಾರುಗಳನ್ನು ಸೀಝ್‌ ಮಾಡುವ ಕಾಯಕ. ಈ ಲೋನ್‌ ವಸೂಲಿ, ಕಾರು ಸೀಝ್ ಮಾಡುವ ಸಂದರ್ಭಗಳು ಒಂದಷ್ಟು ಆಕ್ಷನ್‌ ಸನ್ನಿವೇಶಗಳಿಗೆ ಕಾರಣವಾಗುತ್ತವೆ. ಇಷ್ಟೇ ಆದರೆ ಕತೆ ಮುಂದುವರಿಯಬೇಕಲ್ಲ? ಹಾಗಾಗಿ ನಿರ್ದೇಶಕರು ನಾಯಕನ ಬಾಲ್ಯದ ಫ್ಲ್ಯಾಶ್‌ಬ್ಯಾಕ್‌ನ ಉಪಕತೆ ಹೇಳುತ್ತಾರೆ. ಮೊದಲರ್ಧ ಹೊಡೆದಾಟಗಳಲ್ಲೇ ಮುಗಿಯುವ ಸಿನಿಮಾ ಆನಂತರ ಹಳಿ ತಪ್ಪಿದ ರೈಲಿನಂತೆ ಎಲ್ಲೆಲ್ಲೋ ಹೋಗಿ ಬರುತ್ತದೆ. ಸಾಧುಕೋಕಿಲ ಅವರ ಹಾಸ್ಯದಲ್ಲಿ ನಗೆ ತರಿಸುವ ಗುಣವೂ ಇಲ್ಲ. ಕಾರು ಸೀಝ್‌ ಮಾಡುವ ಸನ್ನಿವೇಶಗಳನ್ನೇ ಹೊಸೆದು ಹಾಸ್ಯ ಸೃಷ್ಟಿಸುವುದು ವರ್ಕ್‌ಔಟ್‌ ಆಗಿಲ್ಲ. ಹಾಗಾಗಿ ಸಾಧು ಕಾಮಿಡಿ ಪ್ರೇಕ್ಷಕರಿಗೆ ರಿಲೀಫ್ ನೀಡುವುದಿಲ್ಲ. ನಾಯಕಿಯ ಪಾತ್ರಕ್ಕೊಂದು ಗಟ್ಟಿ ನೆಲೆಯಿಲ್ಲ. ಸುದೀರ್ಘ ಅವಧಿಯ ಚಿತ್ರೀಕರಣದಿಂದಾಗಿ ಸಿನಿಮಾ ಬಸವಳಿದಿರುವುದನ್ನು ಬುದ್ಧಿವಂತ ಪ್ರೇಕ್ಷಕರು ಗುರುತಿಸಬಹುದು.

ಇದನ್ನೂ ಓದಿ : 65ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ; ಕನ್ನಡ ನಾಡಿಗೆ ಮೂರು ಗೌರವ

ಚಿತ್ರದ ಮೇಕಿಂಗ್‌ನಲ್ಲಿ ಶ್ರೀಮಂತಿಕೆ ಢಾಳಾಗಿ ಕಾಣುತ್ತದೆ. ಪುಡಿಪುಡಿಯಾಗುವ ಸೆಟ್‌ ಪ್ರಾಪರ್ಟಿ, ಹಾರಾಡುವ ಕಾರುಗಳಿಗೆ ಯಥೇಚ್ಛವಾಗಿ ಖರ್ಜು ಮಾಡಿದ್ದಾರೆ. ಆದರೆ ಚಿತ್ರಕ್ಕೆ ಆತ್ಮವೇ ಇಲ್ಲ. ಇಬ್ಬರು ಹೀರೋಗಳು (ಚಿರಂಜೀವಿ ಸರ್ಜಾ, ರವಿಚಂದ್ರನ್‌) ಮತ್ತು ಖಳನಟರಿಂದ (ಪ್ರಕಾಶ್ ರೈ, ನಾಗಿನೀಡು) ಪುಂಖಾನುಪುಂಖವಾಗಿ ಸಂಭಾಷಣೆ ಹೇಳಿಸಿದ್ದಾರೆ ನಿರ್ದೇಶಕರು. ಸಿನಿಮಾ ಗ್ರಾಮರ್‌ಗೆ ನಿಲುಕದ ಆಕ್ಷನ್‌ ಮತ್ತು ಸಂಭಾಷಣೆಗಳು ಪ್ರೇಕ್ಷಕರಿಗೆ ತಾಕುವುದೇ ಇಲ್ಲ. ಇನ್ನು ನಟನೆಗೆ ಸಂಬಂಧಿಸಿದಂತೆ ಯಾವ ಪಾತ್ರಗಳೂ ನೆನಪಿನಲ್ಲಿ ಉಳಿಯುವುದಿಲ್ಲ. ಚಿತ್ರದುದ್ದಕ್ಕೂ ಕಪ್ಪು ಕನ್ನಡಕದಲ್ಲೇ ಕಾಣಿಸಿಕೊಂಡಿರುವ ರವಿಚಂದ್ರನ್ ಹೇಳುವ ಸಂಭಾಷಣೆಗಳು ಒಂದೇ ರೀತಿ ಎನಿಸುತ್ತವೆ! ಚಿರಂಜೀವಿ ಸರ್ಜಾ ತಮ್ಮ ಮಿತಿಗಳಲ್ಲೇ ಚೆನ್ನಾಗಿ ನಟಿಸಲು ಪ್ರಯತ್ನಿಸಿದ್ದಾರೆ. ಪ್ರಕಾಶ್‌ ರೈ ಅವರ ಖಳನಾಗಿ ಅಬ್ಬರಿಸುವ ಶೈಲಿಯಲ್ಲಿ ವಿಶೇಷತೆಯೇನೂ ಇಲ್ಲ. ನಾಯಕಿ ಪರೂಲ್ ಯಾದವ್ ಪಾತ್ರ ಜಾಳುಜಾಳಾಗಿದೆ. ಚಂದನ್ ಶೆಟ್ಟಿ ಹಾಡು ಬರೆದು, ಸಂಗೀತ ಸಂಯೋಜಿಸಿ ಅವರೇ ಹಾಡಿದ್ದಾರೆ. ಶೀರ್ಷಿಕೆ ಗೀತೆಯಲ್ಲಿ ಹೊಸತನವಿದೆ. ಅವರು ಮಾಧುರ್ಯದೆಡೆಗೂ ಗಮನಹರಿಸಿದರೆ ಸಿನಿಮಾ ಸಂಗೀತದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು.

ನಿರ್ದೇಶನ: ವಿನಯ್ ಕೃಷ್ಣ‌‌ ನಿರ್ಮಾಣ: ತ್ರಿವಿಕ್ರಂ ಸಪಲ್ಯ, ವಿನಯ್‌ ಕೃಷ್ಣ‌ ಸಂಗೀತ: ಚಂದನ್ ಶೆಟ್ಟಿ‌ ಛಾಯಾಗ್ರಹಣ: ಅಂಜಿ, ರಾಜೇಶ್ ಕಟಾ‌ ತಾರಾಗಣ: ಚಿರಂಜೀವಿ ಸರ್ಜಾ, ರವಿಚಂದ್ರನ್‌, ಪ್ರಕಾಶ್ ರೈ, ಪರೂಲ್ ಯಾದವ್‌, ನಾಗಿನೀಡು, ಸಾಧುಕೋಕಿಲ, ರವಿಪ್ರಕಾಶ್‌, ರಮೇಶ್ ಭಟ್‌, ಶೋಭರಾಜ್‌ ಮತ್ತಿತರರು.

ವಿಡಿಯೋ | ಜನ್ಮದಿನದಂದು ಉತ್ತಮ ಪ್ರಜಾಕೀಯ ಪಕ್ಷ ಘೋಷಿಸಿದ ಉಪೇಂದ್ರ
ರಕ್ಷಿತ್ ಶೆಟ್ಟಿ ಜೊತೆಗಿನ ಬ್ರೇಕಪ್‌ ಕುರಿತು ಮೌನ ಮುರಿದ ರಶ್ಮಿಕಾ ಮಂದಣ್ಣ‌
ಟೀಸರ್ | ಬಯಲಾಯಿತು ‘ಥಗ್ಸ್‌ ಆಫ್ ಹಿಂದೂಸ್ತಾನ್’ನ ಅಮಿತಾಭ್‌ ಲುಕ್
Editor’s Pick More